Site icon Vistara News

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Bengaluru Rains

ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ (Karnataka Rains) ಬಿರುಗಾಳಿ ಸಹಿತ ಮಳೆ ಬಂದು ಹೋಯಿತು. ಆದರೆ ರಾಜಧಾನಿ ಬೆಂಗಳೂರಲ್ಲಿ ಒಂದು ಸಣ್ಣ ಹನಿಯು (Karnataka weather Forecast) ಬೀಳಲಿಲ್ಲ. ಬೆಂಗಳೂರು ಕರಗ ಸಮಯದಲ್ಲಿ ಸಣ್ಣ ಪ್ರಮಾಣದಲ್ಲಿ ಆದರೂ ಮಳೆ ಬಂದೇ ಬರುತ್ತೆ ಎಂಬ ನಂಬಿಕೆ ಇದೆ. ಆದರೆ ಆಗಲೂ ಮಳೆಯು ಕಾಣಲಿಲ್ಲ. ಇದೀಗ ಬಿಸಿಲ ಧಗೆಯಿಂದ ಸುಸ್ತಾಗಿದ್ದ ಮಂದಿಗೆ ಮಳೆಯು ತನ್ನ ಭರ್ಜರಿ ಪ್ರದರ್ಶನ (Bengaluru Rains) ತೋರಿದೆ.

ಲೇಟ್‌ ಆದರೂ ಲೇಟೆಸ್ಟ್‌ ಆಗಿ ಮಳೆರಾಯ ಬೆಂಗಳೂರಿಗೆ ಎಂಟ್ರಿ ಕೊಟ್ಟಿದ್ದಾನೆ. ಇದರಿಂದಾಗಿ ಸೋಶಿಯಲ್‌ ಮೀಡಿಯಾದಲ್ಲಿ ನೆಟ್ಟಿಗರು ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್ ಎಂದು ಬೆಂಗಳೂರಿಗರಿಗೆ ವಿಷ್‌ ಮಾಡಿದ್ದಾರೆ. ಜತೆಗೆ ಟ್ವಿಟರ್‌, ಇನ್ಸ್ಟಾಗ್ರಾಂನಲ್ಲಿ Bengaluru rains ಹ್ಯಾಶ್‌ ಟ್ಯಾಗ್‌ ಹಾಕಿ ಸಂತಸವನ್ನು ಹಂಚಿಕೊಳ್ಳುತ್ತಿದ್ದಾರೆ. ಅಂತೂ-ಇಂತೂ ಬೆಂಗಳೂರಲ್ಲಿ ಮಳೆ ಬಂತಲ್ಲ ಎಂದು ನಿಟ್ಟುಸಿರು ಬಿಟ್ಟಿದ್ದಾರೆ.

ಶಿವಾಜಿನಗರ, ಮಲ್ಲೇಶ್ವರಂ, ವಿಧಾನಸೌಧ, ರಾಜಾಜಿನಗರ, ರೇಸ್ ಕೋರ್ಸ್, ಮೆಜೆಸ್ಟಿಕ್, ಮಹಾರಾಣಿ ಕಾಲೇಜು, ಸಿಐಡಿ ಆಫೀಸ್, ಪ್ಯಾಲೇಸ್ ರಸ್ತೆಯಲ್ಲಿ ಗುಡುಗು ಸಹಿತ ಮಳೆಯಾಗುತ್ತಿದೆ. ಮಧ್ಯಾಹ್ನ ಮೂರು ಗಂಟೆ ಸಮಯವು ರಾತ್ರಿಯಂತೆ ಕತ್ತಲೆ ಆವರಿಸಿತ್ತು. ದಿಢೀರ್ ಮಳೆಗೆ ದ್ವಿಚಕ್ರ ವಾಹನ ಸವಾರರು ಸೇತುವೆ ಕೆಳಗೆ ಹಾಗೂ ಬಸ್‌ ನಿಲ್ದಾಣದಲ್ಲಿ ಆಶ್ರಯ ಪಡೆದರು.

ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಮರ

ಇನ್ನೂ ಬೆಂಗಳೂರಿನ ಆರ್‌.ಟಿ‌ ನಗರದಲ್ಲಿ ಮರವು ಉರುಳಿ ಬಿದ್ದಿತ್ತು. ಇನೋವಾ ಹಾಗೂ ಓಮಿನಿ ಕಾರು ಜಖಂಗೊಂಡಿತ್ತು. ರವೀಂದ್ರನಾಥ್ ಠಾಗೋರ್ ಸರ್ಕಲ್‌ನಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದಿತ್ತು. ಅದೃಷ್ಟವಶಾತ್‌ ಕಾರಿನಲ್ಲಿ ಇದ್ದವರಿಗೆ ಯಾವುದೇ ತೊಂದರೆ ಆಗಿಲ್ಲ. ಸ್ಥಳಕ್ಕೆ ಅಗ್ನಿಶಾಮಕ ದಳ, ಬಿಬಿಎಂಪಿ ಸಿಬ್ಬಂದಿ ದೌಡಾಯಿಸಿದ್ದು, ಮರ ತೆರವು ಮಾಡುತ್ತಿದ್ದಾರೆ. ಇತ್ತ ಕೊತ್ತನೂರು ಬಳಿ ಕಾರಿನ ಮೇಲೆ ವಿದ್ಯುತ್‌ ಕಂಬ ಬಿದ್ದು ಕಾರಿನ ಬ್ಯಾನೆಟ್ ಹಾಳಾಗಿತ್ತು. ವಿದ್ಯುತ್‌ ಕಂಬ ಕಳಚಿ ಬಿದ್ದ ಕಾರಣ ಕರೆಂಟ್‌ ಕಟ್ಟ್‌ ಆಗಿತ್ತು.

ಮೈಸೂರು, ಮಂಡ್ಯದಲ್ಲಿ ಗುಡುಗು ಸಹಿತ ಬಿರುಗಾಳಿ ಮಳೆ

ಮಂಡ್ಯದಲ್ಲಿ ಗುಡುಗು ಸಹಿತ ಬಿರುಗಾಳಿ ಮಳೆಯಾಗುತ್ತಿದೆ. ಹಲವು ದಿನಗಳಿಂದ ಮಳೆ ಇಲ್ಲದೆ ಕಂಗಾಲಾಗಿದ್ದ ಮಂಡ್ಯ ಜನರು ಖುಷಿಯಾಗಿದ್ದಾರೆ. ಭಾರಿ ಶಬ್ಧದೊಂದಿಗೆ ಗುಡುಗು, ಮಿಂಚು ಸಹಿತ ಮಳೆಯಾಗುತ್ತಿದೆ. ಮೈಸೂರಿನಲ್ಲಿ ಬಿಸಿಲ ಬೇಗೆಯಿಂದ ಕಂಗಾಲಾಗಿದ್ದ ಜನರಿಗೆ ವರುಣ ಸಿಂಚನವಾಗಿದೆ. ತಿ.ನರಸೀಪುರ ತಾಲೂಕಿನ ಹಲವೆಡೆ ಧಾರಾಕಾರ ಮಳೆಯಾಗಿದೆ. ಕೆಲವೆಡೆ ಜೋರು ಗಾಳಿ ನಡುವೆ ಆಲಿಕಲ್ಲು ಮಳೆಯಾಗಿದೆ.

ಟ್ರಾನ್ಸ್ ಫಾರ್ಮರ್ ಸ್ಫೋಟ

ಬೆಂಗಳೂರಿನ ಐಟಿಐ ಲೇಔಟ್‌ನಲ್ಲಿ ಮಳೆಗೆ ಟ್ರಾನ್ಸ್ ಫಾರ್ಮರ್ ಸ್ಫೋಟಗೊಂಡಿದೆ. ಗಾಳಿ ಮಳೆಗೆ ಮರಗಳ ಎಲೆ ತಾಗಿ ಟ್ರಾನ್ಸ್ ಫಾರ್ಮನರ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಬ್ಲಾಸ್ಟ್‌ ಆಗಿದೆ. ಸದ್ಯ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಟ್ರಾನ್ಸ್‌ಫಾರ್ಮನರ್‌ ಸ್ಫೋಟದಿಂದಾಗಿ ವಿದ್ಯುತ್‌ ಕಡಿತವಾಗಿದೆ.

ಹೊಸಕೋಟೆಯಲ್ಲೂ ಬಿರುಗಾಳಿ ಮಳೆ

ಬಿಸಿಲ ಬೇಗೆಯಿಂದ ಕಂಗೆಟ್ಟಿದ್ದ ಜನರಿಗೆ ಮಳೆರಾಯ ತಂಪೆರೆದಿದ್ದಾನೆ. ಬೆಂಗಳೂರು ಗ್ರಾಮಾಂತರದ ಹೊಸಕೋಟೆ ಸುತ್ತಮುತ್ತ ಬಿರುಗಾಳಿ ಸಹಿತ ಮಳೆಯಾಗಿದೆ. ವರ್ಷದ ಮೊದಲ ಮಳೆ ಕಂಡು ಜನರು ಸಂತಸಗೊಂಡಿದ್ದಾರೆ. ಇನ್ನೂ ಗಾಳಿ ಸಹಿತ ಮಳೆಯಿಂದಾಗಿ ದೇವಸ್ಥಾನ ಜೀರ್ಣೋದ್ಧಾರದ ಕಾರ್ಯಕ್ರಮಕ್ಕೆ ಹಾಕಿದ್ದ ಪೆಂಡಲ್ ಎಲ್ಲಾ ಚೆಲ್ಲಾಪಿಲ್ಲಿಯಾಗಿದ್ದವು. ಊಟ ಮಾಡುತ್ತಿದ್ದವರೆಲ್ಲೂ ಎಲೆ ಬಿಟ್ಟು, ಓಡಿ ಹೋದರು. ಟೇಬಲ್ ಮೇಲಿನ ಊಟವೆಲ್ಲ ನೀರುಪಾಲಾಗಿತ್ತು‌. ಹೊಸಕೋಟೆ ತಾಲೂಕಿನ ದಾಸರಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.

ಚಾಮರಾಜನಗರದಲ್ಲೂ ಮಳೆಯ ಸಿಂಚನ

ಚಾಮರಾಜನಗರದಲ್ಲೂ ವರುಣ ಭೂ ಸ್ಪರ್ಶಿಸಿದ್ದಾನೆ. ಚಾಮರಾಜನಗರ ತಾಲೂಕಿನ ಅಂಕಶೆಟ್ಟಿಪುರ, ಚೆನ್ನಪ್ಪಪುರ, ಅರಕಲವಾಡಿ ವೆಂಕಟಯ್ಯನ ಛತ್ರ ಸೇರಿದಂತೆ ವಿವಿಧೆಡೆ ಮಳೆಯಾಗಿದೆ. ಬೇಸಿಗೆಯಿಂದ ಬೇಸತ್ತಿದ್ದ ರೈತರ ಮುಖದಲ್ಲಿ ಕೊಂಚ ಮಂದಹಾಸ ಮೂಡಿದೆ. ಚಾಮರಾಜನಗರ ತಾಲೂಕಿನ ತಮ್ಮಡಹಳ್ಳಿ, ಉಡಿಗಾಲ, ಕೆಂಗಾಕಿ, ಕುಮಚಹಳ್ಳಿ ಗ್ರಾಮದಲ್ಲಿ ಗಾಳಿಯ ಅಬ್ಬರದೊಂದಿಗೆ ಮಳೆಯಾಗಿದೆ.

ರಾಮನಗರದಲ್ಲೂ ತಂಪೆರೆದ ಮಳೆ

ಬರಗಾಲದಿಂದ ಬೇಸತ್ತಿದ್ದ ರೇಷ್ಮೆನಾಡು ರಾಮನಗರ ಜಿಲ್ಲೆಯಲ್ಲೂ ಹಲವೆಡೆ ವರುಣ ದರ್ಶನ ಕೊಟ್ಟಿದ್ದಾನೆ. ಗುಡುಗು ಸಹಿತ ಮಳೆಯಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಪೂರ್ವಜರ ನಂಬಿಕೆಯಂತೆ ಭರಣಿ ಮಳೆ ಆಗಮಿಸಿದೆ. ಭರಣಿ ಮಳೆ ಬಂದರೆ ರೈತರ ಕೃಷಿ ಚುಟುವಟಿಕೆ ಆರಂಭಿಸಲು ಯಶಸ್ವಿ ಎಂಬ ನಂಬಿಕೆ ಇದೆ. ಸದ್ಯ ಭರಣಿ ಮಳೆಯ ಸಿಂಚನದಿಂದ ಅನ್ನದಾತನ ಮೊಗದಲ್ಲಿ ಮಂದಹಾಸ ಮೂಡಿದೆ.

ಆಲಿಕಲ್ಲು ಸಹಿತ ಮಳೆಯಾರ್ಭಟ

ಇನ್ನೂ ರಾಜ್ಯ ಗಡಿ ಡೆಂಕಣಿಕೋಟೆ ಭಾಗದಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದೆ. ತಮಿಳುನಾಡಿನ ಡೆಂಕಣಿಕೋಟೆ, ಹೊಸೂರು, ಸೂಲಗಿರಿ ಭಾಗದಲ್ಲಿ ಧಾರಾಕಾರ ಮಳೆ ಆಗುತ್ತಿದೆ. ಆನೇಕಲ್, ಎಲೆಕ್ಟ್ರಾನಿಕ್ ಸಿಟಿ, ಚಂದಾಪುರ, ಅತ್ತಿಬೆಲೆ, ಹೆಬ್ಬಗೋಡಿ ಸೇರಿದಂತೆ ಜೋರು ಮಳೆಯಾಗುತ್ತಿದೆ.

ಬ್ಯಾರಿಕೇಟ್‌ ಹಾಕಿ ಅಂಡರ್‌ಪಾಸ್‌ ಕ್ಲೋಸ್‌

ಅರ್ಧ ಗಂಟೆಗೂ ಹೆಚ್ಚು ಸಮಯ ಸುರಿದ ಮಳೆಯಿಂದಾಗಿ ಬೆಂಗಳೂರಿನ ರಸ್ತೆಗಳು ನದಿಯಂತಾಗಿತ್ತು. ವಿಧಾನಸೌಧ ಪಕ್ಕದಲ್ಲಿರುವ ಎಂ.ಎಸ್ ಬಿಲ್ಡಿಂಗ್ ಸುತ್ತಮುತ್ತಲಿನ ರಸ್ತೆಯಲ್ಲಿ ನೀರು ಹರಿಯುತ್ತಿದೆ. ಎಂಎಸ್‌ ಬಿಲ್ಡಿಂಗ್‌ ಸಮೀಪವೇ ಇರುವ ಅಂಡರ್ ಪಾಸ್‌ಗಳಿಗೆ ಬ್ಯಾರಿಕೇಟ್ ಹಾಕಿ ಕ್ಲೋಸ್ ಮಾಡಲಾಗಿದೆ.

ಧರೆಗೆ ಬಿದ್ದ ಮರಗಳು

ಮಳೆಯಿಂದ ಬೆಂಗಳೂರು ನಗರದಲ್ಲಿ ಮೂರು ಕಡೆ ಬೃಹತ್ ಗಾತ್ರದ ಮರ ಧರೆಗೆ ಬಿದ್ದಿದೆ. ಕೆ.ಆರ್.ಪುರಂನ ಕಸ್ತೂರಿ ನಗರ, ಆರ್‌ಟಿ ನಗರದಲ್ಲಿ ಮಳೆಗೆ ಮರ ಬಿದ್ದಿದೆ. ಇನ್ನೂ ನಾರಾಯಣಪುರದಲ್ಲಿ ಮರ ಬಿದ್ದು, ಕಾರು, ಬೈಕ್ ಜಖಂಗೊಂಡಿದೆ. ಸದ್ಯ ರಸ್ತೆಗೆ ಬಿದ್ದಿದ ಮರವನ್ನು ಬಿಬಿಎಂಪಿ ಸಿಬ್ಬಂದಿ ತೆರವು ಮಾಡಿದ್ದಾರೆ. ಮೆಜೆಸ್ಟಿಕ್‌ನ ಕೆಂಪೇಗೌಡ ಬಸ್ ನಿಲ್ದಾಣದ ಎಟಿಎಂ (ATM) ಕೊಠಡಿಗೆ ಮಳೆ ನೀರು ನುಗ್ಗಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version