Site icon Vistara News

Chikkamagaluru News : ಚಿಕ್ಕಮಗಳೂರು ಚಳಿಗೆ ನಶೆ ಏರಿಸಿಕೊಳ್ಳುತ್ತಿದ್ದವರ ಕಿಕ್ಕಿಳಿಸಿದ ಬಣಕಲ್ ಪಿಎಸ್ಐ ರೇಣುಕಾ

Chikkamagaluru News Police detained youths for consuming liquor at tourist spot in Chikmagaluru

ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ಭಾರಿ ಮಳೆಯಾಗುತ್ತಿದ್ದು (Karnataka Rain), ಚಿಕ್ಕಮಗಳೂರಿನಲ್ಲಿ ಸ್ವರ್ಗವೇ ಸೃಷ್ಟಿಯಾಗಿದೆ. ಚಿಕ್ಕಮಗಳೂರಿಗರಿಗೆ (Chikkamagaluru News) ಪ್ರವಾಸಿಗರ ದಂಡು ಹರಿದುಬರುತ್ತಿದೆ. ಆದರೆ ಹೀಗೆ ಪ್ರವಾಸಕ್ಕೆ ಬರುವ ಕೆಲವರು ಪ್ರವಾಸಿತಾಣದಲ್ಲಿ ಮದ್ಯ ಸೇವಿಸಿ ಹುಚ್ಚಾಟ ಮೆರೆಯುತ್ತಿದ್ದಾರೆ.

ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ದೇವರ ಮನೆ ಪ್ರವಾಸಿ ತಾಣದಲ್ಲಿ ಕಾರಿನಲ್ಲಿ ಕುಳಿತು ಎಣ್ಣೆ ಪಾರ್ಟಿ ಮಾಡುತ್ತಿದ್ದ ಯುವಕರಿಗೆ ಪೊಲೀಸರು ಚಳಿ ಬಿಡಿಸಿದ್ದಾರೆ. ಚಿಕ್ಕಮಗಳೂರು ಚಳಿಗೆ ನಶೆ ಏರಿಸಿಕೊಂಡು ಮಜಾ ಮಾಡುತ್ತಿದ್ದ ಯುವಕರಿಗೆ ಬಣಕಲ್ ಪಿಎಸ್ಐ ರೇಣುಕಾ ಕಿಕ್ಕಿಳಿಸಿದ್ದಾರೆ. ಶ್ರದ್ಧಾ ಭಕ್ತಿ ಕೇಂದ್ರದ ಸಮೀಪ ಕಾರಿನೊಳಗೆ ಕೂತು ಮದ್ಯಪಾನ ಸೇವಿಸಿದ್ದರು. ಹೀಗಾಗಿ ಎಣ್ಣೆ ಬಾಟೆಲ್‌ ಹಾಗೂ ಕಾರು ಸಮೇತ ಯುವಕರನ್ನು ಠಾಣೆಗೆ ಕರೆದೊಯ್ದು ಕೇಸ್‌ ದಾಖಲಸಿದ್ದಾರೆ. ಪ್ರವಾಸಿ ತಾಣಗಳಲ್ಲಿ ಮದ್ಯಪಾನ ನಿಷೇಧದ ನಡುವೆಯೂ ಹುಚ್ಚಾಟ ತೋರುತ್ತಿದ್ದ ಪ್ರವಾಸಿಗರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಪೊಲೀಸರು ದಿನದ 24 ಗಂಟೆಯೂ ಗಸ್ತು ತಿರುಗಿ ಕ್ರಮಕೈಗೊಳ್ಳುತ್ತಿದ್ದಾರೆ.

ಚಿಕ್ಕಮಗಳೂರಿನಲ್ಲಿ ರಸ್ತೆ ಮುಳುಗಡೆ

ಚಿಕ್ಕಮಗಳೂರು: ಭಾರಿ ಮಳೆಯಿಂದಾಗಿ ಗ್ರಾಮದ ಏಕೈಕ ರಸ್ತೆಯು ಮುಳುಗಡೆಯಾಗಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ. ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ತರುವೆ ಗ್ರಾಮದಲ್ಲಿ ಸೋಮಾವತಿ ಹಳ್ಳ ತುಂಬಿ ಹರಿಯುತ್ತಿದ್ದು, ರಸ್ತೆಯು ಮುಳುಗಡೆಯಾಗಿದೆ.

ತರುವೆ ಗ್ರಾಮದ ಸುರೇಶ್ ನಾಯ್ಕ ಕುಟುಂಬಕ್ಕೆ ಜಲ ದಿಗ್ಬಂಧನ ಹಾಕಲಾಗಿದೆ. ಹಳ್ಳಕ್ಕೆ ಅಡ್ಡಲಾಗಿ ಕಾಲುಸಂಕ ನಿರ್ಮಾಣ ಮಾಡಲಾಗಿದ್ದು, ಮಕ್ಕಳು, ವೃದ್ಧರು ಜೀವ ಕೈಯಲ್ಲಿ ಹಿಡಿದು ಹಳ್ಳದಾಟುವ ಸ್ಥಿತಿ ಎದುರಾಗಿದೆ. ಕಿರು ಸೇತುವೆ ನಿರ್ಮಿಸಿ ಕೊಡುವಂತೆ ನಾಲ್ಕು ವರ್ಷಗಳಿಂದ ಕುಟುಂಬಸ್ಥರು ಮನವಿ ಮಾಡಿದ್ದಾರೆ. ಆದರೆ ಅಧಿಕಾರಿಗಳು ಮಾತ್ರ ಕ್ಯಾರೆ ಎಂದಿಲ್ಲ. ಮಳೆ ಹೆಚ್ಚಾದರೆ ಸೋಮವತಿ ಹಳ್ಳ ಉಕ್ಕಿ ಹರಿಯುತ್ತದೆ. ಹಳ್ಳ ದಾಟಲು ಆಗದೆ ಕೃಷಿ ಕಾರ್ಯಗಳು ಸ್ಥಗಿತಗೊಂಡಿವೆ. ಸದ್ಯ ಸೇತುವೆಗಾಗಿ ಜಿಲ್ಲಾ ಆಡಳಿತದ ಮೊರೆ ಹೋಗಿದ್ದಾರೆ.

ಇದನ್ನೂ ಓದಿ: Karnataka Rain : ಭಾರಿ ಮಳೆಯಲ್ಲಿ ದೇವರಮನೆಗುಡ್ಡದಲ್ಲಿ ಪ್ರವಾಸಿಗರ ಹುಚ್ಚಾಟ; ಕೇಸ್‌ ಜಡಿದ ಪೊಲೀಸರು!

ತುಂಬಿ ಹರಿಯುತ್ತಿರುವ ಘಟಪ್ರಭಾ ನದಿ

ಬೆಳಗಾವಿ ಭಾಗದಲ್ಲಿ ನಿರಂತರ ಮಳೆಯಿಂದಾಗಿ ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದ ಘಟಪ್ರಭಾ ನದಿ ತುಂಬಿ ಹರಿಯುತ್ತಿದೆ. ಸತತ ಮಳೆಗೆ ಘಟಪ್ರಭಾ ನದಿ ಒಳ ಹರಿವು ಹೆಚ್ಚಳಗೊಂಡಿದೆ. ನದಿಗೆ 7 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಯಾದವಾಡ ಬ್ರಿಡ್ಜ್‌ನಲ್ಲಿ ಘಟಪ್ರಭೆ ಧುಮ್ಮಕ್ಕಿ ಹರಿಯುತ್ತಿದ್ದು, ಮೀನುಗಾರರು ಮೀನು ಹಿಡಿಯುವ ಕಾಯಕದಲ್ಲಿ ತೊಡಗಿದ್ದಾರೆ.

ವಿಜಯಪುರದಲ್ಲಿ ಮತ್ತೆ ಭೂಕಂಪನ

ಒಂದು ಕಡೆ ವರುಣಘಾತಕ್ಕೆ ಜನರು ತತ್ತರಿಸಿ ಹೋಗಿದ್ದರೆ, ಇತ್ತ ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಭೂಮಿ ನಡುಗಿದೆ. ಜಿಲ್ಲೆಯ ಇಂಡಿ ಪಟ್ಟಣ ಸೇರಿ ಸುತ್ತಮುತ್ತಲ ಗ್ರಾಮಗಳಲ್ಲಿ ಕಂಪನದ ಅನುಭವವಾಗಿದೆ. 10.53ರ ಸುಮಾರಿಗೆ ಜೋರಾದ ಸದ್ದಿನ ಜತೆಗೆ ಭೂಮಿ ನಡುಗಿದೆ. ಇಂಡಿ, ತಡವಲಗಾ, ಇಂಗಳಗಿ, ಹಂಜಗಿ, ನಿಂಬಾಳ, ಹೊರ್ತಿ ಸುತ್ತಲೂ ಭೂಮಿ ನಡುಗಿದ ಅನುಭವವಾಗಿದೆ. ಕಂಪನ ಹಾಗೂ ಭೀಕರ ಸ್ಫೋಟದ ಸದ್ದು ಜನರಲ್ಲಿ ಭಯ ಮೂಡಿಸಿದೆ.
ಕಳೆದ 3 ವರ್ಷಗಳಿಂದ ಭೂಮಿ ಆಳದಲ್ಲಿ ಕಂಪನದ ಅನುಭವವಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version