Site icon Vistara News

Karnataka Rain : ಭಾರಿ ಮಳೆ ಎಫೆಕ್ಟ್‌; ಬೆಳಗಾವಿಯಲ್ಲಿ 17 ಸಂಪರ್ಕ ಸೇತುವೆಗಳು ಜಲಾವೃತ

karnataka rain

ಬೆಳಗಾವಿ: ಭಾರಿ ಮಳೆಗೆ (Karnataka Rain) ಬೆಳಗಾವಿ ಜಿಲ್ಲೆಗೆ ಸಪ್ತ ನದಿಗಳ ನೆರೆ ಭೀತಿ ಶುರುವಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಕೇವಲ ಐದು ದಿನದಲ್ಲಿ 17 ಸಂಪರ್ಕ ಸೇತುವೆಗಳು ಜಲಾವೃತಗೊಂಡಿದೆ. ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯ ಏಳು ಸೇತುವೆಗಳು ಹಾಗೂ ಬೆಳಗಾವಿ ವ್ಯಾಪ್ತಿಯಲ್ಲಿ ಹತ್ತು ಸಂಪರ್ಕ ಸೇತುವೆ ಮುಳುಗಡೆಯಾಗಿವೆ.

ದೂದಗಂಗಾ ನದಿಗೆ ದತ್ತವಾಡ-ಮಲ್ಲಿಕವಾಡ, ಬೋಜ್-ಕಾರದಗಾ, ಬೋಜವಾಡಿ-ಕುಣ್ಣೂರ ಹಾಗೂ ವೇದಗಂಗಾ ನದಿಗೆ ಜತ್ರಾಟ-ಭೀವಶಿ, ಅಕ್ಕೋಳ-ಸಿದ್ನಾಳ, ಕೃಷ್ಣಾ ನದಿಗೆ ಮಾಂಜರಿ-ಬಾವನಸೌದತ್ತಿ, ಹಿರಣ್ಯಕೇಶಿ ನದಿಗೆ ಯರನಾಳ-ಮದಮಕ್ಕನಾಳ ಸೇರಿ ಘಟಪ್ರಭಾ ನದಿಗೆ ಸುಣಧೋಳಿ – ಮೂಡಲಗಿ, ಅವರಾದಿ- ನಂದಗಾಂವ, ಕಮಲದಿನ್ನಿ – ಹುಣಶ್ಯಾಳ ಪಿವೈ, ವಡ್ಡರಹಟ್ಟಿ- ಉದಗಟ್ಟಿ, ಗೋಕಾಕ್-ಶಿಂಗಳಾಪುರ, ಮಲಪ್ರಭಾಗೆ ಖಾನಾಪುರ-ಹೆಮ್ಮಡಗಾ, ಸಾತ್ನಾಳಿ-ಮಾಸಾಳಿ ಸಂಪರ್ಕ ಕಡಿತಗೊಂಡಿದೆ. ಇದರಿಂದ ಬರೋಬ್ಬರಿ 34 ಗ್ರಾಮಗಳಿಗೆ ಸಂಪರ್ಕ ಕಡಿತವಾಗಿದ್ದು, ಕಿ.ಮೀ ಗಟ್ಟಲೇ ಸುತ್ತಿ ಹಾಕಿ ಓಡಾಡುವಂತಾಗಿದೆ.

ಕೊಡಗಿನಲ್ಲಿ ಕರೆಂಟ್‌ ಶಾಕ್‌ಗೆ ಎತ್ತು ಸಾವು

ಕೊಡಗು: ಗದ್ದೆಯಲ್ಲಿ ವಿದ್ಯುತ್ ಸ್ಪರ್ಶಿಸಿ ಎತ್ತೊಂದು ಮೃತಪಟ್ಟಿದೆ. ಮತ್ತೊಂದು ಎತ್ತು ಹಾಗೂ ರೈತನ ಕುಟುಂಬ ಹಾಗೂಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೊಡಗಿನ ಸೋಮವಾರಪೇಟೆ ತಾಲೂಕಿನ ದೊಡ್ಡಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.

ಗದ್ದೆಯಲ್ಲಿ ಉಳುಮೆ ಮಾಡುತ್ತಿದ್ದ ಸಂದರ್ಭದಲ್ಲಿ ಕರೆಂಟ್‌ ಶಾಕ್‌ ಹೊಡೆದಿದೆ. ಈ ವೇಳೆ ಒಂದು ಎತ್ತು ಮೃತಪಟ್ಟರೆ, ಕುಂಬಗೌಡನ ಸದಾ ಅವರ ಪತ್ನಿ ವೀಣಾ, ಮತ್ತೊಂದು ಎತ್ತು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಭಾರಿ ಮಳೆ ಹಿನ್ನೆಲೆಯಲ್ಲಿ ಕಂಬದಿಂದ ವಿದ್ಯುತ್ ಲೀಕೇಜ್‌ ಆಗಿದ್ದೆ ಈ ಅವಘಡಕ್ಕೆ ಕಾರಣ ಎನ್ನಲಾಗಿದೆ. ಸ್ಥಳಕ್ಕೆ ಚೆಸ್ಕಾಂ ಸಿಬ್ಬಂದಿ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: Bengaluru News : ಓವರ್‌ ನೈಟ್‌ ಪಾರ್ಟಿ; ವಿರಾಟ್‌ ಕೊಹ್ಲಿ ಮಾಲಿಕತ್ವದ ಪಬ್‌ ಸೇರಿ 10ಕ್ಕೂ ಹೆಚ್ಚು ಪಬ್‌ಗಳ ಮೇಲೆ ಎಫ್‌ಐಆರ್‌

ದ್ವೀಪದಂತೆ ಆದ ಮಂಡಕಳಲೆ ಗ್ರಾಮ

ಶಿವಮೊಗ್ಗದಲ್ಲಿ ಮಳೆಯಾರ್ಭಟಕ್ಕೆ ಮಂಡಕಳಲೆ ಗ್ರಾಮ ದ್ವೀಪದಂತೆ ಆಗಿದೆ. ಜತೆಗೆ ಎರಡು ಮನೆಗಳು ನೆಲಸಮವಾಗಿದ್ದು, ಕುಟುಂಬಸ್ಥರು ಕಂಗಲಾಗಿದ್ದಾರೆ. ಪ್ರಕಾಶ್ ಹಾಗೂ ಜಯಲಕ್ಷ್ಮಿ ಎಂಬುವವರ ಮನೆ ನೆಲಸಮವಾಗಿದೆ. ಜಿಲ್ಲಾಡಳಿತ ಮಂಡಕಳಲೆ ಗ್ರಾಮದಲ್ಲಿ ಪ್ರಾಥಮಿಕ ಶಾಲೆಯಲ್ಲಿ ನಿರಾಶ್ರಿತರಿಗೆ ಕಾಳಜಿ ಕೇಂದ್ರ ಸ್ಥಾಪನೆ ಮಾಡಿದೆ. ಇನ್ನೂ ಸಚಿವ ಮಧುಬಂಗಾರಪ್ಪ ಪ್ರತಿ ಕುಟುಂಬಕ್ಕೆ 5 ಸಾವಿರ ವೈಯಕ್ತಿಕ ಪರಿಹಾರ ನೀಡಿದ್ದು, ಮನೆ ಕಳೆದು ಕೊಂಡವರಿಗೆ 5 ಲಕ್ಷ ರೂ. ಹಣ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕಾನಲೆ ಗ್ರಾಮದಲ್ಲಿ ಅಪಾಯ ಮಟ್ಟ ಮೀರಿ ವರದಾ ನದಿ ಹರಿಯುತ್ತಿದ್ದು, ಕೆಲವೇ – ಕನ್ನಳ್ಳಿ ಮಾರ್ಗದ ಸೇತುವೆ ಮುಳಗಡೆಯಾಗಿದೆ. ಸೇತುವೆ ಮೇಲೆ ನೀರು ರಭಸವಾಗಿ ಹರಿಯುತ್ತಿದ್ದು, ಕೆಲವೇ – ಕನ್ನಳ್ಳಿ ಮಾರ್ಗದ ಸಂಪರ್ಕಕ್ಕೆ ಅಡಚಣೆ ಉಂಟಾಗಿದೆ.

ಇತ್ತ ವರದಾ ನದಿಯಲ್ಲಿ ನೀರು ಹೆಚ್ಚಾದ ಹಿನ್ನೆಲೆಯಲ್ಲಿ ಹಾನಗಲ್ ತಾಲೂಕಿನಲ್ಲಿ ಹಲವು ಸೇತುವೆ ಮುಳುಗಡೆಯಾಗಿದೆ. ಬಾಳಂಬೀಡ, ಅರೆಲಕಮಾಪುರ ಸಂಪರ್ಕ ಸೇತುವೆ ಮುಳುಗಡೆ ಆಗಿದ್ದರಿಂದ ಹತ್ತಕ್ಕೂ ಹೆಚ್ಚು ಗ್ರಾಮಗಳ ಸಂಪರ್ಕ ಬಂದ್ ಆಗಿದೆ. ನೂರಾರು ಎಕರೆ ಬೆಳೆ ನೀರುಪಾಲಾಗಿದೆ. ದೇವಸ್ಥಾನ, ವಿದ್ಯುತ್ ಕಂಬ, ವಿದ್ಯುತ್ ಟ್ರಾನ್ಸ್ ಫಾರ್ಮರ್, ರೈತರ ಪಂಪ್ ಸೆಟ್‌ಗಳು ನೀರುಪಾಲಾಗಿವೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version