ಹಾಸನ: ಚಲಿಸುತ್ತಿದ್ದ ಕಾರಿನ ಮೇಲೆ ಗುಡ್ಡ ಕುಸಿದಿದ್ದು, ಕಾರಿನಲ್ಲಿದ್ದವರಿಗೆ ಸಣ್ಣ ಪುಟ್ಟ ಗಾಯದಿಂದ ಪಾರಾಗಿದ್ದಾರೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಎತ್ತಿನಹಳ್ಳ ಬಳಿ ಘಟನೆ (Karnataka Rain) ನಡೆದಿದೆ. ರಾಷ್ಟ್ರೀಯ ಹೆದ್ದಾರಿ 75 ಶಿರಾಡಿಘಾಟ್ ರಸ್ತೆಯಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಏಕಾಏಕಿ ಮಣ್ಣು ಕುಸಿದಿದೆ. ಪರಿಣಾಮ ಕೆಲಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಕಂದಾಯ ಇಲಾಖೆ ಸಿಬ್ಬಂದಿ ಮಣ್ಣು ತೆರವುಗೊಳಿಸಿದರು.
ಹಾಸನದ ಸಕಲೇಶಪುರ ತಾಲೂಕಿನಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ಹಳ್ಳ ಕೊಳ್ಳಗಳು ಉಕ್ಕಿ ಹರಿಯುತ್ತಿದೆ. ಮಠಸಾಗರದ ಬಳಿ ನೀರು ನಿಂತು ಕೃಷ್ಣಾಪುರ ಸಂಪರ್ಕ ಕಡಿತಗೊಂಡಿದೆ. ಹಳ್ಳ ಉಕ್ಕಿ ಹರಿದ ಪರಿಣಾಮ ಕಾಫಿ, ಅಡಿಕೆ ತೋಟಗಳು ಜಲಾವೃತಗೊಂಡಿದೆ. ರಸ್ತೆ ಸಂಪರ್ಕ ಕಡಿತ ಹಿನ್ನೆಲೆಯಲ್ಲಿ ರೋಗಿಗಳನ್ನೂ ಆಸ್ಪತ್ರೆಗೆ ಕರೆದೊಯ್ಯಲಾಗದೆ ಪರದಾಟ ಅನುಭವಿಸಿದರು.
ಶಿರಾಡಿಘಾಟ್‌ನಲ್ಲಿ ಗುಡ್ಡ ಕುಸಿತ
ಭಾರಿ ಮಳೆಗೆ ಶಿರಾಡಿಘಾಟ್‌ನ ಮತ್ತೊಂದು ಕಡೆ ಗುಡ್ಡ ಕುಸಿದಿದೆ. ಹಾಸನದ ಸಕಲೇಶಪುರ ತಾಲೂಕಿನ ಮಾರನಹಳ್ಳಿ ಸಮೀಪ ಘಟನೆ ನಡೆದಿದೆ. ಒಂದು ನೂರಾರು ಮೀಟರ್ ಎತ್ತರದಿಂದ ಕೆಳಗೆ ಗುಡ್ಡ ಕುಸಿದಿದೆ. ಕೂದಲೆಳೆ ಅಂತರದಲ್ಲಿ ವಾಹನ ಸವಾರರು ಪಾರಾಗಿದ್ದಾರೆ. ಸ್ಥಳಕ್ಕೆ ಹೆದ್ದಾರಿ ಪ್ರಾಧಿಕಾರದ ಸಿಬ್ಬಂದಿ ದೌಡಾಯಿಸಿದ್ದು, ಕೆಲಕಾಲ ವಾಹನ ಸಂಚಾರ ಸ್ಥಗಿತಗೊಂಡಿದೆ.
ಗುಡ್ಡ ಕುಸಿತದಿಂದ ಸುಮಾರು 10 ಕಿಮಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ಟ್ರಕ್, ಲಾರಿ ಟ್ಯಾಕರ್ ಓಡಾಟಕ್ಕೆ ತಾತ್ಕಾಲಿಕ ತಡೆಹಿಡಿಯಲಾಗಿದೆ. ಅತ್ತ ಚಾರ್ಮಾಡಿ ಘಾಟ್‌ನಲ್ಲೂ ಪ್ರಯಾಣ ದುಸ್ಥರ ಹಿನ್ನೆಲೆಯಲ್ಲಿ ಹಾಸನದಲ್ಲಿಯೇ ವಾಹನ ನಿಲ್ಲಿಸಲು ಸೂಚನೆ ನೀಡಲಾಗಿದೆ. ಸದ್ಯ ಸಕಲೇಶಪುರದವರೆಗೆ ತೆರಳಲು ಸಾರಿಗೆ ಬಸ್‌ಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಮಂಗಳೂರು ಕಡೆಗೆ ಹೋಗುವ ಬಸ್‌ಗಳಿಗೂ ಹಾಸನ ತಾಲೂಕಿನ ಕಂದಲಿ ಬಳಿ ತಡೆಹಿಡಯಲಾಗಿದೆ.
ರಸ್ತೆಗೆ ಉರುಳಿ ಬಿದ್ದ ಬಂಡೆಗಲ್ಲು
ನಿರಂತರ ಮಳೆ ಬೃಹತ್ ಗಾತ್ರದ ಬಂಡೆಗಲ್ಲು ರಸ್ತೆಗೆ ಉರುಳಿ ಬಿದ್ದಿದೆ. ಬೆಳಗಾವಿ ಅಂಬೋಲಿ ಮಾರ್ಗ ಮಧ್ಯೆ ಹೆದ್ದಾರಿಗೆ ಬಂಡೆಗಲ್ಲು ಉರುಳಿದೆ. ಗೋವಾ, ಕರ್ನಾಟಕ, ಮಹಾರಾಷ್ಟ್ರ ಬೆಸೆಯುವ ಅಂಬೋಲಿ ಸಾವಂತವಾಡಿ ಹೆದ್ದಾರಿ ಇದಾಗಿದ್ದು, ಅದೃಷ್ಟವಷಾತ್ ಘಟನೆಯಲ್ಲಿ ಯಾವುದೇ ಅವಘಡ ಸಂಭವಿಸಿಲ್ಲ. ಬೆಳಗ್ಗಿನಿಂದಲೇ ಬಂಡೆಗಲ್ಲು ತೆರವುಗೊಳಿಸುವ ಕೆಲಸದಲ್ಲಿ ಅಧಿಕಾರಿಗಳು ಬ್ಯುಸಿಯಾಗಿದ್ದಾರೆ. ಮಹಾರಾಷ್ಟ್ರ ಲೋಕೋಪಯೋಗಿ ಹಾಗೂ ಪೊಲೀಸರ ನೇತೃತ್ವದಲ್ಲಿ ಬಂಡೆ ತೆರವು ಕಾರ್ಯಾಚರಣೆ ನಡೆಯುತ್ತಿದೆ.
ಬೆಳಗಾವಿಯಲ್ಲಿ ಉಕ್ಕಿ ಹರಿಯುತ್ತಿರುವ ಮಲಪ್ರಭಾ ನದಿ
ಬೆಳಗಾವಿಯ ಖಾನಾಪುರದ ಕಣಕುಂಬಿಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಮಲಪ್ರಭಾ ನದಿ ಉಕ್ಕಿ ಹರಿಯುತ್ತಿದೆ. ಹೀಗಾಗಿ ನದಿ ತೀರದ ರೈತರಲ್ಲಿ ಆತಂಕ ಹೆಚ್ಚಿದ್ದು, ಅಕ್ಕ ಪಕ್ಕದ ಜಮೀನುಗಳಿಗೆ ನೀರು ನುಗ್ಗುವ ಆತಂಕವಿದೆ. ಇತ್ತ ಪಾರಿಶ್ವಾಡ ಹಾಗೂ ಹಿರೇಮುನವಳ್ಳಿ ಸಂಪರ್ಕ ಕಲ್ಪಿಸುವ ಸೇತುವೆ ದುರಸ್ಥಿತಿಗೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ: Illicit relationship : ಪರ ಪುರುಷನೊಂದಿಗೆ ಓಡಿ ಹೋದ ಪತ್ನಿ; ಮರ್ಯಾದೆಗೆ ಅಂಜಿ ಪತಿ ಆತ್ಮಹತ್ಯೆ
ಮಂಗಳೂರಿನಲ್ಲಿ ಸುರಿಯುತ್ತಿರುವ ನಿರಂತರ ಮಳೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ನಗರ ಭಾಗದಲ್ಲಿ ಮಳೆ ಅಬ್ಬರ ಕಡಿಯೆಯಾದರೆ, ಗ್ರಾಮಿಣ ಭಾಗದಲ್ಲಿ ಮುಂದುವರಿದಿದೆ. ನಗರ ಭಾಗ ಹೊರತು ಪಡಿಸಿ ಗ್ರಾಮಿಣ ಭಾಗದ ಶಾಲಾ ಕಾಲೇಜುಗಳಿಗೆ ರಜೆ ಷೋಷಣೆ ಮಾಡಲಾಗಿದೆ. ಕಡಬ ತಾಲೂಕಿನ ವಿವಿಧೆಡೆ ಭಾರಿ ಮಳೆಯಾಗುತ್ತಿದ್ದು, ಇಚ್ಲಂಪಾಡಿಯಲ್ಲಿ ಜಲಾವೃತಗೊಂಡು ರಸ್ತೆ ಸಂಪರ್ಕ ಕಡಿತಗೊಂಡಿದೆ. ರಸ್ತೆಗೆ ಗುಂಡ್ಯ ಹೊಳೆ ನೀರು ಹರಿದು ಮಡಿಪು-ಬರೆಮೇಲು ರಸ್ತೆ ಸಂಪರ್ಕ ಕಡಿತಗೊಂಡಿದೆ. ಉಳ್ಳಾಕ್ಲು ದೇವಸ್ಥಾನ, ನದಿಬದಿಯ ಕೃಷಿ ತೋಟಗಳು ಜಲಾವೃತಗೊಂಡಿದೆ. ಅಪಾಯದ ಮಟ್ಟದಲ್ಲಿ ನೇತ್ರಾವತಿ ನದಿ ಹರಿಯುತ್ತಿದ್ದು, ಧರ್ಮಸ್ಥಳದ ಸ್ನಾನಘಟ್ಟದಲ್ಲಿ ನೀರಿನ ಪ್ರಮಾಣ ಹೆಚ್ಚಳಗೊಂಡಿದೆ. ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಳೆ ಹೆಚ್ಚಳ ಹಿನ್ನೆಲೆಯಲ್ಲಿ ಪ್ರವಾಸಿಗರಿಗೆ ನೀರಿಗೆ ಇಳಿಯದಂತೆ ಸೂಚನೆ ನೀಡಲಾಗಿದೆ.
ಶಿವಮೊಗ್ಗದಲ್ಲಿ ಅಪಾಯಕಾರಿ ಪ್ರವಾಸಿ ತಾಣಗಳಿಗೆ ನಿಷೇಧ
ಮಲೆನಾಡು ಶಿವಮೊಗ್ಗದಲ್ಲಿ ಮಳೆ ಅಬ್ಬರ ಮುಂದುವರಿದಿದೆ. ಅಪಾಯಮಟ್ಟ ಮಟ್ಟ ಮೀರಿ ನದಿಗಳು, ಹಳ್ಳ ಕೊಳ್ಳಗಳು ಹರಿಯುತ್ತಿದೆ. ಹೀಗಾಗಿ ಅಪಾಯಕಾರಿ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ಪ್ರವೇಶವನ್ನು ನಿಷೇಧ ಮಾಡಲಾಗಿದೆ. ಸಾರ್ವಜನಿಕರ ಹಿತದೃಷ್ಠಿಯಿಂದ ಪೊಲೀಸ್ ಇಲಾಖೆ ಸನ್ನದ್ಧಗೊಂಡಿದೆ.
ಅಣೆಕಟ್ಟುಗಳು, ಜಲಪಾತಗಳು ಮತ್ತು ನದಿ ನೀರಿಗೆ ಇಳಿಯುವುದು. ನದಿಯಲ್ಲಿ ಈಜಾಡುವುದು ಮತ್ತು ಸೆಲ್ಫಿಗಳನ್ನು ತೆಗೆದುಕೊಳ್ಳುವುದಕ್ಕೆ ನಿರ್ಬಂಧ ಹೇರಲಾಗಿದೆ. ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಸೂಚನಾ ಫಲಕಗಳನ್ನು ಅಳವಡಿಕೆ ಮಾಡಲಾಗಿದೆ. ಆಯಾಕಟ್ಟಿನಲ್ಲಿ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ತುರ್ತು ಸಂದರ್ಭಗಳಲ್ಲಿ ಸಹಾಯಕ್ಕಾಗಿ 112 ಸಹಾಯವಾಣಿಗೆ ಕರೆ ಮಾಡಲು ಮನವಿ ಮಾಡಲಾಗಿದೆ.
ನಂಜನಗೂಡಿನಲ್ಲಿ ಪ್ರವಾಹ ಭೀತಿ
ಮೈಸೂರಿನ ನಂಜನಗೂಡಿನಲ್ಲಿ ಪ್ರವಾಹ ಭೀತಿ ಎದುರಾಗಿದೆ. ಹೀಗಾಗಿ ತಗ್ಗು ಪ್ರದೇಶಗಳಿಗೆ ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಬಿನಿ ಜಲಾಶಯದಿಂದ ಹೊರ ಹರಿವು ಹೆಚ್ಚಳದಿಂದಾಗಿ ದಕ್ಷಿಣ ಕಾಶಿ ನಂಜನಗೂಡು ಶ್ರೀ ನಂಜುಂಡೇಶ್ವರ ಸ್ವಾಮಿ ದೇವಾಲಯದ ಬಳಿ ಸ್ನಾನಘಟ್ಟ, ಹದಿನಾರು ಕಾಲು ಮಂಟಪ, ಪರಶುರಾಮ ದೇವಾಲಯ ಮುಳುಗಡೆಯಾಗಿದೆ.
ಹೀಗಾಗಿ ನಂಜನಗೂಡು ತಾಲೂಕಿನ ಕಡಜಟ್ಟಿ ಗ್ರಾಮ, ಹುಲ್ಲಹಳ್ಳಿ ಸುತ್ತಮುತ್ತಲಿನ ಪ್ರದೇಶಗಳು, ಹುಲ್ಲಹಳ್ಳಿ ಮೈಸೂರು ಸೇತುವೆ, ಬೊಕ್ಕ ಹಳ್ಳಿ, ಕುಳ್ಳಂಕಯ್ಯನ ಹುಂಡಿ, ಕಪಿಲಾ ನದಿ ಸ್ನಾನಘಟ್ಟಗಳಿಗೆ ತೆರಳಿ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಹಳ್ಳದಕೇರಿ ಬಡಾವಣೆಯಲ್ಲಿ ಮನೆಗಳು ಜಲಾವೃತಗೊಂಡ ಹಿನ್ನೆಲೆ ಮಹಿಳೆಯೊಬ್ಬರು ಜಿಲ್ಲಾಧಿಕಾರಿಗಳ ಬಳಿ ತಮ್ಮ ಅಳಲನ್ನು ತೋಡಿಕೊಂಡರು. ಹೀಗಾಗಿ ಕೂಡಲೇ ನಿವಾಸಿಗಳನ್ನು ಗಿರಿಜಾ ಕಲ್ಯಾಣ ಮಂಟಪಕ್ಕೆ ಸ್ಥಳಾಂತರ ಮಾಡಿ ಅವರಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಂತೆ ತಹಶೀಲ್ದಾರ್ ಅವರಿಗೆ ಸೂಚನೆ ನೀಡಿದರು.
ನಾಪೋಕ್ಲು ಮೂರ್ನಾಡು ಸಂಪರ್ಕ ಕಲ್ಪಿಸುವ ರಸ್ತೆ ಬಂದ್
ಕೊಡಗಿನಲ್ಲಿ ಭಾರಿ ಗಾಳಿ ಮಳೆಯಿಂದಾಗಿ ಕಾವೇರಿ ನದಿ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಕಾವೇರಿ ನದಿ ಉಕ್ಕಿ ಹರಿದು ನಾಪೋಕ್ಲು ಮೂರ್ನಾಡು ಸಂಪರ್ಕ ಕಲ್ಪಿಸುವ ರಸ್ತೆ ಬಂದ್ ಆಗಿದೆ. ನಾಪೋಕ್ಲು ಸಮೀಪದ ಬೊಳಿಬಾಣೆಯಲ್ಲಿ ನೀರು ನಿಂತಿರುವುದರಿಂದ ವಾಹನಗಳು ಬದಲಿ ರಸ್ತೆಯಲ್ಲಿ ಸಾಗುತ್ತಿವೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ