ಉಡುಪಿ/ಬೆಂಗಳೂರು: ಉಡುಪಿಯ ಕಾರ್ಕಳದಲ್ಲಿ ಸುರಿದ ಭಾರಿ ಗಾಳಿ- ಮಳೆಗೆ (Karnataka weather Forecast) ಮರವೊಂದು ಉರುಳಿದೆ. ತಾಲೂಕಿನಾದ್ಯಂತ ಹಲವಾರು ಕಡೆಗಳಲ್ಲಿ ಮರಗಳು (Rain News) ಧರೆಗುರುಳಿವೆ. ಕಾರ್ಕಳ ಬಸ್ ನಿಲ್ದಾಣದ ಬಳಿ ಆಲದ ಮರ ಬಿದ್ದು ರಿಕ್ಷಾ ಜಖಂಗೊಂಡಿದೆ. ಬೃಹತ್ ಗಾತ್ರದ ಮರ ಬೀಳುವಾಗಲೇ ರಿಕ್ಷಾ ಚಾಲಕ ಪವಾಡ ಸದೃಶ ಪಾರಾಗಿದ್ದಾರೆ.
ಮರ ಬಿದ್ದ ಪರಿಣಾಮ ವಿದ್ಯುತ್ ಕಂಬವು ದ್ವಿಚಕ್ರ ವಾಹನದ ಮೇಲೆ ಬಿದ್ದು ಅಪ್ಪಚ್ಚಿಯಾಗಿದೆ. ಹಲವು ವಿದ್ಯುತ್ ಕಂಬಗಳು ಧರೆಗೆ ಉರುಳಿದ ಪರಿಣಾಮ ವಿದ್ಯುತ್ ತಂತಿಗಳು ರಸ್ತೆ ತುಂಬೆಲ್ಲ ಇದ್ದವು. ಮರ ಜತೆಗೆ ವಿದ್ಯುತ್ ಕಂಬಗಳು ಬಿದ್ದು ಸಂಚಾರಕ್ಕೆ ಸಮಸ್ಯೆಯುಂಟು ಮಾಡಿತು.
ಮಳೆ ಬಂದರೆ ಮೆಸ್ಕಾಂ ಸಿಬ್ಬಂದಿಗಳ ಪರದಾಟ
ಮಳೆ ಹೆಚ್ಚಾದರೆ ಸಾಕು ಮೆಸ್ಕಾಂ ಸಿಬ್ಬಂದಿಗೆ ಪರದಾಟ ತಪ್ಪಿದಲ್ಲ. ವಿದ್ಯುತ್ ಲೈನ್ ಮೇಲೆ ಬಿದ್ದ ಮರ ತೆರವು ಮಾಡಲು ಮೆಸ್ಕಾಂ ಎಂಜಿನಿಯರ್ ಕತ್ತಿಯಿಂದಲೇ ಮರ ಕಡಿದರು. ವೆಂಕಮ್ಮ ತಳವಾರ ಎಂಬುವವರು ಕಟ್ಟಿಂಗ್ ಮಿಷನ್ ಇಲ್ಲದ ಕಾರಣ ಕತ್ತಿಯಿಂದಲೇ ಮರ ತೆರವು ಮಾಡಬೇಕಾಯಿತು. ಚಿಕ್ಕಮಗಳೂರಿನ ಮಲ್ಲಂದೂರು ಸಮೀಪದ ಗಾಳಿ ಪೇಟೆ -ಹೊಸಳ್ಳಿ ಪೇಟೆ ರಸ್ತೆಯಲ್ಲಿ ಘಟನೆ ನಡೆದಿದೆ.
ಮುಂದಿನ 24 ಗಂಟೆಯಲ್ಲಿ ಮಳೆ ಎಚ್ಚರಿಕೆ
ಮುಂದಿನ 24 ಗಂಟೆಯಲ್ಲಿ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಪ್ರತ್ಯೇಕ ಕಡೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಗಾಳಿ ವೇಗವು 30-40 ಕಿಮೀ ತಲುಪುವ ಸಾಧ್ಯತೆಯಿದೆ. ಇನ್ನೂ ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗಿನಲ್ಲೂ ಮಳೆಯಾರ್ಭಟ ಮುಂದುವರಿಯಲಿದೆ. ಉತ್ತರ ಒಳನಾಡಿನ ಎಲ್ಲಾ ಜಿಲ್ಲೆಗಳ ಹಲವು ಸ್ಥಳಗಳಲ್ಲಿ ಮತ್ತು ದಕ್ಷಿಣ ಒಳನಾಡಿನ ಉಳಿದ ಕೆಲವು ಸ್ಥಳಗಳಲ್ಲಿ ಗಾಳಿಯ ವೇಗವು 30-40ಕಿ.ಮೀ ತಲುಪುವ ಸಾಧ್ಯತೆ ಇದ್ದು, ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.
ಇದನ್ನೂ ಓದಿ: Rowdy Reels : 500 ರೂ. ಕೊಟ್ಟರೆ ರೌಡಿಗಳ ರೀಲ್ಸ್ ಅಪ್ಲೋಡ್; ಅಪ್ರಾಪ್ತರಿಗೆ ಬಿಸಿ ಮುಟ್ಟಿಸಿದ ಸಿಸಿಬಿ ಪೊಲೀಸರು
ನಿರಂತರ ಮಳೆಗೆ ಮೈಸೂರಿನ ಒಲಂಪಿಯಾ ಚಿತ್ರಮಂದಿರದ ಗೋಡೆ ಕುಸಿತ
ಮೈಸೂರು: ನಿರಂತರ ಮಳೆಗೆ ಮೈಸೂರಿನ ಒಲಂಪಿಯಾ ಚಿತ್ರಮಂದಿರದ ಹಿಂಬದಿ ಗೋಡೆ ಕುಸಿದು (Karnataka Rain) ಬಿದ್ದಿದೆ. ಚಿತ್ರಮಂದಿರ ಪಕ್ಕದಲ್ಲೇ ಬೀದಿ ಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದ ನಾಲ್ವರು ಗಾಯಗೊಂಡಿದ್ದಾರೆ. ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಗಾಯಾಳುಗಳನ್ನು ಕೆಆರ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಸೋಮವಾರ ಮಧ್ಯಾಹ್ನ ಈ ದುರ್ಘಟನೆ ನಡೆದಿದ್ದು, ತಬರೀಸ್ ಮತ್ತು ಅರ್ಮಾನ್ ಎಂಬುವವರು ಗಂಭೀರವಾಗಿ ಗಾಯಗೊಂಡವರು. ಸ್ಥಳಕ್ಕೆ ಪೊಲೀಸರು, ಅಗ್ನಿಶಾಮಕ ದಳ ದೌಡಾಯಿಸಿದ್ದು ಪರಿಶೀಲನೆ ನಡೆಸಿದ್ದಾರೆ. ಗೋಡೆ ಕೆಳಗೆ ಬಿದ್ದ ಪರಿಣಾಮ ಬಟ್ಟೆ ಅಂಗಡಿಯ ಸ್ಟಾಲ್‌ಗಳು ನೆಲಕಚ್ಚಿವೆ. ಜೆಸಿಬಿ ಯಂತ್ರದ ಮೂಲಕ ತೆರವು ಕಾರ್ಯಾಚರಣೆ ನಡೆಯುತ್ತಿದೆ.
ಹೆದ್ದಾರಿಗೆ ಬಿದ್ದ ಬೃಹತ್ ಮರ
ಉತ್ತರಕನ್ನಡ ಜಿಲ್ಲೆಯಲ್ಲಿ ವರುಣಾರ್ಭಟ ಮುಂದುವರಿದಿದ್ದು, ಶಿರಸಿ-ಹೊಸನಗರ ರಾಜ್ಯ ಹೆದ್ದಾರಿಗೆ ಬೃಹತ್ ಮರವೊಂದು ಬಿದ್ದಿದೆ. ಶಿರಸಿ ತಾಲೂಕಿನ ಗುಡ್ನಾಪುರ ಗ್ರಾಮದ ಬಳಿ ಘಟನೆ ನಡೆದಿದೆ. ಮರ ಬಿದ್ದ ಪರಿಣಾಮ ಶಿರಸಿ-ಬನವಾಸಿ ರಸ್ತೆ ಸಂಚಾರ ಬಂದ್ ಆಗಿದ್ದು, ಮರ ಬಿದ್ದ ಪರಿಣಾಮ ಹಲವು ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ಅರಣ್ಯ, ಲೋಕೋಪಯೋಗಿ ಇಲಾಖೆ, ಹೆಸ್ಕಾಂ, ಪೊಲೀಸ್ ಇಲಾಖೆಯಿಂದ ತೆರವು ಕಾರ್ಯಾಚರಣೆ ನಡೆದಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ