Site icon Vistara News

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Karnataka Rain

ಬೆಂಗಳೂರು: ರಾಜಧಾನಿ ಬೆಂಗಳೂರು (Bengaluru Rain) ಜೂನ್‌ ಮೊದಲ ವಾರವೇ ಮಳೆಯಲ್ಲಿ ರೆಕಾರ್ಡ್‌ ಬ್ರೇಕ್‌ ಮಾಡಿದೆ. ಜೂ.2ರ ಭಾನುವಾರ ಬೆಂಗಳೂರಿನಲ್ಲಿ 111.2 mm ಮಳೆಯಾಗಿದೆ. ಈ ಮೂಲಕ 133 ವರ್ಷಗಳ ದಾಖಲೆಯನ್ನು ಮುರಿದಿದೆ. ಬೆಂಗಳೂರಿನಲ್ಲಿ 1891ರ ಜೂನ್ 16ರಂದು 101.6 mm ಮಳೆ ಆಗಿತ್ತು. ಆದರೆ ನಿನ್ನೆ ಭಾನುವಾರ ಸುರಿದ ಜೂನ್ ತಿಂಗಳ ಮಳೆ 133 ವರ್ಷಗಳ ದಾಖಲೆ (Karnataka Rain) ಮುರಿದಿದೆ ಎಂದು ವಿಸ್ತಾರ ನ್ಯೂಸ್‌ಗೆ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ದಾಖಲೆಯ ಮಳೆ ಅಬ್ಬರದ ಡಿಟೈಲ್ಸ್‌

ವರ್ಷ- ಮಳೆ ಪ್ರಮಾಣ
1891ರ ಜೂನ್ 16ರಂದು 101.6 mm
2013ರ ಜೂನ್‌ 1ರಂದು 100mm
2009ರ ಜೂನ್ 11ರಂದು 89.6 mm
2024ರ ಜೂನ್‌ 2ರಂದು 111.2 mm

ಇದನ್ನೂ ಓದಿ: Bangalore Rain News : ಬೆಂಗಳೂರಿನಲ್ಲಿ ಭಾರಿ ಮಳೆ; ಹಲವು ಕಡೆ ಉರುಳಿ ಬಿದ್ದ ಮರಗಳು, ಮೆಟ್ರೋ ಸಂಚಾರಕ್ಕೂ ಅಡಚಣೆ

ಚಿಕ್ಕಮಗಳೂರಲ್ಲಿ ಮಳೆಗೆ 50 ಎಕರೆ ಅಡಿಕೆ ತೋಟ ಜಲಾವೃತ

ಚಿಕ್ಕಮಗಳೂರು ಬಯಲುಸೀಮೆ ಭಾಗದಲ್ಲಿ ಸೋಮವಾರ (ಜೂ. 3) ಭಾರಿ ಮಳೆಯಾಗಿದೆ. ಮಳೆಯ ಆರ್ಭಟಕ್ಕೆ 50 ಎಕರೆ ಅಡಿಕೆ ತೋಟ ಜಲಾವೃತಗೊಂಡಿದೆ. ಚಿಕ್ಕಮಗಳೂರು ತಾಲೂಕಿನ ಕ್ಯಾತನಬೀಡು, ಸಾದರಹಳ್ಳಿ ಗ್ರಾಮಗಳಲ್ಲಿ ಘಟನೆ ನಡೆದಿದೆ. ಗ್ರಾಮದ ಬಸವರಾಜು, ಲೋಕೇಶ್ ಸೇರಿದಂತೆ ಹಲವು ರೈತರ ತೋಟ ನೀರುಪಾಲಾಗಿದೆ. ಇನ್ನೂ ಚಿಕ್ಕಮಗಳೂರು, ಮುಡಿಗೆರೆ, ಕೊಪ್ಪ, ಶೃಂಗೇರಿ, ಎನ್‌ಆರ್ ಪುರದಲ್ಲಿ ನಿರಂತರ ಮಳೆಯಿಂದಾಗಿ ಜನ-ಜೀವನ ಅಸ್ತವ್ಯಸ್ತವಾಗಿದೆ. ಕೊಟ್ಟಿಗೆಹಾರ, ಚಾರ್ಮಾಡಿ, ಕಿಗ್ಗಾ, ಬಸರಿ ಕಟ್ಟೆ ಭಾಗದಲ್ಲೂ ವ್ಯಾಪಕ ಮಳೆಯಾಗುತ್ತಿದೆ.

ದಾವಣಗೆರೆಯಲ್ಲಿ ಕೊಚ್ಚಿ ಹೋದ ಮಂಡಲೂರು ಸೇತುವೆ

ಭಾನುವಾರ ರಾತ್ರಿ ಸುರಿದ ಮಳೆಯಿಂದ ಮಂಡಲೂರು ಸೇತುವೆ ಕೊಚ್ಚಿ ಹೋಗಿದೆ. ದಾವಣಗೆರೆಯ ಮಂಡಲೂರಿನಿಂದ ಕಾಟಿಹಳ್ಳಿ ತಾಂಡಕ್ಕೆ ಸಂಪರ್ಕ ಕಲ್ಪಿಸುವ ಸೇತುವೆಯು ಕೊಚ್ಚಿ ಹೋದ ಕಾರಣದಿಂದ ಸಂಚಾರಕ್ಕೆ ಅಡಚಣೆ ಆಗಿತ್ತು. ಮಂಡಲೂರು ಗ್ರಾಮಕ್ಕೆ ಬರಲು ಹೋಗಲು ಆಗದೆ ಕಾಟಿಹಳ್ಳಿ ತಾಂಡದ ಜನರಿಗೆ ತೊಂದರೆ ಅನುಭವಿಸಿದರು. ಸೇತುವೆ ತುರ್ತು ಕಾಮಗಾರಿ ಆರಂಭಿಸುವಂತೆ ಗ್ರಾಮಸ್ಥರು ಆಗ್ರಹಿಸಿದರು.

ಕೊಡಗಿಗೂ ಎಂಟ್ರಿ ಕೊಟ್ಟ ಮುಂಗಾರು ಮಳೆ

ಸೋಮವಾರ ಕೊಡಗು ಜಿಲ್ಲೆಯ ಹಲವೆಡೆ ತುಂತುರು ಮಳೆ ಆರಂಭವಾಗಿದೆ. ಕಳೆದ ಹಲವು ದಿನಗಳಿಂದ ಜಿಲ್ಲೆಯಲ್ಲಿ ಬಿಸಿಲ ವಾತವರಣವಿತ್ತು. ಸೋಮವಾರ ಮಧ್ಯಾಹ್ನದ ನಂತರ ಮಡಿಕೇರಿ ಸೇರಿದಂತೆ ಜಿಲ್ಲೆಯ ಹಲವೆಡೆ ಮಳೆಯಾಗಿದ್ದು, ಮನ್ಸೂನ್ ಮಾದರಿಯ ವಾತಾವರಣ ಕಂಡು ಬಂತು. ಮಳೆಯಿಂದಾಗಿ ಕೊಡಗಿನ ರೈತಾಪಿ ವರ್ಗದಲ್ಲಿ ಮಂದಹಾಸ ಮೂಡಿದೆ. ಇತ್ತ ದಿಢೀರ್‌ ಮಳೆಗೆ ಸಾರ್ವಜನಿಕರು ಹಾಗೂ ದ್ವಿಚಕ್ರ ವಾಹನ ಸವಾರರು ಪರದಾಡಿದರು.

ಚಿತ್ರದುರ್ಗದಲ್ಲಿ ಮಳೆಗೆ ಬೆಳೆ ನಾಶ

ಚಿತ್ರದುರ್ಗದಲ್ಲಿ ತಡರಾತ್ರಿ ವರುಣನ ಆರ್ಭಟಕ್ಕೆ ಮೊಳಕಾಲ್ಮುರು ತಾಲೂಕಿನಲ್ಲಿ ಅವ್ಯವಸ್ಥೆ ಆಗಿದೆ. ಪಕ್ಕುರ್ತಿ ಗ್ರಾಮದಲ್ಲಿ ಮಳೆಯಿಂದಾಗಿ ಶೇಂಗಾ, ಹತ್ತಿ, ಕಲ್ಲಂಗಡಿ, ಕನಕಾಂಬರ ಬೆಳೆ ನಾಶವಾಗಿದೆ. ಮಳೆ ರಭಸಕ್ಕೆ ನಾಲ್ಕು ಬೋರ್ವೆಲ್,ವಿದ್ಯುತ್ ಪರಿಕರ,ಪೈಪ್ ಲೈನ್ ಕೊಚ್ಚಿ ಹೋಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version