Site icon Vistara News

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Rain

ಹಾಸನ/ಉಡುಪಿ: ರಾಜ್ಯಾದ್ಯಂತ ಭಾರಿ ಮಳೆಯಾಗುತ್ತಿದ್ದು, ಅವಾಂತರವನ್ನೇ ಸೃಷ್ಟಿಸಿದೆ. ಹಾಸನ ಜಿಲ್ಲೆಯ ಆಲೂರು ತಾಲೂಕಿನ ಮಠದಕೊಪ್ಪಲ್‌ನಲ್ಲಿ ಭಾರಿ ಮಳೆಯಿಂದಾಗಿ (Karnataka Rain) ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಕೆರೆಗೆ ಉರುಳಿ ಬಿದ್ದಿದೆ. ರಿಡ್ಜ್ ಕಾರಿನಲ್ಲಿದ್ದ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಾಲ್ವರ ಪೈಕಿ ಇಬ್ಬರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಕೆರೆಯೊಳಗಿದ್ದ ಕಾರನ್ನು ಜೆಸಿಬಿ ಬಳಸಿ ಹೊರತೆಗೆಯಲಾಗಿದೆ. ಭಾರಿ ಮಳೆ ಇದ್ದ ಕಾರಣಕ್ಕೆ ರಸ್ತೆ ಕಾಣದೆ ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದಿದೆ.

ಉಡುಪಿಯಲ್ಲಿ ಜಲಾವೃತಗೊಂಡ ಶಾಲೆ

ಉಡುಪಿಯ ಉಪ್ಪೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯು ನೆರೆಯಿಂದ ಜಲಾವೃತಗೊಂಡಿದೆ. ಬ್ರಹ್ಮಾವರ ತಾಲೂಕಿನ ಉಪ್ಪುರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರಕಾರಿ ಶಾಲೆಯು ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದಲ್ಲಿದೆ. ತಗ್ಗು ಪ್ರದೇಶವಾಗಿರುವ ಹಿನ್ನೆಲೆಯಲ್ಲಿ ಪ್ರತಿ ವರ್ಷವೂ ಇಲ್ಲಿ ನೆರೆಹಾವಳಿ ಸೃಷ್ಟಿಯಾಗುತ್ತದೆ. ಮಡಿಸಾಲು ಹೊಳೆ ಉಕ್ಕಿ ಹರಿದ ಪರಿಣಾಮ ಶಾಲೆ ಜಲಾವೃತಗೊಂಡಿದೆ. ರೆಡ್ ಅಲರ್ಟ್ ಹಿನ್ನೆಲೆಯಲ್ಲಿ ಶಾಲೆಗೆ ರಜೆ ನೀಡಲಾಗಿದೆ ಹೀಗಾಗಿ ಯಾವುದೇ ಸಮಸ್ಯೆಯಾಗಿಲ್ಲ.

ಜಲಾವೃತಗೊಂಡ ರಸ್ತೆಯಲ್ಲಿ ಸಿಲುಕಿದ ರೋಗಿ

ಉತ್ತರ ಕನ್ನಡ ಜಿಲ್ಲೆಯ ಕಾರವಾರ-ಮಂಗಳೂರು ರಾಷ್ಟ್ರೀಯ ಹೆದ್ದಾರಿ 66 ಜಲಾವೃತಗೊಂಡ ಪರಿಣಾಮ ಚಿಕಿತ್ಸೆಗೆ ಹೊರಟಿದ್ದ ಪಾಶ್ವವಾಯು ಪೀಡಿತ ರಸ್ತೆಯಲ್ಲೇ ಸಿಲುಕುವಂತಾಯಿತು. ಕಾರವಾರದ ಅರಗಾ ಬಳಿ ಹೆದ್ದಾರಿ ಮೇಲೆ ನಿಂತ ನೀರು ಪರಿಣಾಮ ತೊಂದರೆಯುನ್ನುಂಟಾಯಿತು. ತಡರಾತ್ರಿಯಿಂದ ಸುರಿದ ಭಾರೀ ಮಳೆಗೆ ಹೆದ್ದಾರಿ ಜಲಾವೃತಗೊಂಡಿದೆ. ಹೆದ್ದಾರಿ ಬಂದ್ ಆದ ಪರಿಣಾಮ ರಸ್ತೆಯಲ್ಲೇ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಎದೆಮಟ್ಟದ ನೀರಿನಲ್ಲಿ ಬ್ಯಾಗ್ ತಲೆಯ ಮೇಲೆ ಹೊತ್ತು ರಸ್ತೆ ದಾಟುತ್ತಿರುವುದು ಕಂಡು ಬಂತು. ಮತ್ತೊಂದು ಕಡೆ ಜಲಾವೃತಗೊಂಡ ಹೆದ್ದಾರಿಯಲ್ಲಿ ಕಾರು ತಳ್ಳಿಕೊಂಡು ತೆರಳಿದರು. ನಿರಂತರವಾಗಿ ಮಳೆ ಸುರಿಯುತ್ತಿರುವ ಪರಿಣಾಮ ನೀರಿನ ಪ್ರಮಾಣ ಇನ್ನೂ ಕಡಿಮೆಯಾಗಿಲ್ಲ. ಗೋವಾ-ಮಂಗಳೂರು ಹೆದ್ದಾರಿ ಸಂಚಾರ ಅಸ್ತವ್ಯಸ್ತವಾಗಿದೆ.

ಇದನ್ನೂ ಓದಿ: Karnataka Weather : ಅಬ್ಬರಿಸುತ್ತಿರುವ ಮುಂಗಾರು; ಕರಾವಳಿ, ಮಲೆನಾಡಿನಲ್ಲಿ ಇಂದು ಸಹ ಜೋರು ಮಳೆ

ನಂಜನಗೂಡಿನ ಹದಿನಾರು ಕಾಲು ಮಂಟಪ ಮುಳುಗಡೆ

ವೈನಾಡಿನಲ್ಲಿ ಭರ್ಜರಿ ಮಳೆಯಾಗುತ್ತಿದ್ದು, ಮೈಸೂರಿನ ನಂಜನಗೂಡಿನ ಕಪಿಲ ನದಿಗೆ 20 ಸಾವಿರ ಕ್ಯುಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಪರಿಣಾಮ ನಂಜನಗೂಡಿನ ಹದಿನಾರು ಕಾಲು ಮಂಟಪ ಮುಳುಗಡೆಯಾಗಿದೆ. ನಂಜನಗೂಡು ಶ್ರೀಕಂಠೇಶ್ವರ ದೇವಾಲಯದ ಸ್ನಾನಘಟ್ಟವೂ ಮುಳುಗಡೆಯಾಗಿದ್ದು, ನೀರು ಕಡಿಮೆಯಾಗುವ ತನಕ ನದಿ ದಂಡೆಗೆ ಹೋಗದಂತೆ ಸಾರ್ವಜನಿಕರಿಗೆ ಸೂಚನೆ ನೀಡಲಾಗಿದೆ. ಈಗಾಗಲೇ ನದಿ ಅಂಚಿನ ಒಕ್ಕಲಗೇರಿ ತೋಪಿನ ಬೀದಿ ಬಡಾವಣೆಯ ಜನರನ್ನು ಸ್ಥಳಾಂತರ ಮಾಡಲಾಗಿದೆ. ಜಿಲ್ಲಾಡಳಿತ ಕಪಿಲ ನದಿ ಅಂಚಿನಲ್ಲಿರುವ ಜನವಸತಿ ಪ್ರದೇಶಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದೆ.

ಎಚ್‌ಡಿ ಕೋಟೆ ತಾಲೂಕಿನ ಶಾಲೆಗಳಿಗೆ ರಜೆ

ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಮೈಸೂರಿನ ಎಚ್.ಡಿ.ಕೋಟೆ ತಾಲೂಕಿನ ಶಾಲೆಗಳಿಗೆ ರಜೆ ನೀಡಲಾಗಿದೆ. ತಹಸೀಲ್ದಾರ್, ಬಿಇಒ ಮೌಖಿಕ ಆದೇಶ ಹೊರಡಿಸಿದ್ದಾರೆ. ಮಳೆಯಿಂದ ವಿದ್ಯಾರ್ಥಿಗಳಿಗೆ ಆಗುವ ಅನಾನುಕೂಲ ತಪ್ಪಿಸಲು ಕ್ರಮವಹಿಸಲಾಗಿದೆ. ಒಂದು ವಾರದಿಂದಲೂ ಬಿಟ್ಟೂ ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಸರ್ಕಾರಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದ್ದು, ಕಾಲೇಜುಗಳು ತೆರೆದಿರಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version