Site icon Vistara News

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka rain

ವಿಜಯನಗರ/ಬೆಂಗಳೂರು: ರಾಜ್ಯಾದ್ಯಂತ ಭಾನುವಾರ ಹಲವೆಡೆ ಗುಡುಗು ಸಹಿತ ಮಳೆ (Karnataka Rain) ಅಬ್ಬರಿಸಿದೆ. ವಿಜಯನಗರ ಜಿಲ್ಲೆಯಲ್ಲಿ ಅರ್ಧ ಗಂಟೆಗೂ ಅಧಿಕ ಸಮಯ ಗುಡುಗು, ಸಿಡಿಲು ಸಹಿತ ಮಳೆ ಸುರಿದಿದೆ. ಹೊಸಪೇಟೆ ತಾಲೂಕಿನ ಗಾದಿಗನೂರು ಗ್ರಾಮದಲ್ಲಿ ಸಿಡಿಲು ಬಡಿದು ಎರಡು ಜಾನುವಾರುಗಳು ಮೃತಪಟ್ಟಿವೆ. ಕೋರಿ ಮಲಿಯಪ್ಪ ಎಂಬ ರೈತರಿಗೆ ಸೇರಿದ ಎತ್ತುಗಳನ್ನು ಹೊಲದಲ್ಲಿ ಮರದಡಿ ಕಟ್ಟಿ ಹಾಕಿದ್ದರು. ಈ ವೇಳೆ ಸಿಡಿಲು ಬಡಿದು ಎರಡು ಎತ್ತುಗಳು ಮೃತಪಟ್ಟಿವೆ. ಅಂದಾಜು ಒಂದು ಲಕ್ಷಕ್ಕೂ ಅಧಿಕ ಮೌಲ್ಯದ ಎತ್ತುಗಳು ಸಾವನ್ನಪ್ಪಿದ್ದರಿಂದ ರೈತ ಕೋರಿ ಮಲಿಯಪ್ಪ ಕಂಗಲಾಗಿದ್ದಾರೆ.

ಬೆಂಗಳೂರು, ಆನೇಕಲ್‌ನಲ್ಲಿ ಗುಡುಗು ಸಹಿತ ಮಳೆ

ರಾಜಧಾನಿ ಬೆಂಗಳೂರಿನಲ್ಲಿ ಮಳೆ ಮುಂದುವರಿದಿದೆ. ಸಂಜೆಗೆ ಆವರಿಸುತ್ತಿದ್ದ ಮಳೆ ಭಾನುವಾರ ಬೆಳಗಿನಿಂದಲೇ ಅಬ್ಬರಿಸುತ್ತಿದೆ. ಎಂಎಸ್ ಬಿಲ್ಡಿಂಗ್ , ವಿಧಾನಸೌಧ , ಶಿವಾನಂದ ಸರ್ಕಲ್, ಶಿವಾಜಿನಗರ ಸೇರಿದಂತೆ ಮೆಜೆಸ್ಟಿಕ್‌ ಸುತ್ತಮುತ್ತ ಮಧ್ಯಾಹ್ನ ಶುರುವಾದ ಮಳೆಯು ಸುಮಾರು 1 ಗಂಟೆಗೂ ಹೆಚ್ಚು ಸಮಯ ಆವರಿಸಿತ್ತು. ಆಗಾಗ ಬರುತ್ತಿದ್ದ ಗುಡುಗು ಜನರನ್ನು ಬೆಚ್ಚಿ ಬೀಳಿಸುತ್ತಿತ್ತು. ಕೆ.ಆರ್ ಸರ್ಕಲ್, ಕಬ್ಬನ್ ಪಾರ್ಕ್ ರಸ್ತೆ, ಲಾಲ್ ಬಾಗ್ ರಸ್ತೆ, ರಾಜಾಜಿನಗರ, ರಾಜಕುಮಾರ್ ರಸ್ತೆಯಲ್ಲಿಯೂ ಮಳೆಯಾಗಿದೆ. ಯಲಹಂಕ, ನ್ಯೂ ಟೌನ್, ದೊಡ್ಡಬಳ್ಳಾಪುರ ಮುಖ್ಯರಸ್ತೆ, ಪುಟ್ಟೇನಹಳ್ಳಿ, ಏರ್‌ಪೋರ್ಟ್‌ ರೋಡ್‌ನಲ್ಲಿ ಮಳೆಯಾಗಿದೆ.

ಇತ್ತ ಆನೇಕಲ್ ಭಾಗದಲ್ಲೂ ಧಾರಾಕಾರ ಮಳೆಯಾಗಿತ್ತು. ಭಾನುವಾರ ಬೆಳಗ್ಗೆಯಿಂದ ಮೋಡ ಕವಿದ ವಾತಾವರಣವಿತ್ತು. ಮಧ್ಯಾಹ್ನದ ವೇಳೆಗೆ ಆಗಮಿಸಿದ ಮಳೆಯು ಆನೇಕಲ್, ಅತ್ತಿಬೆಲೆ, ಸರ್ಜಾಪುರ ಭಾಗದಲ್ಲಿ ಅಬ್ಬರಿಸಿತ್ತು. ಕಳೆದೊಂದು ವಾರದಿಂದ ನಿರಂತರ ಮಳೆಯಿಂದಾಗಿ ಕೃಷಿ ಚಟುವಟಿಕೆ ಚುರುಕುಗೊಂಡಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ಧಾರವಾಡದಲ್ಲೂ ಮಳೆ

ಪೇಡಾನಗರಿ ಧಾರವಾಡದಲ್ಲೂ ವರುಣನ ಅಬ್ಬರ ಮುಂದುವರಿದಿದೆ. ಮಧ್ಯಾಹ್ನದ ವೇಳೆ ಶುರುವಾದ ಮಳೆಯಿಂದಾಗಿ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. ಮಳೆಯಿಂದಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ವಿಜಯನಗರದಲ್ಲಿ ಮರಕ್ಕೆ ಬಡಿದ ಸಿಡಿಲು

ವಿಜಯನಗರದಲ್ಲಿ ಗುಡುಗು ಸಿಡಿಲು ಸಮೇತ ಮಳೆಯಾಗುತ್ತಿದ್ದು, ತೆಂಗಿನ ಮರಕ್ಕೆ ಸಿಡಿಲು ಬಡಿದಿದೆ. ಹೊಸಪೇಟೆ ತಾಲೂಕಿನ ಕೆರೆ ತಾಂಡಾ ಗ್ರಾಮದಲ್ಲಿ ಮರಕ್ಕೆ ಸಿಡಿಲು ಬಡಿದಿದೆ. ವಿಜಯನಗರ ಜಿಲ್ಲೆಯ ಹೊಸಪೇಟೆ, ಕಮಲಾಪುರ, ಹಂಪಿ ಭಾಗದಲ್ಲಿ ಉತ್ತಮ ಮಳೆಯಾಗಿದೆ. ಇತ್ತ ಹೊಸಪೇಟೆ ಹೃದಯ ಭಾಗದಲ್ಲಿ ರಸ್ತೆ ಮೇಲೆ ನೀರು ನಿಂತು ಅವಾಂತರವೇ ಸೃಷ್ಟಿಯಾಗಿತ್ತು. ನೂರು ಹಾಸಿಗೆ ಆಸ್ಪತ್ರೆ, VNC ಕಾಲೇಜಿಗೆ ಹೋಗುವ ರಸ್ತೆ ಮೇಲೆ ನೀರು ನಿಂತಿತ್ತು. ಕೆಲ ಸಮಯ ವಾಹನಗಳ ಸಂಚಾರ ಅಡಚಣೆ ಉಂಟಾಯಿತು

ಇದನ್ನೂ ಓದಿ: Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

ದಾವಣಗೆರೆಯಲ್ಲಿ ನೆಲ ಕಚ್ಚಿದ ಬೆಳೆ

ಶನಿವಾರ ಸುರಿದ ಮಳೆಯಿಂದ ಭತ್ತದ ಬೆಳೆ‌ಯು ನೆಲ ಕಚ್ಚಿದೆ. ದಾವಣಗೆರೆಯ ದೊಡ್ಡಬಾತಿ ಗ್ರಾಮದ ಸುತ್ತಮುತ್ತಲಿನ 20ಕ್ಕೂ ಹೆಚ್ಚು ಎಕರೆ ಭತ್ತದ ಬೆಳೆ ನಾಶವಾಗಿದೆ. ಉಮೇಶ್ ಎಂಬ ಯುವ ರೈತ ಬೆಳೆದಿದ್ದ ಎರಡು ಎಕರೆ ಭತ್ತ ಸಂಪೂರ್ಣ ನಾಶವಾಗಿತ್ತು. ಬರಗಾಲದ ಸಂದರ್ಭದಲ್ಲಿ ಬೋರ್ ವೆಲ್ ನೀರಿನಲ್ಲಿ ಭತ್ತ ಬೆಳೆ ಬೆಳೆದಿದ್ದರು. ಎಕರೆಗೆ 25 ರಿಂದ 30 ಸಾವಿರ ಖರ್ಚು ಮಾಡಿ ಬೆಳೆದಿದ್ದ ಬೆಳೆಯು ರಾತ್ರಿ ಸುರಿದ ಮಳೆಗೆ ಸಂಪೂರ್ಣ ನಾಶವಾಗಿದೆ. ಮಳೆ ಬಾರದೇ ಕಷ್ಟ ಅನುಭವಿಸಿದ ರೈತರಿಗೆ ಈಗ ಮಳೆ ಬಂದು ಗಾಯದ ಮೇಲೆ ಬರೆ ಎಳೆದಂತಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version