ಹಾವೇರಿ/ಬೆಳಗಾವಿ: ಹಾವೇರಿ ಜಿಲ್ಲೆಯಲ್ಲಿ ಮಳೆಯಾರ್ಭಟ (Karnataka Rain) ಮುಂದುವರಿದಿದೆ. ಸತತ ಮಳೆಯಿಂದಾಗಿ ಮರದ ಬುಡ ಸಡಿಲಗೊಂಡು ಕುಸಿದು ಬಿದ್ದಿದೆ. ಮರದಡಿ ನಿಂತಿದ್ದ ಹಸುವಿನ ಮೇಲೆ ಮರದ ತುಂಡು ಬಿದ್ದ ಪರಿಣಾಮ ಗಂಭೀರ ಗಾಯಗೊಂಡು ಜಾನುವಾರು ಸಾವನ್ನಪ್ಪಿದೆ. ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಹುಣಸಿಕಟ್ಟಿ ಗ್ರಾಮದಲ್ಲಿ ಘಟನೆ ನಡೆದಿದೆ. ಗ್ರಾಮದ ನಾಗಪ್ಪ ಗಿರಿಯಪ್ಪನವರು ಎಂಬುವವರಿಗೆ ಸೇರಿದ ಹಸು ಮೃತಪಟ್ಟಿದೆ.
ಮಳೆ ಅಬ್ಬರಕ್ಕೆ ಥಂಡಾ ಹೊಡೆದ ಬೆಳಗಾವಿ
ಮಹಾರಾಷ್ಟ್ರ ಮಳೆಗೆ ಕೃಷ್ಣಾ, ದೂದಗಂಗಾ, ವೇದಗಂಗಾ ನದಿಯ ಒಳ ಹರಿವಿನಲ್ಲಿ ಮತ್ತೆ ಹೆಚ್ಚಳಗೊಂಡಿದೆ. ಕೃಷ್ಣಾ ನದಿಗೆ ಒಟ್ಟು 1, 52,000 ಕ್ಯೂಸೇಕ್ ನೀರಿನ ಒಳ ಹರಿವು ಹೆಚ್ಚಳಗೊಂಡಿದೆ. ದೂದಗಂಗಾ ನದಿಯಲ್ಲಿ ನೀರು ಹೆಚ್ಚಳ ಹಿನ್ನೆಲೆಯಲ್ಲಿ ಬೆಳಗಾವಿಯ ಸದಲಗಾ-ಬೋರಗಾವ ರಸ್ತೆ ಸಂಪರ್ಕ ಕಡಿತಗೊಂಡಿದೆ. ನದಿ ಹಿನ್ನಿರು ರಸ್ತೆಗೆ ಆವರಿಸಿ ರಸ್ತೆ ಸಂಚಾರ ಬಂದ್ ಆಗಿದೆ. ಸದಲಗಾ ಪಟ್ಟಣದ ಹೊರ ವಲಯದ ಲಕ್ಷ್ಮಿ ದೇವಸ್ಥಾನ ಬಳಿ ನೀರು ಆವರಿಸಿ ರಸ್ತೆ ಬಂದ್ ಆಗಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸದಲಗಾ-ಬೋರಗಾವ ಗ್ರಾಮದಲ್ಲಿ ಘಟನೆ ನಡೆದಿದೆ. ನೀರು ಹೆಚ್ಚಳದಿಂದಾಗಿ ತೋಟದ ಮನೆಯಿಂದ ಜಾನುವಾರುಗಳನ್ನು ಸ್ಥಳಾಂತರ ಮಾಡಿದ್ದಾರೆ.
ಇದನ್ನೂ ಓದಿ: Murder Case : ರಾಮನಗರದಲ್ಲೊಂದು ಪೈಶಾಚಿಕ ಕೃತ್ಯ; ಅತ್ಯಾಚಾರವೆಸಗಿ 4 ವರ್ಷದ ಬಾಲಕಿಯನ್ನು ಕೊಂದ ದುಷ್ಟ
ಮಹಾರಾಷ್ಟ್ರ- ಕರ್ನಾಟಕ ಸಂಪರ್ಕ ಸೇತುವೆ ಬಂದ್
ಮಹಾರಾಷ್ಟ್ರ- ಕರ್ನಾಟಕಕ್ಕೆ ಸಂಪರ್ಕವಾಗಿದ್ದ ಕುಡಚಿಯ ಬೃಹತ್ ಸೇತುವೆ ಸಂಪೂರ್ಣವಾಗಿ ಮುಳುಗಡೆಯಾಗಿದೆ. ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಕುಡಚಿ ಉಗಾರ್ ಸಂಪರ್ಕ ಸೇತುವೆಯು ಕರ್ನಾಟಕ ಮತ್ತು ಮಹಾರಾಷ್ಟ್ರದ ಸಂಪರ್ಕ ಕೊಂಡಿಯಾಗಿದೆ. ಕೃಷ್ಣಾ ನದಿಯ ಅಬ್ಬರಕ್ಕೆ ಸೇತುವೆ ಮೇಲೆ ನದಿ ನೀರು ಹರಿದಿದೆ. ಸೇತುವೆ ಮುಳುಗಡೆಯಾಗಿದ್ದರಿಂದ ಸಂಚಾರವನ್ನು ಬಂದ್ ಮಾಡಲಾಗಿದೆ. ಕುಡಚಿ ಠಾಣಾ ಪೊಲೀಸರಿಂದ ಸೇತುವೆಗೆ ಬ್ಯಾರಿಕೇಡ್ ಅಳವಡಿಸಲಾಗಿದೆ.
ಇತ್ತ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕಲ್ಳೋಳ ಗ್ರಾಮದಲ್ಲಿ ಕೃಷ್ಟೆಯ ಅಬ್ಬರಕ್ಕೆ ಮಂದಿರ ಜಲಾವೃತಗೊಂಡಿದೆ. ಅತ್ತ ಜಮಖಂಡಿ ಮೀರಜ್ ಸೇತುವೆ ಸಂಪೂರ್ಣ ಮುಳುಗಡೆಯಿಂದಾಗಿ ವಾಹನ ಸವಾರರು ಪರದಾಡಿದ್ದಾರೆ. ಕುಡಚಿ- ಉಗಾರ ಸೇತುವೆಯು ಜಲಾವೃತವಾಗಿದ್ದು, ಮಹಾರಾಷ್ಟ್ರ ರಾಜ್ಯ ಸಾಂಗ್ಲಿ ಬಾಗಲಕೋಟೆ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ರಸ್ತೆ ಮಾರ್ಗ ಕಡಿತವಾಗಿದೆ. ಸೇತುವೆ ಮೇಲೆ ಮೂರು ಅಡಿಯಷ್ಟು ನೀರು ನಿಂತು ಅವಾಂತರವೇ ಸೃಷ್ಟಿಯಾಗಿದೆ. ಇನ್ನೂ ಅಥಣಿಯಲ್ಲಿ ಜಮೀನುಗಳಿಗೆ ಕೃಷ್ಣಾ ನದಿ ನೀರು ನುಗ್ಗಿದೆ. ಅಥಣಿ ತಾಲೂಕಿನ ಶಿರಹಟ್ಟಿ ಗ್ರಾಮದ ಬಳಿ ನೀರು ನುಗ್ಗಿ ಈಗಾಗಲೇ ಎರಡು ಸಾವಿರ ಹೆಕ್ಟರ್‌ಕ್ಕಿಂತಲೂ ಅಧಿಕ ಪ್ರದೇಶಕ್ಕೆ ಹಾನಿಯಾಗಿದೆ. ನದಿಗೆ ಇಳಿಯದಂತೆ ನದಿಪಾತ್ರದ ಜನರಿಗೆ ಜಿಲ್ಲಾಡಳಿತದಿಂದ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಅಡಿಕೆ ತೋಟ ನೀರುಪಾಲು
ಶಿವಮೊಗ್ಗದ ಹೊಸನಗರದ ಹೆದ್ದಾರಿಪುರ ಗ್ರಾ.ಪಂ.ವ್ಯಾಪ್ತಿಯ ವಡಾಹೊಸಳ್ಳಿ ಗ್ರಾಮದಲ್ಲಿ ಹಳ್ಳದ ದಂಡೆ ಒಡೆದು ಅಡಿಕೆ ತೋಟಕ್ಕೆ ಹಾನಿಯಾಗಿದೆ. ಗ್ರಾಮದ ಕಮಲಾಕ್ಷ ಎಂಬುವರ ಕೃಷಿ ಜಮೀನು ಜಲಾವೃತಗೊಂಡಿದೆ. ಕಳೆದ ವಾರ ಸುರಿದ ಧಾರಾಕಾರ ಮಳೆಗೆ ಹಳ್ಳದ ನೀರು ಉಕ್ಕಿ ಹರಿದಿದೆ. ಪರಿಣಾಮ ಅಪಾರ ಪ್ರಮಾಣದ ನೀರು ತೋಟಕ್ಕೆ ನುಗ್ಗಿದೆ. ನೂರಾರು ಅಡಿಕೆ ಸಸಿಗಳಿಗೆ ಹಾನಿಯಾಗಿದೆ. ಸ್ಥಳಕ್ಕೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬಸವೇಶ್ವರ ದೇಗುಲ ಜಲಾವೃತ
ಘಟಪ್ರಭಾ ನದಿ ನೀರು ಹರಿವಿನಲ್ಲಿ ಹೆಚ್ಚಳದಿಂದಾಗಿ ಬಾಗಲಕೋಟೆಯ ಮುಧೋಳದ ಮಾಚಕನೂರು ಗ್ರಾಮದ ಹೊಳೆ ಬಸವೇಶ್ವರ ದೇಗುಲ ಜಲಾವೃತಗೊಂಡಿದೆ. ಪಶ್ಚಿಮ ಘಟ್ಟ ಹಾಗೂ ಬೆಳಗಾವಿ ಭಾಗದಲ್ಲಿ ನಿರಂತರ ಮಳೆಯಿಂದಾಗಿ ಘಟಪ್ರಭಾ ನದಿಗೆ 27 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಮುಧೋಳ ತಾಲೂಕಿನ 12 ಸಣ್ಣ ಬ್ರಿಡ್ಜ್ ಕಂ ಬ್ಯಾರೇಜ್ ಜಲಾವೃತಗೊಂಡಿದೆ. ಘಟಪ್ರಭಾ ನದಿ ಪಾತ್ರದ 21 ಗ್ರಾಮಗಳಿಗೆ ಪ್ರವಾಹ ಭೀತಿ ಎದುರಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ