Site icon Vistara News

Karnataka Rain : ಸಿಡಿಲಿಗೆ ಆಕಳು ಬಲಿ; ಹಲವೆಡೆ ಮಳೆ ಅವಾಂತರಕ್ಕೆ ಜನರು ತತ್ತರ

karnataka Rain

ಬೆಂಗಳೂರು: ರಾಜಧಾನಿ ಬೆಂಗಳೂರು ಮಾತ್ರವಲ್ಲದೇ ವಿವಿಧ ಜಿಲ್ಲೆಗಳಲ್ಲೂ ಮಳೆಯು (Karnataka Rain) ಅವಾಂತರವೇ ಸೃಷ್ಟಿಸಿದೆ. ಗುಡುಗು ಸಿಡಿಲು ಸಹಿತ ಸುರಿದ ಮಳೆಗೆ ಜನರು ತತ್ತರಿಸಿ ಹೋಗಿದ್ದಾರೆ. ಮುಖ್ಯವಾಗಿ ಉತ್ತರ ಒಳನಾಡಿನ ಜಿಲ್ಲೆಗಳಲ್ಲೇ ಭಾರಿ ಮಳೆಯಾಗಿದ್ದು, ಮನೆಗಳಿಗೆ (Rain News) ನೀರು ನುಗ್ಗಿದೆ. ಜತೆಗೆ ಜಮೀನುಗಳು ಜಲಾವೃತಗೊಂಡಿದೆ. ವಿಜಯಪುರದಲ್ಲಿ ಸಿಡಿಲು ಬಡಿದು ಆಕಳು ಸ್ಥಳದಲ್ಲೇ ಮೃತಪಟ್ಟಿದೆ. ಹಾಗಾದರೆ ಯಾವ್ಯಾವ ಜಿಲ್ಲೆಗಳಲ್ಲಿ ಏನೆಲ್ಲ ಅನಾಹುತಗಳು ಸಂಭವಿಸಿದೆ ಎಂದು (Karnataka weather Forecast) ಮಾಹಿತಿ ಇಲ್ಲಿದೆ.

ಯಾದಗಿರಿ ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಗೆ ಪ್ರಮುಖ ರಸ್ತೆಗಳು ಕೆರೆಯಂತಾಗಿದ್ದವು. ವರುಣನ ಅಬ್ಬರದಿಂದ ಬೈಕ್ ಸವಾರರು ಪರದಾಡಬೇಕಾಯಿತು.

ರಾಯಚೂರಿನ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ರಾತ್ರಿಯಿಂದ ಮುಂದುವರೆದ ಮಳೆ ಮುಂದುವರಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ರಾತ್ರಿಯಿಂದ ಹಲವೆಡೆ ವಿದ್ಯುತ್ ವ್ಯತ್ಯಯದಿಂದಾಗಿ ಸಾರ್ವಜನಿಕರು ಪರದಾಡಿದರು. ಕಳೆದ 10 ಗಂಟೆಯಿಂದಲೂ ಬಿಟ್ಟು ಬಿಡದೇ ಮಳೆ ಸುರಿಯುತ್ತಿದೆ.

ವಿಜಯನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಬಾಳೆ, ಕಬ್ಬು, ಮೆಕ್ಕೆಜೋಳ ಸೇರಿದಂತೆ ಇತರೆ ಬೆಳೆಗಳಿಗೆ ನೀರು ನುಗ್ಗಿದೆ. ಹೊಸಪೇಟೆಯ ಜಂಬುನಾಥನ ಹಳ್ಳಿ ಪ್ರದೇಶದ ರಾಯರಕೆರೆ ಭಾಗದಲ್ಲಿನ ರೈತರ ಬೆಳೆಗಳು ನೀರುಪಾಲಾಗಿದೆ.

ಬಾಗಲಕೋಟೆ ಜಿಲ್ಲೆ ಇಲಕಲ್ಲ ತಾಲ್ಲೂಕಿನ ಕರಡಿ ಗ್ರಾಮದಲ್ಲಿ ಭಾರಿ ಮಳೆಗೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಇಲಕಲ್ ತಾಲ್ಲೂಕಿನಲ್ಲಿ ರಾತ್ರಿ ಸುರಿದ ಮಳೆಗೆ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದೆ. ಕರಡಿ ಗ್ರಾಮದ ಸಂಪರ್ಕ ರಸ್ತೆ ಹಳ್ಳದ ನೀರಿನಿಂದ ಜಲಾವೃತಗೊಂಡಿದೆ. ಕರಡಿ ರಸ್ತೆ ಮೇಲ್ಸೇತುವೆ ಕಾಮಗಾರಿಯಿಂದ ನೀರು ರಸ್ತೆಗೆ ನುಗ್ಗಿದೆ. ಕರಡಿ, ದಾಸಬಾಳ, ಪಾಲತಿ, ಕೊಣ್ಣೂರ, ಹುನಗುಂದ ಸಂಪರ್ಕ ಕಡಿತಗೊಂಡಿದೆ.

ತಡರಾತ್ರಿಯಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ವಿಜಯಪುರ ನಗರದ ಜುಮನಾಳ, ಸಾರವಾಡ, ಹೊನಗನಹಳ್ಳಿ ಸೇರಿದಂತೆ ಭಾರಿ ಮಳೆಯಾಗಿದೆ. ವಿಜಯಪುರ ನಗರದ ಮೀನಾಕ್ಷಿ ವೃತ್ತ ಜಲಾವೃತಗೊಂಡಿದ್ದು, ನೀರು ತುಂಬಿದ ರಸ್ತೆಯಲ್ಲೇ ಸವಾರರು ವಾಹನ ಚಲಾಯಿಸಿದ್ದಾರೆ.

ದಾವಣಗೆರೆಯಲ್ಲಿ ಮುಂಗಾರು ಮಳೆಯ ಆರ್ಭಟ ಜೋರಾಗಿತ್ತು. ದಾವಣಗೆರೆ ತಾಲೂಕಿನ ಅನಗೋಡು, ಮಾಯಕೊಂಡ, ಹುಣಸೇಕಟ್ಟೆ, ಹೆಬ್ಬಾಳು, ನರಗನಹಳ್ಳಿ ಹಾಗೂ ಹೊನ್ನಯಕನಹಳ್ಳಿ ಒಬಣ್ಣನಹಳ್ಳಿ ಭಾವಿಹಾಳ್ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಭರ್ಜರಿ ಮಳೆಯಾಗಿದೆ. ಹೆಬ್ಬಾಳು ನರಗನಹಳ್ಳಿ, ಕೊಡಗನೂರು ಸೇರಿದಂತೆ ಇತರೆ ಕೆರೆಗಳಿಗೆ ನೀರು ಹರಿದು ಬಂದಿದೆ. ಮಳೆಯ ರಭಸಕ್ಕೆ ಹೊಲಗಳಿಗೆ ನೀರು ನುಗ್ಗಿದ್ದು, ಗುಲಾಬಿ ಗಿಡಗಳು ನೆಲಕಚ್ಚಿದೆ.

ಈಶಾನ್ಯ ಪದವೀಧರ ಕ್ಷೇತ್ರದ ಮತದಾನಕ್ಕೂ ಮಳೆ ಎಫೆಕ್ಟ್‌ ತಟ್ಟಿದೆ. ರಾಯಚೂರಲ್ಲಿ ರಾತ್ರಿಯಿಡೀ ಸುರಿದ ಮಳೆಯಿಂದಾಗಿ ಪವರ್ ಕಟ್ ಆಗಿದ್ದು, ಸಿಬ್ಬಂದಿ ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಮತದಾನ ನಡೆದಿದೆ. ಪವರ್ ಇಲ್ಲದೆ ಮೊಬೈಲ್ ‌ಟಾರ್ಚ್ ಬಳಸಿ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಮತಗಟ್ಟೆ ನಂ.84ರಲ್ಲಿ ಮೊಬೈಲ್ ಟಾರ್ಚ್ ಬೆಳಕಿನಲ್ಲೇ ಮತದಾನ ಮಾಡಬೇಕಾಯಿತು.

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ‌ ಹಿರೇಮಸಳಿ ಗ್ರಾಮದಲ್ಲಿ ಸಿಡಿಲು ಬಡಿದು ಆಕಳು ಮೃತಪಟ್ಟಿದೆ. ಶಿವಯೋಗಿ ಹೊಸಮನಿ ಎಂಬುವವರಿಗೆ ಸೇರಿದ ಆಕಳನ್ನು ಹೊಲದಲ್ಲಿ ಮರದ ಕೆಳಗೆ ಕಟ್ಟಲಾಗಿತ್ತು. ಈ ವೇಳೆ ಸಿಡಿಲು ಬಡಿದು ಆಕಳು ಮೃತಪಟ್ಟಿದೆ. ಇಂಡಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಯಾದಗಿರಿ ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಮಳೆಗೆ ಕೃಪಾ ನಗರ ಹಾಗೂ ಹೊಸಳ್ಳಿ ಕ್ರಾಸ್ ಸಮೀಪದ 20ಕ್ಕೂ ಹೆಚ್ಚು ಗುಡಿಸಲು ಒಳಗೆ ನೀರು ನುಗ್ಗಿದೆ. ಅಲೆಮಾರಿ ಜನಾಂಗದವರು ವಾಸ ಮಾಡುವ ಗುಡಿಸಲು ನೀರುಪಾಲಾಗಿದ್ದು, ರಾತ್ರಿ ಪೂರ್ತಿ ಜಾಗರಣೆ ಮಾಡಿದ್ದಾರೆ. ಸರಕಾರ ವಾಸಕ್ಕೆ ಮನೆ ಸೌಲಭ್ಯ ಕಲ್ಪಿಸುವಂತೆ ಅಲೆಮಾರಿ ಜನಾಂಗದವರು ಒತ್ತಾಯಿಸಿದ್ದಾರೆ.

ಕೊಪ್ಪಳದ ನಗರದ ಗಣೇಶ ನಗರದಲ್ಲಿ ಭಾರಿ ಮಳೆಗೆ ಮನೆಗಳಿಗೆ ನೀರು ನುಗ್ಗಿ ಅವಾಂತರವೇ ಸೃಷ್ಟಿಯಾಗಿದೆ. ಗಣೇಶ ನಗರ ಬಡಾವಣೆಯ ಹತ್ತಾರು ಮನೆಗಳ ಮುಂದೆ ಜಲಾವೃತಗೊಂಡಿದ್ದು, ಭಾಗ್ಯನಗರ ಪಟ್ಟಣ ಪಂಚಾಯತ್ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

ವಿಜಯನಗರ ಜಿಲ್ಲೆಯ ಹಗರಿಬೊಮ್ಮನ ಹಳ್ಳಿ ತಾಲೂಕಿನ ಕಿತ್ನೂರು ಸರ್ಕಾರಿ ಶಾಲೆ ಆವರಣವು ಕೆರೆಯಂತಾಗಿತ್ತು. ನಿನ್ನೆ ರಾತ್ರಿ ಸುರಿದ ಮಳೆಗೆ ಶಾಲಾ ಆವರಣದಲ್ಲಿ ಮಳೆ ನೀರು ತುಂಬಿತ್ತು.

ಯಾದಗಿರಿಯ ಹೊಸಳ್ಳಿ ಕ್ರಾಸ್ ಸಮೀಪದಲ್ಲಿ 3 ಮನೆಗಳಿಗೆ ಮಳೆ ನೀರು ನುಗ್ಗಿದೆ. ಧವಸ ಧಾನ್ಯ ಹಾಗೂ ಅಗತ್ಯ ವಸ್ತುಗಳಿಗೆ ಹಾನಿಯಾಗಿದೆ. ಕೃಷ್ಣಾ ದೇಗುಲ ಜಲ ದಿಗ್ಬಂಧನವಾಗಿದೆ. ನಗರಸಭೆ ಅಧಿಕಾರಿಗಳ ವಿರುದ್ಧ ಜನರು ಆಕ್ರೋಶ ಹೊರಹಾಕಿದ್ದಾರೆ.

ತುಮಕೂರಿನ ತಿಪಟೂರಿನಲ್ಲಿ ಧಾರಕಾರವಾಗಿ ಸುರಿದ ಮಳೆಗೆ ಕುಡಿಯುವ ನೀರಿನ ಕೆರೆಗೆ ಕಲುಷಿತ ನೀರು ಸೇರ್ಪಡೆಯಾಗಿದೆ. ತಿಪಟೂರು ಪಟ್ಟಣದ ಕಲುಷಿತ ನೀರು ಈಚನೂರು ಕೆರೆಗೆ ಸೇರ್ಪಡೆಯಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಲು ಸ್ಥಳೀಯರು ಮನವಿ ಮಾಡಿದ್ದಾರೆ.

ಬಾಗಲಕೋಟೆಯ ಬಾದಾಮಿ ಭಾಗದಲ್ಲಿ ರಾತ್ರಿ ಸುರಿದ ಮಳೆಯು ಅವಾಂತರವನ್ನೇ ಸೃಷ್ಟಿಸಿದೆ. ನಿರ್ಮಾಣ ಹಂತದ ಕಾಲುವೆಯಿಂದ ನೀರು ನುಗ್ಗಿದ್ದು, 4 ಎಕರೆ ಜಮೀನಿನಲ್ಲಿ ಬೆಳೆದ ಕಬ್ಬು, ಗೋವಿನಜೋಳ ನಾಶವಾಗಿದೆ. ಹನುಮಂತ ಚೂರಿ ಎಂಬ ರೈತರ ಬೆಳೆ ಹಾನಿಯಾಗಿದೆ.

ಯಾದಗಿರಿಯಲ್ಲಿ ಮಳೆ ಆರ್ಭಟಕ್ಕೆ ಕಿರಾಣಿ ಅಂಗಡಿಗೆ ನೀರು ನುಗ್ಗಿ ಅಪಾರ ಪ್ರಮಾಣದ ವಸ್ತುಗಳು ಹಾನಿಯಾಗಿವೆ. ನರಸಿಂಹ ಅವರಿಗೆ ಸೇರಿದ ಕಿರಾಣಿ ಅಂಗಡಿ ಹಾಳಾಗಿದೆ. ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕಿಡಿಕಾರಿದ್ದಾರೆ.

ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ರಾಂಪುರ ಗ್ರಾಮದ ರಾಷ್ಟ್ರೀಯ ಹೆದ್ದಾರಿ‌ 150ಎ ರಲ್ಲಿನ ಅಂಡರ್ ಪಾಸ್ ಜಲಾವೃತಗೊಂಡಿತ್ತು. ವಿವಿಧ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಅಂಡರ್ ಪಾಸ್‌ನಲ್ಲಿ ನೀರು ನಿಂತ ಪರಿಣಾಮ ವಾಹನ ಸವಾರರು ಹೈರಾಣಾದರು. ನೀರಿನಲ್ಲಿ ವಾಹನ ತಳ್ಳಿಕೊಂಡು ಹೋದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version