ಮಂಗಳೂರು: ಭಾರಿ ಮಳೆಗೆ ಜನರು ಮಾತ್ರವಲ್ಲ ಜಾನುವಾರುಗಳು ತತ್ತರಿಸಿ ಹೋಗಿದೆ. ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಉಪ್ಪಿನಂಗಡಿ ನೇತ್ರಾವತಿ ನದಿಯಲ್ಲಿ ಕೊಚ್ಚಿಕೊಂಡು (Karnataka Rain) ಹೋಗುತ್ತಿದ್ದ ಹಸುವನ್ನು ರಕ್ಷಣೆ ಮಾಡಲಾಗಿದೆ. ಸ್ಥಳೀಯರ ಮಾಹಿತಿ ಮೇರೆಗೆ ಧಾವಿಸಿದ ಉಪ್ಪಿನಂಗಡಿ ಗೃಹರಕ್ಷಕ ಪ್ರವಾಹ ರಕ್ಷಣಾ ತಂಡ ದೋಣಿಯಲ್ಲಿ ಸಾಗಿ ಹಗ್ಗ ಹಾಕಿ ಹಸುವನ್ನು ಜೀವಂತವಾಗಿ ರಕ್ಷಿಸಿ ಕರೆತಂದಿದ್ದಾರೆ.
ಇತ್ತ ಮಂಗಳೂರಿನಲ್ಲೂ ಬಿಟ್ಟು ಬಿಟ್ಟು ಸುರಿಯುತ್ತಿರುವ ಭಾರೀ ಗಾಳಿ ಮಳೆಗೆ ಮನೆಯೊಂದು ಕುಸಿದು ಬಿದ್ದಿದೆ. ಮಂಗಳೂರು ಹೊರವಲಯದ ಕಾಜಿಲ ನೂಯಿ ಎಂಬಲ್ಲಿ ಧನಲಕ್ಷ್ಮೀ ಅವರ ಮನೆ ಸಂಪೂರ್ಣ ಕುಸಿದಿದೆ. ಮನೆಯವರೆಲ್ಲ ಅಂಗಳದಲ್ಲಿದ್ದಾಗ ಮನೆ ಕುಸಿದಿದೆ, ಹೀಗಾಗಿ ಭಾರಿ ದುರಂತವೊಂದು ತಪ್ಪಿದೆ. ಮನೆ ಸಾಮಾಗ್ರಿ ಸೇರಿ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.
ಅಲೆಗಳ ಅಬ್ಬರಕ್ಕೆ ಕೊಚ್ಚಿಹೋದ ಕಾಂಕ್ರೀಟ್ ರಸ್ತೆ
ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಬಾವಳ್ ಗ್ರಾಮದಲ್ಲಿ ಅಲೆಗಳ ಅಬ್ಬರಕ್ಕೆ ಕಾಂಕ್ರೀಟ್ ರಸ್ತೆಯು ಕೊಚ್ಚಿ ಹೋಗಿದೆ. ಸುಮಾರು ನೂರು ಅಡಿ ರಸ್ತೆ ಕಡಲಕೊರತಕ್ಕೆ ಬಲಿಯಾಗಿದೆ. ದೇವಭಾಗ್ ನಿಂದ ಮಾಜಾಳಿ ಸಂಪರ್ಕ ಮಾಡುವ ರಸ್ತೆಯನ್ನು ನಾಲ್ಕು ವರ್ಷದ ಹಿಂದೆ ನಿರ್ಮಿಸಲಾಗಿತ್ತು. ಆದರೆ ಮಳೆ ಗಾಳಿಗೆ ಹೆಚ್ಚಾದ ಕಡಲ ಕೊರೆತಕ್ಕೆ ಕೊಚ್ಚಿಹೋಗಿದೆ. ಇದರಿಂದಾಗಿ ಬಾವಳ್, ಮಾಜಾಳಿ, ದೇವಭಾಗ ಗ್ರಾಮಸ್ಥರು ರಸ್ತೆ ಸಂಪರ್ಕ ಕಳೆದುಕೊಂಡಿದ್ದಾರೆ.
ಶಿವಮೊಗ್ಗದಲ್ಲಿ ಜೋರು ಗಾಳಿ, ಮಳೆಗೆ ಕೋಳಿ ಫಾರಂ ಧರಶಾಹಿ
ಶಿವಮೊಗ್ಗದ ಮೋಜಪ್ಪ ಹೊಸೂರು ಗ್ರಾಮದಲ್ಲಿ ಏಜಾಜ್ ಎಂಬುವವರಿಗೆ ಸೇರಿದ್ದ ಕೋಳಿ ಫಾರಂ ಧರಶಾಹಿ ಆಗಿದೆ. ಫಾರಂ ಮಾಲೀಕ ಸುಮಾರು 6 ಸಾವಿರ ಕೋಳಿಗಳನ್ನು ಸಾಕಿದ್ದರು. ಭಾರಿ ಮಳೆ ಗಾಳಿಗೆ ಕೋಳಿ ಫಾರಂ ನೆಲಚ್ಚಿದ್ದು, ಸುಮಾರು 3 ಸಾವಿರಕ್ಕೂ ಹೆಚ್ಚು ಕೋಳಿಗಳು ಮೃತಪಟ್ಟಿವೆ. ಜೀವನೋಪಾಯಕ್ಕಾಗಿ ಕೋಳಿ ಫಾರಂ ನಡೆಸುತ್ತಿದ್ದ ಏಜಾಜ್ ಕುಟುಂಬ ಕಂಗಲಾಗಿದ್ದಾರೆ. ಇತ್ತ ಮಳೆ ಅಬ್ಬರಕ್ಕೆ ಕುಣೆಗದ್ದೆಯಿಂದ ಹಲಸೆ ದೇವಸ್ಥಾನಕ್ಕೆ ಹೋಗುವ ರಸ್ತೆ ಕುಸಿದು ಬಿದ್ದಿದೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹಣಗೆರೆಕಟ್ಟೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ರಸ್ತೆ ಕುಸಿತದಿಂದ ವಾಹನ ಸಂಚಾರ ವ್ಯತ್ಯಯವಾಗಿತ್ತು.
ಇದನ್ನೂ ಓದಿ: Karnataka Rain: ವಿದ್ಯುತ್ ದುರಸ್ತಿಗಾಗಿ ಪ್ರಾಣದ ಹಂಗು ತೊರೆದು ಉಕ್ಕಿ ಹರಿಯುವ ನೀರಿಗೆ ಧುಮುಕಿದ ಲೈನ್ ಮ್ಯಾನ್!
ಪ್ರವಾಹದ ನೀರಿನಲ್ಲಿ ಮುಳುಗಿದ ಎಪಿಎಂಸಿ ಮಾರುಕಟ್ಟೆ
ಹಾಸನದ ಹೊಳೆನರಸೀಪುರ ಪಟ್ಟಣದ ಎಪಿಎಂಸಿ ಮಾರುಕಟ್ಟೆ ಸಂಪೂರ್ಣ ಜಲಾವೃತಗೊಂಡಿತ್ತು. ಮಾರುಕಟ್ಟೆ ಪ್ರಾಂಗಣ ಸ್ವಿಮ್ಮಿಂಗ್ ಪೂಲ್‌ನಂತೆ ಭಾಸವಾಗಿತ್ತು. ಹೊಳೆನರಸೀಪುರ – ಮಡಿಕೇರಿ ರಾಜ್ಯ ಹೆದ್ದಾರಿ ಸಮೀಪ ಇರುವ ಎಪಿಎಂಸಿ ಮಾರುಕಟ್ಟೆ ಉದ್ಘಾಟನೆಗೂ ಮೊದಲೇ ಹೇಮಾವತಿ ನದಿ ಪ್ರವಾಹದ ನೀರಿನಲ್ಲಿ ಮುಳುಗಿದೆ.
ರಾಯಚೂರಿನಲ್ಲಿ ನದಿ ತೀರದಲ್ಲಿ ಮೊಸಳೆಗಳ ಓಡಾಟ
ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ ತುಂಗಭದ್ರಾ ನದಿಯಲ್ಲಿ ಇದ್ದ ಮೊಸಳೆಗಳು ನದಿ ತೀರಕ್ಕೆ ಬಂದಿವೆ. ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಚಿಕಲಪರ್ವಿ ಗ್ರಾಮದ ಬಳಿ ಬೃಹತ್ ಮೊಸಳೆ ಪ್ರತ್ಯಕ್ಷವಾಗಿತ್ತು. ತುಂಗಭದ್ರಾ ನದಿ ತೀರದ ಗ್ರಾಮಗಳಿಗೆ ಮೊಸಳೆ ನುಗ್ಗುವ ಆತಂಕ ಎದುರಾಗಿದ್ದು, ನದಿ ದಂಡೆಗೆ ತೆರಳದಂತೆ ,ಜಾನುವಾರುಗಳನ್ನು ಬಿಡದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. ಇತ್ತೀಚೆಗೆ ಮೊಸಳೆಯೊಂದು ಹಸುವಿನ ಕರು ಮೇಲೆ ದಾಳಿ ಮಾಡಿತ್ತು.
ಗ್ರಾಮಗಳನ್ನು ತೊರೆಯುತ್ತಿರುವ ಜನರು
ಕೃಷ್ಣಾ ನದಿಗೆ ಕೊಯ್ನಾ ಜಲಾಶಯದ ನೀರು ಬಿಡುಗಡೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಪ್ರವಾಹ ಆತಂಕ ತೀವ್ರಗೊಂಡಿದೆ. ಪ್ರವಾಹದ ಭೀತಿಯಿಂದ ಜನರು ಗ್ರಾಮಗಳನ್ನು ತೊರೆಯುತ್ತಿದ್ದಾರೆ. ಬೆಳಗಾವಿ ಅಥಣಿ ತಾಲೂಕಿನ ಹುಲಗಬಾಳ ಗ್ರಾಮದ ಐನಾಪೂರ ರಸ್ತೆ ಮೇಲೆ ನೀರು ಬರುತ್ತಿರುವುದರಿಂದ ಜಾನುವಾರುಗಳೊಂದಿಗೆ ಜನರು ಸ್ಥಳಾಂತರಗೊಂಡಿದ್ದಾರೆ.
ರಸ್ತೆಗೆ ಬಿದ್ದ ಮರ
ಕೊಡಗಿನ ಸೋಮವಾರಪೇಟೆ ವ್ಯಾಪ್ತಿಯಲ್ಲಿ ರಸ್ತೆಗೆ ಅಡ್ಡಲಾಗಿ ಬೃಹದಾಕಾರದ ಮರ ಬಿದ್ದಿತ್ತು. ಇದರಿಂದಾಗಿ ಸೋಮವಾರಪೇಟೆ ಸಮೀಪದ ಯಡವನಾಡು ಸಂಪರ್ಕ ರಸ್ತೆಯು ಬಂದ್ ಆಗಿತ್ತು. ಹೆದ್ದಾರಿಯಲ್ಲಿ ವಾಹನಗಳು ಸಾಲುಗಟ್ಟಿ ನಿಲ್ಲುವಂತಾಯಿತು. ಸ್ಥಳೀಯರಿಂದಲೆ ರಸ್ತೆ ಅಡ್ಡಲಾಗಿ ಬಿದ್ದ ಮರ ತೆರವು ಮಾಡಲಾಯಿತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ