ಮಂಗಳೂರು: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಸಮುದ್ರ ತೀರದಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಸಮುದ್ರಕ್ಕಿಳಿಯದಂತೆ ಮಂಗಳೂರಿನ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ. ದಕ್ಷಿಣ ಕನ್ನಡದಲ್ಲಿ 115 .5 ಮಿಮಿ ನಿಂದ 204 .5 ಮಿಮಿ ಮಳೆಯಾಗುವ (Karnataka Rain) ಸಾಧ್ಯತೆ ಇದ್ದು, ಎರಡು ದಿನಕ್ಕೆ ಆರೆಂಜ್ ಅಲರ್ಟ್ ನೀಡಲಾಗಿದೆ.
ಕರಾವಳಿಯುದ್ದಕ್ಕೂ ಬಿರುಗಾಳಿ ಬೀಸುವ ಸಾಧ್ಯತೆ ಇದೆ. ಹೀಗಾಗಿ ಮೀನುಗಾರಿಕೆಗೆ ತೆರಳದಂತೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. ಈಗಾಗಲೇ ಸಮುದ್ರಕ್ಕೆ ತೆರಳಿದ ಮೀನುಗಾರಿಕಾ ಬೋಟ್‌ಗಳಿಗೆ ತಕ್ಷಣ ದಡಕ್ಕೆ ಬರುವಂತೆ ಸೂಚನೆಯನ್ನು ನೀಡಲಾಗಿದೆ. ಗಂಟೆಗೆ 45 ಕಿ.ಮೀ ನಿಂದ 55 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ.
ದಾವಣಗೆರೆಯಲ್ಲಿ ನಿಯಂತ್ರಣ ತಪ್ಪಿ ಕೊಚ್ಚಿಹೋದ ಕಾರು
ದಾವಣಗೆರೆ ಜಿಲ್ಲೆಯ ಜಗಳೂರಿನಲ್ಲಿ ಭರ್ಜರಿ ಮಳೆಯಾಗುತ್ತಿದೆ. ಭಾನುವಾರ ರಾತ್ರಿ ಸುರಿದ ಮಳೆಯಿಂದಾಗಿ ಜಗಳೂರಿನ ಕಾನನಕಟ್ಟೆ ಗ್ರಾಮದ ಸೇತುವೆ ಮೇಲೆ ನೀರು ಹರಿದಿದೆ. ಹರಿಯುತ್ತಿರುವ ನೀರಿನಲ್ಲೇ ಕಾರು ಚಲಾಯಿಸುವಾಗ ಚಾಲಕನ ನಿಯಂತ್ರಣ ತಪ್ಪಿ ಕಾರು ಕೊಚ್ಚಿಹೋಗಿದೆ. ಕೂಡಲೇ ಸ್ಥಳೀಯರಿಂದ ಕಾರು ಚಾಲಕ ಹಾಗೂ ಪ್ರಯಾಣಿಕರನ್ನು ರಕ್ಷಣೆ ಮಾಡಲಾಗಿದೆ. ಜತೆಗೆ ಕೊಚ್ಚಿ ಹೋದ ಕಾರನ್ನು ದಡಕ್ಕೆ ಎಳೆದು ತಂದಿದ್ದಾರೆ. ಜಗಳೂರಿನ ದೊಡ್ಡ ಬೊಮ್ಮನಹಳ್ಳಿ, ಸೇರಿದಂತೆ ಹಲವು ಕಡೆ ಚೆಕ್ ಡ್ಯಾಂಗಳು ತುಂಬಿ ಹರಿಯುತ್ತಿವೆ.
ಶಿವಮೊಗ್ಗದಲ್ಲಿ ಮನೆ ಮೇಲೆ ಬಿದ್ದ ಅರಳಿ ಮರ
ಶಿವಮೊಗ್ಗ ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ಸಾಕಷ್ಟು ಅವಾಂತರ ಸೃಷ್ಟಿಯಾಗಿದೆ. ಶಿವಮೊಗ್ಗದ ಸೊರಬ ಪಟ್ಟಣದಲ್ಲಿ ಮನೆ ಮೇಲೆ ಬೃಹತ್ ಅರಳಿ ಮರ, ತೆಂಗಿನ ಮರ ಬಿದ್ದು ಹಾನಿಯಾಗಿದೆ. ಭಾಗ್ಯ ಎಂಬುವರಿಗೆ ಸೇರಿದ ಮನೆ ಸಂಪೂರ್ಣ ದ್ವಂಸವಾಗಿದ್ದು,ಭಾಗ್ಯ ಅವರು ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮನೆ ಮೇಲೆ ಬೃಹತ್ ಮರ ಬಿದ್ದ ಪರಿಣಾಮ ಮನೆಯಲ್ಲಿದ್ದ ಗೃಹಪಯೋಗಿ ವಸ್ತುಗಳು ಹಾನಿಯಾಗಿವೆ. ಸ್ಥಳಕ್ಕೆ ತಹಸೀಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸೂಕ್ತ ಪರಿಹಾರ ನೀಡುವಂತೆ ಮನೆ ಮಾಲೀಕರು ಮನವಿ ಮಾಡಿದ್ದಾರೆ.
ಇದನ್ನೂ ಓದಿ: Rain news: ಚಾರ್ಮಾಡಿ ಘಾಟಿಯಲ್ಲಿ ಮಳೆಗೆ ಸಿಲುಕಿಕೊಂಡ ನೂರಾರು ಪ್ರಯಾಣಿಕರು
ಕೋಲಾರದಲ್ಲಿ ಮಳೆಗೆ ಬೆಳೆಗಳು ನೀರುಪಾಲು
ಕೋಲಾರದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಮಲ್ಲಸಂದ್ರ ಗ್ರಾಮದಲ್ಲಿ ಬೆಳೆಗಳು ನೀರುಪಾಲಾಗಿದೆ. ಕೋಲಾರ ತಾಲೂಕಿನ ನರಸಾಪುರ ಹೋಬಳಿಯ ಮಲ್ಲಸಂದ್ರ ಗ್ರಾಮದಲ್ಲಿ ನಿನ್ನೆ ಭಾನುವಾರ ಸಂಜೆ ಸುರಿದ ಮಳೆಗೆ ಬೆಳೆಗಳು ಜಲಾವೃತಗೊಂಡಿದೆ. ಮಳೆಯ ನೀರಿನಲ್ಲಿ ಸೌತೆಕಾಯಿ, ಬೀನ್ಸ್, ಹೂ ಬೆಳೆಗಳು ಕೊಚ್ಚಿಹೋಗಿವೆ. ಅವೈಜ್ಞಾನಿಕ ಲೇಔಟ್ ನಿರ್ಮಾಣ ಮಾಡಿರುವುದೇ ಇದಕ್ಕೆಲ್ಲ ಕಾರಣ ಎಂದು ರೈತರು ಆರೋಪಿಸಿದ್ದಾರೆ. ದೊಂಬರಹಳ್ಳಿ ಗ್ರಾಮದ ವ್ಯಾಪ್ತಿಯಲ್ಲಿರುವ ಲೇಔಟ್‌ನಲ್ಲಿ ಮಳೆಯ ನೀರು ಹರಿಯಲು ಯಾವುದೇ ಕಾಲುವೆ ಮಾಡಿಲ್ಲ. ಇದರಿಂದ ಮಳೆ ಬಿದ್ದಾಗಲೆಲ್ಲಾ ಲೇಔಟ್‌ನಿಂದ ಹರಿದು ಬರುವ ನೀರು ತೋಟಗಳಿಗೆ ನುಗ್ಗುತ್ತಿದೆ ಎಂದು ಕಿಡಿಕಾರಿದ್ದಾರೆ.
ಚಿಕ್ಕಮಗಳೂರಿನ ಮಳೆ ಅಬ್ಬರಕ್ಕೆ ಕುಸಿದ ಮನೆ
ಚಿಕ್ಕಮಗಳೂರಿನಲ್ಲಿ ಭಾನುವಾರ ರಾತ್ರಿ ಸುರಿದ ಗಾಳಿ-ಮಳೆಗೆ ಮನೆ ಕುಸಿದಿದೆ. ಎನ್.ಆರ್.ಪುರ ತಾಲೂಕಿನ ಕರ್ಕೇಶ್ವರ ಗ್ರಾಮದಲ್ಲಿ ಘಟನೆ ನಡೆದಿದೆ. ಗುಲಾಬಿ ಎಂಬಾಕೆಯ ಮನೆ ಕುಸಿದಿದೆ. ಒಂಟಿ ಮಹಿಳೆಯಾಗಿರುವ ಗುಲಾಬಿ, ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದು, ಗಾಳಿ-ಮಳೆಗೆ ಇದ್ದವೊಂದು ಮನೆಯೂ ನೆಲಸಮವಾಗಿದೆ ಎಂದು ಕಂಗಲಾಗಿದ್ದಾರೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸ್ಥಳೀಯರಿಂದ ನಿರ್ಗತಿಕ ಮಹಿಳೆಗೆ ಸಹಾಯ ಮಾಡಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ