ಹಾಸನ: ಭಾರಿ ಮಳೆ-ಗಾಳಿಗೆ (Karnataka Rain Effect) ಬೃಹತ್ ಗಾತ್ರದ ಮರವೊಂದು (Tree fall) ಧರೆಗುರುಳಿದೆ. ಬಿದ್ದ ರಭಸಕ್ಕೆ ಮನೆಯ ಮುಂದೆ ನಿಲ್ಲಿಸಿದ್ದ ಕಾರು ಸಂಪೂರ್ಣ ಜಖಂಗೊಂಡಿದೆ. ಹಾಸನದ ಕುವೆಂಪುನಗರದಲ್ಲಿ ಘಟನೆ ನಡೆದಿದೆ. ರಾಕೇಶ್ ಎಂಬುವವರು ತಮ್ಮ ಕಾರನ್ನು ಮರದ ಕೆಳಗೆ ನಿಲ್ಲಿಸಿದ್ದರು.
ನೋಡನೋಡುತ್ತಿದ್ದಂತೆ ಮರವು ಕಾರಿನ ಮೇಲೆ ಬಿದ್ದು ಪೂರ್ತಿ ಜಖಂಗೊಂಡಿದೆ. ಅದೃಷ್ಟವಶಾತ್ ಕಾರಿನೊಳಗೆ ಯಾರು ಇಲ್ಲದೆ ಇರುವುದರಿಂದ ಅನಾಹುತವೊಂದು ತಪ್ಪಿದೆ. ಸ್ಥಳಕ್ಕೆ ನಗರಸಭೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿ, ರಸ್ತೆಗೆ ಅಡ್ಡಲಾಗಿ, ಕಾರಿನ ಮೇಲೆ ಬಿದ್ದಿದ್ದ ಮರವನ್ನು ತೆರವುಗೊಳಿಸಿದರು. ಇತ್ತ ಕೊಪ್ಪಳದಲ್ಲಿ ಕಳೆದ ಒಂದು ವಾರದಿಂದ ಬಿಡುವು ನೀಡಿದ್ದ ಮಳೆರಾಯ, ಸೋಮವಾರ ಮಧ್ಯಾಹ್ನದ ಸುಮಾರು ಅರ್ಧಗಂಟೆಗೂ ಹೆಚ್ಚು ಸಮಯ ಅಬ್ಬರಿಸಿದ್ದ.
ದೇವಸ್ಥಾನ ತಡೆಗೋಡೆ ಕುಸಿತ
ಮಂಗಳೂರಿನಲ್ಲಿ ಭಾರೀ ಮಳೆಗೆ ಮತ್ತೊಂದು ಅವಘಡ ಸಂಭವಿಸಿದೆ. ನಿರಂತರ ಮಳೆಗೆ ಪ್ರಸಿದ್ಧ ಧಾರ್ಮಿಕ ಕ್ಷೇತ್ರದ ತಡೆಗೋಡೆ ಕುಸಿದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ತಾಲೂಕಿನ ಪಾವಂಜೆ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ತಡೆಗೋಡೆ ಬಿದ್ದಿದೆ.
ಭಾರೀ ಗಾಳಿ ಮತ್ತು ಮಳೆಗೆ ತೆಂಗಿನ ಗಿಡದ ಬುಡದ ಮಣ್ಣು ಸಡಿಲಗೊಂಡಿದೆ. ಪರಿಣಾಮ ಕೆಂಪು ಕಲ್ಲಿನ ಐದಾರು ಅಡಿ ಎತ್ತರದ ತಡೆಗೋಡೆ ಕುಸಿದಿದೆ. ಪರಿಣಾಮ ವಿದ್ಯುತ್ ಕಂಬ, ಬಾವಿ ಹಾಗೂ ದೇವಸ್ಥಾನದ ಪಾರ್ಕಿಂಗ್ ಜಾಗಕ್ಕೆ ಹಾನಿಯಾಗಿದೆ. ಯಾವುದೇ ವಾಹನ ಪಾರ್ಕ್ ಮಾಡದ ಹಿನ್ನೆಲೆಯಲ್ಲಿ ಅನಾಹುತ ತಪ್ಪಿದೆ. ಸದ್ಯ ಮಣ್ಣು ತೆಗೆದು ಪ್ಲಾಸ್ಟಿಕ್ ಟರ್ಪಾಲ್ ಹಾಕಿ ಮುನ್ನೆಚ್ಚರಿಕೆ ವಹಿಸಲಾಗಿದೆ.
ಚಿಕ್ಕೋಡಿಯಲ್ಲಿ ಬಾಬಾ ದರ್ಗಾಕ್ಕೆ ನುಗ್ಗಿದ ನೀರು
ಮಹಾರಾಷ್ಟ್ರದಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯಲ್ಲಿ ಪ್ರವಾಹ ಭೀತಿ ಶುರುವಾಗಿದೆ. ದೂದಗಂಗಾ ನದಿಯು ಉಕ್ಕಿ ಹರಿದಿದ್ದು, ಯಕ್ಸಂಬಾ ಬಳಿಯ ಮುಲ್ಕಾನಿ ಬಾಬಾ ದರ್ಗಾಕ್ಕೆ ನೀರು ನುಗ್ಗಿ ಜಲಾವೃತಗೊಂಡಿದೆ. ನದಿಯಲ್ಲಿ ಇನ್ನೂ ಆರು ಅಡಿ ನೀರು ಬಂದರೆ ಹಲವು ಗ್ರಾಮಕ್ಕೆ ನೀರು ನುಗ್ಗುವ ಭೀತಿ ಇದೆ.
ಇದನ್ನೂ ಓದಿ: Karnataka Rain : ಭಾರಿ ಮಳೆಗೆ ಉಕ್ಕಿ ಹರಿಯುತ್ತಿರುವ ಹಳ್ಳ; ಪ್ರಾಣದ ಹಂಗು ತೊರೆದು ಶಾಲೆಗೆ ಹೋಗಬೇಕು!
ಹಾಸನದಲ್ಲೂ ಅಬ್ಬರಿಸುತ್ತಿರುವ ಮಳೆ
ಹಾಸನ ಜಿಲ್ಲೆಯ ವಿವಿಧೆಡೆ ಸೋಮವಾರ ಭಾರಿ ಮಳೆಯಾಗಿದೆ. ಮಲೆನಾಡು ಭಾಗವಾದ ಸಕಲೇಶಪುರ, ಆಲೂರು, ಬೇಲೂರಿನಲ್ಲಿ ನಿರಂತರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿತ್ತು. ವಾಹನ ಸವಾರರು, ವಿದ್ಯಾರ್ಥಿಗಳು ಪರದಾಡಿದರು. ಇನ್ನೂ ಚಿಕ್ಕಮಗಳೂರು ಭಾಗದಲ್ಲೂ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಾಸನದ ಗೊರೂರಿನಲ್ಲಿರುವ ಜೀವನದಿ ಹೇಮಾವತಿ ನದಿಗೆ ಒಳಹರಿವಿನಲ್ಲಿ ಹೆಚ್ಚಳವಾಗಿದೆ.
ಕಾರವಾರದ ಕದ್ರಾ ಜಲಾಶಯದಿಂದ ನೀರು ಬಿಡುಗಡೆ
ಉತ್ತರ ಕನ್ನಡದ ಕಾರವಾರದ ಕದ್ರಾ ಜಲಾಶಯದಿಂದ ನೀರು ಬಿಡುಗಡೆ ಮಾಡಲಾಗಿದೆ. ವಿದ್ಯುತ್ ಉತ್ಪಾದನೆ ಹಾಗೂ ಕ್ರಸ್ಟ್ ಗೇಟ್ ಸೇರಿ 31,000 ಕ್ಯೂಸೆಕ್ಸ್‌ಗೂ ಅಧಿಕ ನೀರು ಬಿಡುಗಡೆ ಮಾಡಲಾಗಿದೆ. 34.50 ಮೀ ಗರಿಷ್ಠ ಸಾಮರ್ಥ್ಯದ ಕದ್ರಾ ಜಲಾಶಯದಿಂದ 4 ಗೇಟ್‌ಗಳಿಂದ 10,600 ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಲಾಗಿದೆ.
ಸದ್ಯ ಜಲಾಶಯದಲ್ಲಿ 31 ಮೀ ನೀರಿನ ಸಂಗ್ರಹ ತಲುಪಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾಡಳಿತವು ಜಲಾಶಯದಲ್ಲಿ 30 ಮೀ ನೀರು ಸಂಗ್ರಹಕ್ಕೆ ನಿಗಧಿಪಡಿಸಿದೆ. ಕರಾವಳಿ ಭಾಗದಲ್ಲಿ ಧಾರಾಕಾರ ಮಳೆಯಿಂದ ಜಲಾಶಯದ ಒಳಹರಿವು ಹೆಚ್ಚಿದ್ದು,22,000 ಕ್ಯೂಸೆಕ್ಸ್ ನೀರು ಜಲಾಶಯಕ್ಕೆ ಹರಿದುಬರುತ್ತಿದೆ. ಜಲಾಶಯದಿಂದ ವಿದ್ಯುತ್ ಉತ್ಪಾದಿಸಿ 21,000 ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಲಾಗುತ್ತದೆ. ಮುಂಜಾಗ್ರತಾ ಕ್ರಮವಾಗಿ ನದಿ ಪಾತ್ರದ ನಿವಾಸಿಗಳನ್ನು ಸ್ಥಳಾಂತರಗೊಳಿಸಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ