ಬೆಳಗಾವಿ: ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಳೆ ಅಬ್ಬರ (Karnataka weather Forecast) ಮುಂದುವರಿದಿದ್ದು, ಗೋವಾ ಲೋಂಡಾ ಬೆಳಗಾವಿ ಸಂಪರ್ಕಿಸುವ ರಸ್ತೆ (Karnataka Rain Effect) ಮುಳುಗಡೆಯಾಗಿದೆ. ಕಾಡಿನಿಂದ ಏಕಾಏಕಿ ಅಪಾರ ಪ್ರಮಾಣದ ನೀರು ಹರಿದು ಬಂದಿದೆ. ಇದರಿಂದಾಗಿ ರಸ್ತೆ ಮೇಲೆ ಮೂರ್ನಾಲ್ಕು ಅಡಿ ನೀರು ನಿಂತಿದೆ. ಇನ್ನೂ ಅಪಾಯ ಲೆಕ್ಕಿಸದೇ ಕೆರೆಯಂತಾಗಿದ್ದ ರಸ್ತೆಯಲ್ಲಿ ಬೈಕ್ ಚಲಾಯಿಸಿಕೊಂಡು ಬಂದ ಸವಾರರು ನೀರಲ್ಲಿ ಬಿದ್ದಿದ್ದರು. ಬಳಿಕ ಬೈಕ್‌ನಿಂದ ಇಳಿದು ನೀರಿನಲ್ಲೇ ಬೈಕ್ ತಳ್ಳಿಕೊಂಡು ರಸ್ತೆ ದಾಟ್ಟಿದ್ದಾರೆ. ಇತ್ತ ತುಂಬಿದ್ದ ನೀರಲ್ಲಿ ಬಂದ ಟ್ರ್ಯಾಕ್ಟರ್ ಪಲ್ಟಿ ಹೊಡೆದಿದೆ. ಸದ್ಯ ನೀರು ಹೋಗುವಂತೆ ಜೆಸಿಬಿಯಿಂದ ಸ್ಥಳೀಯರಿಂದ ಕಾಮಗಾರಿ ನಡೆಯುತ್ತಿದೆ.
ಕರ್ನಾಟಕ-ಗೋವಾ ಗಡಿ ಅನಮೋಡ್ ರಸ್ತೆಯಲ್ಲಿ ಸಂಚಾರಕ್ಕೆ ಅಡ್ಡಿ
ಕರಾವಳಿಯ ಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆಯಿಂದಾಗಿ ಕರ್ನಾಟಕ-ಗೋವಾ ಗಡಿ ಅನಮೋಡ್ ರಸ್ತೆಯಲ್ಲಿ ಸಂಚಾರಕ್ಕೆ ಅಡ್ಡಿಯಾಗಿದೆ. ಉತ್ತರಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ರಾಮನಗರದ ಅನಮೋಡ್-ಗೋವಾ ರಸ್ತೆಯಲ್ಲಿ ನೀರು ನಿಂತ ಪರಿಣಾಮ ಸಂಚಾರ ಸ್ಥಗಿತಗೊಂಡಿದೆ.
ರಾಮನಗರದ ಅನಮೋಡ್ ರಸ್ತೆಯ ಎಲಿಫೆಂಟ್ ಬ್ರಿಡ್ಜ್ ಬಳಿ ನೀರು ತುಂಬಿ ನಿಂತಿದೆ. ಓವರ್ ಬ್ರಿಡ್ಜ್ ಕಾಮಗಾರಿ ಪೂರ್ಣಗೊಳ್ಳದ ಹಿನ್ನೆಲೆ ಸಂಚಾರಕ್ಕೆ ತೊಡಕಾಗಿದೆ. ನೀರು ತುಂಬಿದ್ದ ರಸ್ತೆಯಲ್ಲಿ ಕಂಟೇನರ್ ಪಲ್ಟಿ ಹೊಡೆದ ಪರಿಣಾಮ ಬೆಳಗಾವಿ-ರಾಮನಗರ-ಗೋವಾ ಮಾರ್ಗದ ಸಂಚಾರ ಅಸ್ತವ್ಯಸ್ತವಾಗಿದೆ.
ನಿನ್ನೆ ಬುಧವಾರ ಸಂಜೆಯಿಂದಲೂ ರಸ್ತೆಯಲ್ಲೇ ಲಾರಿ, ಬಸ್‌ಗಳು ಸಾಲುಗಟ್ಟಿ ನಿಂತಿವೆ. ಇತ್ತ ಪ್ರಯಾಣಿಕರು ರಾತ್ರಿಯಿಡೀ ಬಸ್‌ನಲ್ಲೇ ಕಾಲಕಳೆದಿದ್ದಾರೆ. ಸಾಲುಗಟ್ಟಿ ವಾಹನಗಳು ನಿಂತ ಪರಿಣಾಮ ವಾಪಸ್ ಹೋಗಲಾಗದೇ ಪರದಾಟ ಅನುಭವಿಸಿದರು. ಸ್ಥಳೀಯಾಡಳಿತ ಜೆಸಿಬಿ ಬಳಸಿ ನೀರು ಹರಿದುಹೋಗಲು ವ್ಯವಸ್ಥೆ ಮಾಡುತ್ತಿದ್ದಾರೆ. ರಾಮನಗರ-ಅನಮೋಡ್-ಗೋವಾ ರಸ್ತೆಯಲ್ಲಿ ವಾಹನ ಸವಾರರ ಪರದಾಟ ಹೇಳತೀರದಾಗಿದೆ.
ಇದನ್ನೂ ಓದಿ: UGCET 2024: ಅರ್ಹತಾ ಅಂಕ ಶೇ 45ಕ್ಕೆ ಇಳಿಕೆ ; ಆರ್ಕಿಟೆಕ್ಚರ್ ಕೋರ್ಸ್‌ಗೆ ಅರ್ಜಿ ಸಲ್ಲಿಸಲು ಜು. 13ರವರೆಗೆ ಅವಕಾಶ
ಶಿರಸಿ-ಕುಮಟಾ ರಸ್ತೆಯಲ್ಲಿ ಗುಡ್ಡ ಕುಸಿತ
ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 766EEಯ ಕತಗಾಲ ಗ್ರಾಮದ ಬಳಿ ಗುಡ್ಡ ಕುಸಿದಿದೆ. ಭಾರತ್‌ಮಾಲಾ ಯೋಜನೆಯಡಿ ನಡೆಯುತ್ತಿರುವ ಶಿರಸಿ ಕುಮಟಾ ಹೆದ್ದಾರಿ ಅಗಲೀಕರಣಕ್ಕಾಗಿ ಮಣ್ಣು ಕೊರೆಯಲಾಗಿದೆ. ಇದರಿಂದಲೇ ಗುಡ್ಡ ಕುಸಿದಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಮಳೆಯಿಂದಾಗಿ ಮಣ್ಣು ಸಡಿಲಗೊಂಡು ಗುಡ್ಡ ಕುಸಿಯುತ್ತಲೇ ಇದೆ. ರಸ್ತೆಗೆ ಮಣ್ಣು ಬಿದ್ದ ಪರಿಣಾಮ ಪೊಲೀಸರು ಬ್ಯಾರಿಕೇಡ್ ಅಳವಡಿಸಿದ್ದಾರೆ.
ಮುಳುಗಡೆಯಾಗಿದ್ದ ಸೇತುವೆಗಳು ಸಂಚಾರಕ್ಕೆ ಮುಕ್ತ
ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ಮಳೆ ಪ್ರಮಾಣ ತಗ್ಗಿದೆ. ಕೃಷ್ಣಾ, ದೂದಗಂಗಾ ಹಾಗೂ ವೇದಗಂಗಾ ನದಿ ನೀರಿನ ಒಳ ಹರಿವಿನಲ್ಲಿ ಗಣನೀಯ ಇಳಿಕೆ ಆಗಿದೆ. ಒಂದೆ ದಿನದಲ್ಲಿ 20 ಸಾವಿರ ಕ್ಯೂಸೇಕ್ ಒಳ ಹರಿವಿನಲ್ಲಿ ಇಳಿಕೆ ಆಗಿದೆ. ಇನ್ನೂ ಚಿಕ್ಕೋಡಿ ವ್ಯಾಪ್ತಿಯ ಮುಳುಗಡೆಯಾಗಿದ್ದ 3 ಸೇತುವೆಗಳು ಸಂಚಾರಕ್ಕೆ ಮುಕ್ತವಾಗಿವೆ. ನಿಪ್ಪಾಣಿ ತಾಲೂಕಿನ ಕಾರದಗಾ-ಭೋಜ ಭೋಜವಾಡಿ-ಕುಣ್ಣೂರ ಸೇತುವೆಗಳು ಹಾಗೂ ಚಿಕ್ಕೋಡಿ ತಾಲೂಕಿನ ಮಲ್ಲಿಕವಾಡ-ದತ್ತವಾಡ ಸೇತುವೆ ಸಂಚಾರಕ್ಕೆ ಮುಕ್ತವಾಗಿವೆ. ಇನ್ನು ಒಳ ಹರಿವಿನ ಪ್ರಮಾಣದಲ್ಲಿ ಕಡಿಮೆಯಾಗುವ ಸಾದ್ಯತೆ ಇದೆ.
ಇತ್ತ ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಭಾಗದಲ್ಲಿ ನಿರಂತರ ಮಳೆಯಿಂದಾಗಿ ಕೃಷ್ಣಾ ನದಿಗೆ ಅಡ್ಡವಾಗಿ ಕಟ್ಟಲಾಗಿರುವ ಆಲಮಟ್ಟಿ ಜಲಾಶಯಕ್ಕೆ ದಿನೆದಿನೇ ಒಳಹರಿವು ಹೆಚ್ಚಾಗುತ್ತಿದೆ. ಜಲಾಶಯದಿಂದ ನೀರು ಬಿಡುಗಡೆ ಮಾಡಲಾಗುತ್ತಿದ್ದು, ನದಿಪಾತ್ರದ ಜನರಿಗೆ ಸುರಕ್ಷಿತವಾಗಿರಲು ಕೆಬಿಜೆಎನ್ಎಲ್ ಅಧಿಕಾರಿಗಳು ಮುನ್ಸೂಚನೆ ಜತೆಗೆ ಎಚ್ಚರಿಕೆಯನ್ನು ನೀಡಿದೆ. 3,500 ಕ್ಯೂಸೆಕ್ ನೀರು ಹೊರಹರಿವಿನ ಸೂಚನೆ ನೀಡಿದ್ದು, ಕ್ರಮೇಣ ಅದನ್ನು 7,500 ಕ್ಯೂಸೆಕ್‌ಗೆ ಹೆಚ್ಚಿಸಲಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ