ಉತ್ತರಕನ್ನಡ: ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕಿನ್ನರ ಗ್ರಾಮದಲ್ಲಿ ಭಾರಿ ಮಳೆಗೆ (Karnataka Rain) ಮನೆ ಮೇಲೆ ಗುಡ್ಡ ಬಿದ್ದ ಪರಿಣಾಮ ಗೋಡೆ ಕುಸಿದಿದೆ. ಮಣ್ಣಿನಡಿ ಸಿಲುಕಿದ್ದ ವ್ಯಕ್ತಿಯೊಬ್ಬರು ದಾರುಣವಾಗಿ ಮೃತಪಟ್ಟಿದ್ದಾರೆ. ತಿಕರ್ಸ್ ಗುರವ (60) ಮೃತ ದುರ್ದೈವಿ.
ಮನೆಯ ಮೇಲೆ ಏಕಾಏಕಿ ಗುಡ್ಡ ಕುಸಿದ ಪರಿಣಾಮ ಗೋಡೆಯಡಿ ಸಿಲುಕಿದ ತಿಕರ್ಸ್ ತಲೆಗೆ ಗಂಭೀರ ಪೆಟ್ಟಾಗಿತ್ತು. ಏಕಾಏಕಿ ಮನೆ ಗೋಡೆ ಕುಸಿದ ಪರಿಣಾಮ ಹೊರ ಬರಲು ಆಗದೆ ಮೃತಪಟ್ಟಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಸುಮಾರು 3 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಮೃತದೇಹ ಹೊರತೆಗೆದಿದ್ದಾರೆ. ಸ್ಥಳದಲ್ಲಿ ತಹಶಿಲ್ದಾರ್, ಕಾರವಾರ ಡಿವೈಎಸ್ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಶಿರೂರು ಗುಡ್ಡ ಕುಸಿತ ಸ್ಥಳಕ್ಕೆ ಅಧಿಕಾರಿಗಳು ದೌಡು
ಇನ್ನೂ ಉತ್ತರ ಕನ್ನಡದ ಅಂಕೋಲಾ ಗುಡ್ಡ ಕುಸಿತ ಪ್ರದೇಶಕ್ಕೆ ಕುಮಟಾ ಎಸಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಂಕೋಲಾದ ರಾಷ್ಟ್ರೀಯ ಹೆದ್ದಾರಿ 66ರ ಶಿರೂರು ಬಳಿ ಗುಡ್ಡ ಕುಸಿದಿದೆ. ಗುಡ್ಡದ ಮಣ್ಣಿನಡಿ 10ಕ್ಕೂ ಅಧಿಕ ಮಂದಿ ಸಿಲುಕಿರುವ ಶಂಕೆ ಇದ್ದು, ಒಂದೇ ಕುಟುಂಬದ ಐವರು ಸೇರಿ ಹತ್ತಕ್ಕೂ ಅಧಿಕ ಮಂದಿ ಕಣ್ಮರೆಯಾಗಿದ್ದಾರೆ. ಗುಡ್ಡ ಕುಸಿದ ರಭಸಕ್ಕೆ ನದಿಗೆ 2 ಗ್ಯಾಸ್ ಟ್ಯಾಂಕರ್‌ಗಳು ಕೊಚ್ಚಿ ಹೋಗಿದೆ. ಗುಡ್ಡದ ಕೆಳಗಿದ್ದ ಲಾರಿ, ಮತ್ತೊಂದು ಟ್ಯಾಂಕರ್ ಹಾಗೂ ಚಾಲಕರು ಪಾರಾಗಿದ್ದಾರೆ.
ಅಂಕೋಲಾ ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರವಾರದಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾಹಿತಿ ನೀಡಿದ್ದಾರೆ. ಅವಘಡದಲ್ಲಿ 7 ಮಂದಿ ಸಾವನ್ನಪ್ಪಿರಬಹುದೆಂದು ಮಾಹಿತಿ ಲಭ್ಯವಾಗಿದೆ. ಇನ್ನೂ ಕೂಡಾ ಖಚಿತ ಮಾಹಿತಿ ಬರಬೇಕಿದೆ. ಸದ್ಯ ಕಾರ್ಯಾಚರಣೆ ನಡೆಯುತ್ತಿರುವುದರಿಂದ ಎಷ್ಟು ಸಾವಾಗಿದೆ ಹೇಳುವುದು ಸಾಧ್ಯವಿಲ್ಲ. ಕಾರ್ಯಾಚರಣೆಗೆ ಅಗತ್ಯ ಸಲಕರಣೆಗಳು ಸಾಕಾಗುತ್ತಿಲ್ಲ. ಹೀಗಾಗಿ ಕುಮಟಾ ಹಾಗೂ ಅಂಕೋಲಾ ಎರಡೂ ಕಡೆಯಿಂದ ಕಾರ್ಯಾಚರಣೆಗೆ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲು ಜಿಲ್ಲಾಧಿಕಾರಿಗೆ ಸೂಚಿಸಿದ್ದೇನೆ. ಜೆಸಿಬಿ, ಹಿಟಾಚಿ ಮತ್ತಿತರ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗುವುದು ಎಂದರು.
ಇದನ್ನೂ ಓದಿ: Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು
ಶಿವಮೊಗ್ಗದಲ್ಲಿ ಮನೆ ಮೇಲೆ ಮರ ಬಿದ್ದು ಹಾನಿ
ಶಿವಮೊಗ್ಗದಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಹೊಸನಗರ ತಾಲೂಕಿನ ಯಡೂರು ಗ್ರಾಮದಲ್ಲಿ ಮನೆಗೆ ಹಾನಿಯಾಗಿದೆ. ಮನೆ ಮೇಲೆ ಮರ ಬಿದ್ದು, ಚಾವಣಿ ಕುಸಿದು ಬಿದ್ದಿದೆ. ಜತೆಗೆ ನೀರು ನುಗ್ಗಿ, ಮನೆಯಲ್ಲಿರುವ ಗೃಹೋಪಯೋಗಿ ವಸ್ತುಗಳು ನೀರುಪಾಲಾಗಿದೆ. ನಿಂಗಮ್ಮ ಎಂಬುವರಿಗೆ ಸೇರಿದ ಮನೆಯು ಹಾನಿಯಾಗಿದ್ದು, ಸೂಕ್ತ ಪರಿಹಾರಕ್ಕೆ ಒತ್ತಾಯಿಸಿದ್ದಾರೆ.
ಹಾಸನದಲ್ಲಿ ಕರೆಂಟ್ ಕಟ್
ಹಾಸನ ಸುತ್ತಮುತ್ತ ಭಾರಿ ಮಳೆಯಾಗುತ್ತಿದ್ದು, ಹಲವೆಡೆ ಅಪಾರ ಪ್ರಮಾಣದ ಹಾನಿಯಾಗಿದೆ. ಸಕಲೇಶಪುರ ತಾಲೂಕಿನ ಮಾವಿನೂರು, ಕಾಗಿನೆರೆ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ವಿದ್ಯುತ್ ಇಲ್ಲದೆ ಗ್ರಾಮಸ್ಥರು ಪರದಾಡುತ್ತಿದ್ದಾರೆ. ಮತ್ತೊಂದು ಕಡೆ ಸಕಲೇಶಪುರ ತಾಲೂಕಿನ ಗಡಿ ಗ್ರಾಮ ತಂಬಲಗೇರಿಯಲ್ಲಿ ಮನೆಯ ಕಾಂಪೌಂಡ್ ಕುಸಿದು ಬಿದ್ದಿದೆ. ಪುಟ್ಟೇಗೌಡ ಎಂಬುವವರ ಸೇರಿದ ಮನೆಯು ಹಾನಿಯಾಗಿದೆ. ಜತೆಗೆ ಗದ್ದೆಗಳಿಗೆ ಮಣ್ಣು ಕುಸಿದು, ಭತ್ತ ಸಸಿಗಳು ಮಣ್ಣಿನಡಿ ಸಿಲುಕಿದೆ. ತಂಬಲಗೇರಿ ಗ್ರಾಮದ ಲೋಕೇಶ್ ಹಾಗೂ ಇತರೆ ಗ್ರಾಮಸ್ಥರಿಗೆ ಸೇರಿದ ಭತ್ತದ ಗದ್ದೆಗಳು ಕೆರೆಯಂತಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ