ಕೊಡಗು/ಕಾರವಾರ: ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಮಳೆಗೆ ಜನರು ತತ್ತರಿಸಿ (Karnataka Rain) ಹೋಗಿದ್ದಾರೆ. ಭಾನುವಾರ ಹಲವೆಡೆ ಗಾಳಿ ಸಹಿತ ಭಾರಿ ಮಳೆಗೆ ಮರಗಳು ಧರೆಗುರುಳಿದ್ದು, ಅವಾಂತರವೇ (Rain Effect) ಸೃಷ್ಟಿಯಾಗಿದೆ. ಅದರಲ್ಲೂ ಕೊಡಗಿನಲ್ಲಿ ಸಾವು-ನೋವು ಸಂಭವಿಸಿದೆ. ಕೊಡಗಿನ ಸೋಮವಾರಪೇಟೆ ಸಮೀಪದ ಚೌಡ್ಲು ಗ್ರಾಮದಲ್ಲಿ ಭಾರಿ ಗಾಳಿಗೆ ವಿದ್ಯುತ್ ತಂತಿ ತುಂಡಾಗಿ ಬಿದ್ದಿತ್ತು. ಅದನ್ನು ತುಳಿದ ಮೂರು ತಿಂಗಳ ಗಬ್ಬದ ಹಸು ವಿದ್ಯುತ್ ಪ್ರವಹಿಸಿ ಮೃತಪಟ್ಟಿದೆ. ಗ್ರಾಮದ ಸುರೇಶ್ ಎಂಬುವವರಿಗೆ ಸೇರಿದ ಗಬ್ಬದ ಹಸು ಕಳೆದುಕೊಂಡು ಕಂಗಲಾಗಿದ್ದಾರೆ.
ಕೊಡಗಿನಲ್ಲಿ ವರುಣಾರ್ಭಟ ಮುಂದುವರೆದಿದ್ದು, ಭಾರಿ ಗಾಳಿಗೆ ಬೃಹತ್ ಮರ ಹಾಗೂ ಲೈಟ್ ಕಂಬಗಳು ನೆಲಕ್ಕುರುಳಿವೆ. ಮಡಿಕೇರಿ ಎಫ್‌ಎಂಸಿ (FMC) ಕಾಲೇಜು ಸಮೀಪದಲ್ಲಿ ರಸ್ತೆಗೆ ಅಡ್ಡಲಾಗಿ ಮರ ಬಿದ್ದಿದೆ. ಮಡಿಕೇರಿಯಿಂದ ಗಾಳಿಬೀಡು ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು, ಚೆಸ್ಕಾಂ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ತೆರವು ಮಾಡಿದ್ದಾರೆ.
ಇತ್ತ ಕೊಡಗಿನ ಸೋಮವಾರಪೇಟೆ ಸಮೀಪದ ಆಯತಾನ ರೆಸಾರ್ಟ್‌ನಲ್ಲಿ ಮರದ ಕೊಂಬೆ ಬಿದ್ದು ಆರು ಕಾರುಗಳಿಗೆ ಹಾನಿಯಾಗಿದೆ. ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದ ಪ್ರವಾಸಿಗರ ಕಾರು ಹಾಗೂ ಟ್ಯಾಕ್ಸಿಗಳಿಗೆ ಮರದ ಕೊಂಬೆ ಬಿದ್ದಿದೆ. ಜಿಲ್ಲೆಯಾದ್ಯಂತ ನಿನ್ನೆ ಶನಿವಾರದಿಂದಲ್ಲೂ ಮಳೆಯೊಂದಿಗೆ ಭಾರಿ ಗಾಳಿ ಬೀಸುತ್ತಿದೆ. ಭಾರಿ ಗಾಳಿಗೆ ಗುಡ್ಡಗಾಡಿನ ಜನತೆ ಆತಂಕಗೊಂಡಿದ್ದಾರೆ.
ಇದನ್ನೂ ಓದಿ: Karnataka Rain : ಭಾರಿ ಮಳೆ ಎಫೆಕ್ಟ್; ಕಪಿಲಾ ನದಿ ತೀರದಲ್ಲೀಗ ಪ್ರವಾಹ ಭೀತಿ
ನೆರೆಯಲ್ಲಿ ಸಿಲುಕಿಕೊಂಡವರ ರಕ್ಷಣೆ
ಉತ್ತರ ಕನ್ನಡದ ಕಾರವಾರ ವ್ಯಾಪ್ತಿಯಲ್ಲಿ ಧಾರಾಕಾರ ಮಳೆಯಿಂದಾಗಿ ನೆರೆ ಪರಿಸ್ಥಿತಿ ಉಂಟಾಗಿದೆ. ನೆರೆಯಲ್ಲಿ ಸಿಲುಕಿಕೊಂಡವರಿಗೆ ಬೋಟ್ ಮೂಲಕ ರಕ್ಷಣೆ ಮಾಡಲಾಗಿದೆ. ಚೆಂಡಿಯಾ ಗ್ರಾಮ ವ್ಯಾಪ್ತಿಯ ಇಡೂರುಸಕಲಭಾಗ್‌ದಲ್ಲಿ ನೆರೆ ಸೃಷ್ಟಿಯಾಗಿದೆ. ಚೆಂಡಿಯಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಜಮೀನುಗಳಿಗೆ ಹೋಗುವ ರಸ್ತೆ ಜಲಾವೃತಗೊಂಡಿದ್ದು, ಸಂಕಷ್ಟದಲ್ಲಿದ್ದ 5 ಕುಟುಂಬಗಳನ್ನು ಬೋಟ್ ಮೂಲಕ ರಕ್ಷಿಸಿದ್ದಾರೆ.
ರಾತ್ರಿಯಿಡೀ ಸುರಿದ ಮಳೆಯ ಪ್ರಮಾಣ ಗೊತ್ತಾಗದೇ ಮನೆಯಲ್ಲೇ ಉಳಿದಿದ್ದರು. ಕಳೆದ 4 ದಿನಗಳ ಹಿಂದೆ ಸುರಿದ ಮಳೆಯಲ್ಲಿ ಮನೆಯವರೆಗೆ ಮಾತ್ರ ನೀರು ಬಂದಿತ್ತು. ಆದರೆ ಇಂದು ನಿರೀಕ್ಷೆಗೂ ಮೀರಿ ನೀರು ಬಂದು ಪ್ರವಾಹದಲ್ಲಿ ಸಿಲುಕಿಕೊಂಡಿದ್ದರು. ರಸ್ತೆ ಹಾಗೂ ಜಮೀನುಗಳು ಸಂಪೂರ್ಣ ಜಲಾವೃತವಾಗಿತ್ತು. ರಸ್ತೆ ಯಾವುದು ಎಂದು ಗೊತ್ತಾಗದೇ ಮನೆಯಲ್ಲೇ ಕಾಲ ಕಳೆಯುತ್ತಿದ್ದರು. ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರೇ ಬೋಟ್ ಮೂಲಕ ರಕ್ಷಣೆ ಮಾಡಿದ್ದಾರೆ. ನೆರೆ ಪೀಡಿತ ನಿವಾಸಿಗಳು ಸುರಕ್ಷಿತ ಪ್ರದೇಶಗಳಿಗೆ ಮರಳಿದ್ದಾರೆ.
ಯಾದಗಿರಿಯಲ್ಲೂ ಅಬ್ಬರದ ಮಳೆ
ಯಾದಗಿರಿಯಲ್ಲಿ ವರುಣನ ಅಬ್ಬರ ಜೋರಾಗಿದೆ. ಭಾನುವಾರ ಒಂದು ಗಂಟೆಗೂ ಹೆಚ್ಚು ಸಮಯ ಮಳೆಯಾಗಿದೆ. ಒಂದು ಕಡೆ ಮಳೆ ಆರ್ಭಟವಾದರೆ ಮತ್ತೊಂದೆಡೆ ಯುವಕರು ಮಳೆಯಲ್ಲಿಯೇ ಕ್ರಿಕೆಟ್ ಆಡಿ ಖುಷಿ ಪಟ್ಟರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ