ತುಮಕೂರು: ತುಮಕೂರು ಜಿಲ್ಲೆಯಲ್ಲಿ ರಾತ್ರಿ ಗಾಳಿ ಸಹಿತ ಸುರಿದ ಭಾರಿ ಮಳೆಗೆ (Karnataka Rain) ಹಳೆಯ ಬೇವಿನ ಮರವೊಂದು ಕುಸಿದು ಬಿದ್ದಿದೆ. ಪರಿಣಾಮ ಮೂರು ಮನೆಗಳು ಹಾಗೂ ಒಂದು ಇಟಿಯೋಸ್ ಕಾರು ಜಖಂಗೊಂಡಿದೆ. ಸುಮಾರು 120 ವರ್ಷದ ಹಳೆಯ ಬೃಹತ್ ಮರ ಬಿದ್ದು ಅವಾಂತರವೇ ಸೃಷ್ಟಿಯಾಗಿದೆ. ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಹುಸೇನ್ ಪುರ ಗ್ರಾಮದಲ್ಲಿ ಘಟನೆ ನಡೆದಿದೆ.
ನರಸಿಂಹ ಎಂಬುವರಿಗೆ ಸೇರಿದ ಕಾರು ಹಾಗೂ ನಾಗರಾಜ್, ಮಾಧವರಾಜ್, ಅಕಲಪ್ಪ ಎಂಬುವರಿಗೆ ಸೇರಿದ ಮನೆಗಳಿಗೆ ಹಾನಿಯಾಗಿದೆ. ಒಂದು ಬೈಕ್ ಕೂಡ ಜಖಂ ಆಗಿದ್ದು, ಮರದಡಿ ಕಟ್ಟಿದ್ದ ಎರಡು ಮೇಕೆಗಳು ಮೃತಪಟ್ಟಿವೆ. ಸುಮಾರು ನಾಲ್ಕೈದು ಜನರಿಗೆ ಸಣ್ಣಪುಟ್ಟ ಗಾಯವಾಗಿದೆ. ಪಾವಗಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮರ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ.
ಸಿಡಿಲು ಬಡಿದು ಹೊತ್ತಿ ಉರಿದ ಅಂಗಡಿ
ಶಿವಮೊಗ್ಗ ಹೊರವಲಯದ ಜಾವಳ್ಳಿ ಗ್ರಾಮದಲ್ಲಿ ಸಿಡಿಲು ಸಹಿತ ಧಾರಾಕಾರವಾಗಿ ಸುರಿದ ಮಳೆಗೆ ಅಂಗಡಿಯೊಂದು ಹೊತ್ತಿ ಉರಿದಿದೆ. ಸಿಡಿಲು ಬಡಿದ ಕಾರಣಕ್ಕೆ ಎಲೆಕ್ಟ್ರಿಕ್ ಅಂಗಡಿ ಧಗೆ ಧಗೆನೇ ಹೊತ್ತಿ ಉರಿದಿದೆ. ಮಳೆಯಲ್ಲೇ ಬೆಂಕಿ ಜ್ವಾಲೆಗೆ ಅಂಗಡಿ ಸಂಪೂರ್ಣ ಭಸ್ಮವಾಗಿದೆ. 10 ಲಕ್ಷಕ್ಕೂ ಹೆಚ್ಚು ಎಲೆಕ್ಟ್ರಾನಿಕ್ ವಸ್ತುಗಳು ಬೆಂಕಿಗಾಹುತಿಯಾಗಿವೆ. ವೀರಭದ್ರಪ್ಪ ಎಂಬುವರಿಗೆ ಅಂಗಡಿ ಭಸ್ಮವಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬೆಂಕಿ ನಂದಿಸಿದ್ದಾರೆ.
ಇದನ್ನೂ ಓದಿ: Dead Body Found : ಸೇತುವೆ ಸಮೀಪದಲ್ಲಿತ್ತು ಕೊಳೆತ ಮಹಿಳೆಯ ಶವ; ಹಂತಕರು ಯಾರು?
ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು
ದೊಡ್ಡಬಳ್ಳಾಪುರ: ರಾಜ್ಯದ ಹಲವೆಡೆ ಬುಧವಾರ ಸಂಜೆ ಭಾರಿ ಮಳೆಯಾಗಿದ್ದು, ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಬೆಂಗಳೂರು ಗ್ರಾಮಾಂತರದ ದೊಡ್ಡಬಳ್ಳಾಪುರ ತಾಲೂಕಿನ ಕನಸವಾಡಿಯಲ್ಲಿ ಅಂಗಡಿ ಹಾಗೂ ಮನೆಗಳಿಗೆ ನೀರು ನುಗ್ಗಿದೆ. ರಸ್ತೆ ಪಕ್ಕದ ಅಂಗಡಿಗಳು ಹಾಗೂ ಮೆಡಿಕಲ್ ಸ್ಟೋರ್‌ಗೂ ನೀರು ನುಗ್ಗಿ ಹಾನಿಯಾಗಿದೆ.
ಕೆಆರ್‌ಡಿಸಿಎಲ್‌ನವರು ರಸ್ತೆ ಕಾಮಗಾರಿ ವೇಳೆ ಚರಂಡಿ ವ್ಯವಸ್ಥೆ ಮಾಡದಿರುವುದೇ ಮಳೆ ನೀರು ನುಗ್ಗಲು ಕಾರಣ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಎತ್ತರದ ಪ್ರದೇಶದಲ್ಲಿನ ಮಳೆ ನೀರು ತಗ್ಗು ಪ್ರದೇಶಗಳಿಗೆ ನುಗ್ಗಿದೆ. ರಾತ್ರಿಯೆಲ್ಲ ಮನೆಗಳಲ್ಲಿ ವಿದ್ಯುತ್ ಇಲ್ಲದೆ ಜನರು ಪರದಾಡಿದ್ದಾರೆ. ಮಳೆ ನೀರನ್ನು ಮನೆಯಿಂದ ಹೊರಗೆ ಎತ್ತೋಯ್ಯೊಲು ಹರಸಾಹಸ ಪಟ್ಟಿದ್ದಾರೆ. ಮನೆಯಲ್ಲಿದ್ದ ದಿನಸಿ, ಅಂಗಡಿಗಳಲ್ಲಿನ ತರಕಾರಿ ಎಲ್ಲವೂ ನೀರು ಪಾಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ