Site icon Vistara News

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Karnataka Rain

ವಿಜಯನಗರ/ರಾಯಚೂರು/ಯಾದಗಿರಿ: ವೀಕೆಂಡ್‌ ಮೂಡ್‌ನಲ್ಲಿದ್ದವರಿಗೆ ವರುಣ ಶಾಕ್‌ (Karnataka Rain) ಕೊಟ್ಟಿದ್ದಾನೆ. ರಾಜ್ಯ ಹಲವೆಡೆ ಬಿರುಗಾಳಿ ಸಹಿತ (Karnataka weather Forecast) ಮಳೆಯಾಗುತ್ತಿದ್ದು, ಪ್ರತ್ಯೇಕ ಕಡೆಗಳಲ್ಲಿ ಸಿಡಿಲು ಬಡಿದು ಕಟ್ಟಿಗೆಯಲ್ಲಿ ಕಟ್ಟಿದ್ದ ಎಮ್ಮೆ ಮೃತಪಟ್ಟಿವೆ.

ವಿಜಯನಗರದ ಹೂವಿನಹಡಗಲಿ ತಾಲೂಕಿನ ಎಂ.ಕಲ್ಲಹಳ್ಳಿ ಗ್ರಾಮದಲ್ಲಿ ಸಿಡಿಲು ಬಡಿದು ಎಮ್ಮೆ ಮೃತಪಟ್ಟಿದೆ. ಕೆಂಚನಗೌಡ್ರ ಬಸವರಾಜ ಎಂಬ ರೈತ ಎಮ್ಮೆಯನ್ನು ಕೊಟ್ಟಿಗೆಯಲ್ಲಿ ಕಟ್ಟಿದ್ದರು. ಮಳೆಯೊಂದಿಗೆ ಗುಡುಗು, ಸಿಡಿಲು ಬಡಿದ ಪರಿಣಾಮ ಎಮ್ಮೆ ಮೃತಪಟ್ಟಿದೆ.

ಇನ್ನೂ ರಾಯಚೂರಿನ ಲಿಂಗಸುಗೂರಿನ ಕರೆಮರಡಿ ತಾಂಡದಲ್ಲಿ ಸಿಡಿಲು ಬಡಿದು ಎಮ್ಮೆಯೊಂದು ಮೃತಪಟ್ಟಿದೆ. ಲಕ್ಷಣ್ಣ ಗುಂಡಪ್ಪ ರಾಠೋಡ ಎಂಬುವವರ ಎಮ್ಮೆಯನ್ನು ಮನೆ ಪಕ್ಕದಲ್ಲಿರುವ ಮರಕ್ಕೆ ಕಟ್ಟಿಹಾಕಿದ್ದರು. ಗುಡುಗು ಮಿಂಚು ಸಹಿತ ಸುರಿದ ಮಳೆ ವೇಳೆ ಸಿಡಿಲು ಬಡಿದ್ದರಿಂದ ಎಮ್ಮೆ ಸ್ಥಳದಲ್ಲೇ ಮೃತಪಟ್ಟಿದೆ. ಮುದಗಲ್ ಠಾಣೆ ಪೊಲೀಸ್ ಸಿಬ್ಬಂದಿ ಹಾಗೂ ನಾಗಲಾಪೂರು ಪಶು ಆಸ್ಪತ್ರೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುದಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವರುಣನ ಅಬ್ಬರಕ್ಕೆ ಕೆರೆಯಂತಾದ ಗುರುಮಠಕಲ್‌

ಯಾದಗಿರಿ ಜಿಲ್ಲೆಯಲ್ಲಿ ಭಾನುವಾರ ಬಿರುಗಾಳಿ ಸಹಿತ ಮಳೆಯಾಗಿದೆ. ಗುರುಮಠಕಲ್ ಹಾಗೂ ಯಾದಗಿರಿ ನಗರದಲ್ಲಿ ಕಳೆದ ಅರ್ಧ ಗಂಟೆಗೂ ಹೆಚ್ಚು ಕಾಲ ವರುಣ ಅಬ್ಬರಿಸಿದ್ದ. ಭಾರಿ ಮಳೆಗೆ ಗುರುಮಠಕಲ್ ರಸ್ತೆ ಮೇಲೆ ನೀರು ಹರಿದು ಕೆರೆಯಂತಾಗಿತ್ತು. ಇತ್ತ ಬಿರುಗಾಳಿ ಸಹಿತ ಭಾರಿ ಮಳೆಗೆ ಮರವೊಂದು ರಸ್ತೆಗೆ ಉರುಳಿ ಬಿದ್ದಿತ್ತು. ಯಾದಗಿರಿ ತಾಲೂಕಿನ ಗಣಾಪುರ ಸಮೀಪದ ಯಾದಗಿರಿ-ಗುರುಮಠಕಲ್ ರಸ್ತೆ ಮಾರ್ಗದಲ್ಲಿ ಮರಗಳು ಧರೆಗುರುಳಿತ್ತು.

ಯಾದಗಿರಿಯ ಗಣಾಪುರ ಸಮೀಪದ ರಸ್ತೆಯಲ್ಲಿ 20 ಕ್ಕೂ ಹೆಚ್ಚು ಮರಗಳು ಬಿದ್ದಿತ್ತು. ಗುರುಮಠಕಲ್-ಯಾದಗಿರಿ ರಾಜ್ಯ ಹೆದ್ದಾರಿಯಲ್ಲಿ ಮರಗಳು ಉರುಳಿ ಬಿದ್ದಿತ್ತು. ಹೀಗಾಗಿ ಸ್ಥಳೀಯರು ಹಾಗೂ ಸವಾರರಿಂದಲೇ ರಸ್ತೆ ಮೇಲೆ ಬಿದ್ದಿದ್ದ ಮರಗಳ ತೆರವು ಮಾಡಲಾಯಿತು. ಮರಗಳನ್ನು ತೆರವು ಮಾಡಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಂಡರು. ರಸ್ತೆ ಮೇಲೆ ಮರಗಳು ಬಿದ್ದ ಕಾರಣದಿಂದ ಗಂಟೆಗಟ್ಟಲೇ ವಾಹನ ಸಂಚಾರ ಸ್ಥಗಿತಗೊಂಡಿತ್ತು.

ಇದನ್ನೂ ಓದಿ: Basavanagudi News : ಪೂಜಾ ಸಾಮಾಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

ಮೇ 31 ರಿಂದ ಕರ್ನಾಟಕದಲ್ಲಿ ಶುರುವಾಗುತ್ತಾ ಮುಂಗಾರು ಮಳೆ ದರ್ಬಾರ್‌!

ಬೆಂಗಳೂರು: ಮೇ 31ರಂದು ಪ್ರಸಕ್ತ ಸಾಲಿನ ಮುಂಗಾರು ಮಳೆಯು (Monsoon 2024) ಕೇರಳವನ್ನು ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ದೇಶದ ಕೃಷಿ ಚಟುವಟಿಕೆಗಳನ್ನು ನಿರ್ಧರಿಸುವ ಮಳೆಯಾಗಿದ್ದರಿಂದ ರೈತರಲ್ಲಿ ಸಹಜವಾಗಿಯೇ ಸಮಾಧಾನ ತಂದಿದೆ. ಇನ್ನೂ ಕರ್ನಾಟಕದಲ್ಲಿ ಮುಂಗಾರು ಪೂರ್ವ ಮಳೆ ಅಬ್ಬರಿಸುತ್ತಿದ್ದು, ಜೂನ್‌ ಮೊದಲ ವಾರ ನೈರುತ್ಯ ಮುಂಗಾರು ಮಳೆ ಕರ್ನಾಟಕವನ್ನು ಪ್ರವೇಶ (Karnataka Monsoon 2024) ಮಾಡಲಿದೆ. ಈ ಬಾರಿ ಮುಂಗಾರಿನಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆಯನ್ನು ಹವಾಮಾನ ಇಲಾಖೆ ಹೊಂದಿದೆ.

ಒಂದು ವೇಳೆ ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಕಾಣಿಸಿಕೊಂಡರೆ ಮುಂಗಾರು ಆಗಮನವು ಮುಂದಕ್ಕೆ ಹೋಗಲಿದೆ. ನೈರುತ್ಯ ಮಾನ್ಸೂನ್ ಈಗಾಗಲೇ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ವ್ಯಾಪಿಸಿದೆ. ಮೇ 31ಕ್ಕೆ ನೈರುತ್ಯ ಮುಂಗಾರು ಕೇರಳ ಕರಾವಳಿಗೆ ಆಗಮಿಸುವ ನಿರೀಕ್ಷೆ ಇದೆ. ಅಲ್ಲಿಂದ ಕರ್ನಾಟಕ ಕರಾವಳಿಗೆ ಜೂನ್ 1 ಅಥವಾ 2ರಂದು ಪ್ರವೇಶಿಸಬಹುದು. ಕರಾವಳಿಯಿಂದ ಕ್ರಮೇಣ ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ಪ್ರದೇಶಗಳಿಗೆ ವ್ಯಾಪಿಸಲಿದೆ ಎಂದು ಹವಾಮಾನ ತಜ್ಞ ಸಿ.ಎಸ್.ಪಾಟೀಲ್ ಹೇಳಿದ್ದಾರೆ.

ಕೊಡಗಿನಲ್ಲಿ ವಿಪತ್ತು ನಿರ್ವಹಣಾ ತಂಡ ವಾಸ್ತವ್ಯ

ಮುಂಗಾರು ಪ್ರವೇಶಕ್ಕೆ ದಿನಗಣನೆ ಆರಂಭವಾಗಿದೆ. ಜೂನ್ ಮೊದಲ ವಾರಕ್ಕೆ ಕೊಡಗು ಜಿಲ್ಲೆಗೆ ಮುಂಗಾರು ಎಂಟ್ರಿಯಾಗಲಿದೆ. ಕಳೆದ ಬಾರಿಗಿಂತ ಮೂರರಿಂದ ನಾಲ್ಕು ಪಟ್ಟು ಹೆಚ್ಚು ಮಳೆಯಾಗಲಿದೆ ಎಂದು ಎಂದು ಹವಾಮಾನ ಇಲಾಖೆಯು ಕೊಡಗು ಜಿಲ್ಲಾಡಳಿತಕ್ಕೆ‌ ಮಾಹಿತಿ ರವಾನಿಸಿದೆ. ಈ ಬಾರಿಯ ಮಳೆಗಾಲಕ್ಕೆ ಕೊಡಗು ಜಿಲ್ಲಾಡಳಿತ ಕೂಡ ತಯಾರಿ ನಡೆಸಿಕೊಳ್ಳುತ್ತಿದೆ. ಮೇ ತಿಂಗಳ ಅಂತ್ಯಕ್ಕೆ ಜಿಲ್ಲೆಗೆ ಎನ್.ಡಿ.ಆರ್ ಎಫ್ ತಂಡ ಆಗಮಿಸಲಿದೆ ಎಂದು ಕೊಡಗು ಜಿಲ್ಲಾಧಿಕಾರಿ ವೆಂಕಟರಾಜ ತಿಳಿಸಿದ್ದಾರೆ. 26 ಮಂದಿಯನ್ನು ಒಳಗೊಂಡ ಎನ್.ಡಿ.ಆರ್ ಎಫ್ ಟೀಮ್ ಈ ಬಾರಿ ಆಗಮಿಸಲಿದೆ. ಕಳೆದ ಬಾರಿ ಜಿಲ್ಲೆಗೆ ಬಂದಿದ್ದ ಎನ್.ಡಿ.ಆರ್.ಎಫ್‌ಗೆ ಬೆಟಾಲಿಯನ್ ಕಳುಹಿಸುವಂತೆ ಜಿಲ್ಲಾಡಳಿತ ಮ‌ನವಿ‌ ಮಾಡಿದೆ. ಕಳೆದ ಬಾರಿ ಬಂದ ತಂಡವೆ ಈ ಸಲವು ಆಗಮಿಸಲಿದೆ. ಕೊಡಗಿನಲ್ಲಿ ಮಳೆಗಾಲ ಮುಗಿಯುವವರೆಗೂ ವಿಪತ್ತು ನಿರ್ವಹಣಾ ತಂಡ ಜಿಲ್ಲೆಯಲ್ಲೆ ವಾಸ್ತವ್ಯ ಹೂಡಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version