ಕಲಬುರಗಿ/ಕೊಪ್ಪಳ: ರಾಜ್ಯದ ಹಲವೆಡೆ ಮಳೆಯು (Karnataka Rain) ಅಬ್ಬರಿಸುತ್ತಿದ್ದು, ಕಲಬುರಗಿಯಲ್ಲಿ ಸಿಡಿಲು ಬಡಿದು ಮನೆಯೊಂದು ಹೊತ್ತಿ ಉರಿದಿದೆ. ಕಲಬುರಗಿ ತಾಲೂಕಿನ ಹೊನ್ನ ಕಿರಣಗಿ ಗ್ರಾಮದಲ್ಲಿಘಟನೆ ನಡೆದಿದೆ.
ರಾಜಕುಮಾರ್ ನಿಂಗಯ್ಯ ಕೋಣಿನ್ ಅವರ ಮನೆಗೆ ಸಿಡಿಲು ಬಡಿದಿದ್ದು, ಸ್ವಲ್ಪದರಲ್ಲೆ ಅನಾಹುತವೊಂದು ತಪ್ಪಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದು ಬೆಂಕಿಯನ್ನು ನಂದಿಸಿದ್ದಾರೆ. ಫರತಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕೊಡಗಿನಲ್ಲಿ ಮುಂದುವರೆದ ಆರಿದ್ರಾ ಮಳೆ
ಕೊಡಗಿನಲ್ಲಿ ಆರಿದ್ರಾ ಮಳೆ ಅಬ್ಬರಕ್ಕೆ ನದಿ ತೋರೆ, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದೆ. ತಲಕಾವೇರಿ ಭಾಗಮಂಡಲ ವ್ಯಾಪ್ತಿಯಲ್ಲೂ ಉತ್ತಮ ಮಳೆಯಾಗುತ್ತಿದೆ. ಕಾವೇರಿ ನದಿ ನೀರಿನ ಮಟ್ಟದಲ್ಲೂ ಗಣನೀಯ ಏರಿಕೆ ಕಂಡಿದೆ.
ಅಂಡರ್ ಪಾಸ್ ಜಲಾವೃತ
ರಾಜಧಾನಿ ಬೆಂಗಳೂರಿನಲ್ಲಿ ಸುರಿದ ಮಳೆಗೆ ಮಲ್ಲೇಶ್ವರದ ಕೆಸಿ ಜನರಲ್ ಆಸ್ಪತ್ರೆಯ ಅಂಡರ್ ಪಾಸ್‌ನಲ್ಲಿ ನೀರು ನಿಂತಿದೆ. ನಿನ್ನೆ ಸುರಿದ ಮಳೆಗೆ ಅಂಡರ್ ಪಾಸ್ ಜಲಾವೃತವಾಗಿದ್ದು, ವಾಹನ ಸಂಚಾರಕ್ಕೆ ತೊಂದರೆ ಉಂಟಾಯಿತು.
ಕೂಡ್ಲಿಗಿಯಲ್ಲಿ ಮಳೆಗಾಗಿ ವಿಶೇಷ ಪೂಜೆ
ಒಂದು ಕಡೆ ಮಳೆಯು ಅಬ್ಬರಿಸುತ್ತಿದ್ದರೆ ಮತ್ತೊಂದು ಕಡೆ ಮಳೆಗಾಗಿ ವಿಶೇಷ ಪೂಜೆ ನಡೆದಿದೆ. ವಿಜಯನಗರದ ಕೂಡ್ಲಿಗಿ ಪಟ್ಟಣದ ಕೋಟೆ ಪ್ರದೇಶದಲ್ಲಿ ಮಳೆಗಾಗಿ ಕೊಂತೆಮ್ಮ ಗಂಗೆ ಪೂಜೆಯನ್ನು ಗ್ರಾಮಸ್ಥರು ನೆರವೇರಿಸಿದ್ದಾರೆ. ಪಂಚ ಮುತ್ತೈದೆಯರು, ಪಂಚ ಕನ್ನಿಕೇಯರಿಂದ ವರುಣನ ಕೃಪೆಗಾಗಿ ಕೊಂತೆಮ್ಮ ಗಂಗೆ ಪೂಜೆ ಸಲ್ಲಿಸಿದರು.
ಮೂರು ಕಾಲು ದಾರಿ ಸೇರುವ ವೃತ್ತದಲ್ಲಿ ನೀರು ತುಂಬಿದ ಕುಂಬವೊಂದನ್ನು ಅಲಂಕಾರ ಮಾಡಿ, ಅದನ್ನೇ ಮಳೆ ಕೊಂತೆಮ್ಮಳೆಂದು ವಿಧಿವತ್ತಾಗಿ ಪಂಚ ಮುತ್ತೈದೆಯರಿಂದ ಪ್ರತಿಷ್ಠಾಪನೆ ಮಾಡಿ ಮಳೆಗಾಗಿ ವಿಶೇಷ ಪೂಜೆ ನೆರವೇರಿಸಿದರು.
ಇದನ್ನೂ ಓದಿ: Karnataka Weather : ಸಾಧಾರಣದಿಂದ ಭಾರಿ ಮಳೆ ಸಾಧ್ಯತೆ; ಕರಾವಳಿ-ಮಲೆನಾಡಿಗೆ ಎಚ್ಚರಿಕೆ
ಸೇತುವೆ ಮುಳುಗಡೆ
ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಮಳೆ ಮುಂದುವರಿದಿದೆ. ನಿರಂತರ ಮಳೆಯಿಂದ ಪಂಚಗಂಗಾ ಒಳಹರಿವಿನ ಪ್ರಮಾಣ ಹೆಚ್ಚಳಗೊಂಡಿದೆ. ಪಂಚಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಬ್ರಿಡ್ಜ್ ಕಮ್ ಬ್ಯಾರೇಜ್ ಮುಳುಗಡೆಯಾಗಿದೆ.
ಕೊಲ್ಹಾಪುರ ಜಿಲ್ಲೆಯ ಶಿಂಗನಾಪುರ ಬಳಿ ಇರುವ ಸೇತುವೆ ಮುಳುಗಡೆಗೊಂಡಿದ್ದು, ವಾಹಗಳ ಸಂಚಾರಕ್ಕೆ ತೊಂದರೆಯುಂಟಾಗಿದೆ. ಇತ್ತ ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದ ಕೊಲ್ಹಾಪುರ ಜಿಲ್ಲಾಡಳಿತ ಹಾಗೂ ಪೊಲೀಸರ ವಿರುದ್ಧ ಜನರು ಆಕ್ರೋಶ ಹೊರಹಾಕಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ