ಚಿಕ್ಕಮಗಳೂರು: ಭಾರಿ ಮಳೆಯು (Karnataka Rain) ಸಾವು-ನೋವಿಗೆ ಕಾರಣವಾಗುತ್ತಿದೆ. ಅಬ್ಬರಿಸುತ್ತಿರುವ ಮಳೆಗೆ ಸೇತುವೆಗಳು ಮುಳುಗಡೆಯಾಗಿವೆ. ಚಿಕ್ಕಮಗಳೂರಿನ ಹೆಬ್ಬಾಳೆ ಸೇತುವೆ ಮೇಲೆ ಒಂದು ದಡದಿಂದ ಮತ್ತೊಂದು ದಡಕ್ಕೆ ಹೋಗುವಾಗ ರಾಸುವೊಂದು ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ. ಹೆಬ್ಬಾಳೆ ಸೇತುವೆ ಮೇಲೆ 2-3 ಅಡಿ ಎತ್ತರದಲ್ಲಿ ನೀರು ಹರಿಯುತ್ತಿದ್ದು, ದಡ ತುಸು ದೂರದಲ್ಲೇ ಇದ್ದಾಗ ನದಿಗೆ ದನವೊಂದು ಬಿದ್ದಿದೆ. ಚಿಕ್ಕಮಗಳೂರಿನ ಕಳಸ ತಾಲೂಕಿನಿಂದ ಹೊರನಾಡು ಸಂಪರ್ಕದ ಹೆಬ್ಬಾಳೆ ಸೇತುವೆಯಲ್ಲಿ, ಜನರ ಕಣ್ಣೇದುರೇ ಭದ್ರೆಯ ಒಡಲಲ್ಲಿ ರಾಸು ಕೊಚ್ಚಿ ಹೋಗಿದೆ.
ರಸ್ತೆಗೆ ಬಿದ್ದ ಬೃಹತ್ ಮರ
ಪ್ರವಾಸಿಗರ ನಿಷೇಧದಿಂದ ಭಾರೀ ಅನಾಹುತವೊಂದು ತಪ್ಪಿದೆ. ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ ರಸ್ತೆಯ ಮೇಲೆ ಬೃಹತ್ ಗಾತ್ರದ ಮರ ಬಿದ್ದಿದೆ. ಮುಳ್ಳಯ್ಯನಗಿರಿ ರಸ್ತೆಯ ಮೂರನೇ ತಿರುವಿನಲ್ಲಿ ಘಟನೆ ನಡೆದಿದೆ. ವಾಹನಗಳು ಇಲ್ಲದಿದ್ದರಿಂದ ಅನಾಹುತ ತಪ್ಪಿದೆ. ಗುಡ್ಡದ ಮಣ್ಣಿನ ಸಮೇತ ಮರ ಬಿದ್ದು, ಸ್ಥಳೀಯ ಗ್ರಾಮಸ್ಥರು ಓಡಾಡಲು ಪರದಾಟ ಅನುಭವಿಸಿದರು. ಸ್ಥಳಕ್ಕೆ ಅರಣ್ಯ ಸಿಬ್ಬಂದಿ ಮರ ತೆರವು ಮಾಡಲಾಯಿತು.
ಇನ್ನೂ ಕೊಡಗು ಜಿಲ್ಲೆಯಾದ್ಯಂತ ಮಳೆಯು ಆರ್ಭಟಿಸುತ್ತಿದ್ದು ಕಾವೇರಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಕಾವೇರಿಯ ಉಪ ನದಿಗಳ ನೀರಿನ ಮಟ್ಟ ಏರಿಕೆಯಿಂದಾಗಿ ಭಾಗಮಂಡಲದ ತ್ರಿವೇಣಿ ಸಂಗಮ ಮತ್ತೆ ಭರ್ತಿಯಾಗಿದೆ. ಭಗಂಡೇಶ್ವರ ಸನ್ನಿದಿಯ ಮೆಟ್ಟಿಲವರೆಗೂ ನೀರು ನಿಂತಿದೆ. ಅಲ್ಲಲ್ಲಿ ಸಣ್ಣ ಪ್ರಮಾಣದ ಗುಡ್ಡ ಕುಸಿತ ಉಂಟಾಗುತ್ತಿದೆ. ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಗಣನೀಯ ಏರಿಕೆಯಾಗುತ್ತಿದ್ದು, ಭಾಗಮಂಡಲ-ನಾಪೋಕ್ಲು ರಸ್ತೆಯು 3ನೇ ಬಾರಿಗೆ ಬಂದ್ ಆಗುತ್ತಿದೆ.
ಮಂಗಳೂರಲ್ಲಿ 12 ಮನೆಗಳಿಗೆ ನುಗ್ಗಿದ ನೇತ್ರಾವತಿ
ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಮಳೆ ಸುರಿಯುತ್ತಿದ್ದು, ಬಂಟ್ವಾಳದಲ್ಲಿ ನೇತ್ರಾವತಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಬಂಟ್ವಾಳದ ಪಾಣೆಮಂಗಳೂರು ಆಲಡ್ಕದಲ್ಲಿ ಸುಮಾರು 12 ಮನೆಗಳಿಗೆ ನೀರು ನುಗ್ಗಿದೆ. ಅಪಾಯದಲ್ಲಿದ್ದ 12 ಮನೆಗಳ ಜನರನ್ನು ಜಿಲ್ಲಾಡಳಿತ ಸ್ಥಳಾಂತರ ಮಾಡಿದೆ. ಮಂಗಳೂರಲ್ಲಿ ನೇತ್ರಾವತಿ ಅಬ್ಬರ
ನೇತ್ರಾವತಿ ನದಿಯಲ್ಲಿ ನೀರಿನ ಹರಿವು ಹೆಚ್ಚಳದಿಂದಾಗಿ ಬೋಳಿಯಾರ್ ಗ್ರಾಮದ ಅಮ್ಮೆಂಬಳದಲ್ಲಿ ಸಂಪರ್ಕ ಕಡಿತಗೊಂಡಿದೆ. ಅಮ್ಮೆಂಬಳ-ಜಾರದಗುಡ್ಡೆ ಸಂಪರ್ಕ ಕಡಿತವಾಗಿದೆ. ನೇತ್ರಾವತಿ ನದಿ ನೀರು ಗದ್ದೆ ಪೂರ್ತಿ ಆವರಿಸಿದೆ. ಸುಮಾರು ನೂರ ಎಪ್ಪತ್ತೈದುಕ್ಕೂ ಹೆಚ್ಚು ಮನೆಗಳಿರುವ ಪ್ರದೇಶದಲ್ಲಿ ನೆರೆ ನೀರು ಆವರಿಸಿದೆ. ಈ ಹಿನ್ನೆಲೆಯಲ್ಲಿ 7 ಕಿ.ಮೀ ಸುತ್ತುಬಳಸಿ ಹೋಗಬೇಕಿದೆ. ರಸ್ತೆ ನಿರ್ಮಾಣ ಮಾಡುವಂತೆ ಹಲವು ವರ್ಷಗಳಿಂದ ಬೇಡಿಕೆ ಸಲ್ಲಿಸುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
ಇದನ್ನೂ ಓದಿ: Uttara Kannada Landslide: ಶಿರೂರು ಗುಡ್ಡ ಕುಸಿತ; ಅಖಾಡಕ್ಕಿಳಿದ ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ ಟೀಂ
ಉಡುಪಿಯಲ್ಲಿ ಮನೆ ನೆಲಸಮ, ಸೋಮೇಶ್ವರದಲ್ಲಿ ಗುಡ್ಡ ಕುಸಿತ
ಉಡುಪಿ ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗುತ್ತಿದ್ದು, ಕಟ್ಟೆಗುಡ್ಡೆ ಎಂಬಲ್ಲಿ ಮನೆಯೊಂದು ಕುಸಿದು ಬಿದ್ದಿದೆ. ಕಡೆಕಾರು ಪಂಚಾಯತ್‌ನ ಶಾರದ ಪೂಜಾರ್ತಿ ಎಂಬುವವರ ಮನೆ ನೆಲಸಮವಾಗಿದೆ. ಸುಮಾರು 30 ವರ್ಷ ಹಳೆಯದಾದ ಮನೆಯಲ್ಲಿ ಒಟ್ಟು 10 ಮಂದಿ ವಾಸಿಸುತ್ತಿದ್ದರು. ಮಣ್ಣಿನ ಗಾರೆ ಮಾಡಿ ಮನೆ ನಿರ್ಮಾಣ ಮಾಡಿದ್ದು, ಮನೆ ಕುಸಿಯುವ ಮೊದಲೇ ಓಡಿ ಹೋಗಿದ್ದರಿಂದ ಅಪಾಯ ತಪ್ಪಿದೆ. ಮನೆ ಬೀಳುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಉಡುಪಿಯ ಬೈಂದೂರು ತಾಲೂಕಿನ ಪ್ರಸಿದ್ಧ ಪ್ರವಾಸಿತಾಣಕ್ಕೆ ಗುಡ್ಡ ಕುಸಿತದ ಭೀತಿ ಎದುರಾಗಿದೆ. ಭಾರಿ ಮಳೆಯಿಂದಾಗಿ ಬೈಂದೂರು ತಾಲೂಕಿನ ಪಡುವರಿ ಗ್ರಾಮ ಪಂಚಾಯತ್ ಸೋಮೇಶ್ವರ ಗುಡ್ಡ ಕುಸಿಯುತ್ತಿದೆ. ಗುಡ್ಡದ ಮೇಲೆ ಖಾಸಗಿಯವರ ಅನಧೀಕೃತ ಕಟ್ಟಡ ನಿರ್ಮಾಣವಾಗಿದೆ. ಕಟ್ಟಡಕ್ಕೆ ಸಂಪರ್ಕ ಕಲ್ಪಿಸಲು ಗುಡ್ಡ ಕೊರೆದು ರಸ್ತೆ ನಿರ್ಮಿಸಿದ್ದಾರೆ. ಯಾವುದೇ ಸ್ಥಳೀಯ ಪರವಾನಿಗೆ ಇಲ್ಲದೆ ಕಟ್ಟಡ ನಿರ್ಮಾಣ ಮಾಡಿರುವ ಆರೋಪವಿದೆ. ನಿರಂತರ ಮಳೆಯಿಂದಾಗಿ ನಿರ್ಮಾಣ ಹಂತದಲ್ಲಿರುವ ಕಟ್ಟಡ ಬಳಿ ಗುಡ್ಡ ಕುಸಿತ ಉಂಟಾಗಿದೆ. ಹೀಗಾಗಿ ಸೋಮೇಶ್ವರ ಬೀಚ್ ರಸ್ತೆ ಬಂದ್ ಮಾಡಿದ್ದಾರೆ. ಸುಮಾರು 30 ಮನೆಗಳಿಗೆ ಸಂಪರ್ಕವೇ ಇಲ್ಲದಂತಾಗಿದೆ. ಗುಡ್ಡ ಸಂಪೂರ್ಣ ಕುಸಿದರೆ ಬೈಂದೂರು ಪ್ರಸಿದ್ಧ ಪ್ರವಾಸಿ ತಾಣ ಕಣ್ಮರೆಯಾಗಲಿದೆ.
ಪಶ್ಚಿಮ ಘಟ್ಟದಲ್ಲೂ ಮಳೆ ಅಬ್ಬರ
ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಳೆ ಅಬ್ಬರ ಮುಂದುವರಿದಿದ್ದು, ಬೆಳಗಾವಿ ಜಿಲ್ಲೆಯ ನದಿ, ಹಳ್ಳಗಳು ತುಂಬಿ ಹರಿಯುತ್ತಿದೆ. ಖಾನಾಪುರ ತಾಲೂಕಿನ ಹೆಮ್ಮಡಗಾ ಬಳಿ ಅಪಾಯದ ಮಟ್ಟ ಮೀರಿ ಹಾಲತ್ರಿ ಹಳ್ಳ ಹರಿಯುತ್ತಿದೆ. ಸೇತುವೆ ಬಂದ್ ಆಗಿದ್ದರಿಂದ ಇಪ್ಪತ್ತೈದು ಗ್ರಾಮಗಳಿಗೆ ಸಂಪರ್ಕ ಕಡಿತಗೊಂಡಿದೆ. ಸೇತುವೆಗೆ ತಡೆಗೋಡೆ ಇಲ್ಲದೇ ಜೀವ ಕೈಯಲ್ಲಿ ಹಿಡಿದು ಸಾಗುವಂತಾಗಿದೆ. ರಾತ್ರಿ ವೇಳೆ ಸ್ವಲ್ಪ ನೀರು ಸೇತುವೆ ಮೇಲಿದ್ದರೂ ಹಳ್ಳಕ್ಕೆ ಬೀಳುವ ಸಾಧ್ಯತೆ ಇದೆ.
ಸುತ್ತೂರು ಸೇತುವೆ ಮುಳುಗಡೆ
ಮೈಸೂರು – ಸುತ್ತೂರು ಗ್ರಾಮಕ್ಕೆ ಸಂಪರ್ಕ ಕೇಂದ್ರವಾಗಿದ್ದ ಸೇತುವೆ ಮುಳುಗಡೆ ಆಗಿದೆ. ಬೀಚನಹಳ್ಳಿಯ ಕಬಿನಿ ಡ್ಯಾಂ ಭರ್ತಿಯಾದ ಹಿನ್ನೆಲೆಯಲ್ಲಿ 70 ಸಾವಿರ ಕ್ಯುಸೆಕ್ ನೀರು ಬಿಡುಗಡೆ ಮಾಡಲಾಗಿತ್ತು. ಹೀಗಾಗಿ ನಂಜನಗೂಡು ತಾಲೂಕಿನ ಸುತ್ತೂರು ಗ್ರಾಮದ ಸೇತುವೆ ಮುಳುಗಡೆಯಾಗಿ, ಸುತ್ತೂರು ಮಾರ್ಗವಾಗಿ ಮೈಸೂರಿಗೆ ಸಂಪರ್ಕ ಸ್ಥಗಿತಗೊಂಡಿದೆ. ಸೇತುವೆ ಮೇಲೆ ಕಪಿಲಾ ನದಿ ಉಕ್ಕಿ ಹರಿಯುತ್ತಿದೆ.
ಮರ ಬಿದ್ದು ರೈಲು ಸಂಚಾರದಲ್ಲಿ ವ್ಯತ್ಯಯ
ಶಿವಮೊಗ್ಗದ ಹೊಸನಗರ ತಾಲೂಕಿನ ಅರಸಾಳು ಬಟಾಣಿಜೆಡ್ಡು ಬಳಿ ಮರ ಬಿದ್ದು ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು. ಭಾರಿ ಮಳೆಗೆ ಬೃಹತ್ ಮರವೊಂದು ರೈಲ್ವೆ ಹಳಿಗಳ ಮೇಲೆ ಬಿದ್ದಿದೆ. ಜತೆಗೆ ವಿದ್ಯುತ್ ತಂತಿಗಳಿಗೂ ಸಹ ಹಾನಿಯಾಗಿದೆ. ಇದರಿಂದಾಗಿ ತಾಳಗುಪ್ಪದಿಂದ ಬೆಂಗಳೂರಿಗೆ ಹೊರಟಿದ್ದ ರೈಲು ಮರಬಿದ್ದ ಕಾರಣ ಅರಸಾಳು ಬಳಿಯ ಬಟಾಣಿಜೆಡ್ಡು ಬಳಿ ನಿಲ್ಲುವಂತಾಯಿತು. 7.15ಕ್ಕೆ ಶಿವಮೊಗ್ಗ ತಲುಪಬೇಕಿದ್ದ ರೈಲು 9 ಗಂಟೆಗೆ ಆಗಮಿಸಿತು. ಸುಮಾರು ಎರಡು ತಾಸು ಕಾದ ಪ್ರಯಾಣಿಕರು ಹೈರಾಣಾದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ