ಮೈಸೂರು/ಕೊಡಗು: ಕಪಿಲಾ ನದಿ (Kapila River) ತೀರದಲ್ಲೀಗ ಪ್ರವಾಹದ ಭೀತಿ ಎದುರಾಗಿದೆ. ಕಬಿನಿ ಜಲಾನಯನ ಪ್ರದೇಶದಲ್ಲಿ ಭರ್ಜರಿ (Karnataka Rain) ಮಳೆಯಾಗುತ್ತಿದ್ದು, ವಾಡಿಕೆಗಿಂತ ಕಬಿನಿ ಜಲಾಶಯವು ಬಹುಬೇಗ ಭರ್ತಿಯಾಗಿದೆ. ಮೈಸೂರಿನ ಎಚ್.ಡಿ ಕೋಟೆ ತಾಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯದಿಂದ ನದಿಗೆ ಭಾರಿ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಲಾಗುತ್ತಿದೆ.
ಕೇರಳದ ವೈನಾಡಿನಲ್ಲೂ ಉತ್ತಮ ಮಳೆಯಾದ ಪರಿಣಾಮ ಒಳಹರಿವಿನಲ್ಲಿ ಗಣನೀಯ ಏರಿಕೆಯಾಗಿದೆ. ಹೀಗಾಗಿ ಸುಮಾರು 20ಸಾವಿರಕ್ಕೂ ಕ್ಯುಸೆಕ್ ನೀರು ನದಿಗೆ ಬಿಡುಗಡೆ ಮಾಡಲಿದ್ದಾರೆ. ಹೀಗಾಗಿ ಧ್ವನಿ ವರ್ಧಕಗಳ ಮೂಲಕ ನದಿ ಪಾತ್ರದ ಜನರಿಗೆ ಎಚ್ಚರಿಕೆಯ ಸಂದೇಶವನ್ನು ರವಾನೆ ಮಾಡಲಾಗುತ್ತಿದೆ.
ಹುಲ್ಲಹಳ್ಳಿ ಗ್ರಾ.ಪಂ ಕಾರ್ಯಾಲಯ ವತಿಯಿಂದ ಪ್ರಚಾರ ಕಾರ್ಯ ನಡೆಯುತ್ತಿದೆ. ಗ್ರಾ.ಪಂ. ಸಿಬ್ಬಂದಿ ನದಿ ಪಾತ್ರದಲ್ಲಿರುವ ಗ್ರಾಮಗಳ ಜನರಿಗೆ ಎಚ್ಚರಿಕೆ ನೀಡುತ್ತಿದ್ದಾರೆ. ನದಿ ತೀರಕ್ಕೆ ಹೋಗದಂತೆ, ಜನ ಜಾನುವಾರುಗಳ ಸುರಕ್ಷಿತವಾಗಿಸಲು ಸೂಚನೆ ನೀಡಲಾಗಿದೆ. ಕಪಿಲಾ ನದಿ ಪ್ರವಾಹಕ್ಕೆ ಸಿಲುಕುವ ನಂಜನಗೂಡು ತಾಲೂಕಿನ ಹೆಜ್ಜಿಗೆ, ಬೊಕ್ಕಹಳ್ಳಿ, ಸುತ್ತೂರು, ಹೊಸಕೋಟೆ ಗ್ರಾಮಗಳಿಗೆ ಟಾಂಟಾಂ ಮೂಲಕವೂ ಮುನ್ನೆಚ್ಚರಿಕೆ ವಹಿಸುವಂತೆ ತಿಳಿಸಲಾಗಿದೆ.
ಇದನ್ನೂ ಓದಿ: Rain News: ಭಾರಿ ಮಳೆಯಿಂದ ಆಗುಂಬೆ ಘಾಟಿಯಲ್ಲಿ ಗುಡ್ಡ ಕುಸಿತ
ಕೊಡಗಿನಲ್ಲೂ ಉಕ್ಕಿ ಹರಿಯುತ್ತಿರುವ ಹಳ್ಳ-ಕೊಳ್ಳಗಳು
ಕೊಡಗು ಜಿಲ್ಲೆಯಲ್ಲಿ ವರುಣನ ಆರ್ಭಟ ತೀವ್ರಗೊಂಡಿದೆ. ಮಳೆಯಿಂದ ನದಿ, ತೊರೆ, ಹಳ್ಳ-ಕೊಳ್ಳಗಳು ಉಕ್ಕಿ ಹರಿಯುತ್ತಿದೆ. ಹಾರಂಗಿ ಜಲಾಶಯದ ಒಳ ಹರಿವಿನ ಪ್ರಮಾಣದಲ್ಲಿ ಗಣನೀಯ ಏರಿಕೆಯಾಗಿದೆ. ಒಳಹರಿವಿನ ಪ್ರಮಾಣ 9600 ಕ್ಯೂಸೆಕ್ಸ್‌ಗೆ ಏರಿಕೆ ಹಿನ್ನೆಲೆ ಜಲಾಶಯದಿಂದ ನದಿಗೆ ನೀರು ಹರಿಸಲು ಕಾವೇರಿ ನೀರಾವರಿ ನಿಗಮ ಮುಂದಾಗಿದೆ. ಹೀಗಾಗಿ ಹಾರಂಗಿ ಹಾಗೂ ಕಾವೇರಿ ಜಲಾನಯನ ಪ್ರದೇಶದ ಜನರಿಗೆ ಮುನ್ನೆಚ್ಚರಿಕೆ ಮುನ್ಸೂಚನೆ ನೀಡಲಾಗಿದೆ. ಯಾವುದೇ ಕ್ಷಣದಲ್ಲಿ ನದಿಗೆ ನೀರು ಹರಿಸುವ ಹಿನ್ನೆಲೆಯಲ್ಲಿ ನದಿ ಪಾತ್ರಗಳಲ್ಲಿ ಅಲರ್ಟ್ ಘೋಷಣೆ ಮಾಡಲಾಗಿದೆ. ಹಾರಂಗಿ ಪುನರ್ವಸತಿ ವಿಭಾಗದ ಕಾರ್ಯಪಾಲಕ ಅಭಿಯಂತರ ಪುಟ್ಟಸ್ವಾಮಿ ಮಾಹಿತಿ ನೀಡಿದ್ದಾರೆ.
ಕಾರವಾರದಲ್ಲಿ ನೆರೆ ಪರಿಸ್ಥಿತಿ
ಉತ್ತರಕನ್ನಡ ಜಿಲ್ಲೆಯಲ್ಲಿ ಮಳೆ ಅಬ್ಬರ ಮುಂದುವರಿದಿದ್ದು, ಮಳೆಯಿಂದಾಗಿ ಕಾರವಾರ ತಾಲೂಕಿನ ಚೆಂಡಿಯಾ ಗ್ರಾಮದ ವ್ಯಾಪ್ತಿಯಲ್ಲಿ ನೆರೆ ಪರಿಸ್ಥಿತಿ ಉಂಟಾಗಿದೆ. ಶನಿವಾರ ತಡರಾತ್ರಿಯಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿರುವುದರಿಂದ ನೆರೆ ಪರಿಸ್ಥಿತಿ ಇದೆ. ಚೆಂಡಿಯಾ, ಪೋಸ್ಟ್ ಚೆಂಡಿಯಾ, ಇಳಸೂರು ಭಾಗದಲ್ಲಿ ಮನೆಗಳು, ರಸ್ತೆಗಳು ಜಲಾವೃತಗೊಂಡಿದೆ.
ನಿರಂತರ ಮಳೆ ಸುರಿಯುತ್ತಿರುವ ಪರಿಣಾಮ ಗ್ರಾಮದ ಸಂಪರ್ಕ ರಸ್ತೆಯು ಮುಳುಗಡೆಯಾಗಿದೆ. ಕಳೆದ 4 ದಿನದ ಹಿಂದೆ ಇದೇ ರೀತಿ ಜಲಾವೃತವಾಗಿ ನಿವಾಸಿಗಳು ಸಮಸ್ಯೆ ಅನುಭವಿಸಿದ್ದರು, ಇದೀಗ ಕಾರವಾರ ತಾಲ್ಲೂಕಿನಾದ್ಯಂತ ಮಳೆ ಹೆಚ್ಚಾದ ಪರಿಣಾಮ ಮನೆಗಳಿಗೆ ನೀರು ನುಗ್ಗುತ್ತಿದೆ.
ಚಿಕ್ಕಮಗಳೂರಲ್ಲಿ ಪ್ರವಾಸಿಗರ ಮೇಲೆ ಸ್ಥಳೀಯ ಬಾಡಿಗೆ ಜೀಪ್ ಚಾಲಕರ ದರ್ಪ
ಪೊಲೀಸರ ಖಡಕ್ ಎಚ್ಚರಿಕೆ ನಡುವೆಯೂ ಚಿಕ್ಕಮಗಳೂರಲ್ಲಿ ಪುಂಡರ ಪುಂಡಾಟ ನಿಂತಿಲ್ಲ. ಪ್ರವಾಸಿಗರ ಮೇಲೆ ಸ್ಥಳೀಯ ಬಾಡಿಗೆ ಜೀಪ್ ಚಾಲಕರು ದರ್ಪ ತೋರುತ್ತಿರುವ ಪ್ರಕರಣ ಹೆಚ್ಚುತ್ತಿದೆ. ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿ ರಸ್ತೆಯಲ್ಲಿ ಕುಡಿದು ವಾಹನ ಚಲಾಯಿಸಿದ್ದಲ್ಲದೇ ಬೆಂಗಳೂರಿನಿಂದ ಬಂದ ಪ್ರವಾಸಿಗರ ಕಾರಿಗೆ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಪ್ರವಾಸಿಗರ ಕಾರು ಜಖಂಗೊಂಡಿದೆ. ಈ ಬಗ್ಗೆ ಪ್ರಶ್ನಿಸಿದ್ದರೆ ಅಶ್ಲೀಲ, ಅವಾಚ್ಯ ಶಬ್ಧಗಳಿಂದ ಕೆಲ ಜೀಪು ಚಾಲಕರು ನಿಂದಿಸುತ್ತಿದ್ದಾರೆ. ನಾವು ಲೋಕಲ್ ಏನು ಮಾಡೋಕೆ ಆಗೋಲ್ಲ ಹೋಗು ಎಂದು ಆವಾಜ್ ಹಾಕ್ತಾರೆ ಎಂದು ಸ್ಥಳೀಯ ಜೀಪು ಚಾಲಕರ ವರ್ತನೆಗೆ ಪ್ರವಾಸಿಗರು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ