ಚಿಕ್ಕಮಗಳೂರು/ಮಂಗಳೂರು: ಚಿಕ್ಕಮಗಳೂರಿನಲ್ಲಿ ಗಾಳಿ-ಮಳೆ ಅಬ್ಬರಕ್ಕೆ (Karnataka Rain) ಬೃಹತ್ ಮರವೊಂದು ರಸ್ತೆಗುರುಳಿದೆ. ಪರಿಣಾಮ ಮಾಗುಂಡಿ-ಬಾಳೆಹೊನ್ನೂರು ಮಾರ್ಗ ಬಂದ್ ಆಗಿದೆ. ಎನ್ಆರ್ ಪುರ ತಾಲೂಕಿನಿಂದ ಕಳಸ ತಾಲೂಕಿಗೆ ಈ ಮಾರ್ಗ ಸಂಪರ್ಕ ಕಲ್ಪಿಸಲಿದೆ. ಮರ ಬಿದ್ದ ಪರಿಣಾಮ ಶನಿವಾರ ಬೆಳ್ಳಂಬೆಳಗ್ಗೆಯೇ ಬಾಳೆಹೊನ್ನೂರು-ಕಳಸ ರಸ್ತೆ, ಹೊರನಾಡಿಗೆ ಹೋಗಿ-ಬರುವ ಮಾರ್ಗವೂ ಬಂದ್ ಆಗಿತ್ತು. ಸುಮಾರು ಒಂದು ಗಂಟೆ ಕಾಲ ಟ್ರಾಫಿಕ್ ಜಾಮ್ ಉಂಟಾಗಿದ್ದರಿಂದ ಸ್ಥಳೀಯರೇ ಮರ ತೆರವು ಮಾಡಿದರು.
ಚಾರ್ಮಾಡಿಯಲ್ಲಿ ಮತ್ತೆ ಆತಂಕ ಮೂಡಿಸಿದ ರಸ್ತೆ ಬಿರುಕು
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಹೆದ್ದಾರಿಯಲ್ಲಿ ಮತ್ತೆ ರಸ್ತೆ ಬಿರುಕು ಬಿಡುವ ಆತಂಕ ಹೆಚ್ಚಿದೆ. ರಸ್ತೆ ಬಿರುಕು ಕಾಣಿಸಿಕೊಳ್ಳದಂತೆ ಮರೆಮಾಚಲು ಅಧಿಕಾರಿಗಳ ಯತ್ನಿಸುತ್ತಿದ್ದಾರೆ. ಹೆದ್ದಾರಿಯ ಹಲವು ತಿರುವುಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಕಾಂಕ್ರೀಟ್ ಮೂಲಕ ತೇಪೆ ಹಚ್ಚುತ್ತಿದ್ದಾರೆ. ಕೆಲವೇ ದಿನಗಳ ಹಿಂದೆ ನಡೆದಿರುವ ಕೋಟಿ ವೆಚ್ಚದ ಕಾಮಗಾರಿಯು, ಮಳೆಯಿಂದ ಹಾನಿಯಾಗಿದೆ.
ಉಕ್ಕಿ ಹರಿದ ತುಂಗಾಭದ್ರಾ ನದಿ; ಅಂಗಡಿಗಳು ಮುಳುಗಡೆ
ಮಲೆನಾಡಿನಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ತುಂಗಾಭದ್ರಾ ನದಿ ಪಾತ್ರದಲ್ಲಿ ನೀರಿನ ಮಟ್ಟ ಹೆಚ್ಚಿದೆ. ದಾವಣಗೆರೆ ಜಿಲ್ಲೆಯ ಉಕ್ಕಡಗಾತ್ರಿ ಸಮೀಪ ತುಂಗಾಭದ್ರಾ ನದಿ ಉಕ್ಕಿ ಹರಿದಿದೆ. ಉಕ್ಕಡಗಾತ್ರಿ ಸಮೀಪದ ಸ್ನಾನಘಟ್ಟದವರೆಗು ನೀರು ನುಗ್ಗಿದ್ದು, ಹತ್ತಾರು ಪೂಜಾಸಾಮಾಗ್ರಿ ಅಂಗಡಿಗಳು ಮುಳುಗಡೆಯಾಗಿವೆ. ಉಕ್ಕಡಗಾತ್ರಿ ಆಗಮಿಸುವ ಭಕ್ತರಿಗೆ ದೇವಸ್ಥಾನದ ಟ್ರಸ್ಟ್‌ನಿಂದ ತುಂಗಾಭದ್ರಾ ನದಿ ಪಾತ್ರಕ್ಕೆ ಸ್ನಾನ ಸೇರಿದಂತೆ ಇತರೇ ಕಾರಣಗಳಿಗೆ ನೀರಿಗೆ ಇಳಿಯದಂತೆ ಸೂಚನೆ ನೀಡಿದೆ.
ಮಳೆಯಿಂದಾಗಿ ಸೋರುತ್ತಿರುವ ಸರ್ಕಾರಿ ಆಸ್ಪತ್ರೆ
ವಿಜಯನಗರ ಜಿಲ್ಲೆಯಲ್ಲಿ ರಾತ್ರಿಯಿಡಿ ಜಿಟಿ ಜಿಟಿ ಮಳೆಯಿಂದಾಗಿ ಸರ್ಕಾರಿ ಆಸ್ಪತ್ರೆ ರೋಗಿಗಳು ರಾತ್ರಿಯಿಡಿ ಜಾಗರಣೆ ಮಾಡಬೇಕಾಯಿತು. ಮಳೆಯಿಂದಾಗಿ ಕೊಟ್ಟೂರು ತಾಲೂಕಿನ ಸರ್ಕಾರಿ ಆಸ್ಪತ್ರೆ ಸೋರುತ್ತಿದೆ. ಜನ ಸ್ಪಂದನ ಕಾರ್ಯಕ್ರಮ ಮಾಡಿದ್ದ ಡಿಸಿ ದಿವಾಕರ್ ಆಸ್ಪತ್ರೆಗೆ ಭೇಟಿ ನೀಡಬಹುದು ಎಂದು ಸಿಬ್ಬಂದಿ ಸ್ವಚ್ಚತೆ ಮಾಡಿದ್ದರು. ಆದರೆ ರಾತ್ರಿಯಿಡಿ ಜಿಟಿಜಿಟಿ ಮಳೆಯಿಂದ ರೋಗಿಗಳು ಮಲಗುವ ಬೆಡ್ ಮೇಲೆ ನೀರು ಸೋರಿದೆ. ಇದರ ಮಧ್ಯೆ ರಾತ್ರಿಯಿಡೀ ಆಸ್ಪತ್ರೆಯಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡು ಪರದಾಡಬೇಕಾಯಿತು. ಆಸ್ಪತ್ರೆಯ ಶೌಚಾಲಯ ಕೂಡಾ ಬ್ಲಾಕ್ ಆಗಿದೆ ಎಂದು ಆಸ್ಪತ್ರೆ ಅವ್ಯವಸ್ಥೆ ಸರಿಪಡಿಸದ ಇಲಾಖೆಯ ವಿರುದ್ಧ ರೋಗಿಗಳು ಹಿಡಿಶಾಪ ಹಾಕಿದರು.
ಮೂರು ಸಂಪರ್ಕ ಸೇತುವೆಗಳು ಮುಳುಗಡೆ
ಮಹಾರಾಷ್ಟ್ರ ಮತ್ತು ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಳೆ ಮುಂದುವರಿದಿದ್ದು, ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯ ಮೂರು ಸಂಪರ್ಕ ಸೇತುವೆಗಳು ಮುಳುಗಡೆಯಾಗಿವೆ. ಕೃಷ್ಣಾ ವೇದಗಂಗಾ ಹಾಗೂ ದೂದಗಂಗಾ ನದಿ ಮೈದುಂಬಿ ಹರಿಯುತ್ತಿದ್ದು, ನಿಪ್ಪಾಣಿ ತಾಲೂಕಿನ ಕುನ್ನೂರ-ಬಾರವಾಡ ಸಂಪರ್ಕಿಸುವ ಸೇತುವೆ ಜಲಾವೃತಗೊಂಡಿದೆ. ವೇದಗಂಗಾ ನದಿಗೆ ಅಡ್ಡಲಾಗಿ ಇರುವ ಕೆಳ ಹಂತದ ಸೇತುವೆ ಮುಳುಗಡೆಯಾಗಿದೆ. ದೂದಗಂಗಾ ನದಿಯಿಂದ ಕಾರದಗಾ-ಬೋಜ್, ಕುನ್ನೂರ-ಭೋಜವಾಡಿ ಸಂಪರ್ಕಿಸುವ ಸೇತುವೆ ಜಲಾವೃತವಾಗಿದೆ. ನದಿಗೆ ಇಳಿಯದಂತೆ ಬೆಳಗಾವಿ ಜಿಲ್ಲಾಡಳಿತ ಮನವಿ ಮಾಡಿದೆ.
ಭಾರೀ ಮಳೆಗೆ ಕುಸಿದ ಸೇತುವೆ ಬದಿ ಮಣ್ಣು
ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕಡವಾಡದ ಬೇಳೂರು ಗ್ರಾಮದ ಸಂಪರ್ಕ ಸೇತುವೆ ಬದಿಯ ಮಣ್ಣು ಕುಸಿದಿದೆ. ಇನ್ನೂ ಉದ್ಘಾಟನೆಯಾಗಬೇಕಿದ್ದ ನೂತನ ಸೇತುವೆ ಧಾರಾಕಾರ ಮಳೆಗೆ ಸೇತುವೆಯ ಎರಡೂ ಭಾಗದ ಮಣ್ಣು, ಕಾಂಕ್ರೀಟ್ ಕುಸಿದಿದೆ. ಸುಮಾರು 40 ಲಕ್ಷ ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆಯಿಂದ ಕಿರುಸೇತುವೆ ನಿರ್ಮಾಣವಾಗಿತ್ತು. ಆದರೆ ಕರಾವಳಿಯಲ್ಲಿ ಸುರಿಯುತ್ತಿರುವ ಮಳೆಗೆ ಸೇತುವ ಪಕ್ಷದ ಗುಡ್ಡದಲ್ಲಿ ಹೆಚ್ಚು ನೀರು ಹರಿದು ಗುಡ್ಡ ಕುಸಿದಿದ್ದು, ಗುಡ್ಡದ ಮಣ್ಣು ಸೇತುವೆ ಭಾಗಕ್ಕೆ ಬಿದ್ದಿದೆ. ಪರಿಣಾಮ ಸೇತುವೆಯ ಎರಡೂ ಭಾಗದ ಸಂಪರ್ಕಕ್ಕೆ ಹಾಕಿದ್ದ ಮಣ್ಣು ಹಾಗೂ ಕಾಂಕ್ರೀಟ್ ಕಿತ್ತುಹೋಗಿದೆ. ಇದರಿಂದಾಗಿ ವಾಹನ ಸಂಚಾರಕ್ಕೆ ಅವ್ಯವಸ್ಥೆ ಉಂಟಾಗಿದ್ದು ಗ್ರಾಮಸ್ಥರು ಆತಂಕಗೊಳ್ಳುವಂತಾಗಿದೆ.
ಮಳೆ ನಿಂತರೂ ಮತ್ತೆ ಭೂ ಕುಸಿತದ ಆತಂಕ!
ಮಳೆ ನಿಂತರೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಭೂ ಕುಸಿತದ ಆತಂಕ ಕಡಿಮೆ ಆಗಿಲ್ಲ. ಮಂಗಳೂರು-ಸೋಲಾಪುರ ರಾಷ್ಟ್ರೀಯ ಹೆದ್ದಾರಿ 169ರ ಸಮೀಪದಲ್ಲೇ ಭಾರೀ ಗುಡ್ಡ ಕುಸಿತ ಉಂಟಾಗಿದೆ. ಮಂಗಳೂರಿನ ವಾಮಂಜೂರು ಕೆತ್ತಿಕಲ್ ಬಳಿ ಭೂ ಕುಸಿತದ ಭೀತಿ ಎದುರಾಗಿದೆ. ಚತುಷ್ಪಥ ಹೆದ್ದಾರಿ ಕಾಮಗಾರಿಗಾಗಿ ಗುಡ್ಡ ಕೊರೆದ ಪರಿಣಾಮ ಹೆದ್ದಾರಿಗೆ ತಾಗಿಕೊಂಡೇ ಇರೋ ಗುಡ್ಡದಲ್ಲಿ ಆಗಾಗ್ಗೆ ಮಣ್ಣು ಕುಸಿಯುತ್ತಿದೆ. ಗುಡ್ಡದ ತುದಿ ಭಾಗದಲ್ಲಿ ಭಾರೀ ಗಾತ್ರದ ಬಂಡೆಗಳು ಉರುಳಿ ಬೀಳುವ ಆತಂಕ ಇದೆ. ಇತ್ತ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಜಿಲಮೊಗರು ಸಮೀಪ ಗಾಳಿ ಸಹಿತ ಮಳೆಯಾಗಿದೆ. ಏಕಾಎಕಿ ಬಂದ ಗಾಳಿಗೆ ಅಂಗಡಿಯ ಶಿಟ್‌ಗಳು ಹಾರಿ ಹೋಗಿದ್ದವು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ