ಶಿವಮೊಗ್ಗ: ರಾಜ್ಯದ ವಿವಿಧ ಭಾಗಗಳಲ್ಲಿ ಮಳೆಯ ಅಬ್ಬರ ಮುಂದುವರಿದೆ. ಜತೆಗೆ ಅಲ್ಲಲ್ಲಿ ಅವಾಂತರವೂ ಸೃಷ್ಟಿಯಾಗಿದೆ. ಮಲೆನಾಡಲ್ಲಿ ಸುರಿದ ಧಾರಾಕಾರ ಮಳೆಯಿಂದ ಶಿವಮೊಗ್ಗದ ಶಿಕಾರಿಪುರದಲ್ಲಿ ಮನೆ ಕುಸಿದು ಬಿದ್ದು ನಾಲ್ವರು ಗಾಯಗೊಂಡಿದ್ದಾರೆ (Karnataka Rain).
ಶಿಕಾರಿಪುರ ತಾಲೂಕಿನ ಕಪ್ಪನಹಳ್ಳಿ ಗ್ರಾಮದಲ್ಲಿ ಮಳೆಯಿಂದಾಗಿ ಶಿವಮೂರ್ತಿ ಎಂಬುವರಿಗೆ ಸೇರಿದ ಮನೆ ಕುಸಿದು ಬಿದ್ದು ನಾಲ್ಕು ಮಂದಿಗೆಗೆ ಗಾಯಗಳಾಗಿದ್ದು, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿವಮೂರ್ತಿ, ಪತ್ನಿ ಸೇರಿ ಇಬ್ಬರು ಮಕ್ಕಳಿಗೆ ಗಾಯಗಳಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿರುವ ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿದ ಸಂಸದ ಬಿ.ವೈ.ರಾಘವೇಂದ್ರ ಆರೋಗ್ಯ ವಿಚಾರಿಸಿದ್ದಾರೆ.
ಹಾಸನಕ್ಕೆ ಇಂದು ಕುಮಾರಸ್ವಾಮಿ, ಆರ್.ಅಶೋಕ್ ಭೇಟಿ
ಹಾಸನ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮತ್ತು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಇಂದು (ಜುಲೈ 21) ಹಾಸನಕ್ಕೆ ಭೇಟಿ ನೀಡಿ ಮಳೆ ಹಾನಿಯನ್ನು ಪರಿಶೀಲಿಸಲಿದ್ದಾರೆ. ಕೇಂದ್ರ ಸಚಿವರಾದ ಬಳಿಕ ಮೊದಲ ಬಾರಿಗೆ ಹಾಸನಕ್ಕೆ ಎಚ್.ಡಿ.ಕುಮಾರಸ್ವಾಮಿ ಭೇಟಿ ನೀಡಲಿದ್ದಾರೆ. ಲೋಕಸಭಾ ಚುನಾವಣೆ ನಂತರ ಮೊದಲ ಬಾರಿಗೆ ಎಚ್‌ಡಿಕೆ ತವರಿಗೆ ಆಗಮಿಸಲಿದ್ದು, ಸಕಲೇಶಪುರ ತಾಲೂಕಿನ ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಲಿದ್ದಾರೆ. ಮಳೆಯಿಂದ ರಸ್ತೆ ಕುಸಿದಿರುವ, ಹಾನಿಯಾಗಿರುವ ಪ್ರದೇಶಗಳನ್ನು ಪರಿಶೀಲಿಸಲಿದ್ದಾರೆ.
ಎಲ್ಲಿಗೆಲ್ಲ ಭೇಟಿ?
ಸಕಲೇಶಪುರ ತಾಲೂಕಿನ ಕೊಲ್ಲಹಳ್ಳಿ, ದೊಡ್ಡತಪ್ಲು ಸೇರಿದಂತೆ ಅನೇಕ ಭಾಗಗಳಿಗೆ ಎಚ್‌ಡಿಕೆ ಭೇಟಿ ನೀಡಲಿದ್ದಾರೆ. ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಆಗಿರೋ ಅವಾಂತರ, ಶಿರಾಡಿ ಘಾಟ್‌ನಲ್ಲಾದ ಹಾನಿಯನ್ನು ವೀಕ್ಷಿಸಲಿದ್ದಾರೆ. ಬಳಿಕ ಮಳೆ ಅನಾಹುತದ ಸಂಕಷ್ಟದಲ್ಲಿರೋ ರೈತರ ಸಮಸ್ಯೆ ಆಲಿಸಲಿದ್ದಾರೆ. ಜಿಲ್ಲೆಗೆ ಆಗಮಿಸಲಿರು ತಮ್ಮ ನಾಯಕನ್ನು ಸ್ವಾಗತಿಸಲು ಜೆಡಿಎಸ್ ಕಾರ್ಯಕರ್ತರು ಸಜ್ಜಾಗಿದ್ದಾರೆ.
ಹಾಸನ ಜಿಲ್ಲೆಯಲ್ಲಿ ಆರ್.ಅಶೋಕ್ ಪ್ರವಾಸ
ಹಾಸನ ಜಿಲ್ಲೆಯಲ್ಲಿ ಇಂದು ವಿರೋಧಪಕ್ಷದ ನಾಯಕ ಆರ್.ಅಶೋಕ್ ಕೂಡ ಪ್ರವಾಸ ಕೈಗೊಳ್ಳಲಿದ್ದಾರೆ. ಅವರು ಹಾಸನ ಜಿಲ್ಲೆಯ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ. ಸಕಲೇಶಪುರ ತಾಲೂಕಿನ ಹಲವು ಪ್ರದೇಶಗಳಿಗೆ ತೆರಳಿ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. ಜಿಲ್ಲಾಡಳಿತದ ಅಧಿಕಾರಿಗಳೊಂದಿಗೆ ಪರಿಹಾರ ಕ್ರಮದ ಬಗ್ಗೆ ಚರ್ಚಿಸಲಿರುವ ಅಶೋಕ್ ಅವರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತವಾಗಿರೋ ಸ್ಥಳಗಳ ಪರಿಶೀಲನೆ ನಡೆಸಲಿದ್ದಾರೆ.
ರಸ್ತೆ ಪಕ್ಕದಲ್ಲಿಯೇ ನಿಂತ ನೂರಾರು ಲಾರಿಗಳು
ಬೆಳಗಾವಿ: ಪಶ್ಚಿಮ ಘಟ್ಟಗಳಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಸೇತುವೆ ಶಿಥಿಲವಾಗಿದ್ದು, ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಜಾಂಬೋಟಿ ಬಳಿ ಲಾರಿಗಳನ್ನು ತಡೆದು ನಿಲ್ಲಿಸಲಾಗಿದೆ. ಚೋರ್ಲಾ ಮಾರ್ಗವಾಗಿ ಬೆಳಗಾವಿಗೆ ಬರುವ ವಾಹನಗಳನ್ನು ಅಧಿಕಾರಿಗಳು ತಡೆದಿದ್ದು, ಇದರಿಂದ ಕಳೆದ 24 ಗಂಟೆಗಳಿಂದ ಸರಕು ಹೊತ್ತು ನೂರಾರು ಲಾರಿಗಳು ನಿಂತಲ್ಲಿಯೇ ನಿಂತಿವೆ. ಏಕಾಏಕಿ ಭಾರಿ ವಾಹನಗಳನ್ನು ತಡೆದಿದ್ದರಿಂದ ಲಾರಿ ಚಾಲಕರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ರಸ್ತೆ ಬಂದ್ ಮಾಡುವುದನ್ನು ಅಧಿಕಾರಿಗಳು ಮೊದಲೇ ಹೇಳಬೇಕಿತ್ತು. ಏಕಾಏಕಿ ಬಂದ್ ಮಾಡಿದರೆ ನಾವು ಎಲ್ಲಿಗೆ ಹೋಗಬೇಕು ಎಂದು ಚಾಲಕರು ಪ್ರಶ್ನಿಸಿದ್ದಾರೆ. ಲಾರಿಯಲ್ಲಿರುವ ಸರಕೆಲ್ಲ ಮಳೆಯಲ್ಲಿ ನೆನೆದು ಹೋಗುವ ಭೀತಿಯೂ ಚಾಲಕರನ್ನು ಕಾಡುತ್ತಿದೆ.
ಇದನ್ನೂ ಓದಿ: Karnataka Rain : ಗುಡ್ಡ ಕುಸಿತದಿಂದ ಅಂಕೋಲಾ ಹೆದ್ದಾರಿ ಬಂದ್; ಕೊಂಕಣ ರೈಲ್ವೆಯಿಂದ ರೈಲು ವ್ಯವಸ್ಥೆ