ಕಾರವಾರ/ಮಂಗಳೂರು: ಉತ್ತರಕನ್ನಡ ಜಿಲ್ಲೆಯ ಮಲೆನಾಡು ಭಾಗದಲ್ಲಿ ವರುಣಾರ್ಭಟ (Karnataka Rain) ಜೋರಾಗಿದೆ. ಸಿದ್ದಾಪುರ ತಾಲೂಕಿನ ಹಸ್ವಿಗುಳಿಯಲ್ಲಿ ಧಾರಾಕಾರ ಮಳೆಗೆ (Rain News) ಗುಡ್ಡಗಳು ಸಡಿಲಗೊಂಡು ಕುಸಿಯುತ್ತಿದೆ. ಹಸ್ವಿಗುಳಿಯ ವೆಂಕಟರಮಣ ತಿಮ್ಮ ನಾಯ್ಕ, ಸದಾನಂದ ತಿಮ್ಮ ನಾಯ್ಕ ಹಾಗೂ ಪಾರ್ವತಿ ತಿಮ್ಮ ನಾಯ್ಕ ಅವರ ಮನೆಯ ಹಿಂಬದಿಯಲ್ಲಿ ಗುಡ್ಡ ಕುಸಿಯುತ್ತಿದೆ. ಅತಿಯಾದ ಮಳೆಯಿಂದ (Karnataka Weather Forecast) ಗುಡ್ಡ ಕುಸಿಯುತ್ತಿದ್ದು, ಮನೆಗಳಿಗೂ ಹಾನಿಯಾಗುವ ಆತಂಕ ಎದುರಾಗಿದೆ. ಗುಡ್ಡಕುಸಿತದ ಆತಂಕವಿರುವ ಮನೆಗಳ ಹಿಂಭಾಗದಲ್ಲಿ ಯಾರೂ ಓಡಾಡದಂತೆ ತಾಲೂಕಾ ಆಡಳಿತದಿಂದ ಎಚ್ಚರಿಕೆಯನ್ನೂ ನೀಡಿದೆ. ಈಗಾಗಲೇ ಜಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾ ಗುಡ್ಡ ಕುಸಿತದ ಮುನ್ಸೂಚನೆ ನೀಡಿದೆ.
ಇತ್ತ ಗಾಳಿ ಮಳೆಗೆ ಮನೆಯ ಮೇಲೆ ಬೃಹತ್ ಗಾತ್ರದ ಮರ ಬಿದ್ದು, ಮನೆ, ಬೈಕ್ ಸೇರಿ 8ಕ್ಕೂ ಅಧಿಕ ವಿದ್ಯುತ್ ಕಂಬಗಳು ಜಖಂಗೊಂಡಿವೆ. ಉತ್ತರ ಕನ್ನಡದ ಶಿರಸಿಯ ಟಿಪ್ಪು ನಗರದಲ್ಲಿ ಘಟನೆ ನಡೆದಿದೆ. ಮರ ಬಿದ್ದ ಪರಿಣಾಮ ಲಕ್ಷಾಂತರ ರೂಪಾಯಿ ಹಾನಿಯಾಗಿದೆ. ಮೌಲಾನಾ ಎಂಬುವವರಿಗೆ ಸೇರಿದ ಮನೆಗೆ ಹಾನಿಯಾಗಿದೆ. ಕುಟುಂಬದವರು ಮನೆಯಲ್ಲಿದ್ದ ಸಂದರ್ಭದಲ್ಲೇ ಮಧ್ಯರಾತ್ರಿ ಸುಮಾರು 12 ಗಂಟೆ ಸುಮಾರಿಗೆ ಮರ ಧರೆಗುರುಳಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಹೆಸ್ಕಾಂ ಸಿಬ್ಬಂದಿ ಹಾಗೂ ಸ್ಥಳೀಯರು ಸೇರಿ ಮರ ತೆರವು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಧರೆ ಕುಸಿದು ಮಣ್ಣಿನಡಿ ಸಿಲುಕಿದ ಮಕ್ಕಳು
ಮಂಗಳೂರಿನ ಪುತ್ತೂರಿನ ಬನ್ನೂರು ಸಮೀಪದ ಜೈನರಗುರಿಯಲ್ಲಿ ಭಾರೀ ಮಳೆಗೆ ಮನೆ ಮೇಲೆ ಧರೆ ಕುಸಿದು ಇಬ್ಬರು ಮಕ್ಕಳು ಮಣ್ಣಿನಡಿ ಸಿಲುಕಿದ ಘಟನೆ ನಡೆದಿದೆ. ನಸುಕಿನ ಜಾವ ನಿದ್ದೆಯಲ್ಲಿದ್ದಾಗ ಮನೆ ಮೇಲೆ ಧರೆ ಕುಸಿದಿದೆ. ಕೂಡಲೇ ಪೋಷಕರು ಇಬ್ಬರು ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ. ಮಣ್ಣು ಬಿದ್ದ ಪರಿಣಾಮ ಮನೆಯ ಅರ್ಧ ಭಾಗ ಕುಸಿದು ಹಾನಿಯಾಗಿದೆ.
ತಂದೆ ಮಜೀದ್ ಮತ್ತು ಅವರಿಬ್ಬರು ಮಕ್ಕಳು ಮಲಗಿದ್ದ ಕೊಠಡಿ ಮೇಲೆ ಮಣ್ಣು ಕುಸಿದಿದೆ. ತಕ್ಷಣ ಎಚ್ಚೆತ್ತ ಮಜೀದ್ ಮಣ್ಣಿನಡಿ ಇದ್ದ ಇಬ್ಬರು ಮಕ್ಕಳನ್ನು ರಕ್ಷಿಸಿದ್ದಾರೆ. ಮನೆ ಪಕ್ಕದ ಧರೆಯೊಂದು ಸಡಿಲಗೊಂಡು ಮನೆ ಮೇಲೆ ಬಿದ್ದು ಹಾನಿಯಾಗಿದೆ. ಘಟನಾ ಸ್ಥಳಕ್ಕೆ ನಗರಸಭಾ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಗರಸಭೆ ಮತ್ತು ಸ್ಥಳೀಯರಿಂದ ಮಣ್ಣು ತೆರವು ಕಾರ್ಯಾಚರಣೆ ನಡೆಯುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರಿ ಮಳೆಗೆ ಕಾಂಪೌಂಡ್ ಕುಸಿದು ಎರಡು ಮನೆಗಳಿಗೆ ಅಪಾಯ ಎದುರಾಗಿರದೆ. ಬಂಟ್ವಾಳ ತಾಲೂಕಿನ ಕಸಬಾ ಗ್ರಾಮದ ಹೊಸ್ಮಾರ್ ಎಂಬಲ್ಲಿ ಘಟನೆ ನಡೆದಿದೆ. ಅಶೋಕ್ ಪೂಜಾರಿ ಮತ್ತು ಗಣೇಶ್ ಪೂಜಾರಿ ಎಂಬುವವರ ಮನೆ ಅಪಾಯದಲ್ಲಿದ್ದು, ಮನೆ ಮಂದಿಯನ್ನು ಸಂಬಂಧಿಕರ ಮನೆಗೆ ಸ್ಥಳಾಂತರ ಮಾಡಲಾಗಿದೆ. ಮಣ್ಣು ಮತ್ತೆ ಕುಸಿಯದಂತೆ ತುರ್ತು ತಡೆಗೋಡೆ ನಿರ್ಮಾಣಕ್ಕೆ ಸೂಚನೆ ನೀಡಲಾಗಿದೆ. ಇನ್ನೂ ಕಾಂಪೌಂಡ್ ಕುಸಿದು ಬೀಳುವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ.
ಇದನ್ನೂ ಓದಿ: Yelahanka Railway : ರೈಲು ಬೋಗಿಯ ಕಸದ ಬುಟ್ಟಿಯಲ್ಲಿತ್ತು ನವಜಾತ ಶಿಶು; ನರಳಾಡಿ ಪ್ರಾಣಬಿಟ್ಟ ಕಂದ
ಮಳೆ ಅಬ್ಬರಕ್ಕೆ ಇತಿಹಾಸ ಪ್ರಸಿದ್ಧ ಮಧೂರು ದೇವಸ್ಥಾನ ಜಲಾವೃತ
ಮಂಗಳೂರು ಗಡಿಭಾಗ ಕಾಸರಗೋಡಿನಲ್ಲೂ ಭಾರೀ ಮಳೆಯಾಗುತ್ತಿದೆ. ಮಳೆ ಅಬ್ಬರಕ್ಕೆ ಇತಿಹಾಸ ಪ್ರಸಿದ್ದ ಮಧೂರು ಮದನಂತೇಶ್ವರ ಸಿದ್ದಿವಿನಾಯಕ ದೇವಸ್ಥಾನ ಜಲಾವೃತಗೊಂಡಿದೆ. ಮಧುವಾಹಿನಿ ನದಿ ತುಂಬಿ ತುಳುಕುತ್ತಿದ್ದು, ದೇವಸ್ಥಾನದ ಒಳಭಾಗದಲ್ಲಿ ನಾಲ್ಕೈದು ಅಡಿ ನೀರು ನಿಂತಿದೆ. ದೇವಸ್ಥಾನ ಸುತ್ತಮುತ್ತಲ ಪ್ರದೇಶ ಜಲಾವೃತವಾಗಿ ದ್ವೀಪದಂತೆ ಗೋಚರಿಸುತ್ತಿದೆ.
ಬ್ರಹ್ಮಗಿರಿ ತಪ್ಪಲಿನಲ್ಲೂ ನಿರಂತರ ಮಳೆ
ಕೊಡಗಿನ ಹಲವೆಡೆ ಮಳೆ ಅಬ್ಬರ ಮುಂದುವರಿದಿದ್ದು, ನದಿ, ತೊರೆ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿದೆ. ಬ್ರಹ್ಮಗಿರಿ ತಪ್ಪಲಿನಲ್ಲೂ ನಿರಂತರ ಮಳೆಯಿಂದಾಗಿ ಕಾವೇರಿ ನದಿ ನೀರಿನ ಮಟ್ಟದಲ್ಲೂ ಗಣನೀಯ ಏರಿಕೆ ಕಂಡಿದೆ. ಭಾಗಮಂಡಲ ತ್ರಿವೇಣಿ ಸಂಗಮದ ಸ್ಥಾನಘಟ ಮುಳುಗಡೆಯಾಗಿದೆ. ಮಳೆ ಇದೇ ರೀತಿ ಮುಂದುವರೆದಲ್ಲಿ ಮಡಿಕೇರಿ- ಭಾಗಮಂಡಲ, ನಾಪೋಕ್ಲು-ಭಾಗಮಂಡಲ ರಸ್ತೆ ಜಲಾವೃತವಾಗುವ ಸಾಧ್ಯತೆ ಇದೆ. ಈಗಾಗಲೇ ಕೊಡಗಿನ ಮಡಿಕೇರಿ, ವಿರಾಜಪೇಟೆ ಪೊನ್ನಂಪೇಟೆ ಮೂರು ತಾಲೂಕಿನ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಕೃಷ್ಣ ಮಠದ ಅಕ್ಕಪಕ್ಕ ನುಗ್ಗಿದ ನೀರು
ಉಡುಪಿ ಜಿಲ್ಲೆಯಲ್ಲಿ ರಾತ್ರಿಯಿಡಿ ಸುರಿದ ಭಾರಿ ಮಳೆಯಿಂದಾಗಿ ಶ್ರೀ ಕೃಷ್ಣ ಮಠದ ಪಾರ್ಕಿಂಗ್ ಪ್ರದೇಶದಲ್ಲಿ ನೀರು ನುಗ್ಗಿಯಾಗಿದೆ. ಕೃಷ್ಣ ಮಠದ ಪಕ್ಕದ ಜನವಸತಿ ಪ್ರದೇಶಗಳಲ್ಲಿ ನೆರೆಯಿಂದ ಮುಳುಗಡೆಯಾಗಿದೆ. ಸೂಕ್ತ ಒಳಚರಂಡಿ ವ್ಯವಸ್ಥೆ ಇಲ್ಲದ ಕಾರಣ ಪ್ರತಿ ವರ್ಷವೂ ಇದೇ ಪರಿಸ್ಥಿತಿ ಎದುರಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ರಾತ್ರಿಯೇ ಮನೆಯವರನ್ನು ಸುರಕ್ಷಿತ ಸ್ಥಳಕ್ಕೆ ರವಾನೆ ಮಾಡಲಾಗಿದೆ. ಗಾಳಿ ಸಹಿತ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ನಗರದ ಅಲ್ಲಲ್ಲಿ ಮರಗಳು ಧರೆಗುರುಳಿದೆ. ನಗರದ ಇಂದ್ರಾಣಿ ಒಳ ರಸ್ತೆಯಲ್ಲಿ ಬೃಹತ್ ಗಾತ್ರದ ಮರ ಧರಾಶಾಹಿಯಾಗಿದ್ದು, ಹಲವೆಡೆ ವಿದ್ಯುತ್ ವ್ಯತ್ಯಯ ಉಂಟಾಗಿದೆ.
ಚಿಕ್ಕಮಗಳೂರಲ್ಲೂ ನಿರಂತರ ಮಳೆ
ಚಿಕ್ಕಮಗಳೂರಿನಲ್ಲಿ ಗುರುವಾರ ಬೆಳಗ್ಗೆಯಿಂದಲೂ ಬಿಟ್ಟು-ಬಿಟ್ಟು ಧಾರಾಕಾರ ಮಳೆ ಸುರಿಯುತ್ತಿದೆ. ಭಾರೀ ಮಳೆಗೆ ಜನ ಜೀವನ ಅಸ್ತವ್ಯಸ್ತವಾಗಿದೆ. ಶೃಂಗೇರಿ, ಕೊಪ್ಪ, ಎನ್.ಆರ್.ಪುರ, ಮೂಡಿಗೆರೆ, ಕಳಸ ಸೇರಿದಂತೆ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಚಾರ್ಮಾಡಿ ಘಾಟ್ ಸುತ್ತ ಭಾರೀ ಮಳೆಯೊಂದಿಗೆ ಗಾಳಿ ಬೀಸುತ್ತಿದೆ. ಗಾಳಿ-ಮಳೆ ಮಧ್ಯೆ ಚಾರ್ಮಾಡಿ ಘಾಟಿಯಲ್ಲಿ ವಾಹನ ಸವಾರರು ಪರದಾಡುತ್ತಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ