Site icon Vistara News

Karnataka Rain : ಹಾಸನದಲ್ಲಿ ಹೇಮಾವತಿ, ಚಿಕ್ಕಮಗಳೂರಲ್ಲಿ ಭದ್ರೆಯ ಅಬ್ಬರಕ್ಕೆ ಜನರು ತತ್ತರ

Karnataka rain

ಹಾಸನ/ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ವ್ಯಾಪಕವಾಗಿ ಸುರಿಯುತ್ತಿರುವ ಮಳೆಗೆ (Karnataka Rain) ನಾನಾ ಅವಾಂತರವೇ ಸೃಷ್ಟಿಯಾಗಿದೆ. ಹಾಸನ‌ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಜಾಕನಹಳ್ಳಿ ಗ್ರಾಮದಲ್ಲಿ ಭಾರಿ ಮಳೆಗೆ ಮನೆಯ ಗೋಡೆ ಕುಸಿದು ಬಿದ್ದಿದೆ. ಮನೆಯಲ್ಲಿದ್ದವರು ಸಣ್ಣಪುಟ್ಟ ಗಾಯದಿಂದ ಅದೃಷ್ಟವಶಾತ್ ಪಾರಾಗಿದ್ದಾರೆ. ಗ್ರಾಮದ ಪರಮೇಶ್ ಹಾಗು ಸುಜಾತ ದಂಪತಿಯ ಮನೆ ಕುಸಿದಿದೆ. ಸುಜಾತಗೆ ಸಣ್ಣಪುಟ್ಟ ಗಾಯವಾಗಿದ್ದು, ಪರಮೇಶ್‌, ಪುತ್ರ ರಾಕೇಶ್ ತಕ್ಷಣ ಹೊರಗೆ ಓಡಿ ಬಂದಿದ್ದಾರೆ. ನಿರಂತರ ಮಳೆಯಿಂದ ಶೀತ ಹೆಚ್ಚಾಗಿ ಮನೆಗಳು ಕುಸಿಯುತ್ತಿವೆ. ಸೂಕ್ತ ಪರಿಹಾರಕ್ಕಾಗಿ ನೊಂದ ಕುಟುಂಬ ಮನವಿ ಮಾಡಿದೆ.

ಇತ್ತ ಬೇಲೂರು ತಾಲೂಕಿನ ಅರೇಹಳ್ಳಿ ಗ್ರಾಮದ ಈದ್ಗಾ ಬೀದಿಯಲ್ಲಿ ಆಸಿಯಾ ಬಾನು ಎಂಬುವವರಿಗೆ ಸೇರಿದ ಮನೆಯು ಕುಸಿದು ಬಿದ್ದಿದೆ. ಗೋಡೆ ಬೀಳುವ ಶಬ್ದಕ್ಕೆ ಆಸಿಯಾ ಬಾನು ಕುಟುಂಬಸ್ಥರು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಸುತ್ತಲೂ ಬಿರುಕು ಕಾಣಿಸಿಕೊಂಡು ಸಂಪೂರ್ಣ ಕುಸಿಯುವ ಹಂತದಲ್ಲಿದೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75ರ ಹಲವೆಡೆ ಭೂ ಕುಸಿತ ಉಂಟಾಗಿದೆ. ಮಳಲಿ ಬಳಿ ಗುಡ್ಡ ಕುಸಿದು ಐದು ಮನೆಗಳಿಗೆ ಹಾನಿಯಾಗುವ ಭೀತಿ ಇದೆ. ಕುಸಿದ ಮಣ್ಣು ತೆರವುಗೊಳಿಸಲಾಗುತ್ತಿದೆ. ಅವೈಜ್ಞಾನಿಕ ಕಾಮಗಾರಿಯಿಂದ ಸರಣಿ ಅವಘಡ ಸಂಭವಿಸುತ್ತಿದೆ ಎಂದು ಸ್ಥಳೀಯರು ಕಿಡಿಕಾರಿದ್ದಾರೆ. ಇಷ್ಟೆಲ್ಲಾ ಅನಾಹುತ ಆದರು ಹೆದ್ದಾರಿ ಪ್ರಾದಿಕಾರದ ಯಾರೂ ಸ್ಥಳಕ್ಕೆ ಬಂದಿಲ್ಲ ಅಂತ ಅಸಮಾಧಾನ ಹೊರಹಾಕಿದರು.

ಇನ್ನೂ ಹಾಸನ ಜಿಲ್ಲೆಯಲ್ಲಿ ಮಳೆ ತಗ್ಗಿದೆ. ಆದರೂ ಬೇಲೂರು ತಾಲೂಕಿನ ಬಿರಡಹಳ್ಳಿ ಗ್ರಾಮದಲ್ಲಿ ಭಾರಿ ಮಳೆಯಿಂದಾಗಿ ಬಿರಡಹಳ್ಳಿ ಸೇತುವೆ ಮೇಲೆ ಅಬ್ಬಿಕಟ್ಟೆಯ ನೀರು ಹರಿಯುತ್ತಿದೆ. ಬಿರಡಹಳ್ಳಿ, ನಾರ್ವೆ, ಸಕಲೇಶಪುರ, ಬೇಲೂರು ಸೇರಿದಂತೆ ಹಲವು ಗ್ರಾಮಗಳಿಗೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಸೇತುವೆ ಮೇಲೆ ನೀರು ಹರಿಯುತ್ತಿರುವುದರಿಂದ ತಾಲೂಕಾಡಳಿತ ಸೇತುವೆ ಮೇಲೆ ನಿರ್ಬಂಧ ಹೇರಿದೆ. ಆಲೂರು ತಾಲೂಕಿನ ಬ್ಯಾಡರಹಳ್ಳಿ ಗ್ರಾಮದಲ್ಲಿ ಅತಿಯಾದ ಮಳೆಯಿಂದ ಅಂತರ್ಜಲ ಹೆಚ್ಚಾಗಿ ಕೊಳವೆ ಬಾವಿಗಳಿಂದ ನೀರು ಹೊರ ಚಿಮ್ಮಿತ್ತಿರುವ ದೃಶ್ಯ ಕಂಡು ಬಂತು. ಮೋಹನ್ ಎಂಬುವವರಿಗೆ ಸೇರಿದ ಕೊಳವೆ ಬಾವಿಯಲ್ಲಿ ನೀರು ಉಕ್ಕಿತ್ತು.

ಹೇಮಾವತಿ ನದಿ ಉಕ್ಕಿ ಹರಿಯುತ್ತಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅವಾಂತರವೇ ಸೃಷ್ಟಿಯಾಗಿದೆ. ಹಾಸನದ ಸಕಲೇಶಪುರ ಪಟ್ಟಣದ ಅಜಾದ್ ನಗರ ಬಡಾವಣೆಯೂ ಸಂಪೂರ್ಣ ಜಲಾವೃತಗೊಂಡಿದೆ. ಬಡಾವಣೆಯಲ್ಲಿದ್ದ ಮನೆ, ಗ್ಯಾರೇಜ್‌ಗಳು ನೀರಿನಲ್ಲಿ ಮುಳುಗಡೆಯಾಗಿವೆ. ಹಲವು ವರ್ತಕರ ಲಕ್ಷಾಂತರ ಮೌಲ್ಯದ ವಸ್ತುಗಳಿಗೆ ಹಾನಿಯಾಗಿದೆ. ಇತ್ತ ಸಕಲೇಶಪುರ ಪಟ್ಟಣದ ಹೊಳೆ ಮಲ್ಲೇಶ್ವರ ದೇಗುಲ ಜಲಾವೃತಗೊಂಡಿದೆ. ಗರ್ಭಗುಡಿ ಹಾಗೂ ದೇಗುಲ ಸುತ್ತಲೂ ಹೇಮಾವತಿ ನದಿ ನೀರು ಹರಿದುಬಂದಿದೆ.

ಹೇಮಾವತಿ ನದಿಯಿಂದ ಅಧಿಕ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಿದ ಹಿನ್ನೆಲೆಯಲ್ಲಿ ಹೊಳೆನರಸೀಪುರ-ಅರಕಲಗೂಡು ರಸ್ತೆ ಜಲಾವೃತಗೊಂಡಿದೆ. ಹೊಳೆನರಸೀಪುರ ಪಟ್ಟಣದ ಅರಕಲಗೂಡು ರಸ್ತೆಯಲ್ಲಿರುವ ಅಗ್ನಿಶಾಮಕ ಠಾಣೆಗೂ ನೀರು ನುಗ್ಗಿದೆ. ನೀರು ಹೊರಹಾಕಲು ಅಗ್ನಿಶಾಮಕ ದಳದ ಸಿಬ್ಬಂದಿ ಪರದಾಡಿದರು. ಮತ್ತೊಂದೆಡೆ ಹೊಳೆನರಸೀಪುರ-ಚನ್ನರಾಯಪಟ್ಟಣ ರಾಜ್ಯ ಹೆದ್ದಾರಿ ಜಲಾವೃತಗೊಂಡಿದೆ. ಹೇಮಾವತಿ ನದಿಯಿಂದ ಮತ್ತಷ್ಟು ಹೆಚ್ಚಿನ ಪ್ರಮಾಣದ ನೀರು ಬಿಡುಗಡೆಯಾದರೆ ರಸ್ತೆ ಸಂಪರ್ಕ ಬಂದ್ ಆಗುವ ಸಾಧ್ಯತೆ ಇದೆ. ಚನ್ನರಾಯಪಟ್ಟಣ ರಸ್ತೆಯಲ್ಲಿರುವ ಖಾಸಗಿ ಶಾಲೆಗೂ ನೀರು ನುಗ್ಗಿದೆ.

ಸಕಲೇಶಪುರ ತಾಲೂಕಿನ ಬೆಳಗೋಡು ಹೋಬಳಿಯ ಮೂಗಲಿ-ಹೆಬ್ಬನಹಳ್ಳಿ ಸಂಪರ್ಕ ಕಲ್ಪಿಸುವ ರಸ್ತೆ ಸೇತುವೆ ಮುಳುಗಡೆಯಾಗಿದೆ. ಇದರಿಂದಾಗಿ ಬೆಳಗೋಡು, ಮೂಗಲಿ, ಹೆಬ್ಬನಹಳ್ಳಿ ಗ್ರಾಮಗಳಿಗೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ರಸ್ತೆ ಸಂಪರ್ಕವಿಲ್ಲದೆ ಗ್ರಾಮಸ್ಥರು ಪರದಾಡಿದರು. ಹೇಮಾವತಿ ನದಿ ಪ್ರವಾಹದಿಂದ ಗೊರೂರು ಮೂಲಕ ಮರಡಿ, ಅತ್ನಿ, ಹೆಬ್ಬಾಲೆ ಮಾರ್ಗವಾಗಿ ಹೊಳೆನರಸೀಪುರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಜಲಾವೃತಗೊಂಡಿದೆ. ರಸ್ತೆ ಮೇಲೆ ಐದಾರು ಅಡಿಯಷ್ಟು ನೀರು ನಿಂತಿದ್ದು, ಬ್ಯಾರಿಕೇಡ್ ಹಾಕಿ ರಸ್ತೆ ಬಂದ್ ಮಾಡಲಾಗಿದೆ. ಗೊರೂರು ಹಾಗು ಅತ್ನಿ, ಮರಡಿ, ಹೆಬ್ಬಾಲೆ ಗ್ರಾಮಗಳ ನಡುವೆ ಸಂಪರ್ಕ ಕಡಿತಗೊಂಡಿದೆ.

ಇದನ್ನೂ ಓದಿ: Cylinder Blast: ಅಕ್ರಮ ರೀ ಫಿಲ್ಲಿಂಗ್‌ ಅಡ್ಡೆಯಾದ ಹುಳಿಮಾವು;ಸಿಲಿಂಡರ್ ಸ್ಫೋಟಕ್ಕೆ ಪಾತ್ರೆ ಅಂಗಡಿ ಛಿದ್ರ ಛಿದ್ರ

ಭದ್ರೆಯ ಅಬ್ಬರಕ್ಕೆ ಜಮೀನುಗಳು ಜಲಾವೃತ

ಚಿಕ್ಕಮಗಳೂರಿನಲ್ಲಿ ಮುಂದುವರಿದ ಮಳೆಯ ಅಬ್ಬರಕ್ಕೆ ಭದ್ರಾ ನದಿ ಉಕ್ಕಿ ಹರಿಯುತ್ತಿದೆ. ಎನ್ ಆರ್ ಪುರ ತಾಲೂಕಿನ ಬಾಳೆಹೊನ್ನೂರಿನ ಪಟ್ಟಣದ ಒಳಗೆ ನೀರು ನುಗ್ಗಿದೆ. ಪರಿಣಾಮ ಸಂತೆ ಮೈದಾನದ ಕಟ್ಟಡಗಳು, ಅಡಿಕೆ, ಕಾಫಿ ತೋಟಗಳು ಸಂಪೂರ್ಣ ಜಲಾವೃತಗೊಂಡಿದೆ. ಎರಡು ವರ್ಷಗಳ ಬಳಿಕ ಮತ್ತೆ ನೆರೆ ಪರಿಸ್ಥಿತಿ ಕಾಣಿಸಿಕೊಂಡಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಸಂತೆ ಮೈದಾನಕ್ಕೆ ನಿಷೇಧ ಹೇರಲಾಗಿದೆ.

ಚಂದ್ರದ್ರೋಣ ಗಿರಿ ಪರ್ವತಗಳ ಸಾಲಿನಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ಐತಿಹಾಸಿಕ ಮದಗದ ಕೆರೆ ಕೊಡಿ ಬಿದ್ದಿದೆ. ಚಿಕ್ಕಮಗಳೂರಿನ ಕಡೂರು ತಾಲೂಕಿನ ಜೀವನಾಡಿ ಮದಗದ ಕೆರೆ ಕೋಡಿ ಬಿದ್ದು ಮೈದುಂಬಿ ಹರಿಯುತ್ತಿದೆ. ಕೆರೆ ಭರ್ತಿಯಿಂದಾಗಿ ಸಾವಿರಾರು ಎಕರೆ ಕೃಷಿ ಭೂಮಿಗೆ ಅನುಕೂಲವಾಗಲಿದೆ. ಕಡೂರು, ಬೀರೂರು ಭಾಗದ ಸಾವಿರಾರು ರೈತರಲ್ಲಿ ಸಂತಸ ಮನೆ ಮಾಡಿದೆ.

ಭಾರಿ ಗಾಳಿ-ಮಳೆಗೆ ಸಾಲು ಸಾಲಾಗಿ ವಿದ್ಯುತ್ ಕಂಬಗಳು ಧರೆಗುರುಳಿವೆ. ಗಾಳಿಯ ರಭಸಕ್ಕೆ ವಿದ್ಯುತ್ ತಂತಿಗಳು ರಸ್ತೆಗೆ ತುಂಡಾಗಿ ಬಿದ್ದಿವೆ. ಚಿಕ್ಕಮಗಳೂರಿನ ಬಾಳೆಹೊನ್ನೂರು ಪಟ್ಟಣದ ರಂಭಾಪುರಿ ಮಠದ ರಸ್ತೆಯಲ್ಲಿ ಘಟನೆ ನಡೆದಿದೆ. ಮಠದ ರಸ್ತೆಯ 7-8 ವಿದ್ಯುತ್ ಕಂಬಗಳು ‌ ಧರೆಗೆ ಬಿದ್ದ ಪರಿಣಾಮ ಕೆಲಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಚಿಕ್ಕಮಗಳೂರು ಹೊರವಲಯದ ಗವನಹಳ್ಳಿ ಬಳಿ ಕಡೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬೃಹತ್‌ ಮರ ಬಿದ್ದಿದೆ. ಮರ ಬಿದ್ದ ರಭಸಕ್ಕೆ ಆಟೋ ಸಂಪೂರ್ಣ ಜಖಂಗೊಂಡಿದೆ. ಚಲಿಸುತ್ತಿದ್ದ ಕಾರುಗಳ ಮುಂಭಾಗ ನಜ್ಜುಗುಜ್ಜಾಗಿದ್ದು, ಪ್ರಯಾಣಿಕರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.

ಚಿಕ್ಕಮಗಳೂರಿನಲ್ಲಿ ತಡೆಗೋಡೆ ಕುಸಿದು ದೇವಾಲಯವೇ ಮಣ್ಣಿನಿಂದ ಮುಚ್ಚಿಹೋಗಿದೆ. ಕೊಪ್ಪ ತಾಲೂಕಿನ ಬಸರಿ ಕಟ್ಟೆ ಗ್ರಾಮದ ಕೊಡಮಣಿ ತಾಯಿ ದೇವಾಲಯ ನೆಲೆಸಮವಾಗಿದೆ. ಮತ್ತೊಂದು ದೇವಾಲಯ ಬಳಿಯು ಮಣ್ಣು ಕುಸಿಯುವ ಭೀತಿ ಇದೆ. ದೇವಾಲಯದ ಮೇಲ್ಚಾವಣಿ ನಾಶವಾಗಿದೆ. ಗಾಳಿ ಮಳೆ ಅಬ್ಬರಕ್ಕೆ ಬೃಹತ್ ಗಾತ್ರದ ಮರ ರಸ್ತೆಗುರುಳಿದೆ. ರಸ್ತೆಗೆ ಮರ ಅಡ್ಡಲಾಗಿ ಬಿದ್ದ ಪರಿಣಾಮ 2 ಗಂಟೆಗೂ ಹೆಚ್ಚು ಕಾಲ ರಸ್ತೆ ಸಂಚಾರ ಬಂದ್ ಆಗಿತ್ತು. ಬಾಳೆಹೊನ್ನೂರು ಬಳಿಯ ಸಂಪಿ ಕಟ್ಟೆ- ಬಾಳೆಹೊಳೆ ರಸ್ತೆಯಲ್ಲಿ ಘಟನೆ ನಡೆದಿದೆ.

ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಮರ

ಭಾರಿ ಗಾಳಿ ಮಳೆಗೆ ಚಲಿಸುತ್ತಿದ್ದ ಕಾರಿನ ಮೇಲೆ ಬೃಹತ್‌ ಗಾತ್ರದ ಮರವೊಂದು ಬಿದ್ದಿದೆ. ಮರ ಬಿದ್ದು ಕಾರು ಜಖಂಗೊಂಡಿದ್ದು, ಅದೃಷ್ಟವಶಾತ್ ಕಾರಿನಲ್ಲಿದ್ದವರು ಪಾರಾಗಿದ್ದಾರೆ. ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಸಿದ್ದಾಪುರದಲ್ಲಿ ಘಟನೆ ನಡೆದಿದೆ. ಮರ ಬಿದ್ದು ಕೆಲಕಾಲ ರಸ್ತೆ ಸಂಚಾರ ಬಂದ್‌ ಆಗಿತ್ತು. ಸ್ಥಳೀಯರು ಮರ ತೆರವುಗೊಳಿಸಿದರು. ಕೊಡಗಿನ ರಾಷ್ಟ್ರೀಯ ಹೆದ್ದಾರಿ 275 ರ ಸಿಂಕೋನ ಬಳಿ ಭಾರಿ ಗಾಳಿಗೆ ರಾಷ್ಟ್ರೀಯ ಹೆದ್ದಾರಿಗೆ ಬೃಹತ್‌ ಮರವೊಂದು ಉರುಳಿ ಬಿದ್ದಿದೆ. ಮರ ಬಿದ್ದ ಪರಿಣಾಮ ರಸ್ತೆ ಬಂದ್‌ ಆಗಿತ್ತು. ಇದರಿಂದಾಗಿ ಗಂಟೆಗಳ ಕಾಲ ವಾಹನಗಳು ರಸ್ತೆಯಲ್ಲೇ ನಿಲ್ಲುವಂತಾಯಿತು.

ಸೋಮವಾರಪೇಟೆ ಶನಿವಾರಸಂತೆ ವ್ಯಾಪ್ತಿಯಲ್ಲಿ ಭಾರಿ ಗಾಳಿ ಮಳೆಗೆ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ಶನಿವಾರಾಂತೆ ಸಮೀಪ ಕಣಿವೆ ಬಸವನಹಳ್ಳಿಯಲ್ಲಿ ಘಟನೆ ನಡೆದಿದೆ. ವಿದ್ಯುತ್‌ ಕಂಬ ದುರಸ್ಥಿ ವೇಳೆ ಈ ಅವಘಡ ನಡೆದಿದ್ದು, ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮರ ಬಿದ್ದು ಮನೆಯ ಕಾಂಪೌಂಡ್‌ ಹಾಗೂ ದನ ಕೊಟ್ಟಿಗೆ ಹಾನಿಯಾಗಿದ್ದು, ಮರದಡಿ ಇದ್ದಕಾರು ಕೂಡ ಜಖಂಗೊಂಡಿದೆ.

ಕೊಡಗಿನಲ್ಲಿ ಧಾರಾಕಾರ ಮಳೆಯಿಂದಾಗಿ ಶ್ರೀಮಂಗಲ-ಕುಟ್ಟ ರಸ್ತೆ ಸಂಪರ್ಕ ಬಂದ್ ಆಗಿದೆ. ಅರ್ಧ ರಸ್ತೆಯು ನದಿಗೆ ಕುಸಿದು ಬಿದ್ದಿದ್ದು, ಖಾಸಗಿ ಬಸ್‌ವೊಂದು ರಸ್ತೆಯಲ್ಲಿ ಸಿಲುಕಿಕೊಂಡಿತ್ತು. ಕೇರಳದ ಮಾನಂದವಾಡಿಗೆ ಸಂಪರ್ಕದ ಅಂತರರಾಜ್ಯ ಹೆದ್ದಾರಿ ಪೂಜೆಕಲ್ಲು ಎಂಬಲ್ಲಿ ರಸ್ತೆ ಕುಸಿದಿದೆ.

ಕೊಪ್ಪಳ – ಬಳ್ಳಾರಿ ಜಿಲ್ಲೆಯ ಸಂಪರ್ಕ ಕಡಿತ

ತುಂಗಭದ್ರಾ ಜಲಾಶಯದಿಂದ ಅಪಾರ ಪ್ರಮಾಣದ ನೀರು ನದಿಗೆ ಬಿಡುಗಡೆ ಮಾಡಲಾಗುತ್ತಿದೆ. ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಚಿಕ್ಕಜಂತಗಲ್ ಬಳಿ ಇರುವ ಸೇತುವೆ ಮುಳುಗಡೆಯಾಗುವ ಭೀತಿ ಇದೆ. ಈಗಾಗಲೇ ಸೇತುವೆ ಮುಳುಗಡೆ ಭೀತಿಯಿಂದ ಕೊಪ್ಪಳ – ಬಳ್ಳಾರಿ ಜಿಲ್ಲೆಯ ಸಂಪರ್ಕ ಕಡಿತಗೊಂಡಿದೆ.

ಐತಿಹಾಸಿಕ ಹಂಪಿಯ ಹಲವು ಸ್ಮಾರಕ ಮುಳುಗಡೆ

ವಿಜಯನಗರದಲ್ಲೂ ಭಾರಿ ಮಳೆಯಾಗುತ್ತಿದ್ದು, ತುಂಗಭದ್ರಾ ಜಲಾಶಯದಿಂದ ಅಪಾರ ಪ್ರಮಾಣ ನೀರು ಬಿಡಲಾಗಿದೆ. ಪರಿಣಾಮ ಐತಿಹಾಸಿಕ ಹಂಪಿಯ ಹಲವು ಸ್ಮಾರಕ ಮುಳುಗಡೆಯಾಗಿವೆ. ಧಾರ್ಮಿಕ ವಿಧಿವಿಧಾನ ಮಂಟಪ, ಪುರಂದರದಾಸರ ಮಂಟಪ, ಜನಿವಾರ ಮಂಟಪ, ಸ್ನಾನ ಗಟ್ಟ ಮುಳುಗಡೆಯಾಗಿದೆ. ನದಿಗೆ ನೀರು ಹರಿಬಿಟ್ಟ ಪರಿಣಾಮ ಹಂಪಿಯಲ್ಲಿ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದೆ.

ರಾಯಚೂರಿನ ಆಂಜನೇಯನಿಗೆ ಜಲದಿಗ್ಭಂಧನ

ಮಳೆ ತಗ್ಗಿದ್ದರೂ ನೆರೆ ಪರಿಸ್ಥಿತಿ ಮಾತ್ರ ಕಡಿಮೆ ಆಗಿಲ್ಲ. ರಾಯಚೂರು ಜಿಲ್ಲೆಯ ಬಹುತೇಕ ಕಡೆ ಪ್ರವಾಹದ ಭೀತಿ ಇದ್ದು, ಕಾಡ್ಲೂರು ಗ್ರಾಮದ ಆಂಜನೇಯನಿಗೆ ಜಲದಿಗ್ಭಂಧನ ಹಾಕಲಾಗಿದೆ. ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ 2,70,000 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದೆ. ಇದರಿಂದಾಗಿ ರಾಯಚೂರು ತಾಲ್ಲೂಕಿನ ಕಾಡ್ಲೂರು ಗ್ರಾಮದ ಮುಖ್ಯ ಪ್ರಾಣದೇವರ ಆಂಜನೇಯನ ದೇಗುಲ ಜಲಾವೃತಗೊಂಡಿದೆ. ರೈತರ ಜಮೀನುಗಳಿಗೂನೀರು ನುಗ್ಗಿದ್ದು, ಕೃಷಿಗೆ ಅಳವಡಿಸಿದ್ದ ಪಂಪ್ ಸೆಟ್, ಪೈಪ್ ನೀರುಪಾಲಾಗಿದೆ. ಈಗಾಗಲೇ ಜನ ಜಾನುವಾರುಗಳು ನದಿ ಪಾತ್ರಕ್ಕೆ ತೆರಳದಂತೆ ಜಿಲ್ಲಾಡಳಿತದಿಂದ ಎಚ್ಚರಿಕೆ ನೀಡಲಾಗಿದೆ.

ಮನೆ ಮೇಲೆ ಬಿದ್ದ ಬೃಹತ್ ಮರ, ವಿದ್ಯುತ್ ಕಂಬ

ಶಿವಮೊಗ್ಗದ ಅಶೋಕನಗರದಲ್ಲಿರುವ ನರ್ಸಿಂಗ್ ಕ್ವಾಟ್ರಸ್ ಮೇಲೆ ಮರಗಳು ಬಿದ್ದಿವೆ. ಮನೆ ಮೇಲೆ ಬೃಹತ್ ಮರ ಹಾಗೂ ವಿದ್ಯುತ್ ಕಂಬ ಬಿದ್ದಿವೆ. ಮರ ಬಿದ್ದ ರಭಸಕ್ಕೆ ಮನೆಗೆ ಹಾನಿಯಾಗಿದೆ. ಅಗ್ನಿಶಾಮಕ ದಳ ಹಾಗೂ ಮೆಸ್ಕಾಂ ಸಿಬ್ಬಂದಿಯಿಂದ ಮರ ತೆರವು ಮಾಡಲಾಯಿತು. ಶಿವಮೊಗ್ಗ- ಭದ್ರಾವತಿ, ಬೆಂಗಳೂರು ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 69ರಲ್ಲಿ ರಸ್ತೆ ಕುಸಿದಿದೆ. ಭದ್ರಾವತಿ ತಾಲೂಕಿನ ಮಾಚೇನಹಳ್ಳಿ ಶಿಮೂಲ್ ಎದುರು ಅವೈಜ್ಞಾನಿಕ ರಸ್ತೆ ಕಾಮಗಾರಿಯಿಂದ ರಸ್ತೆ ಕುಸಿದಿದೆ. ಜೀವ ಕೈಯಲ್ಲಿ ಹಿಡಿದು ವಾಹನ ಸವಾರರು ಓಡಾಡುತ್ತಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version