Site icon Vistara News

Karnataka Rain : ಉಕ್ಕಿ ಹರಿದ ಚಂಡಿಕಾ ಹೊಳೆಯಲ್ಲಿ ಸಿಲುಕಿಕೊಂಡ ಬಸ್‌; ಪ್ರಯಾಣಿಕರು ಕಂಗಾಲು

Karnataka Rain

ಬೆಂಗಳೂರು/ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ವ್ಯಾಪಕ (karnataka Rain) ಮಳೆಯಾಗುತ್ತಿದ್ದು, ಕುಮಟಾ-ಶಿರಸಿ ರಾಷ್ಟ್ರೀಯ ಹೆದ್ದಾರಿ 766Eಯ ಕತಗಾಲ ಬಳಿ ಚಂಡಿಕಾ ಹೊಳೆ ಉಕ್ಕಿ ರಸ್ತೆಗೆ ಹರಿದಿದೆ. ಪರಿಣಾಮ ಬಸ್‌ವೊಂದು ನೀರಿನಲ್ಲಿ ಸಿಲುಕಿತ್ತು. ಗ್ರಾಮ ಪಂಚಾಯತಿ ಅಧಿಕಾರಿಗಳು, ಸ್ಥಳೀಯರಿಂದ ಬೋಟ್ ಮೂಲಕ ಬಸ್‌ನಲ್ಲಿ ಸಿಲುಕಿದ್ದ ಪ್ರಯಾಣಿಕರ ರಕ್ಷಣೆ ಮಾಡಲಾಗಿದೆ. ಶಿರಸಿ-ಕುಮಟಾ ಹೆದ್ದಾರಿ ಸಂಚಾರ ಬಂದ್ ಆಗಿದ್ದು, ಮಳೆ ಅಬ್ಬರಕ್ಕೆ ರಾಷ್ಟ್ರೀಯ ಹೆದ್ದಾರಿ 766E ನಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದೆ. ಪ್ರತಿವರ್ಷ ಮಳೆಗಾಲದಲ್ಲಿ (karnataka weather forecast) ಚಂಡಿಕಾ ಹೊಳೆ ತುಂಬಿ ಹರಿಯಲಿದೆ.

ಚಾರ್ಮಾಡಿ ಹೆದ್ದಾರಿ ತಡೆಗೋಡೆಗಳಲ್ಲಿ ಬಿರುಕು

ಚಿಕ್ಕಮಗಳೂರಿನಲ್ಲಿ ಮಳೆ ಮುಂದುವರಿದ್ದು, ಚಾರ್ಮಾಡಿ ಹೆದ್ದಾರಿಯ ತಡೆಗೋಡೆಗಳಲ್ಲಿ ಬಿರುಕು ಬಿಟ್ಟಿದೆ. ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ ಅಲ್ಲಲ್ಲಿ ತಡೆಗೋಡೆಗಳಲ್ಲಿ ಬಿರುಕು ಬಿಟ್ಟಿದ್ದು, ಅಪಾಯಕ್ಕೆ ಆಹ್ವಾನಿಸುತ್ತಿದೆ. ಹೊಸ ಕಾಮಗಾರಿ ನಡೆದ ಸ್ಥಳದಲ್ಲೇ ಬಿರುಕು ಕಾಣಿಸಿಕೊಂಡಿದೆ. ಮಳೆ ಹಾಗೂ ಮಂಜಿನ ನಡುವೆ ರಸ್ತೆ ಬಿರುಕು ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಓಡಾಡುವಂತಾಗಿದೆ. ರಸ್ತೆಗೆ ಕೋಟ್ಯಂತರ ರೂಪಾಯಿ ವ್ಯಯಿಸಿದರೂ ಪ್ರಯೋಜನವಾಗಿಲ್ಲ. ಕಳಪೆ ಗುಣಮಟ್ಟದ ಕಾಮಗಾರಿ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಇತ್ತ ರಾತ್ರಿಯಿಡೀ ಸುರಿದ ಮಳೆಗೆ ಸೇತುವೆ ಮೇಲೆ ನೀರು ಉಕ್ಕಿ ಹರಿಯುತ್ತಿದೆ. ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಬಾಳೆ ಗದ್ದೆ ಬಿಳ್ಳೂರು ಗ್ರಾಮದಲ್ಲಿ ಬಿಳ್ಳೂರು- ಮುಲ್ಲರ ಹಳ್ಳಿ ಸೇರಿ ಹಲವು ಹಳ್ಳಿಗಳ ಸಂಪರ್ಕ ಕಡಿತಗೊಂಡಿದೆ. ಸೇತುವೆ ಮೇಲೆ ನೀರು ನದಿಯಂತೆ ಉಕ್ಕಿ ಹರಿಯುತ್ತಿದೆ. ಒಂದು ಕಡೆಯಿಂದ ಮತ್ತೊಂದು ಕಡೆ ಹೋಗಲು ಗ್ರಾಮಸ್ಥರು ಪರದಾಟ ಅನುಭವಿಸುತ್ತಿದ್ದು, ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದೆ.

ಶೃಂಗೇರಿಯ ಕೆರೆಕಟ್ಟೆ ಘಟ್ಟಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ ಶೃಂಗೇರಿ ಶಾರದಾಂಭೆ ತಟದಲ್ಲಿ ತುಂಗಾ ನದಿ ದೊಡ್ಡ ಪ್ರಮಾಣದಲ್ಲಿ ಹರಿಯುತ್ತಿದೆ. ತುಂಗಾ ನದಿ ಇಕ್ಕೆಲಗಳ ತೋಟಗಳು ಜಲಾವೃತ‌ವಾಗುವ ಸಾಧ್ಯತೆ ಇದೆ. ಇತ್ತ ಅಪಾಯದ ಮಟ್ಟ ಮೀರಿದ ಭದ್ರಾ ನದಿಯಿಂದಾಗಿ ಕಳಸ ತಾಲೂಕಿನ ಹೆಬ್ಬಾಳೆ ಸೇತುವೆ ಮುಳುಗುವ ಹಂತ ತಲುಪಿದೆ.

ಹೆಬ್ಬಾಳೆ ಸೇತುವೆಯ ಮೇಲ್ಪದರಕ್ಕೆ ಭದ್ರಾ ನೀರು ಅಪ್ಪಳಿಸುತ್ತಿದೆ. ಸೇತುವೆ ಮುಳುಗಡೆಯಾದರೆ ಹತ್ತಾರು ಹಳ್ಳಿಗಳ ಸಂಪರ್ಕ ಬಂದ್ ಆಗಲಿದೆ. ಕಳಸ-ಹೊರನಾಡು ಅನ್ನಪೂರ್ಣೇಶ್ವರಿ ದೇಗುಲದ ಮಾರ್ಗವೂ ಬಂದ್ ಆಗಲಿದೆ. ಹೀಗಾಗಿ ಮುಂಜಾಗೃತ ಕ್ರಮವಾಗಿ ಪ್ರವಾಸಿಗರು ಹಾಗೂ ಸ್ಥಳೀಯರ ಓಡಾಟಕ್ಕೆ ತಡೆಹಿಡಿಯಲಾಗಿದೆ. ಯಾವುದೇ ಕ್ಷಣದಲ್ಲಾದರೂ ಸೇತುವೆ ಮೇಲೆ ನೀರು ಉಕ್ಕುವ ಸಾಧ್ಯತೆ ಇದೆ. ಹೀಗಾಗಿ ಸ್ಥಳದಲ್ಲಿಯೇ ಕಳಸ ಪೊಲೀಸರು ಮೊಕ್ಕಾಂ ಹೂಡಿದ್ದಾರೆ.

ಇದನ್ನೂ ಓದಿ: Rain News: ಭಾರಿ ಮಳೆ ಹಿನ್ನೆಲೆ, ಜಲಪಾತ ವೀಕ್ಷಣೆ- ಟ್ರೆಕ್ಕಿಂಗ್‌ಗೆ ನಿರ್ಬಂಧ; ಈ ತಾಣಗಳಿಗೆ ಹೋಗಬೇಡಿ!

ಶಿವಮೊಗ್ಗದಲ್ಲಿ ಮಳೆಗೆ ಧರೆಗುರುಳಿದ ವಿದ್ಯುತ್‌ ಕಂಬಗಳು

ಶಿವಮೊಗ್ಗದಲ್ಲೂ ಧಾರಾಕಾರ ಮಳೆಯಿಂದಾಗಿ ಹತ್ತಾರು ವಿದ್ಯುತ್ ಕಂಬಗಳು ಧರೆಗುರುಳಿವೆ. ಸಾಗರ ತಾಲೂಕಿನ ಹೊಳೆಬಾಗಿಲು ಬಳಿ ರಾಷ್ಟ್ರೀಯ ಹೆದ್ದಾರಿಗೆ ಅಡ್ಡಲಾಗಿ ವಿದ್ಯುತ್ ಕಂಬಗಳು ಬಿದ್ದಿದೆ. ಹೊಳೆಬಾಗಿಲು, ಕಳಸವಳ್ಳಿ, ತುಮರಿ ರಸ್ತೆ ವಿದ್ಯುತ್‌ ಕಂಬಗಳು ಬಿದ್ದ ಪರಿಣಾಮ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ.

ಕೊಡಗಿನಲ್ಲಿ ಮತ್ತೆ ಮುಂದುವರಿದ ಮಳೆ

ಕೊಡಗಿನಲ್ಲಿ ತಡರಾತ್ರಿಯಿಂದ ನಿರಂತರ ಮಳೆಯಾಗುತ್ತಿದ್ದು, ಹಳ್ಳ-ಕೊಳ್ಳಗಳು, ನದಿ ತುಂಬಿ ಹರಿಯುತ್ತಿದೆ. ಕಾವೇರಿಯ ತವರು ಬ್ರಹ್ಮಗಿರಿ ತಪ್ಪಲಿನಲ್ಲೂ ರಾತ್ರಿಯಿಂದ ಭಾರಿ ಮಳೆಯಾಗಿದ್ದು, ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.

ಸೋರುತಿಹುದು ಅರಸೀಕೆರೆ ರೈಲ್ವೆ ಫ್ಲಾಟ್ ಫಾರಂ

ಮಳೆ ಬಂದರೆ ಹಾಸನ ಜಿಲ್ಲೆಯ ಅರಸೀಕೆರೆ ಜಂಕ್ಷನ್‌ನ ರೈಲ್ವೆ ಫ್ಲಾಟ್ ಫಾರಂ ಬಚ್ಚಲು ಮನೆಯಂತೆ ಬಾಸವಾಗುತ್ತದೆ. ರೈಲ್ವೆ ಫ್ಲಾಟ್ ಫಾರಂನ ಛಾವಣಿ ಸೋರುತ್ತಿದ್ದು, ಪ್ರಯಾಣಿಕರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಪ್ರಯಾಣಿಕರ ಲ್ಯಾಗೇಜ್‌ಗಳ ಮೇಲೆ ನೀರು ಸೋರುತ್ತಿದ್ದು, ಕೂಡಲೇ ಛಾವಣಿ ದುರಸ್ತಿ ಮಾಡುವಂತೆ ಒತ್ತಾಯ ಕೇಳಿ ಬಂದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version