ಹಾಸನ/ಹಾವೇರಿ : ಹಾಸನದಲ್ಲಿ ಭಾರಿ ವರ್ಷಧಾರೆಗೆ (Karnataka Rain) ತೆಂಗಿನ ಮರ ಧರೆಗುರುಳಿದೆ. ಏಕಾಏಕಿ ಮಾರುತಿ ಓಮ್ನಿ ಕಾರಿನ ಮೇಲೆ ಮರವು ಮುರಿದು ಬಿದ್ದಿದೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಯಸಳೂರು ಗ್ರಾಮದಲ್ಲಿ ಘಟನೆ ನಡೆದಿದೆ. ಯಸಳೂರು ಪೊಲೀಸ್ ಠಾಣೆ ಎದುರು ಚಾಲಕ ಕಾರು ಪಾರ್ಕಿಂಗ್ ಮಾಡಿ ತೆರಳಿದ್ದರು. ಈ ವೇಳೆ ಏಕಾಏಕಿ ಯಸಳೂರು ಪೊಲೀಸ್ ಠಾಣೆ ಆವರಣದಲ್ಲಿದ್ದ ತೆಂಗಿನಮರ ಕಾರಿನ ಮೇಲೆ ಬಿದ್ದು ಜಖಂಗೊಂಡಿದೆ. ಅದೃಷ್ಟವಶಾತ್ ಕಾರು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹಾವೇರಿಯಲ್ಲಿ ಮನೆಗಳ ಗೋಡೆ ಕುಸಿತ
ಹಾವೇರಿ: ಜಿಟಿ ಜಿಟಿ ಮಳೆಗೆ ಎರಡು ಮನೆಗಳ ಗೋಡೆ ಕುಸಿದಿದೆ. ಹಾವೇರಿಯ ರಟ್ಟಿಹಳ್ಳಿ ತಾಲೂಕಿನ ಮೇದೂರು ಗ್ರಾಮದ ರೇಷ್ಮಾ ನ್ಯಾಮತಿ ಎಂಬುವರ ಮನೆಗೆ ಹಾನಿಯಾಗಿದೆ. ಶಿಗ್ಗಾವಿ ತಾಲೂಕಿನ ಕುನ್ನೂರು ಗ್ರಾಮದ ಮಹಾದೇವಿ ತಳವಾರ ಎಂಬುವರ ಮನೆ ಗೋಡೆ ಕುಸಿದು ಬಿದ್ದಿದೆ. ಮನೆಯಲ್ಲಿ ಮಲಗಿದ್ದ ವೇಳೆ ಈ ಅವಘಡ ನಡೆದಿದೆ. ರಾಮಪ್ಪ ತಳವಾರ ಎಂಬುವರ ಮೇಲೆ ಗೋಡೆ ಕುಸಿದು ಗಾಯಗೊಂಡಿದ್ದಾದೆ. ರಾಮಪ್ಪ ಗಣೇಶನ ಮೂರ್ತಿಗಳನ್ನು ತಯಾರಿಸಿ ಜೀವನ ನಡೆಸುತ್ತಿದ್ದರು. ಮನೆ ಗೋಡೆ ಕುಸಿದ ಹಿನ್ನೆಲೆಯಲ್ಲಿ 300 ಗಣೇಶನ ಮೂರ್ತಿಗಳಿಗೆ ಹಾನಿಯಾಗಿದೆ.
ನಾವುಂದ ಬಡಾಕೆರೆಯಲ್ಲಿ ನೆರೆ; ಬೋಟ್ ಮೂಲಕ ರಕ್ಷಣೆ
ಉಡುಪಿ ಜಿಲ್ಲೆಯಲ್ಲಿ ಸುರಿದ ಮಳೆಯಿಂದಾಗಿ ನಾವುಂದ ಬಡಾಕೆರೆಯಲ್ಲಿ ಮತ್ತೆ ನೆರೆ ಸೃಷ್ಟಿಯಾಗಿದೆ. ಬೈಂದೂರು ತಾಲೂಕಿನ ನಾವುಂದದಲ್ಲಿ ಮಳೆಗಾಲದಲ್ಲಿ 4 ಬಾರಿ ನೆರೆ ಕಟ್ಟಿಟ್ಟ ಬುತ್ತಿಯಾಗಿದೆ. ನೆರೆಯಿಂದಾಗಿ ನೂರಾರು ಎಕರೆ ಕೃಷಿ ಭೂಮಿ ಜಲಾವೃತಗೊಂಡಿದೆ. ನಾವುಂದ ಬಡಾಕೆರೆಯಲ್ಲಿ ಹಲವಾರು ಮನೆಗಳು ಜಲಾವೃತಗೊಂಡಿದ್ದು, ದೋಣಿ ಮೂಲಕ ರಕ್ಷಣೆ ಮಾಡಲಾಗಿದೆ.
ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನಾದ್ಯಂತ ನೆರೆ ಹಾವಳಿ ಸೃಷ್ಟಿಯಾಗಿದೆ. ಸೀತಾ ನದಿ ತುಂಬಿ ಹರಿಯುತ್ತಿದ್ದು, ಕೋಟ ಬನ್ನಾಡಿ ಭಾಗದಲ್ಲಿ ನೆರೆಯಾಗಿದೆ. ಹೀಗಾಗಿ ಬನ್ನಾಡಿ, ಬೇಳೂರು, ಕೋಟ ವ್ಯಾಪ್ತಿಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಭೇಟಿ ನೀಡಿದರು. ಜತೆಗೆ ಡಿಸಿ ವಿದ್ಯಾಕುಮಾರಿ ,ಸಿಇಒ ಪ್ರತೀಕ್ ಬಾಯಲ್ ಸಾಥ್ ನೀಡಿದರು. ಶಿರಿಯಾರದಲ್ಲಿ ನೆರೆಪೀಡಿತರನ್ನು ಎತ್ತರದ ಪ್ರದೇಶಕ್ಕೆ ಶಿಫ್ಟ್ ಮಾಡಲಾಯಿತು.
ಭಾರಿ ಮಳೆಗೆ ಬಾಯ್ಬಿಟ್ಟ ಭೂಮಿ!
ಭಾರಿ ಮಳೆಗೆ ಏಕಾಏಕಿ ಮನೆಯೊಂದರ ಪಕ್ಕ ಅಪಾಯಕಾರಿ ಗುಂಡಿ ನಿರ್ಮಾಣವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ರಾಜಾರಾಂಪುರ ಕಾಲನಿಯಲ್ಲಿ ಘಟನೆ ನಡೆದಿದೆ. ರಾಜಾರಾಂಪರ ಕಾಲನಿ ನಿವಾಸಿ ವಿಶೇಷ ಚೇತನ ಬಾಳಪ್ಪ ಎಂಬುವವರ ಮನೆ ಪಕ್ಕ ಸುಮಾರು ಒಂದು ಫೀಟ್ ಅಂತರದಲ್ಲೇ ಭೂಮಿ ಬಾಯ್ಬಿಟ್ಟಿದೆ. ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಸುಮಾರು 15-20ಫೀಟ್ ಆಳವಾಗದ ಸುರಂಗದ ರೀತಿಯ ಗುಂಡಿ ನಿರ್ಮಾಣವಾಗಿದೆ. ಜತೆಗೆ ಗುಂಡಿ ಒಳಗಿನ ಸುರಂಗದಿಂದ ನೀರು ಉಕ್ಕಿ ಬರುತ್ತಿದೆ. ಅಪಾಯದಂಚಿನಲ್ಲಿರುವ ಸಂಪಾಜೆ ಗ್ರಾಮದ ನಿವಾಸಿ ಬಾಳಪ್ಪ ಮನೆಯವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ.
ಕೆರೆಯಂತಾದ ರೈಲ್ವೆ ಅಂಡರ್ ಪಾಸ್
ರಾಯಚೂರಲ್ಲಿ ರಾತ್ರಿಯಿಡೀ ಸುರಿದ ಮಳೆಗೆ ಅವಾಂತರ ಸೃಷ್ಟಿಯಾಗಿದೆ. ನೀರು ನಿಂತು ರೈಲ್ವೆ ಅಂಡರ್ ಪಾಸ್ ಕೆರೆಯಂತಾಗಿತ್ತು. ಕರೇಕಲ್ ಗ್ರಾಮದ ರೈಲ್ವೆ ಅಂಡರ್ ಪಾಸ್‌ನಲ್ಲಿ ನೀರು ನಿಂತಿದ್ದರಿಂದ ವಾಹನ ಸವಾರರು ಪರದಾಡಿದರು. ಇತ್ತ ವರದಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗುತ್ತಿದ್ದು, ಜೀವದ ಹಂಗು ತೊರೆದು ಜನರು ಬ್ರಿಜ್ಡ್ ಕಂ ಬ್ಯಾರೇಜ್ ಮೇಲೆ ವಾಹನ ಚಲಾಯಿಸುತ್ತಿದ್ದಾರೆ. ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಕಳಸೂರು ಗ್ರಾಮದ ಬ್ರಿಜ್ಡ್ ಕಂ ಬ್ಯಾರೇಜ್ ಮೇಲೆ ನೀರು ಹರಿಯುತ್ತಿದೆ. ಕಳಸೂರು ಮತ್ತು ಕೊಳೂರ ನಡುವೆ ಸಂಪರ್ಕ ಕಲ್ಪಿಸುವ ಸೇತುವೆ ಇದಾಗಿದೆ.
ಅವೈಜ್ಞಾನಿಕ ಕಾಮಗಾರಿಯಿಂದ ರಸ್ತೆ ಕುಸಿತ
ಅವೈಜ್ಞಾನಿಕ ಕಾಮಗಾರಿಯಿಂದ ಭಾರಿ ಮಳೆಗೆ ರಸ್ತೆ ಕುಸಿದಿದೆ. ನಿಂತ ಜಾಗದಲ್ಲಿಯೇ ಲಾರಿಯೊಂದು ಒಂದು ಬದಿಗೆ ಜಾರಿದೆ. ಮಂಗಳೂರಿನಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಸರಕು ತುಂಬಿದ್ದ ಲಾರಿ ರಸ್ತೆ ಪಕ್ಕಕ್ಕೆ ಜಾರಿದ್ದು, ತಡೆಗೋಡೆ ಇಲ್ಲದಿದ್ದರೆ ಪ್ರಪಾತಕ್ಕೆ ಉರುಳಿ ಬೀಳುವ ಸಾಧ್ಯತೆ ಇದೆ. ಅದೃಷ್ಟವಶಾತ್ ಯಾವುದೇ ಅಪಾಯವಾಗಿಲ್ಲ. ಹಾಸನ ರಾಷ್ಟ್ರೀಯ ಹೆದ್ದಾರಿ 75 ರ ಸಕಲೇಶಪುರ ತಾಲ್ಲೂಕಿನ ಬಾಳ್ಳುಪೇಟೆ ಬಳಿ ಘಟನೆ ನಡೆದಿದೆ. ಸ್ಥಳಕ್ಕೆ ಸಕಲೇಶಪುರ ಎಸಿ ಶೃತಿ ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಳೆ ಅವಾಂತರ ಮುಂದುವರಿದಿದೆ. ಭಾರಿ ಮಳೆಗೆ ಗ್ರಾಮದ ಮುಖ್ಯ ರಸ್ತೆ ನದಿಯಂತಾಗಿತ್ತು. ಚಿಕ್ಕಮಗಳೂರು ತಾಲೂಕಿನ ಬಾಸಪುರ ಗ್ರಾಮದಲ್ಲಿ ಗುಡ್ಡದಿಂದ ರಸ್ತೆಗೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಬಾಸಾಪುರ ಸೇರಿ ಹಲವು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ತೋಟಕ್ಕೆ ನೀರು ನುಗ್ಗಿ ಕಾಫಿ ಬೆಳೆ ನಾಶವಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ