ಹಾಸನ: ಹಾಸನದಲ್ಲಿ ಮಳೆಯಾರ್ಭಟ (Karnataka Rain) ಮುಂದುವರಿದಿದ್ದು, ಭಾರಿ ಗಾಳಿ-ಮಳೆಗೆ ವಾಸದ ಮನೆಯು ಕುಸಿದು ಬಿದ್ದಿದೆ. ಪರಿಣಾಮ ಮನೆಯ ಕೊಟ್ಟಿಗೆಯಲ್ಲಿದ್ದ ಮೂರು ಜಾನುವಾರುಗಳು ಮೃತಪಟ್ಟಿವೆ. ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಸಂಕೇನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.
ಸತತ ಮಳೆಗೆ ಶನಿವಾರ ಮುಂಜಾನೆ ಗ್ರಾಮದ ದ್ಯಾವಮ್ಮ ಎಂಬುವವರ ಮನೆ ಏಕಾಏಕಿ ಕುಸಿದು ಬಿದ್ದಿದೆ. ಇತ್ತ ಕುಸಿದ ಗೋಡೆಗಳ ನಡುವೆ ಸಿಲುಕಿದ ಮೂರು ಜಾನುವಾರುಗಳು ಸ್ಥಳದಲ್ಲೇ ಮೃತಪಟ್ಟಿವೆ. ಸದ್ಯ ಮನೆ ಕಳೆದುಕೊಂಡು, ಜೀವನೋಪಾಯಕ್ಕೆ ಇದ್ದ ಜಾನುವಾರುಗಳನ್ನು ಕಳೆದುಕೊಂಡು ಕುಟುಂಬಸ್ಥರು ಕಂಗಲಾಗಿದ್ದಾರೆ. ಸೂಕ್ತ ಪರಿಹಾರಕ್ಕಾಗಿ ನೊಂದ ಕುಟುಂಬವು ಒತ್ತಾಯ ಮಾಡಿದೆ.
ಪಶು ಆಸ್ಪತ್ರೆ ಹಿಂಭಾದ ಭೂ ಕುಸಿತ
ಚಿಕ್ಕಮಗಳೂರಿನಲ್ಲಿ ಮಳೆ ಅವಾಂತರ ಮುಂದುವರಿದಿದ್ದು, ಪಶು ಆಸ್ಪತ್ರೆ ಹಿಂಭಾಗದಲ್ಲಿ ಭಾರಿ ಭೂ ಕುಸಿತ ಉಂಟಾಗಿದೆ. ಇನ್ನು ಉದ್ಘಾಟನೆಯಾಗದ ಪಶು ಆಸ್ಪತ್ರೆಯ ಗೋಡೆಯ ಮೇಲೆ ಮಣ್ಣು ಬಿದ್ದಿದೆ. ಕೊಪ್ಪ ತಾಲೂಕಿನ ಬಸರಿ ಕಟ್ಟೆ ಗ್ರಾಮದಲ್ಲಿ ಘಟನೆ ನಡೆದಿದೆ. ಭೂ ಕುಸಿತದಿಂದ ಆಸ್ಪತ್ರೆ ಕಟ್ಟಡ ಒಳಭಾಗದಲ್ಲಿ ಕೆಸರುಮಯವಾಗಿದೆ. ಇನ್ನಷ್ಟು ಭೂಮಿ ಕುಸಿತವಾಗುವ ಭೀತಿ ಇದೆ. ಇನ್ನೂ ಬಿಎಸ್‌ಎನ್‌ಎಲ್ ಟವರ್, ವಿದ್ಯುತ್ ಕಂಬಗಳು ಧರೆಗುರುಳುವ ಸಾಧ್ಯತೆ ಇದೆ.
ಚಾರ್ಮಾಡಿಯಲ್ಲಿ ವಾಹನ ದಟ್ಟಣೆ
ಗುಡ್ಡ ಕುಸಿತದಿಂದಾಗಿ ಶಿರಾಡಿ, ಸಂಪಾಜೆ ಮಾರ್ಗ ಬಂದ್ ಆದ ಹಿನ್ನೆಲೆಯಲ್ಲಿ ಇತ್ತ ಚಾರ್ಮಾಡಿಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿದೆ. ಚಾರ್ಮಾಡಿ ಹೆದ್ದಾರಿ ಸಾಮರ್ಥ್ಯಕ್ಕೂ ಮೀರಿ ವಾಹನಗಳು ಸಂಚಾರಿಸುತ್ತಿವೆ. ಅಪಾಯಕ್ಕೂ ಮುನ್ನ ಚಿಕ್ಕಮಗಳೂರು ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ. ಕೊಟ್ಟಿಗೆಹಾರದಿಂದ ಚಾರ್ಮಾಡಿ ಗ್ರಾಮದವರೆಗೂ ಸಂಚಾರ ದುಸ್ತರವಾಗಿದೆ. 2019ರಲ್ಲಿ ಲ್ಯಾಂಡ್ ಸ್ಲೈಡಿಂಗ್ ಆದ ಜಾಗದಲ್ಲಿ ವಾಹನ ಸಂಚಾರ ನಿಧಾನಗತಿಗೆ NHA ಹಾಗೂ ಅರಣ್ಯ ಅಧಿಕಾರಿಗಳಿಗೆ ಚಿಕ್ಕಮಗಳೂರು ಡಿಸಿ ಎಸ್‌ಪಿ ಸೂಚನೆ ನೀಡಿದ್ದಾರೆ.
ಶಿವಮೊಗ್ಗದಲ್ಲಿ ಶಾಲಾ ಕಾಂಪೌಂಡ್ ಕುಸಿತ
ಶಿವಮೊಗ್ಗದಲ್ಲಿ ಮಳೆಯ ಅಬ್ಬರಕ್ಕೆ ಶಾಲಾ ಕಾಂಪೌಂಡ್ ಕುಸಿದು ಬಿದ್ದಿದೆ. ಶಿವಮೊಗ್ಗ ನಗರದ ಬುದ್ದನಗರದಲ್ಲಿ ಘಟನೆ ನಡೆದಿದೆ. ಇನ್ನೂ ಕಾಂಪೌಂಡ್ ಪಕ್ಕದಲ್ಲಿ ಪಾರ್ಕ್ ಮಾಡಿದ್ದ ಎರಡು ಕಾರು ಜಖಂಗೊಂಡಿವೆ. ಮುಂಜಾಗ್ರತಾ ಕ್ರಮವಾಗಿ ಶಾಲೆಗೆ ರಜೆ ಘೋಷಿಸಿದ ಹಿನ್ನೆಲೆಯಲ್ಲಿ ದುರಂತವೊಂದು ತಪ್ಪಿದೆ.
ಝರಿ ಫಾಲ್ಸ್‌ಗೆ ನಿಷೇಧ
ಚಿಕ್ಕಮಗಳೂರು ತಾಲೂಕಿನ ದತ್ತಪೀಠ ತಪ್ಪಲಿನಲ್ಲಿರುವ ಝರಿ ಫಾಲ್ಸ್‌ಗೆ ನಿಷೇಧ ಹೇರಲಾಗಿದೆ. ಭಾರಿ ಮಳೆ ಬೆನ್ನಲ್ಲೇ ಝರಿ ಫಾಲ್ಸ್ ರೌದ್ರಾವತಾರ ತಾಳಿದೆ. ಹೀಗಾಗಿ ಝರಿ ಫಾಲ್ಸ್ ಪ್ರವಾಸಕ್ಕೆ ಪ್ರವಾಸಿಗರು, ಸಾರ್ವಜನಿಕರಿಗೆ ನಿಷೇಧಿಸಲಾಗಿದೆ. ಫಾಲ್ಸ್‌ಗೆ ಹೋಗುವ ರಸ್ತೆಯನ್ನು ಪೊಲೀಸರು ಬಂದ್ ಮಾಡಿಸಿದ್ದಾರೆ.
ಇದನ್ನೂ ಓದಿ: Karnataka Rain : ಹಳ್ಳ ದಾಟಲು ಹೋಗಿ ನೀರುಪಾಲಾದ ಜಾನುವಾರು; ಬಿರುಗಾಳಿಗೆ ಕಳಚಿದ ವಿಂಡ್ ಫ್ಯಾನ್
ನದಿ ಪಾತ್ರದ ಜನರಿಗೆ ಎಚ್ಚರಿಕೆ ಸಂದೇಶ
ವಿಜಯನಗರದ ನದಿ ಪಾತ್ರದ ಜನರಿಗೆ ತುಂಗಭದ್ರಾ ಆಡಳಿತ ಮಂಡಳಿ ಎಚ್ಚರಿಕೆ ಸಂದೇಶ ರವಾನಿಸಿದೆ. ಯಾವುದೇ ಕ್ಷಣದಲ್ಲೂ ತುಂಗಭದ್ರಾ ಜಲಾಶಯದಿಂದ ನದಿಗೆ ನೀರು ಹರಿಸಬಹುದು. ಹೀಗಾಗಿ ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರಲು ಸೂಚನೆ ನೀಡಲಾಗಿದೆ. ಜತೆಗೆ ನಾರಾಯಣಪುರ ಡ್ಯಾಂನಿಂದ ಕೃಷ್ಣಾ ನದಿಗೆ ಭಾರೀ ಪ್ರಮಾಣದ ನೀರು ಬಿಡುಗಡೆ ಮಾಡಲಾಗುತ್ತಿದೆ. ಹೀಗಾಗಿ ನದಿ ತೀರಕ್ಕೆ ಯಾರು ತೆರಳದಂತೆ ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ ಸೂಚನೆ ನೀಡಿದ್ದಾರೆ.
ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಮಳೆ ಚನ್ನಾಗಿ ಆಗುತ್ತಿದೆ. ಆಲಮಟ್ಟಿ ಡ್ಯಾಂನಿಂದ ನಾರಾಯಣಪುರ ಡ್ಯಾಂಗೆ ಒಳಹರಿವು ಹೆಚ್ಚಾಗುತ್ತಿದೆ. ಯಾದಗಿರಿ ಜಿಲ್ಲೆಯಲ್ಲಿ ಕೃಷ್ಣಾ ಹಾಗೂ ಭೀಮಾನದಿ ತೀರದ 80 ಗ್ರಾಮಗಳ ಪಟ್ಟಿ ಮಾಡಲಾಗಿದೆ. ಪ್ರವಾಹಕ್ಕೆ ಒಳಗಾಗುವ 80 ಗ್ರಾಮಗಳಿಗೆ ಈಗಾಗಲೇ ನೊಡೇಲ್ ಅಧಿಕಾರಿಗಳ ಮೂಲಕ ಜಾಗೃತಿ ಮೂಡಿಸಲಾಗಿದೆ. ಯಾರು ನದಿ ತೀರಕ್ಕೆ ತೆರಳದೇ ಅಗತ್ಯ ಎಚ್ಚರಿಕೆ ವಹಿಸಬೇಕು. ಪ್ರವಾಹ ಎದುರಾದರೇ ಅಗತ್ಯ ಸಿದ್ದತೆ ಮಾಡಿಕೊಳ್ಳಲಾಗಿದೆ. 32 ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 32 ಕಾಳಜಿ ಕೇಂದ್ರಗಳನ್ನು ತೆರೆಯಲು ಈಗಾಗಲೇ ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಹಳ್ಳ ದಾಟಲು ಹೋಗಿ ಎತ್ತುಗಳು ಸಾವು
ಶಿವಮೊಗ್ಗದಲ್ಲಿ ಭಾರೀ ಮಳೆಗೆ ಹಳ್ಳ-ಕೊಳ್ಳಗಳು ಮೈದುಂಬಿ ಹರಿಯುತ್ತಿವೆ. ಹಳ್ಳ ದಾಟಲು ಹೋಗಿ ಎತ್ತುಗಳು ಮೃತಪಟ್ಟಿವೆ. ರಭಸವಾಗಿ ಹರಿಯುತ್ತಿದ್ದ ಹಳ್ಳ ದಾಟಲು ಹೋಗಿ ಒಂದು ಎತ್ತು, ಒಂದು ಆಕಳು, ಒಂದು ಎಮ್ಮೆ ಮೃತಪಟ್ಟಿವೆ. ಬದುಕಿಗೆ ಆಸರೆಯಾಗಿದ್ದ ಎತ್ತು, ಗೋವು ಕಳೆದುಕೊಂಡ ರೈತ ಕಂಗಲಾಗಿದ್ದಾರೆ. ಶಿವಮೊಗ್ಗದ ಶಿಕಾರಿಪುರ ತಾಲೂಕಿನ ಆಗ್ರಹಾರ ಮುಚಡಿಯಲ್ಲಿ ಘಟನೆ ನಡೆದಿದೆ.
ಇತ್ತ ಸಾಗರ ತಾಲೂಕಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಮನೆಗಳು ಕುಸಿದು ಬಿದ್ದಿವೆ. ಸಾಗರದ ಗಾಂಧಿನಗರದ 19ನೇ ವಾರ್ಡ್‌ನಲ್ಲಿ ಮೂರು ಹೆಂಚಿನ ಮನೆಗಳು ಧರೆಗುರುಳಿವೆ. ಹಬೀಬಾ , ಇನಾಯತ್ ಹಾಗೂ ನಿಸಾರ್ ಎಂಬುವರಿಗೆ ಸೇರಿದ ಮೂರು ಮನೆಗಳು ಧ್ವಂಸವಾಗಿವೆ.
ಮನೆ ಕುಸಿಯುತ್ತಿದ್ದಂತೆ ಓಡಿ ಬಂದ ಸದಸ್ಯರು
ನಿರಂತರ ಮಳೆಗೆ ತಡರಾತ್ರಿ ಮನೆಯೊಂದು ಕುಸಿದಿದೆ. ಮನೆ ಕುಸಿಯುತ್ತಿದ್ದಂತೆ ಒಳಗೆ ಇದ್ದವರು ಹೊರಗೆ ಓಡಿ ಬಂದಿದ್ದಾರೆ. ಬೆಳಗಾವಿಯ ಬೈಲಹೊಂಗಲ ತಾಲೂಕಿನ ಪಟ್ಟಿಹಾಳ ಗ್ರಾಮದಲ್ಲಿ ಘಟನೆ ನಡೆದಿದೆ. ಬಸಪ್ಪ ಹಡಪದ ಎಂಬುವವರಿಗೆ ಸೇರಿದ ಮನೆ ಕುಸಿದಿದೆ. ಐವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕೊಡಿ ಬಿದ್ದ ಹಿರೇಕೊಳಲೆ ಕೆರೆ
ಚಿಕ್ಕಮಗಳೂರಿನಲ್ಲಿ ಮುಂದುವರೆದ ಮಳೆ ಆರ್ಭಟಕ್ಕೆ ಹಿರೇಕೊಳಲೆ ಐತಿಹಾಸಿಕ ಕೆರೆ ಸಂಪೂರ್ಣ ತುಂಬಿ ಕೊಡಿ ಬಿದ್ದಿದೆ. ಚಿಕ್ಕಮಗಳೂರು ನಗರಕ್ಕೆ ನೀರು ಒದಗಿಸುವ ದೊಡ್ಡ ಕೆರೆ ಇದಾಗಿದೆ. ಕೆರೆ ಭರ್ತಿಯಿಂದಾಗಿ ಚಿಕ್ಕಮಗಳೂರು ನಗರದ ನಿವಾಸಿಗಳಲ್ಲಿ ಸಂತಸ ಮೂಡಿದೆ.
ದೇವಸ್ಥಾನದಕ್ಕೆ ಜಲದಿಗ್ಭಂಧನ
ಮಹಾರಾಷ್ಟ್ರ ಘಟ್ಟ ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ನಾರಾಯಣಪುರ ಜಲಾಶಯದಿಂದ ಒಳಹರಿವು ಹೆಚ್ಚಿದೆ. ಪರಿಣಾಮ ರಾಯಚೂರಲ್ಲಿ ಇತಿಹಾಸ ಪ್ರಸಿದ್ಧ ದೇವಸ್ಥಾನಕ್ಕೆ ಜಲದಿಗ್ಬಂಧನ ಹಾಕಲಾಗಿದೆ. ದೇವದುರ್ಗ ತಾಲೂಕಿನ ಹೂವಿನಹೆಡಗಿ ಗ್ರಾಮದಲ್ಲಿರುವ ಗಡ್ಡೆಗೂಳಿ ಬಸವೇಶ್ವರ ದೇವಸ್ಥಾನ ಸಂಪೂರ್ಣವಾಗಿ ಮುಳುಗಡೆಯಾಗಿದೆ. ದೇವಸ್ಥಾನದ ಚಾವಣಿ ಮೇಲ್ಭಾಗದಲ್ಲಿ ನೀರು ಹರಿಯುತ್ತಿದೆ. ಹೂವಿನಹೆಡಗಿ ಸೇತುವೆ ಮುಳುಗಡೆಗೂ ಕೆಲವೇ ಕೆಲವು ಅಡಿ ಬಾಕಿ ಇದೆ.
ವರದಾ ನದಿ ಸೇತುವೆ ಮೇಲೆ ಓಡಾಡುವ ಸವಾರರಿಗೆ ಎಚ್ಚರಿಕೆ
ಭಾರಿ ಮಳೆಗೆ ಅಪಾಯಮಟ್ಟ ಮೀರಿ ವರದಾ ನದಿ ಹರಿಯುತ್ತಿದ್ದು, ಉತ್ತರಕನ್ನಡ ಜಿಲ್ಲೆಯ ಶಿರಸಿಯ ಬನವಾಸಿ ಭಾಗದಲ್ಲಿ ತೋಟ, ಗದ್ದೆಗಳು ಮುಳುಗಡೆಯಾಗಿದೆ. ನದಿ ಪಾತ್ರದ ನೂರಾರು ಎಕರೆ ಅಡಿಕೆ, ಬಾಳೆ ತೋಟ, ಅನಾನಸ್, ಶುಂಠಿ ಗದ್ದೆಗಳು ಜಲಾವೃತಗೊಂಡಿದೆ. ಬನವಾಸಿ-ಭಾಶಿ ನಡುವಿನ ಸಂಪರ್ಕ ಸೇತುವೆ ಮುಳುಗಡೆ ಹಂತ ತಲುಪಿದೆ. ಹೀಗಾಗಿ ಬನವಾಸಿ-ಚಂದ್ರಗುತ್ತಿ ರಾಜ್ಯ ಹೆದ್ದಾರಿ ಸಂಚಾರ ಬಂದ್ ಆಗುವ ಸಾಧ್ಯತೆ ಇದೆ. ವರದಾ ನದಿ ಸೇತುವೆ ಮೇಲೆ ಓಡಾಡುವ ಸವಾರರಿಗೆ ಎಚ್ಚರಿಕೆ ನೀಡಲಾಗಿದೆ.
ಇತ್ತ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕಾಜಿಮನೆ ಗ್ರಾಮದಲ್ಲಿ ಭಾರೀ ಮಳೆಗೆ ಅಡಿಕೆ ತೋಟಕ್ಕೆ ನೀರು ನುಗ್ಗಿ ಹಾನಿಯಾಗಿದೆ. ಎಡಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಹಳ್ಳಗಳು ತುಂಬಿ ಹರಿಯುತ್ತಿದೆ. ಹಳ್ಳದ ನೀರು ತೋಟಕ್ಕೆ ನುಗ್ಗಿ ಅಡಿಕೆ, ತೆಂಗು, ಬಾಳೆ ಗಿಡಗಳಿಗೆ ಹಾನಿಯಅಗಿದೆ. ತೋಟಕ್ಕೆ ಹಾಕಲಾಗಿದ್ದ ಗೊಬ್ಬರ ನೀರುಪಾಲು, 2-3 ಲಕ್ಷ ನಷ್ಟವಾಗಿದೆ. ನೀರಿನ ಹರಿವು ಹೆಚ್ಚಳದಿಂದ ಕಿರುಸೇತುವೆ ಮುಳುಗಡೆಯಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ