Site icon Vistara News

Karnataka Rain : ಚಿಕ್ಕಮಗಳೂರಿನಲ್ಲಿ ಮಳೆ ಅವಾಂತರ; ಕುಸಿದು ಬಿದ್ದ ಮನೆಗಳು, ರಸ್ತೆ ಕಾಣದೆ ಕಂದಕ್ಕೆ ನುಗ್ಗಿದ ಕಾರು

karnataka Rain

ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲಿ ಮಳೆ ಅವಾಂತರ (Karnataka Rain) ಮುಂದುವರಿದಿದ್ದು, ಅಡುಗೆ ಮಾಡುತ್ತಿದ್ದಾಗಲೇ ಮನೆಯ ಗೋಡೆ ಕುಸಿದು ಬಿದ್ದಿದೆ. ಮಹಿಳೆಯೊಬ್ಬರು ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಗುತ್ತಿ ಗ್ರಾಮದಲ್ಲಿ ಘಟನೆ ನಡೆದಿದೆ. ಭಾರಿ ಮಳೆಯಿಂದಾಗಿ ಮನೆಯೊಂದು ‌ಇದ್ದಕ್ಕಿದ್ದಂತೆ ಕುಸಿದು ಬಿದ್ದಿದೆ. ಗಿರಿಜಮ್ಮ ಎಂಬುವವರು ಸೂರು ಕಳೆದುಕೊಂಡು ಕಂಗಾಲಾಗಿದ್ದಾರೆ. ಗೋಡೆ ಜತೆಗೆ ‌ ಮನೆಯ ಚಾವಣಿಯು ಸಂಪೂರ್ಣ ನಾಶವಾಗಿದೆ.

Karnataka rain

ಕಂದಕಕ್ಕೆ ನುಗ್ಗಿದ ಕಾರು

ಭಾರಿ ಮಳೆಯಿಂದ ರಸ್ತೆ ಕಾಣದೆ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಕಂದಕಕ್ಕೆ ನುಗ್ಗಿದೆ. ಚಿಕ್ಕಮಗಳೂರಿನ ಕಳಸ-ಬಾಳೆಹೊನ್ನೂರು ಮಾರ್ಗದಲ್ಲಿ ಘಟನೆ ನಡೆದಿದೆ. ಕಳಸ ಸಮೀಪದ ನೆಲ್ಲಿಕಾರು ಸಮೀಪ ಬಂದಾಗ ಭಾರಿ ಮಳೆಗೆ ರಸ್ತೆ ಕಾಣದೆ ಚಾಲಕನ ನಿಯಂತ್ರಣ ತಪ್ಪಿ ಅವಘಡ ಸಂಭವಿಸಿದೆ. ಕಾರಿನಲ್ಲಿದ್ದ ಮೂವರು ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯವಾಗಿದ್ದು, ಕಳಸ ಸರ್ಕಾರಿ ಅಸ್ಪತ್ರೆಗೆ ದಾಖಲು ಮಾಡಲಾಗಿದೆ.

ನೋಡನೋಡುತ್ತಲೇ ಕುಸಿದು ಬಿದ್ದ ಮನೆ

ವ್ಯಾಪಕವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನೋಡ ನೋಡುತ್ತಲೇ ಮನೆಯೊಂದು ಕುಸಿದು ಬಿದ್ದಿದೆ. ಮನೆ ಕುಸಿತದ ದೃಶ್ಯ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ಗುಡ್ಡೆತೋಟ ಸಮೀಪದ ಶಾಂತಿಗ್ರಾಮದಲ್ಲಿ ಘಟನೆ ನಡೆದಿದೆ. ಮನೆಯಲ್ಲಿ ಯಾರೂ ಇರದ ಕಾರಣ ಭಾರೀ ಅನಾಹುತವೊಂದು ತಪ್ಪಿದೆ.

ಶೃಂಗೇರಿಯಲ್ಲಿ ನೆರೆ ಪರಿಸ್ಥಿತಿ

ಚಿಕ್ಕಮಗಳೂರಿನಲ್ಲಿ ಮುಂದುವರಿದ ಮಳೆಯಾರ್ಭಟಕ್ಕೆ ತುಂಗಾ ನದಿ ಅಬ್ಬರಿಸುತ್ತಿದ್ದು, ಶೃಂಗೇರಿಯಲ್ಲಿ ನೆರೆ ಪರಿಸ್ಥಿತಿ ನಿರ್ಮಾಣವಾಗಿದೆ. ನದಿಯಂಚಿನ ಗ್ರಾಮಗಳಲ್ಲಿ ತೋಟಗಳು ಜಲಾವೃತಗೊಂಡಿದೆ. ಶೃಂಗೇರಿ ತಾಲೂಕಿನ ಕೂತಗೋಡು ವ್ಯಾಪ್ತಿಯ ಬೆಟ್ಟಗೇರೆ, ಕೆರೆಮನೆ ಗ್ರಾಮಗಳಲ್ಲಿ ತುಂಗಾ ನದಿ ಉಕ್ಕಿದ ಪರಿಣಾಮ ತೋಟಗಳು ಮುಳುಗಡೆಯಾಗಿದೆ. ಜತೆಗೆ ಹಲವು ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಇನ್ನೂ ಕಳೆದ ಮೂರು ದಿನಗಳಿಂದ ತುಂಗಾ ಪ್ರವಾಹ ಕಡಿಮೆಯಾಗದ ಹಿನ್ನೆಲೆಯಲ್ಲಿ ನೆರೆ ತಗ್ಗುವಂತೆ ತುಂಗಾ ನದಿಗೆ ಗ್ರಾಮಸ್ಥರು ಪೂಜೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: Illicit relationship : ಪರ ಪುರುಷನೊಂದಿಗೆ ಓಡಿ ಹೋದ ಪತ್ನಿ; ಮರ್ಯಾದೆಗೆ ಅಂಜಿ ಪತಿ ಆತ್ಮಹತ್ಯೆ

ಮತ್ತೆ ಹೆಬ್ಬಾಳೆ ಸೇತುವೆ ಮುಳುಗಡೆ

ಚಿಕ್ಕಮಗಳೂರಿನಲ್ಲಿ ಗಾಳಿ-ಮಳೆ ಅಬ್ಬರಕ್ಕೆ ಸತತ ಮೂರನೇ ಬಾರಿ ಹೆಬ್ಬಾಳೆ ಸೇತುವೆ ಮುಳುಗಡೆಯಾಗಿದೆ. ಕುದುರೆಮುಖ ಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆಯಿಂದಾಗಿ ಕಳಸ-ಹೊರನಾಡು ಸಂಪರ್ಕದ ಹೆಬ್ಬಾಳೆ ಸೇತುವೆ ಮತ್ತೆ ಮುಳುಗಡೆಯಾಗಿದೆ. ಇದರಿಂದಾಗಿ ಕಳಸ-ಹೊರನಾಡು ಸೇರಿ ಹತ್ತಾರು ಹಳ್ಳಿಯ ಸಂಪರ್ಕ ಕಡಿತಗೊಂಡಿದೆ.

ಹೆದ್ದಾರಿ ಬಿರುಕು

ಚಿಕ್ಕಮಗಳೂರಿನಲ್ಲಿ ಮಳೆಗೆ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಸುಮಾರು 50 ಅಡಿಗೂ ಹೆಚ್ಚು ದೂರ ಬಿರುಕು ಬಿಟ್ಟಿದೆ. ಶೃಂಗೇರಿ ತಾಲೂಕಿನ ನೆಮ್ಮಾರು ಎಸ್ಟೇಟ್ ಬಳಿ ಘಟನೆ ನಡೆದಿದೆ. ತುಂಗಾ ನದಿ ಪಕ್ಕದಲ್ಲೇ ಬಿರುಕು ಬಿಟ್ಟಿದ್ದು, ರಾಷ್ಟ್ರೀಯ ಹೆದ್ದಾರಿ 169 ಶೃಂಗೇರಿ-ಕಾರ್ಕಳ ಮಾರ್ಗದಲ್ಲಿ ನಿತ್ಯ ಹತ್ತಾರು ಬಸ್, ನೂರಾರು ವಾಹನಗಳು ಓಡಾಡುವವರು ಭೀತಿಗೊಂಡಿದ್ದಾರೆ. ಕಳಪೆ ಕಾಮಗಾರಿಯಿಂದ ಈ ಸ್ಥಿತಿ ಎಂದು ಸ್ಥಳೀಯರು ಆರೋಪಿಸಿದ್ದಾರೆ. ವರ್ಷದ ಹಿಂದೆ ಇದೇ ಜಾಗದಲ್ಲಿ ಇಬ್ಬರು ಕಾರ್ಮಿಕರು ಮಣ್ಣಿನಡಿ ಸಿಲುಕಿ ಸಾವನ್ನಪ್ಪಿದ್ದರು.

ಉಕ್ಕಿ ಹರಿಯುತ್ತಿರುವ ಭದ್ರಾ ನದಿಯಲ್ಲಿ ಮೀನುಗಾರಿಕೆ

ಮಲೆನಾಡ ಮಳೆಗೆ ತುಂಗಾ-ಭದ್ರಾ-ಹೇಮಾವತಿ ನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಜಿಲ್ಲಾ ಆಡಳಿತದ ಎಚ್ಚರಿಕೆಯ ನಡುವೆಯೂ ಚಿಕ್ಕಮಗಳೂರಿನ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಸಮೀಪ ಮೀನುಗಾರಿಕೆಗೆ ಇಳಿದಿದ್ದಾರೆ. ರುದ್ರನರ್ತನ ತಾಳಿರುವ ಭದ್ರ ನದಿಯಲ್ಲಿ ಜನರು ಮೀನು ಹಿಡಿಯುತ್ತಿರುವ ದೃಶ್ಯಗಳು ಕಂಡು ಬಂದಿದೆ. ಭದ್ರೆಯ ಒಡಲಲ್ಲಿ ತೆಪ್ಪದಲ್ಲಿ ಮೀನುಗಾರಿಕೆಗೆ ಮುಂದಾಗಿದ್ದು, ಸ್ವಲ್ಪ ಯಾಮಾರಿದರು ಅಪಾಯ ಕಟ್ಟಿಟ್ಟಬುತ್ತಿ.

ಇತ್ತ ಭದ್ರಾ ನದಿ ಅಬ್ಬರಕ್ಕೆ ಸ್ಥಳೀಯರು ಕಂಗಾಲಾಗಿದ್ದಾರೆ. ಭದ್ರಾ ನದಿ ತಟದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಬಾಳೆಹೊನ್ನೂರಿನ ನದಿ ತಟದ ಜಮೀನುಗಳು, ತೋಟಗಳು ಮುಳುಗಡೆಯಾಗಿದೆ. ಅಡಿಕೆ, ಕಾಫಿ ತೋಟಗಳು ಸಂಪೂರ್ಣ ಜಲಾವೃತಗೊಂಡಿದೆ.

ಪ್ರವಾಸಿಗರ ನಿಷೇಧ

ಚಂದ್ರದ್ರೋಣ ಪರ್ವತ ಸಾಲಿನಲ್ಲಿ ಭಾರಿ ಮಳೆಯಾಗುತ್ತಿದ್ದು, ಚಿಕ್ಕಮಗಳೂರಿನ ಹೊನ್ನಮ್ಮನ ಹಳ್ಳ ಜಲಪಾತ ರೌದ್ರಾವತಾರ ತಾಳಿದೆ. ಚಿಕ್ಕಮಗಳೂರು ತಾಲೂಕಿನ ದತ್ತಪೀಠ ರಸ್ತೆಯಲ್ಲಿರುವ ಹೊನ್ನಮ್ಮನ ಹಳ್ಳ ಫಾಲ್ಸ್‌ನ ಮೆಟ್ಟಿಲುಗಳನ್ನು ಆವರಿಸಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಫಾಲ್ಸ್ ಬಳಿ ಪ್ರವಾಸಿಗರ ನಿಷೇಧ ಮಾಡಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version