ಚಿಕ್ಕಮಗಳೂರು/ಹಾಸನ: ಭಾರಿ ಮಳೆಗೆ (Karnataka Rain) ವಾಸದ ಮನೆಯ ಗೋಡೆ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಮನೆಯಲ್ಲಿದ್ದ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ, ಕಬ್ಬಿನಗದ್ದೆ ಗ್ರಾಮದಲ್ಲಿ ಘಟನೆ ನಡೆದಿದೆ. ಗ್ರಾಮದ ಕಮಲ ಎಂಬುವವರಿಗೆ ಸೇರಿದ ಮನೆ ಇದಾಗಿದ್ದು, ವಿಶೇಷ ಚೇತನ ಹಾಗೂ ಮಾತು ಬಾರದ ಕಮಲ ತಾಯಿಯೊಂದಿಗೆ ವಾಸವಿದ್ದರು. ಸದ್ಯ ಮನೆ ಕಳೆದುಕೊಂಡು ಕಮಲ ಕುಟುಂಬಸ್ಥರು ಕಂಗಲಾಗಿದ್ದಾರೆ.
ಇತ್ತ ಚಿಕ್ಕಮಗಳೂರಿನಲ್ಲೂ ಮಳೆಯ ಅವಾಂತರಕ್ಕೆ ಮನೆಯೊಂದು ಕುಸಿದು ಬಿದ್ದಿದೆ. ಮನೆಯಲ್ಲಿದ್ದ ಪೀಠೋಪಕರಣ, ದವಸ, ಧಾನ್ಯ ನಾಶವಾಗಿವೆ. ಮೂಡಿಗೆರೆ ತಾಲೂಕಿನ ಬಣಕಲ್ ಪಟ್ಟಣದಲ್ಲಿ ಘಟನೆ ನಡೆದಿದೆ. ಬಣಕಲ್‌ನ ತಾಹಿರಾ ಎಂಬವರಿಗೆ ಸೇರಿದ ಮನೆ ನೆಲಸಮವಾಗಿದೆ. ಮನೆಯಲ್ಲಿದ್ದವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಳೆಯ ಆರ್ಭಟಕ್ಕೆ ಭಾರೀ ಪ್ರಮಾಣದಲ್ಲಿ ಭೂ ಕುಸಿತ ಉಂಟಾಗಿದೆ. ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ಕುಂಚೂರು ಘಾಟಿ ಬಳಿ ಘಟನೆ ನಡೆದಿದೆ. ಹೀಗಾಗಿ ಸ್ಥಳೀಯರು ರಸ್ತೆಗೆ ಕಲ್ಲು ಇಟ್ಟು ಎಚ್ಚರಿಕೆ ನೀಡಿದ್ದಾರೆ. ಭೂಮಿ ಮತ್ತಷ್ಟು ಕುಸಿದು ಬೀಳುತ್ತಿರುವ ಆತಂಕ ಎದುರಾಗಿದೆ.
ಚಿಕ್ಕಮಗಳೂರಲ್ಲಿ ರಸ್ತೆ ಅಡ್ಡಲಾಗಿ ಬಿದ್ದ ಬೃಹತ್ ಮರ
ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಆರ್ಭಟಕ್ಕೆ ರಸ್ತೆಗೆ ಅಡ್ಡಲಾಗಿ ಬೃಹತ್ ಗಾತ್ರದ ಮರಗಳು ಬಿದ್ದಿದೆ. ಬಾಳೆಹೊನ್ನೂರು ಮೆಲ್ವಾಲ್ ರಸ್ತೆಯಲ್ಲಿ ಭಾರೀ ಗಾತ್ರದ ಮರ ಬಿದ್ದು, ಹಲವೆಡೆ ವಿದ್ಯುತ್ ಕಂಬಗಳು ಧರೆಗುರುಳಿದೆ. ಕೆಲಕಾಲ ರಸ್ತೆ ಸಂಪರ್ಕ ಕಡಿತಗೊಂಡು ಸವಾರರು ಪರದಾಡಬೇಕಾಯಿತು.
ಚಿಕ್ಕಮಗಳೂರಿನ ಕುದುರೆಮುಖ ವ್ಯಾಪ್ತಿಯ ಘಟ್ಟ ಪ್ರದೇಶಗಳಲ್ಲಿ ಮಳೆ ಸುರಿಯುತ್ತಿದ್ದು, ಭದ್ರಾ ನದಿ ಅಪಾಯದ ಮಟ್ಟ ಮೀರಿದೆ. ಕಳಸ ತಾಲೂಕಿನ ಹೊರನಾಡು ಬಳಿಯ ಹೆಬ್ಬಾಳೆ ಸೇತುವೆಯಾಗಿದ್ದು, ಹೊರನಾಡು-ಕಳಸ ಸಂಪರ್ಕ ಕಡಿತಗೊಂಡಿದೆ. ಕಳೆದ ರಾತ್ರಿಯಿಂದಲೂ ಸೇತುವೆಯ ಮೇಲೆ ಭದ್ರಾ ನದಿ ಉಕ್ಕಿ ಹರಿಯುತ್ತಿದೆ. ಮುನ್ನೆಚ್ಚರಿ ಕಾರ್ಯಕ್ರಮವಾಗಿ ಸೇತುವೆಯ ಎರಡು ಕಡೆ ಬ್ಯಾರಿಕೇಡ್ ಹಾಕಲಾಗಿದೆ. ಹೆಬ್ಬಾಳೆ ಸೇತುವೆಯ ಮೇಲೆ ವಾಹನಗಳ ಸಂಚಾರ ನಿಷೇಧ ಮಾಡಲಾಗಿದ್ದು, ಸೇತುವೆ ಬಳಿ ಕಳಸ ಪೊಲೀಸರು ಮೊಕ್ಕಾಂ ಹೂಡಿದ್ದಾರೆ.
ಇದನ್ನೂ ಓದಿ: Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು
ಕೊಡಗಿನ ಶಾಲೆ ಮೇಲೆ ಬಿದ್ದ ಭಾರಿ ಗಾತ್ರದ ಗುಡ್ಡ
ಕೊಡಗಿನಲ್ಲಿ ಪುನರ್ವಸು ಮಳೆ ಅಬ್ಬರ ಜೋರಾಗಿದ್ದು, ಗುಡ್ಡದ ಮಣ್ಣು ಕುಸಿಯಲು ಆರಂಭವಾಗಿದೆ. ಕೊಡಗು ಜಿಲ್ಲೆ ಸಂಪಾಜೆ ಸಮೀಪ ಕೊಯನಾಡಿನಲ್ಲಿ ಸರ್ಕಾರಿ ಶಾಲಾ ಕಟ್ಟಡ ಮೇಲೆ ಭಾರಿ ಗಾತ್ರದ ಗುಡ್ಡ ಬಿದ್ದಿದೆ. ಕಳೆದ ಒಂದು ತಿಂಗಳ ಹಿಂದೆ ಕೂಡ ಮಣ್ಣು ಬಿದ್ದು ಹಾನಿಯಾಗಿತ್ತು. ಮತ್ತೆ ಗುಡ್ಡಕುಸಿತವಾಗಿ ಶಾಲಾ ಕಟ್ಟಡ ಹಿಂಭಾಗಕ್ಕೆ ಪೂರ್ತಿ ಹಾಳಾಗಿದೆ. ಭಾರಿ ಪ್ರಮಾಣದಲ್ಲಿ ಮಣ್ಣು ಬಿದ್ದು ಶಾಲಾ ಕಟ್ಟಡ ಸಂಪೂರ್ಣ ಹಾನಿಯಾಗಿದೆ. ಶಾಲೆಯಲ್ಲಿದ್ದ ದಾಖಲೆಗಳು ಪೀಟೋಪಕರಣಗಳು ಜಖಂ ಆಗಿದ್ದು, ವಿಚಾರ ತಿಳಿದು ಅಳುತ್ತಲೆ ಶಿಕ್ಷಕಿ ಶಾಲೆಗೆ ಓಡೋಡಿ ಬಂದಿದ್ದಾರೆ.
ಕುಮಟಾ-ಶಿರಸಿ ಹೆದ್ದಾರಿಯಲ್ಲಿ ಗುಡ್ಡ ಕುಸಿತ
ಉತ್ತರಕನ್ನಡ ಜಿಲ್ಲೆಯ ಕುಮಟಾ-ಶಿರಸಿ ಹೆದ್ದಾರಿಯಲ್ಲಿ ಗುಡ್ಡ ಕುಸಿತ ಉಂಟಾಗಿದೆ. ತಡರಾತ್ರಿ ಗುಡ್ಡ ಕುಸಿದು ಸಂಚಾರ ಸಂಪೂರ್ಣ ಬಂದ್ ಆಗಿದೆ. ರಾಷ್ಟ್ರೀಯ ಹೆದ್ದಾರಿ 766EEಯ ರಾಗಿಹೊಸಳ್ಳಿ ಬಳಿ ಘಟನೆ ನಡೆದಿದೆ. ಜೆಸಿಬಿ ಮೂಲಕ ಮಣ್ಣು ತೆರವು ಕಾರ್ಯಾಚರಣೆ ನಡೆಯುತ್ತಿದೆ.
ಇತ್ತ ಧಾರಾಕಾರ ಮಳೆಗೆ ಹೊನ್ನಾವರ-ಬೆಂಗಳೂರು ಹೆದ್ದಾರಿಯಲ್ಲಿ ಮತ್ತೆ ಗುಡ್ಡ ಕುಸಿತ ಉಂಟಾಗಿದೆ. ಹೊನ್ನಾವರ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 206ರ ವರ್ನಕೇರಿ ಬಳಿ ಘಟನೆ ನಡೆದಿದೆ. ಹೆದ್ದಾರಿಗೆ ಬೃಹತ್ ಗಾತ್ರದ ಗುಡ್ಡದ ಮಣ್ಣು ಕುಸಿದು ಬಿದ್ದಿದೆ. ಹೀಗಾಗಿ ಹೊನ್ನಾವರ-ಗೇರುಸೊಪ್ಪ-ಸಾಗರ ಹೆದ್ದಾರಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಗುಡ್ಡ ಕುಸಿತದಿಂದ ರಸ್ತೆಯಲ್ಲೇ ವಾಹನಗಳು ಸಾಲುಗಟ್ಟಿ ನಿಂತಿವೆ. ಬೆಂಗಳೂರಿನಿಂದ ಹೊನ್ನಾವರದತ್ತ ಆಗಮಿಸುತ್ತಿದ್ದ ಪ್ರಯಾಣಿಕರು ಬಸ್‌ಗಳಲ್ಲೇ ಲಾಕ್ ಆಗಿದ್ದರು. ಹೊನ್ನಾವರ-ಬೆಂಗಳೂರು ಹೆದ್ದಾರಿಯಲ್ಲಿ ಇದು ನಾಲ್ಕನೇ ಬಾರಿಗೆ ಗುಡ್ಡ ಕುಸಿತ ಉಂಟಾಗಿದೆ.
ಇನ್ನೂ ಕಾರವಾರ ತಾಲೂಕಿನಲ್ಲಿ ಹಲವು ರಸ್ತೆಗಳು, ಗ್ರಾಮಗಳು ಜಲಾವೃತಗೊಂಡಿದೆ. ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಗೆ ಅರಗಾ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 66ರ ಮೇಲೆ ನೀರು ನಿಂತಿದೆ. ಹೀಗಾಗಿ ಹೆದ್ದಾರಿ ಸಂಚಾರ ಬಂದ್ ಮಾಡಲಾಗಿದ್ದು, ಗೋವಾ-ಮಂಗಳೂರು ನಡುವೆ ವಾಹನ ಸಂಚಾರ ಸ್ಥಗಿತಗೊಂಡಿದೆ. ಕಾರವಾರ ನಗರದ ಹಬ್ಬುವಾಡ ರಸ್ತೆ ಜಲಾವೃತಗೊಂಡಿದ್ದು, ಮಳೆ ನೀರು ಹರಿದು ಹೋಗಲಾಗದೇ ರಸ್ತೆಯು ಹೊಳೆಯಂತಾಗಿದೆ. ಕೆಎಸ್ಆರ್‌ಟಿಸಿ ಡಿಪೋದಲ್ಲೂ ನೀರು ತುಂಬಿಕೊಂಡಿದೆ.
ಕಲಬುರಗಿಯಲ್ಲಿ ದೇವಸ್ಥಾನಕ್ಕೆ ಜಲದಿಗ್ಬಂಧನ
ಕಲಬುರಗಿ ಜಿಲ್ಲೆಯಲ್ಲಿ ಅಫಜಲಪುರ, ಚಿಂಚೊಳ್ಳಿ ಸೇರಿ ಹಲವೆಡೆ ಭಾರಿ ಮಳೆಯಾಗುತ್ತಿದ್ದು, ದತ್ತಾತ್ರೇಯ ದೇವಸ್ಥಾನಕ್ಕೆ ನೀರು ನುಗ್ಗಿದೆ. ಅಫಜಲಪುರ ತಾಲೂಕಿನ ಸುಕ್ಷೇತ್ರ ಗಣಗಾಪುರದ ಶ್ರೀ ಗುರು ದತ್ತಾತ್ರೇಯ ದೇವಸ್ಥಾನಕ್ಕೆ ಜಲದಿಗ್ಬಂಧನ ಹಾಕಲಾಗಿದೆ.
ಕೆಳ ಹಂತದ ಸೇತುವೆಗಳು ಜಲಾವೃತ
ಮಹಾರಾಷ್ಟ್ರ ಘಟ್ಟ ಪ್ರದೇಶಗಳಲ್ಲಿ ಮಳೆ ಚುರುಕಾಗಿದ್ದು, ದೂದಗಂಗಾ ನದಿಯ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ. ದೂದಗಂಗಾ ನದಿಗೆ ಅಡ್ಡಲಾಗಿರುವ 2 ಕೆಳ ಹಂತದ ಸೇತುವೆಗಳು ಜಲಾವೃತಗೊಂಡಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ದತ್ತವಾಡ – ಮಲ್ಲಿಕವಾಡ ಸೇತುವೆ ಹಾಗೂ ನಿಪ್ಪಾಣಿ ತಾಲೂಕಿನ ಭೋಜ – ಕಾರದಗಾ ಸೇತುವೆ ಜಲಾವೃತಗೊಂಡಿದೆ. ಕೆಳ ಹಂತದ ಸೇತುವೆ ಜಲಾವೃತ ಹಿನ್ನೆಲೆ ಪರ್ಯಾಯ ಮಾರ್ಗದ ಮೂಲಕ ಜನರು ಸಂಚಾರಿಸುತ್ತಿದ್ದಾರೆ. ನದಿಗಳ ನೀರಿನ ಮಟ್ಟ ಏರಿಕೆ ಹಿನ್ನೆಲೆ ನದಿಗಳಲ್ಲಿ ಇಳಿಯದಂತೆ ಬೆಳಗಾವಿ ಜಿಲ್ಲಾಡಳಿತದಿಂದ ಎಚ್ಚರಿಕೆ ನೀಡಿದೆ.
ಅಪಾಯ ಮಟ್ಟ ಮೀರಿ ಹರಿಯುತ್ತಿರುವ ಮಾಲತಿ ನದಿ
ಪ್ರವಾಹ ರೀತಿಯಲ್ಲಿ ಮಾಲತಿ ನದಿ ಉಕ್ಕಿ ಹರಿಯುತ್ತಿದೆ. ಅಪಾಯ ಮಟ್ಟ ಮೀರಿ ರಸ್ತೆ ಮೇಲೆ ಉಕ್ಕಿ ಹರಿಯುತ್ತಿದೆ. ಶಿವಮೊಗ್ಗದ ಗುಡ್ಡಕೇರಿಯಿಂದ ಹೊನ್ನೆತಾಳು ಮಾರ್ಗವಾಗಿ ಬಿದರಗೋಡು ಸಂಪರ್ಕಿಸುವ ರಸ್ತೆ ಸ್ಥಗಿತಗೊಂಡಿದೆ. ನಾಬಳ ಬಳಿ ಮಾಲತಿ ನದಿ ಉಕ್ಕಿ ಹರಿಯುತ್ತಿರುವ ಪರಿಣಾಮ ವಾಹನ ಸಂಚಾರದಲ್ಲಿ ಮಾರ್ಗ ಬದಲಾವಣೆ ಆಗಿದೆ. ಅಕ್ಕಪಕ್ಕದ ತೋಟಕ್ಕೂ ನೀರು ನುಗ್ಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ