ಬೆಂಗಳೂರು: ರಾಜ್ಯಾದ್ಯಂತ ಮಳೆಯು (karnataka weather Forecast) ಅಬ್ಬರಿಸುತ್ತಿದ್ದು, ಜನರು ತತ್ತರಿಸಿ ಹೋಗಿದ್ದಾರೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ (Karnataka Rain) ಜನ-ಜೀವನ ಅಸ್ತವ್ಯಸ್ತವಾಗಿದೆ. ಕರಾವಳಿಯಲ್ಲಿ ಧಾರಾಕಾರ ಮಳೆ ಮುಂದುವರಿದಿದ್ದು, ಉತ್ತರಕನ್ನಡ ಜಿಲ್ಲೆಯ ಹೊನ್ನಾವರ-ಬೆಂಗಳೂರು ಹೆದ್ದಾರಿಯಲ್ಲಿ ಮತ್ತೆ ಗುಡ್ಡ ಕುಸಿತ ಉಂಟಾಗಿದೆ. ಎಡಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 69ರ ಖರ್ವಾ ಯಲಗುಪ್ಪಾ ಕ್ರಾಸ್ ಬಳಿ ರಸ್ತೆಗೆ ಗಿಡ-ಮರ ಸಹಿತ ಮಣ್ಣು ಕುಸಿದಿದೆ. ಪರಿಣಾಮ ಹೊನ್ನಾವರ-ಗೇರುಸೊಪ್ಪ-ಸಾಗರ ಮಾರ್ಗದ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ. ಸ್ಥಳಕ್ಕೆ ಹೊನ್ನಾವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬ್ಯಾರಿಕೇಡ್ ಅಳವಡಿಸಿ ಏಕಮುಖ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ಆದರೂ ಭಾರೀ ವಾಹನಗಳ ಸಂಚಾರಕ್ಕೆ ಮಣ್ಣು ತೆರವುಗೊಳಿಸಬೇಕಾದ ಅವಶ್ಯಕತೆಯಿದ್ದು, ವಾಹನಗಳು ಸಾಲುಗಟ್ಟಿ ನಿಲ್ಲುವಂತಾಗಿದೆ. ಈ ಹಿನ್ನೆಲೆ ಕೂಡಲೇ ಮಣ್ಣು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲು ತಾಲ್ಲೂಕಾಡಳಿತ ಮುಂದಾಗಿದೆ. ಇತ್ತ ಗುಡ್ಡದಿಂದ ಬಂಡೆಕಲ್ಲು ಜಾರಿ ಬಡಿದು ಮನೆಗೆ ಹಾನಿಯಾಗಿದೆ. ಕಾರವಾರದ ಹಬ್ಬುವಾಡ ಫಿಶರೀಸ್ ಕಾಲೋನಿ ಬಳಿ ಘಟನೆ ನಡೆದಿದೆ. ವಿನೋದ್ ಉಳ್ವೇಕರ್ ಎಂಬುವವರ ಮನೆಗೆ ಬಂಡೆಗಲ್ಲು ಬಡಿದಿದೆ. ಪರಿಣಾಮ ಮನೆಯ ಹಿಂಬದಿ ಗೋಡೆ ಜಖಂಗೊಂಡಿದೆ. ಭಾರೀ ಮಳೆ ಹಿನ್ನಲೆ ಮತ್ತೆ ಗುಡ್ಡ ಕುಸಿತ ಆತಂಕದಲ್ಲಿದ್ದಾರೆ.
ಮಹಾರಾಷ್ಟ್ರದಲ್ಲಿ ಮುಂದುವರಿದ ಮಳೆ ಅವಾಂತರಗಳು
ನಿರಂತರ ಮಳೆಗೆ ಮಹಾರಾಷ್ಟ್ರದಲ್ಲಿ ಅವಾಂತರಗಳು ಮುಂದುವರೆದಿದೆ. ನೋಡ ನೋಡುತ್ತಿದ್ದಂತೆ ಗುಡ್ಡ ಕುಸಿದಿದೆ. ಮಹಾರಾಷ್ಟ್ರದ ರತ್ನಾಗಿರಿ ಜಿಲ್ಲೆಯ ಖೇಡ ತಾಲೂಕಿನ ಸಾಖರೋಲಿ ಗ್ರಾಮದ ಬಳಿ ಗುಡ್ಡ ಕುಸಿದಿದೆ. ಗುಡ್ಡ ಕುಸಿತದಿಂದ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ. ಬೃಹತ್ ಪ್ರಮಾಣದ ಗುಡ್ಡ ಜರಿದು ಕುಸಿಯುವ ದೃಶ್ಯವನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ.
ಕೊಡಗಿನಲ್ಲಿ ಧರೆಗುರುಳಿದ ಮರಗಳು, ವಿದ್ಯುತ್ ಕಂಬಗಳು
ಕೊಡಗಿನಲ್ಲಿ ಪುನರ್ವಸು ಮಳೆಯ ಆರ್ಭಟ ಮುಂದುವರೆದಿದೆ. ಭಾರಿ ಮಳೆ-ಗಾಳಿಗೆ ಜಿಲ್ಲೆಯ ಹಲವೆಡೆ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿವೆ. ತಲಕಾವೇರಿ ಭಾಗಮಂಡಲದಲ್ಲೂ ಭಾರಿ ಗಾಳಿ-ಮಳೆಯಾಗುತ್ತಿದೆ. ಅಪಾಯದ ಮಟ್ಟ ಮೀರಿ ಕಾವೇರಿ ನೀರು ಹರಿಯುತ್ತಿದೆ.ಭಾಗಮಂಡಲ ತ್ರೀವೇಣಿ ಸಂಗಮದ ಸ್ನಾನಘಟ ಮುಳುಗಡೆಯಾಗಿದೆ. ಮಡಿಕೇರಿ, ಭಾಗಮಂಡಲ ರಸ್ತೆಯ ಅಲ್ಲಲ್ಲಿ ಮರಗಳು ಧರೆಗುರುಳಿದ್ದು, ಚೆಸ್ಕಾಂ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಯಿಂದ ತೆರವು ಕಾರ್ಯಚರಣೆ ನಡೆಯುತ್ತಿದೆ. ಮಡಿಕೇರಿ ಸಮೀಪದ ಗಾಳೀಬಿಡು ಗ್ರಾಮದಲ್ಲಿ ಜಸ್ಟ್ 24 ಗಂಟೆ ಅವಧಯಲ್ಲಿ 6 ಇಂಚು ಮಳೆಯಾಗಿದೆ. ವಿದ್ಯುತ್ ತಂತಿ, ಕಂಬಗಳು ತುಂಡಾದ ಹಿನ್ನೆಲೆಯಲ್ಲಿ ಕೊಡಗಿನ ಕೆಲವು ಗ್ರಾಮಗಳು ವಿದ್ಯುತ್ ಸಂಪರ್ಕ ಇಲ್ಲದೆ ಕತ್ತಲಲ್ಲಿ ಮುಳುಗಿದೆ.
ಚಿಕ್ಕಮಗಳೂರಲ್ಲಿ ರಸ್ತೆಗೆ ಅಡ್ಡಲಾಗಿ ಬಿದ್ದ ಬೃಹತ್ ಮರ
ಚಿಕ್ಕಮಗಳೂರಿನಲ್ಲಿ ಭಾರಿ ಗಾಳಿ ಮಳೆಗೆ ರಸ್ತೆಗೆ ಬೃಹತ್ ಗಾತ್ರದ ಮರವೊಂದು ಅಡ್ಡಲಾಗಿ ಬಿದ್ದಿದೆ. ಇದರಿಂದಾಗಿ ಸೋಮವಾರ ಬೆಳ್ಳಂಬೆಳಗ್ಗೆ ರಸ್ತೆ ಸಂಚಾರ ಅಸ್ತವ್ಯಸ್ತವಾಗಿತ್ತು. ಮೂಡಿಗೆರೆ ತಾಲ್ಲೂಕಿನ ಕೋಗಿಲೆ ದೇವರ ಮನೆ ಗ್ರಾಮದ ರಸ್ತೆಗೆ ಮರವು ಅಡ್ಡಲಾಗಿ ಬಿದ್ದಿತ್ತು. ಮರ ಬಿದ್ದ ಪರಿಣಾಮ ಶಾಲಾ ಕಾಲೇಜಿಗೆ ತೆರಳು ವಿದ್ಯಾರ್ಥಿಗಳು ಕೆಲಕಾಲ ಪರದಾಡಬೇಕಾಯಿತು. ಹೀಗಾಗಿ ಸ್ಥಳೀಯರಿಂದಲೇ ಮರ ತೆರವು ಕಾರ್ಯಾಚರಣೆ ನಡೆಸಲಾಯಿತು.
ಇದನ್ನೂ ಓದಿ: Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!
ಶಿವಮೊಗ್ಗದಲ್ಲಿ ಮಳೆ ಆರ್ಭಟಕ್ಕೆ ಮನೆ ನೆಲಸಮ
ಶಿವಮೊಗ್ಗ ಜಿಲ್ಲೆಯಲ್ಲೂ ಧಾರಾಕಾರ ಮಳೆಯಾಗುತ್ತಿದ್ದು, ಹಾರನಹಳ್ಳಿಯಲ್ಲಿ ಮಳೆಗೆ ಮನೆಯು ಕುಸಿದಿದೆ. ಮಳೆ ಆರ್ಭಟಕ್ಕೆ ನವೀದ್ ಎಂಬುವರಿಗೆ ಸೇರಿದ ಮನೆ ನೆಲಸಮವಾಗಿದೆ. ಮನೆ ಕಳೆದುಕೊಂಡ ಕುಟುಂಬಸ್ಥರು ಕಣ್ಣೀರಿಡುತ್ತಿದ್ದಾರೆ. ಮನೆ ಹಾನಿ ಹಿನ್ನೆಲೆ ಸೂಕ್ತ ಪರಿಹಾರ ನೀಡಲು ಕುಟುಂಬಸ್ಥರು ಒತ್ತಾಯಿಸಿದ್ದಾರೆ.
ತುಮಕೂರಲ್ಲಿ ಮಳೆಗೆ ಕೆಸರು ಗದ್ದೆಯಾದ ರಸ್ತೆ
ಮಳೆಗೆ ಗ್ರಾಮದ ರಸ್ತೆ ಕೆಸರು ಗದ್ದೆಯಾಗಿದೆ. ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಸಾಗರನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಕೆಸರು ತುಂಬಿದ ರಸ್ತೆಯಲ್ಲಿ ಓಡಾಡುವ ಪರಿಸ್ಥಿತಿ ಇದ್ದು, ವಾಹನ ಸವಾರರು, ಶಾಲಾ ಮಕ್ಕಳು, ವೃದ್ಧರು ಪರದಾಟ ನಡೆಸಿದರು. ರಸ್ತೆಗೆ ಡಾಂಬರು ಹಾಕಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಮುಂಜಾನೆಯಿಂದ ಸತತವಾಗಿ ತುಂತುರು ಮಳೆ ಸುರಿಯುತ್ತಿದ್ದು, ತುಮಕೂರು ಮಲೆನಾಡಿನಂತಾಗಿದೆ.
ಉಡುಪಿಯಲ್ಲಿ ಶಾಲೆಯ ಗೋಡೆ ಕುಸಿತ
ನಿನ್ನೆ ಭಾನುವಾರ ರಾತ್ರಿ ಸುರಿದ ಮಳೆಗೆ ಶಾಲೆಯ ಅಡುಗೆ ಕೋಣೆಗೋಡೆ ಕುಸಿದಿದೆ. ಉಡುಪಿ ನಗರದ ದೊಡ್ಡಣ್ಣಗುಡ್ಡೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಘಟನೆ ನಡೆದಿದೆ. ಶಾಲೆಯ ಅಡುಗೆ ಕೋಣೆಯ ಗೋಡೆ ಭಾರಿ ಮಳೆಗೆ ಕುಸಿದ ಪರಿಣಾಮ ವಸ್ತುಗಳಿಗೆ ಹಾನಿಯಾಗಿದೆ. ರಾತ್ರಿ ವೇಳೆ ಕುಸಿದ ಹಿನ್ನೆಲೆಯಲ್ಲಿ ಯಾರಿಗೂ ಯಾವುದೇ ಅಪಾಯ ಸಂಭವಿಸಿಲ್ಲ.
ಕಾಲುವೆ ಬಂದ್ ಸೃಷ್ಟಿಯಾದ ನೆರೆ ಪರಿಸ್ಥಿತಿ
ಉತ್ತರಕನ್ನಡ ಜಿಲ್ಲೆಯ ಕಾರವಾರದ ಚೆಂಡಿಯಾ ಐಸ್ ಫ್ಯಾಕ್ಟರಿ ವ್ಯಾಪ್ತಿಯ ನಿವಾಸಿಗಳು ಪ್ರತಿಭಟಿಸಿದರು. ನೌಕಾನೆಲೆ ಅವಾಂತರದಿಂದ ಚೆಂಡಿಯಾ ವ್ಯಾಪ್ತಿಯಲ್ಲಿ ನೆರೆ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ನೆರೆ ಸಂತ್ರಸ್ತರಿಂದ ನೌಕಾನೆಲೆ ಗೇಟ್ ಎದುರು ಪ್ರತಿಭಟಿಸಿದರು. ನಿನ್ನೆ ಭಾನುವಾರ ಸುರಿದ ಧಾರಾಕಾರ ಮಳೆಗೆ ಚೆಂಡಿಯಾ ಜನವಸತಿ ಪ್ರದೇಶ ಜಲಾವೃತಗೊಂಡಿತ್ತು.
ನೌಕಾನೆಲೆ ಕಾಂಪೌಂಡ್ ಅಳವಡಿಸಿ ನೀರಿನ ಕಾಲುವೆ ಬಂದ್ ಮಾಡಿದ್ದರಿಂದ ನೆರೆ ಪರಿಸ್ಥಿತಿ ಉಂಟಾಗಿದೆ ಎಂಬ ಆರೋಪವಿದೆ. ಮಳೆಯ ನೀರು ಸಮುದ್ರಕ್ಕೆ ಸೇರಲು ನೌಕಾನೆಲೆ ಕಾಂಪೌಂಡ್ ಅಡ್ಡಿಯಾಗಿದೆ. ಮಳೆಯ ನೀರು ಸರಾಗವಾಗಿ ಹರಿದುಹೋಗಲು ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿದರು. ಇದೇ ವೇಳೆ ಚೆಂಡಿಯಾದ ಸಾಯಿನಗರದಲ್ಲಿರುವ ನೌಕಾನೆಲೆ ಸ್ಕೂಲ್ ಗೇಟ್ ಬಳಿ ಪ್ರತಿಭಟಿಸಿದರು.
ಕುಮಾರಧಾರ ಸ್ನಾನಘಟ್ಟ ಮುಳುಗಡೆ
ಘಟ್ಟ ಪ್ರದೇಶದಲ್ಲಿ ಭಾರೀ ಮಳೆಯಿಂದ ಮತ್ತೆ ಕುಮಾರಧಾರ ಸ್ನಾನಘಟ್ಟ ಮುಳುಗಡೆಯಾಗಿದೆ. ದಕ್ಷಿಣಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ಸ್ನಾನಘಟ್ಟ, ಘಟ್ಟ ಪ್ರದೇಶ, ಕುಮಾರಪರ್ವತ ಸೇರಿದಂತೆ ಸುಬ್ರಹ್ಮಣ್ಯ ಭಾಗಗಳಲ್ಲಿ ಭಾರಿ ಮಳೆಯಾಗುತ್ತಿದೆ. ಈ ಬಾರಿಯ ಮಳೆಗೆ ಕುಮಾರಧಾರ ಸ್ನಾನ ಘಟ್ಟ ಎರಡನೇ ಬಾರಿ ಮುಳುಗಡೆಯಾಗಿದೆ. ಕುಮಾರಧಾರ ಕಿಂಡಿ ಆಣೆಕಟ್ಟು ಸಂಪೂರ್ಣ ಮುಳುಗಡೆಯಾಗಿದೆ. ಇನ್ನೂ ಕುಮಾರಧಾರ ನದಿಗೆ ಇಳಿಯದಂತೆ ಭಕ್ತಾಧಿಗಳಿಗೆ ಸೂಚನೆ ನೀಡಲಾಗಿದೆ. ಕುಮಾರಧಾರ ನದಿತೀರದಲ್ಲಿ ದೇವಳದ ಭದ್ರತಾ ಸಿಬ್ಬಂದಿ, ಹೋಮ್‌ಗಾರ್ಡ್ ನಿಯೋಜನೆ ಮಾಡಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ