ಉತ್ತರಕನ್ನಡ ಉತ್ತರಕನ್ನಡದಲ್ಲಿ ರಣಭೀಕರ ಮಳೆಗೆ (Karnataka Rain Effect) ರಾಷ್ಟ್ರೀಯ ಹೆದ್ದಾರಿ 66ರ ಶಿರೂರು ಬಳಿ ಭಾರೀ ಗುಡ್ಡಕುಸಿತ (Karnataka Rain) ಉಂಟಾಗಿದೆ. ಅಂಕೋಲಾ ತಾಲೂಕಿನ ಶಿರೂರು ಬಳಿ ಅಂಗಡಿಯೊಂದರ ಮೇಲೆ ಗುಡ್ಡ ಕುಸಿದಿದೆ. 5ಕ್ಕೂ ಹೆಚ್ಚು ಮಂದಿ ಗುಡ್ಡದ ಮಣ್ಣಿನಡಿ ಸಿಲುಕಿರುವ ಶಂಕೆ ಇದೆ.
ಒಂದೇ ಕುಟಂಬದ ಐವರು ಮಣ್ಣಿನಡಿ ಸಿಲುಕಿದ್ದಾರೆ ಎನ್ನಲಾಗಿದೆ. ಲಕ್ಷ್ಮಣ ನಾಯ್ಕ(47), ಶಾಂತಿ ನಾಯ್ಕ(36), ರೋಶನ(11), ಅವಂತಿಕಾ(6), ಜಗನ್ನಾಥ(55) ಎಂಬುವವರು ಮಣ್ಣಿನಡಿ ಸಿಲುಕಿದ್ದಾರೆ ಎನ್ನಲಾಗಿದೆ. ಐಆರ್‌ಬಿ ಕಂಪೆನಿಯಿಂದ ಮಣ್ಣು ತೆರವು ಕಾರ್ಯಾಚರಣೆ ನಡೆಯುತ್ತಿದೆ.
5 ಮಂದಿ ಕುಟುಂಬ ವಾಸವಿದ್ದ ಅಂಗಡಿ ಮೇಲೆ ಗುಡ್ಡ ಕುಸಿದಿದ್ದು, ಗ್ರಾಹಕರು ಸೇರಿ ಮನೆಯವರು ಮಣ್ಣಿನಡಿ ಸಿಲುಕಿರುವ ಶಂಕೆ ಇದೆ. ಧಾರಾಕಾರ ಮಳೆಯಿಂದಾಗಿ ಹೆದ್ದಾರಿ ಪಕ್ಕದ ಗುಡ್ಡ ಸಡಿಲಗೊಂಡಿತ್ತು. ಗಂಗಾವಳಿ ನದಿಗೆ ಹೊಂದಿಕೊಂಡಿರುವ ಶಿರೂರು ಪ್ರದೇಶ ಇದಾಗಿದ್ದು, ರಾಷ್ಟ್ರೀಯ ಹೆದ್ದಾರಿ 66ರ ಅಂಕೋಲಾ-ಕುಮಟಾ ನಡುವೆ ಸಂಚಾರ ಸಂಪೂರ್ಣ ಬಂದ್ ಆಗಿದೆ.
ಗುಡ್ಡ ಕುಸಿದ ರಭಸಕ್ಕೆ ನದಿಗೆ ಬಿದ್ದ ಗ್ಯಾಸ್ ಟ್ಯಾಂಕರ್
ಅಂಕೋಲಾದ ಶಿರೂರು ಬಳಿ ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಡ್ಡ ಕುಸಿದ ರಭಸಕ್ಕೆ ಹೆದ್ದಾರಿ ಬದಿ ನಿಲ್ಲಿಸಲಾಗಿದ್ದ ಗ್ಯಾಸ್ ಟ್ಯಾಂಕರ್ ನದಿಗೆ ಬಿದ್ದಿದೆ. ಶಿರೂರಿನ ಬೊಮ್ಮಯ್ಯ ದೇವಸ್ಥಾನದ ಬಳಿ ಗುಡ್ದ ಕುಸಿದ ಪರಿಣಾಮ ಟೀ ಸ್ಟಾಲ್ ಸೇರಿ ಹಲವು ಅಂಗಡಿಗಳಿಗೆ ಹಾನಿಯಾಗಿದೆ. ಘಟನೆಯಲ್ಲಿ ಒಂದೇ ಕುಟುಂಬದ ಐವರು ಸೇರಿ ಹಲವರು ಮಣ್ಣಿನಡಿ ಸಿಲುಕಿರುವ ಶಂಕೆ ಇದೆ. ಸ್ಥಳಕ್ಕೆ ಅಂಕೋಲಾ ಪೊಲೀಸ್, ಅಗ್ನಿಶಾಮಕ ಸಿಬ್ಬಂದಿ, ಎನ್‌ಹೆಚ್‌ಎಐ ಆಂಬ್ಯುಲೆನ್ಸ್ ದೌಡಾಯಿಸಿದೆ.
ಇದನ್ನೂ ಓದಿ: Rain News: ಮಳೆಯ ಅಬ್ಬರಕ್ಕೆ ಧಡಾರ್ ಎಂದು ನೆಲಕಚ್ಚಿದ ಕೊಟ್ಟಿಗೆಹಾರ ಬಸ್ ನಿಲ್ದಾಣ!
ಹಾಸನದಲ್ಲಿ ಮರ ಬಿದ್ದು ಮನೆ ಜಖಂ, ವಿದ್ಯುತ್ ಸಂಪರ್ಕ ಕಡಿತ
ಭಾರಿ ಮಳೆ- ಗಾಳಿಗೆ ತೆಂಗಿನ ಮರವೊಂದು ಮನೆ ಮೇಲೆ, ವಿದ್ಯುತ್ ತಂತಿ ಮೇಲೆ ಬಿದ್ದಿದೆ. ಪರಿಣಾಮ ಮನೆ ಸಂಪೂರ್ಣ ಜಖಂಗೊಂಡರೆ, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಅಂಬೇಡ್ಕರ್ ನಗರದಲ್ಲಿ ಘಟನೆ ನಡೆದಿದೆ. ಮಾಜಿ ಶಾಸಕ ದಿ.ವೈ.ಎನ್.ರುದ್ರೇಶ್‌ಗೌಡರಿಗೆ ಸೇರಿದ ಮನೆ ಹಾನಿಯಾಗಿದೆ. ವಿದ್ಯುತ್ ಇಲ್ಲದ ನಿವಾಸಿಗಳು ಪರದಾಡುತ್ತಿದ್ದಾರೆ. ಕೂಡಲೇ ಮರ ತೆರವುಗೊಳಿಸಿ ವಿದ್ಯುತ್ ಪೂರೈಕೆ ಮಾಡುವಂತೆ ಒತ್ತಾಯ ಕೇಳಿ ಬಂದಿದೆ.
ಶಿವಮೊಗ್ಗದಲ್ಲಿ ಕಲ್ಲುಹಳ್ಳ ಸೇತುವೆ ತಡೆಗೋಡೆ ಕುಸಿತ
ಶಿವಮೊಗ್ಗದ ಹೊಸನಗರ ಸಮೀಪ ಇರುವ ಕಲ್ಲುಹಳ್ಳ ಸೇತುವೆಯ ತಡೆಗೋಡೆ ಕುಸಿತಗೊಂಡಿದ್ದು, ಬಾರಿ ಅನಾಹುತವೊಂದು ತಪ್ಪಿದೆ. ರಾಣಿಬೆನ್ನೂರು – ಬೈಂದೂರು ರಾಷ್ಟ್ರೀಯ ಹೆದ್ದಾರಿ 766 c ಸೇರಿದ ತಡೆಗೋಡೆ ಕುಸಿತಗೊಂಡಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಡಿಯಲ್ಲಿ ಸುಮಾರು 5 ಕೋಟಿ ಅನುದಾನದಲ್ಲಿ ಸೇತುವೆ ನಿರ್ಮಾಣ ಮಾಡಲಾಗಿತ್ತು. ಲೋಕಾರ್ಪಣೆಗೊಳ್ಳುವ ಮೊದಲೇ ಸೇತುವೆಯ ತಡೆಗೋಡೆ ಕುಸಿದಿದೆ. ಇದೇ ರೀತಿ ಮಳೆ ಮುಂದುವರೆದಲ್ಲಿ ಇನ್ನಷ್ಟು ಭಾಗ ಕುಸಿಯುವ ಭೀತಿ ಇದೆ.
ಹಾಸನದಲ್ಲೂ ಮಳೆ ಅಬ್ಬರಕ್ಕೆ ತಡೆಗೋಡೆ ಕುಸಿತ
ಹಾಸನ ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ತಡೆ ಗೋಡೆ ಕುಸಿದಿದೆ. ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಕಾಂಕ್ರೀಟ್ ರಸ್ತೆಯ ತಡೆಗೋಡೆ ಸಂಪೂರ್ಣ ಕುಸಿದಿದ್ದು, ಒಂದು ಬದಿಯ ರಸ್ತೆ ಸಂಚಾರ ಬಂದ್ ಆಗುವ ಆತಂಕ ಇದೆ. ಸಕಲೇಶಪುರ ತಾಲೂಕಿನ ಗುಲಗಳಲೆ ಗ್ರಾಮದ, ರಾಟೆಮನೆ ಸಮೀಪ ಘಟನೆ ನಡೆದಿದೆ.
ಸುಮಾರು 40 ಅಡಿಯಷ್ಟು ಎತ್ತರಕ್ಕೆ ನಿರ್ಮಿಸಿದ್ದ ತಡೆಗೋಡೆಯು ರಾತ್ರಿಯಿಡೀ ಸುರಿದ ಭಾರಿ ಮಳೆಗೆ ಕುಸಿದು ಬಿದ್ದಿದೆ. ವಾಹನ ಸಂಚಾರ ಹೆಚ್ಚಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಂಕ್ರೀಟ್ ರಸ್ತೆ ಬಿರುಕು ಬಿಡುತ್ತಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ