ಉಡುಪಿ: ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಭಾರಿ ಮಳೆಯಾಗುತ್ತಿದ್ದು (Rain News), ನೋಡ ನೋಡುತ್ತಿದ್ದಂತೆ ಮನೆ ಮುಂದಿದ್ದ ಬಾವಿಯೊಂದು ಪಾತಾಳ (well collapsed) ಸೇರಿದೆ. ಉಡುಪಿ ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಭೂಕುಸಿತಕ್ಕೆ ಮನೆಯ ಬಾವಿ ಧಾರಾಶಾಹಿಯಾಗಿದೆ.
ಬಾವಿಯೊಂದು ಕುಸಿಯುತ್ತಿರುವ ವಿಡಿಯೋ ವೈರಲ್ ಆಗಿದೆ. ಉಡುಪಿಯ ಕಾರ್ಕಳ ತಾಲೂಕಿನ ನೆಲ್ಲಿಕಟ್ಟೆಯ ಸರ್ವಿಸ್ ಸ್ಟೇಶನ್ ಸಮೀಪ ಘಟನೆ ನಡೆದಿದೆ. ನಿನ್ನೆ ಸುರಿದ ಭಾರಿ ಮಳೆಯಿಂದಾಗಿ ಭೂಮಿ ಒಳಗೆ ಬಾವಿ ಜಾರಿದೆ. ಬಾವಿ ಪಕ್ಕದಲ್ಲೆ ಮನೆ ಇದ್ದು, ಭೂಕುಸಿತದಿಂದಾಗಿ ಆತಂಕ ಹೆಚ್ಚಾಗಿದೆ.
ಮಂಗಳೂರಿನಲ್ಲಿ ಹೆಚ್ಚಾದ ಕಡಲ ಅಬ್ಬರ
ಮಂಗಳೂರಿನಲ್ಲಿ ಕಡಲ ಅಬ್ಬರ ಹೆಚ್ಚಾಗುತ್ತಿದ್ದು, ನೋಡ ನೋಡುತ್ತಿದ್ದಂತೆ ಮನೆಯೊಂದು ಸಮುದ್ರಕ್ಕುರುಳಿದೆ. ಉಳ್ಳಾಲದ ಬಟ್ಟಪಾಡಿ ಕಡಲ ತೀರದಲ್ಲಿದ್ದ ಮನೆಯು ಅಲೆಗಳ ಹೊಡೆತಕ್ಕೆ ಸಿಲುಕಿ ಬಿದ್ದು ಹೋಗಿದೆ. ಮನೆಯಲ್ಲಿ ಯಾರು ಇಲ್ಲದ ಕಾರಣ ಭಾರೀ ಅನಾಹುತ ತಪ್ಪಿದೆ. ಕಡಲ ಅಬ್ಬರ ಹೆಚ್ಚಾದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮನೆಯವರನ್ನು ಸ್ಥಳಾಂತರ ಮಾಡಿತ್ತು. ಮನೆ ಬೀಳುವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ.
ಇದನ್ನೂ ಓದಿ: Rain News: ಅಬ್ಬರಿಸುತ್ತಿರುವ ಮುಂಗಾರು: 3 ಜಿಲ್ಲೆಗೆ ರೆಡ್ ಅಲರ್ಟ್, ಇನ್ನೂ ನಾಲ್ಕು ದಿನ ಜೋರು ಮಳೆ
ಗುಡ್ಡ ಕುಸಿದು ಶಾಲಾ ಕಟ್ಟಡಕ್ಕೆ ಹಾನಿ
ಕೊಡಗು ಸುತ್ತಮುತ್ತ ಭಾರಿ ಮಳೆಯಾಗುತ್ತಿದ್ದು ಅನಾಹುತವನ್ನೇ ಸೃಷ್ಟಿಸಿದೆ. ಭಾರೀ ಮಳೆಗೆ ಶಾಲಾ ಕಟ್ಟಡದ ಮೇಲೆ ಗುಡ್ಡ ಕುಸಿದಿದೆ. ಕೊಡಗಿನ ಮಡಿಕೇರಿ ತಾಲೂಕಿನ ಕೊಯನಾಡಿನಲ್ಲಿ ಘಟನೆ ನಡೆದಿದೆ. ಕೊಯನಾಡಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾತ್ರಿ ವೇಳೆ ಗುಡ್ಡ ಕುಸಿದು ಶಾಲಾ ಕಟ್ಟಡಕ್ಕೆ ಹಾನಿ ಯಾಗಿದೆ.
ಗುಡ್ಡದ ಮಣ್ಣು ಬಿದ್ದ ರಭಸಕ್ಕೆ ಶಾಲೆಯ ಗೋಡೆ ಧ್ವಂಸವಾಗಿದೆ. ಸುಮಾರು 80ಕ್ಕೂ ಅಧಿಕ ಮಕ್ಕಳು ಓದುತ್ತಿರುವ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ನಡೆಯುತ್ತಿದ್ದ ತರಗತಿಗೂ ಹಾನಿಯಾಗಿದೆ. ಮಳೆ ಹೆಚ್ಚಾದರೆ ಮಣ್ಣು ಮತ್ತಷ್ಟು ಕುಸಿಯುವ ಸಾಧ್ಯತೆ ಇದ್ದು, ಶಾಲೆ ಬಳಿಯ ಗುಡ್ಡದ ಮಣ್ಣು ತೆರವಿಗೆ ಪೋಷಕರು ಆಗ್ರಹಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಭಾರಿ ಗಾಳಿ-ಮಳೆಗೆ ರಸ್ತೆಗೆ ಬಿದ್ದ ಬೃಹತ್ ಮರ
ಮಲೆನಾಡು ಭಾಗದಲ್ಲಿ ಗಾಳಿ ಮಳೆ ಅಬ್ಬರ ಮುಂದುವರಿದಿದೆ. ಮೂಡಿಗೆರೆ ತಾಲೂಕಿನ ಸಂಪಿಗೆಖಾನ್ ಬಳಿ ಬೃಹತ್ ಮರವೊಂದು ಬುಡ ಸಮೇತ ಕಿತ್ತುಬಂದಿದೆ. ರಾಜ್ಯ ಹೆದ್ದಾರಿಗೆ ಬೃಹತ್ ಮರ ಉರುಳಿದೆ. ಮೂಡಿಗೆರೆಯಿಂದ ಹೊರನಾಡಿಗೆ ಸಂಪರ್ಕ ಕಲ್ಪಿಸುವ ಮಾರ್ಗ ಇದಾಗಿದ್ದು, ಮರ ತೆರವು ಮಾಡಿ ಸುಗಮ ಸಂಚಾರಕ್ಕೆ ಸ್ಥಳೀಯರು ಅವಕಾಶ ಮಾಡಿಕೊಟ್ಟಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ