ಭಾರಿ ಮಳೆಯಿಂದಾಗಿ (Karnataka Rain) ಅಂಕೋಲಾ ಶಿರೂರು ಬಳಿ ಹೆದ್ದಾರಿಯ ಮೇಲೆ ಗುಡ್ಡ ಕುಸಿತದಿಂದ ಹೆದ್ದಾರಿ ಸಂಚಾರ ಬಂದ್ ಆಗಿದೆ. ಈ ಹಿನ್ನೆಲೆಯಲ್ಲಿ ಕೊಂಕಣ ರೈಲ್ವೆ ಇಲಾಖೆಯು ರೈಲು ವ್ಯವಸ್ಥೆ ಮಾಡಿದೆ. ಗೋವಾಕ್ಕೆ ತೆರಳುವ ಮುಖ್ಯ ಮಾರ್ಗ ಬಂದ್ ಆಗಿರುವ ಹಿನ್ನೆಲೆಯಲ್ಲಿ ರೈಲು ಸೇವೆ ಇರಲಿದೆ. ಮಾಡಗಾಂವ್ ಜಂಕ್ಷನ್ ಹಾಗೂ ಮಂಗಳೂರು ಜಂಕ್ಷನ್ ನಡುವೆ ಮೀಸಲರಹಿತ ರೈಲು ಓಡಾಡಲಿದೆ. ಜುಲೈ 20, 21, 22 ರಂದು 2 ಕೇಂದ್ರಗಳ ನಡುವೆ ಮೂರು ದಿನಗಳ ಕಾಲ ಸಂಚರಿಸಲಿದೆ. ಬೆಳಗ್ಗೆ ಮಾಡಗಾಂವ್ ಜಂಕ್ಷನ್‌ನಿಂದ 6 ಗಂಟೆಗೆ ಹೊರಡಲಿರುವ ವಿಶೇಷ ರೈಲು ಮಧ್ಯಾಹ್ನ 12:15ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ. ಮರು ಪ್ರಯಾಣದಲ್ಲಿ ಮಧ್ಯಾಹ್ನ 12:40ಕ್ಕೆ ಮಂಗಳೂರು ಜಂಕ್ಷನ್‌ನಿಂದ ಹೊರಟು 7 ಗಂಟೆಗೆ ಮಡಗಾಂವ್ ತಲುಪಲಿದೆ . ಕಾಣಕೋಣ, ಕಾರವಾರ, ಹರ್ವಾಡ, ಅಂಕೋಲ ಜೊತೆ ಬಹುತೇಕ ಎಲ್ಲಾ ಸ್ಟೇಷನ್ಗಳಲ್ಲೂ ನಿಲುಗಡೆ ವ್ಯವಸ್ಥೆ ಮಾಡಲಾಗಿದೆ.
ಚಿಕ್ಕಮಗಳೂರಲ್ಲಿವೆ 158 ಅಪಾಯಕಾರಿ ಜಾಗಗಳು
ಚಿಕ್ಕಮಗಳೂರು: ಮುಂಗಾರು ಮಳೆ ಆರ್ಭಟ (Karnataka rain) ಬೆನ್ನಲ್ಲೇ ಕಾಫಿನಾಡು ಚಿಕ್ಕಮಗಳೂರಿಗೆ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಶಾಕಿಂಗ್ ನ್ಯೂಸ್ ನೀಡಿದೆ. ಮಳೆಯಿಂದ ಅಪಾಯ ಸಂಭವಿಸಬಹುದಾದ ಜಾಗಗಳ ಗುರುತು ಮಾಡಿದೆ. ಆಗಸ್ಟ್ ತಿಂಗಳಲ್ಲಿ ಮಳೆ ತೀವ್ರ ಸ್ವರೂಪ ಪಡೆಯುವ ಸಾಧ್ಯತೆ ಇದೆ. ಹೀಗಾಗಿ ಗುಡ್ಡ ಕುಸಿತ ರೀತಿಯ ಅಪಾಯಕಾರಿ ಸ್ಥಳಗಳ ಮಾಹಿತಿ ನೀಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಸುತ್ತಮುತ್ತ ಸುಮಾರು 158 ಸ್ಥಳಗಳು ಅಪಾಯಕಾರಿಯಾಗಿವೆ. ಅದರಲ್ಲಿ ಶೃಂಗೇರಿ ತಾಲೂಕಿನಲ್ಲಿ ಬರೋಬ್ಬರಿ 87, ಎನ್‌ಆರ್ ಪುರ ತಾಲೂಕಿನಲ್ಲಿ 21, ಮೂಡಿಗೆರೆ ತಾಲೂಕಿನಲ್ಲಿ 17 ಡೇಂಜರ್ ಸ್ಪಾಟ್‌ಗಳಿವೆ.
ಅಪಾಯಕಾರಿ ಸ್ಥಳಗಳ ಮೇಲೆ ಜಿಲ್ಲಾಡಳಿತ, ವಿಪತ್ತು ನಿರ್ವಹಣಾ ತಂಡ ತೀವ್ರ ನಿಗಾವಹಿಸಿದ್ದಾರೆ. ಅಪಾಯ ಸಂಭವಿಸಿದರೆ ಸ್ಥಳಾಂತರಿಸಲು 77 ಸುರಕ್ಷಿತ ಜಾಗಗಳನ್ನು ಸಹ ಗುರುತು ಮಾಡಲಾಗಿದೆ. ಕೊಪ್ಪ ತಾಲೂಕಿನ ಗುಡ್ಡೆ ತೋಟದ 14 ಕುಟುಂಬಗಳ ಮೇಲು ತೀವ್ರ ನಿಗಾವಹಿಸಲಾಗಿದೆ. ಭಾರಿ ಮಳೆ ಸುರಿದರೆ ಕುಟುಂಬಗಳು ಅಪಾಯಕ್ಕೆ ಸಿಲುಕುವ ಸಾಧ್ಯತೆ ಹೆಚ್ಚಿದೆ. ಅದರಲ್ಲೂ ಆಗಸ್ಟ್ ತಿಂಗಳಲ್ಲಿ ಚಿಕ್ಕಮಗಳೂರಿಗೆ ಕಂಟಕ ಕಾದಿದ್ದು, ಮೊದಲೇ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ.
ನಿರಂತರ ಮಳೆಗೆ ಭೂ ಕುಸಿತ
ಅರಮನೆ ನಗರಿ ಮೈಸೂರಿನಲ್ಲಿ ನಿರಂತರ ಮಳೆಗೆ ಶ್ರೀರಾಂಪುರ ಜಂಕ್ಷನ್ ಸಮೀಪದ ರಿಂಗ್ ರಸ್ತೆಯಲ್ಲಿ ಭೂಮಿ ಕುಸಿದಿದೆ. ಮುಖ್ಯ ರಸ್ತೆಯಲ್ಲೇ ಭೂಮಿ ಕುಸಿದಿದ್ದು, ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ಹೀಗಾಗಿ ಸರ್ವಿಸ್ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು.
ಸ್ಥಳಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಭೇಟಿ ನೀಡಿ ತರಾತುರಿಯಲ್ಲಿ ದುರಸ್ತಿ ಕಾರ್ಯಕ್ಕೆ ಮುಂದಾದರು. ಜೆಸಿಬಿ ಯಂತ್ರದ ಮೂಲಕ ದುರಸ್ತಿ ಕಾರ್ಯ ನೆರವೇರಿಸಿದರು. ಇನ್ನೂ ಸಾರ್ವಜನಿಕರು ಹೊಂಡವನ್ನು ಕುತೂಹಲದಿಂದ ನೋಡುತ್ತಿರುವುದು ಕಂಡು ಬಂತು. ಭಾರಿ ಗಾತ್ರದ ವಾಹನಗಳು ಕೂಡ ಸರ್ವೀಸ್ ರಸ್ತೆಯಲ್ಲಿ ಚಲಿಸುತ್ತಿದ್ದವು.
ಮಳೆಗೆ ಕೆಸರು ಗದ್ದೆಯಂತಾದ ರಸ್ತೆಯಲ್ಲಿ ಸಸಿ ನೆಟ್ಟು ಆಕ್ರೋಶ
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿರುವ ಮತ್ತಿಘಟ್ಟ ಗ್ರಾಮ ಪಂಚಾಯತಿಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಪ್ರಮುಖ ರಸ್ತೆಗಳು ಕೆಸರು ಗದ್ದೆಯಂತಾಗಿದೆ. ಹೀಗಾಗಿ ಕೆಸರು ರಸ್ತೆಗೆ ರಾಗಿ ಸಸಿ ನೆಟ್ಟು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ. ನಾಲ್ಕೈದು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು, ಒಂದು ಕಡೆಯಿಂದ ಮತ್ತೊಂದು ಕಡೆಗೆ ಓಡಾಟಲು ಹರಸಾಹಸ ಪಡೆಯುವಂತಾಗಿದೆ. ಪರ್ಯಾಯ ರಸ್ತೆಯಿಲ್ಲದೇ ಕೆಸರು ರಸ್ತೆಯಲ್ಲೆ ಓಡಾಟ ನಡೆಸುವ ಪರಿಸ್ಥಿತಿ ಇದೆ.
ವರದಾ ನದಿಯಲ್ಲಿ ಈಶ್ವರ ದೇಗುಲ ಮುಳುಗಡೆ
ಹಾವೇರಿ ಜಿಲ್ಲೆಯಲ್ಲಿ ಮಳೆ ಮುಂದುವರಿದಿದ್ದು, ವರದಾ ನದಿ ತುಂಬಿ ಹರಿಯುತ್ತಿದೆ. ವರದಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ಹಾವೇರಿಯ ದೇವಗಿರಿ ಬಳಿ ದೇಗುಲ ಮುಳುಗಡೆಯಾಗಿದೆ. ನದಿ ದಡದಲ್ಲಿದ್ದಈಶ್ವರ ದೇಗುಲ ಮುಳುಗುಡೆಯಾಗಿದೆ. ಇತ್ತ ಹಾಸನ ಜಿಲ್ಲೆಯಲ್ಲಿ ಮಳೆಗೆ ಇತಿಹಾಸ ಪ್ರಸಿದ್ಧ ವಿಷ್ಣುಸಮುದ್ರ (ಬಿಸ್ಟಮ್ಮನ ಕೆರೆ) ಕೆರೆ ಕೋಡಿ ಬಿದ್ದಿದೆ. ಬೇಲೂರು ಪಟ್ಟಣದಲ್ಲಿರುವ ಬಿಸ್ಟಮ್ಮನ ಕೆರೆಯು ಕಳೆದ ಎರಡು ವರ್ಷಗಳ ಹಿಂದೆ ಕೋಡಿ ಬಿದ್ದಿತ್ತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ