ಚಿಕ್ಕಮಗಳೂರು: ಮಳೆಗಾಲದಲ್ಲಿ (Karnataka Rain) ಕರೆಂಟ್ ಹೋದರೆ ಥೋ…. ಅಂತ ಲೈನ್‌ಮ್ಯಾನ್‌ಗಳನ್ನು ಬೈದುಕೊಳ್ಳತ್ತಿವಿ. ಆದರೆ ಈ ವಿಡಿಯೋ ನೋಡಿದರೆ ಕರೆಂಟ್ ಹೋದರೂ ಚಿಂತೆ ಮಾಡದೆ, ವಿದ್ಯುತ್ ಇಲಾಖೆಯ ಸಿಬ್ಬಂದಿಗೆ ಶಬಾಷ್ ಅಂತೀರಾ. ಚಿಕ್ಕಮಗಳೂರಿನ ಎನ್.ಆರ್.ಪುರ ತಾಲೂಕಿನ ಹುಯಿಗೆರೆ ಗ್ರಾಮದಲ್ಲಿ ಅಪಾಯ ಮಟ್ಟ ಮೀರಿ ಹರಿಯುತ್ತಿರುವ ಹಳ್ಳದಲ್ಲಿ ಧುಮುಕಿ ಸಿಬ್ಬಂದಿ ವಿದ್ಯುತ್ ಲೈನ್ ಎಳೆದಿದ್ದಾರೆ.
ಎನ್.ಆರ್.ಪುರ ತಾಲೂಕಿನ ಹುಯಿಗೆರೆ ಗ್ರಾಮಕ್ಕೆ ಕರೆಂಟ್ ಕೊಡಲು ಲೈನ್ ಮ್ಯಾನ್ ಸೊಂಟಕ್ಕೆ ವೈರ್ ಕಟ್ಟಿಕೊಂಡು ಈ ದಡದಿಂದ ಆ ದಡಕ್ಕೆ ಈಜಿಕೊಂಡು ಹೋಗಿದ್ದಾರೆ. ವಿದ್ಯುತ್ ತಂತಿ ಮೇಲೆ ಮರ ಬಿದ್ದು ಕಳೆದ 3 ದಿನದಿಂದ ಹುಯಿಗೆರೆ ಗ್ರಾಮಸ್ಥರು ಕತ್ತಲಿನಲ್ಲಿದ್ದರು. ಲೈನ್ ಮ್ಯಾನ್ ರವಿಕುಮಾರ್ ಹಳ್ಳದಲ್ಲಿ ಈಜಿಕೊಂಡು ಹೋಗಿ ವಿದ್ಯುತ್ ದುರಸ್ಥಿಗೆ ಮುಂದಾದರು.
ಲೈನ್ ಮ್ಯಾನ್ ರವಿಯವರ ಈ ಕೆಲಸಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು. ಸರ್ಕಾರಿ ಕೆಲಸವನ್ನು ದೇವರ ಕೆಲಸ ಎಂದುಕೊಂಡು ರವಿಕುಮಾರ್ ಪ್ರಾಣದ ಹಂಗು ತೊರೆದು ಉಕ್ಕಿ ಹರಿಯುವ ನೀರಿನಲ್ಲಿ ಜಿಗಿದು, ವಿದ್ಯುತ್ ಸಂಪರ್ಕ ಸರಿಪಡಿಸಿದ್ದಾರೆ.
ಮಳೆ ಅಬ್ಬರಕ್ಕೆ ಅಂತ್ಯಕ್ರಿಯೆಗೂ ಗ್ರಾಮಸ್ಥರ ಪರದಾಟ
ಬೆಳಗಾವಿಯ ಖಾನಾಪುರ ತಾಲೂಕಿನ ಅಮಗಾಂವ್ ಗ್ರಾಮದಲ್ಲಿ ಮಹಿಳೆಯ ಅಂತ್ಯಕ್ರಿಯೆಗೆ ಪರದಾಡಿದರು. ಜುಲೈ 18ರಂದು ಗ್ರಾಮದ ಹರ್ಷದಾ ಘಾಡಿ ಎಂಬುವವರು ತೀವ್ರ ಜ್ವರದಿಂದ ಬಳಲುತ್ತಿದ್ದರು. ಆಸ್ಪತ್ರೆಗೆ ಕಟ್ಟಿಗೆ ಸ್ಟ್ರೇಚರ್ ಮೇಲೆ ಹೊತ್ತು ರವಾನಿಸಿದ್ದರು. ಐದು ಕಿಮೀ ಹೊತ್ತು ತಂದು ಬಳಿಕ ಬೆಳಗಾವಿ ಆಸ್ಪತ್ರೆಗೆ ರವಾನಿಸಿದ್ದರು. ಆದರೆ ಚಿಕಿತ್ಸೆ ಫಲಿಸದೇ ನಿನ್ನೆ ಗುರುವಾರ ಕೆಎಲ್ಇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಆ್ಯಂಬುಲೆನ್ಸ್ ಮೂಲಕ ಮೃತದೇಹವನ್ನು ಗ್ರಾಮಕ್ಕೆ ತರಲು ಪರದಾಡಬೇಕಾಯಿತು. ಮಳೆಯಿಂದಾಗಿ ಆ್ಯಂಬುಲೆನ್ಸ್ ಕೆಸರಿನಲ್ಲಿ ಸಿಲುಕಬೇಕಾಯಿತು. ಹೀಗಾಗಿ ಕಟ್ಟಿಗೆಯ ಸ್ಟ್ರೇಚರ್‌ನಲ್ಲಿ ಐದು ಕಿಮೀ ಶವ ಹೊತ್ತು ಸಾಗಿದರು.
ಕಳೆದ ಎರಡು ವಾರಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆ ಬೆಳಗಾವಿ ನಗರದಲ್ಲಿಯೂ ಭಾರಿ ಅವಾಂತರ ಸೃಷ್ಟಿಸಿದೆ. ನಿರಂತರವಾಗಿ ಸುರಿಯತ್ತಿರುವ ಮಳೆ ಬೆಳಗಾವಿ ಜಿಲ್ಲಾಧಿಕಾರಿಗಳನ್ನು ಬೆಂಬಿಡದೆ ಕಾಡುತ್ತಿದೆ. ಜಿಲ್ಲಾಧಿಕಾರಿಗಳ ಬ್ರಿಟಿಷ್ ಕಾಲದ ಬಂಗಲೆಯಲ್ಲಿರುವ ಹಾಗು ಸುತ್ತಮುತ್ತ ಇರುವ ಹಳೆಯ ಮರಗಳು ಧರೆಗುರುಳುತ್ತಿವೆ. ಸರದಿ ಸಾಲಿನಲ್ಲಿ ಎಂಬಂತೆ ಮೂರು ದಿನಗಳಲ್ಲಿ ನಾಲ್ಕು ದೊಡ್ಡ ಮರಗಳು ನೆಲಕಚ್ಚಿವೆ. ಕಳೆದ ರಾತ್ರಿ ಬಿದ್ದ ಮರ ಜಿಲ್ಲಾಧಿಕಾರಿಗಳ ಮನೆಯ ಮುಖ್ಯ ದ್ವಾರದ ಸಂಚಾರವನ್ನು ಕೆಲಕಾಲ ಸ್ಥಗಿತಗೊಳಿಸಿತ್ತು.
ಇದನ್ನೂ ಓದಿ: Drugs Seized : ಓಲಾ, ಊಬರ್ ಡ್ರೈವಿಂಗ್ ಜತೆಗೆ ಡ್ರಗ್ಸ್ ಮಾರಾಟ; 6 ಕೋಟಿ ರೂ.ಮೌಲ್ಯದ ಡ್ರಗ್ಸ್ ಸೀಜ್
ಬೆಳಗಾವಿಯಲ್ಲಿ ಕುಸಿದು ಬಿದ್ದ ಮನೆಗಳು
ಬೆಳ್ಳಂ ಬೆಳಗ್ಗೆ ಮನೆ ಕುಸಿದು ಭಾರಿ ಅನಾಹುತ ತಪ್ಪಿದೆ. ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಹುಣ್ಣರಗಿ ಗ್ರಾಮದಲ್ಲಿ ಘಟನೆ ನಡೆದಿದೆ. ಪ್ರಕಾಶ ಪಾಟೀಲ್ ಎಂಬುವವರಿಗೆ ಸೇರಿದ ಮನೆ ಕುಸಿದಿದೆ. ಇತ್ತ ಭೂತರಾಮನಹಟ್ಟಿಯಲ್ಲೂ ಮನೆ ಕುಸಿದು ದುರ್ಗಪ್ಪ ಪಾಟೀಲ್ ಎಂಬುವವರ ಕೈಗೆ ಗಾಯವಾಗಿದೆ. ಗಾಯಾಳು ದುರ್ಗಪ್ಪ ಪಾಟೀಲ್‌ಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.
ಹೆಲ್ಪ್ ಲೈನ್ ತೆರೆದ ಬೆಳಗಾವಿ ಜಿಲ್ಲಾಡಳಿತ
ಇನ್ನೂ ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ಪ್ರವಾಹದಲ್ಲಿ ಸಿಲುಕಿಕೊಂಡರೆ. ಸಮಸ್ಯೆಯಲ್ಲಿದ್ದವರಿಗೆ ಬೆಳಗಾವಿ ಜಿಲ್ಲಾಡಳಿತ ಹೆಲ್ಪ್ ಲೈನ್ ತೆರೆದಿದೆ. ಪ್ರವಾಹ ಸಹಾಯವಾಣಿ 0831-2407290, ಪೊಲೀಸ್ ಸಹಾಯವಾಣಿ 08321-2474054 ಅಥವಾ 112 ಗೆ ಕರೆ ಮಾಡಲು ಡಿಸಿ ಮತ್ತು ಎಸ್‌ಪಿ ಮನವಿ ಮಾಡಿದ್ದಾರೆ.
ರೈಲು ಹಳಿಗಳ ಮೇಲೆ ಗುಡ್ಡ ಕುಸಿತ
ದೂಧಸಾಗರ್ ಮತ್ತು ಸೋನಾಲಿಯಂ ರೈಲು ನಿಲ್ದಾಣಗಳ ಮಧ್ಯೆ ಗುಡ್ಡ ಕುಸಿದಿದೆ. ಹಳಿಯ ಮೇಲೆ ಅಪಾರ ಪ್ರಮಾಣದ ಕಲ್ಲು ಹಾಗೂ ಮಣ್ಣು ಉರುಳಿ ಬಿದ್ದಿದೆ. ಲೋಂಡಾ ಮಾರ್ಗವಾಗಿ ಬೆಳಗಾವಿಗೆ ಬರುವ ರೈಲುಗಳು ತಡವಾಗಿ ಚಲಿಸಿದ್ದವು. ರೈಲ್ವೆ ಇಲಾಖೆ ಪ್ರಯಾಣಿಕರಿಗೆ ತೊಂದರೆ ಆಗದಂತೆ ಬಸ್ ವ್ಯವಸ್ಥೆ ಮಾಡಿತು.
ಗಡಿ ಜಿಲ್ಲೆಯ ಜನ ರಾತ್ರಿಯಲ್ಲ ನಿದ್ದೆಯಿಲ್ಲದೆ ಕಂಗೆಟ್ಟಿದ್ದಾರೆ. ದೂಧಗಂಗಾ ನದಿಯ ಅಬ್ಬರಕ್ಕೆ ಊರು ಖಾಲಿ ಮಾಡುತ್ತಿದ್ದಾರೆ. ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಹುಣ್ಣರಗಿ ಗ್ರಾಮದಿಂದ ಸುರಕ್ಷಿತ ಸ್ಥಳಗಳತ್ತ ಹೋಗಿದ್ದಾರೆ. ಇತ್ತ ಅಪಾಯದ ಮಟ್ಟ ಮೀರಿ ಮಾರ್ಕಂಡೇಯ ನದಿ ಹರಿಯುತ್ತಿದ್ದು, ಗೋಕಾಕ ನಗರಕ್ಕೆ ಹೊಂದಿಕೊಂಡಿರುವ ಚಿಕ್ಕೋಳಿ ಸೇತುವೆ ಬಿರುಕು ಬಿಟ್ಟಿದೆ. ಇತ್ತ ಗೋಕಾಕದ ದನದ ಪೇಟೆಗೆ ನದಿ ನೀರು ನುಗ್ಗುತ್ತಿದ್ದು, ಕೆಲ ತಗಡಿನ ಶೆಡ್‌ಗಳು ಮುಳುಗಡೆಯಾಗಿವೆ. ದನದ ಪೇಟೆ ಪಟಗುಂದಿ ಹನುಮನಿಗೂ ಜಲಕಂಟಕವಾಗಿದ್ದು, ಕ್ಷಣ ಕ್ಷಣಕ್ಕೂ ಘಟಪ್ರಭಾ ನದಿ ಒಳಹರಿವು ಹೆಚ್ಚಾಗುತ್ತಿದೆ.
ಬೆಳಗಾವಿ ಜಿಲ್ಲೆಯಲ್ಲಿ 30 ಸಂಪರ್ಕ ಸೇತುವೆಗಳು ಜಲಾವೃತಗೊಂಡಿದೆ. ಗೋಕಾಕ್ ತಾಲೂಕಿನಲ್ಲಿ ಐದು ಸೇತುವೆಗಳು, ಮೂಡಲಗಿ ತಾಲೂಕಿನಲ್ಲಿ ಐದು ಸೇತುವೆ ಮುಳುಗಡೆಯಾಗಿದೆ. ಹುಕ್ಕೇರಿ ತಾಲೂಕಿನ ಐದು, ಚಿಕ್ಕೋಡಿ ತಾಲೂಕಿನ ನಾಲ್ಕು, ನಿಪ್ಪಾಣಿ ತಾಲೂಕಿನ ನಾಲ್ಕು, ರಾಯಬಾಗ ತಾಲೂಕಿನ ಮೂರು, ಖಾನಾಪುರ ಎರಡು, ಕಾಗವಾಡ ಒಂದು, ಅಥಣಿ ಒಂದು ಸೇತುವೆ ಜಲಾವೃತವಾಗಿದ್ದು, ಅರವತ್ತಕ್ಕೂ ಅಧಿಕ ಗ್ರಾಮಗಳಿಗೆ ಸಂಪರ್ಕ ಕಡಿತಗೊಂಡಿದೆ.
ದಾವಣಗೆರೆಯಲ್ಲಿ ಜಲಾವೃತಗೊಂಡ ಸ್ಮಶಾನ
ದಾವಣಗೆರೆ ಜಿಲ್ಲೆಯ ಹರಿಹರದ ಗುತ್ತೂರು ಗ್ರಾಮದಲ್ಲಿ ತುಂಗಭದ್ರ ನದಿಗೆ ಪ್ರವಾಹ ಬಂದ ಹಿನ್ನೆಲೆ ಸ್ಮಶಾನ ಜಲಾವೃತಗೊಂಡಿತ್ತು. ನದಿಯಲ್ಲೇ ಮೃತದೇಹ ಹೊತ್ತು ಗ್ರಾಮಸ್ಥರು ಶವಸಂಸ್ಕಾರ ಮಾಡಿದರು. ಗ್ರಾಮದಲ್ಲಿ ದಲಿತ ಸಮುದಾಯದವರು ಮೃತರಾದರೆ ಶವಸಂಸ್ಕಾರಕ್ಕೂ ಸ್ಥಳವಿಲ್ಲದಂತಾಗಿದೆ. ಗುತ್ತೂರು ಗ್ರಾಮದ ಎಚ್ ಎಂ ಸಿ ಮಂಜಪ್ಪ (70) ಸಾವನ್ನಪ್ಪಿದ್ದರು. ನದಿ ದಡವೇ ಸ್ಮಶಾನವಾದ ಹಿನ್ನೆಲೆ ಶವಸಂಸ್ಕಾರಕ್ಕೆ ಪರದಾಡಿದರು. ನದಿ ನೀರಿನಲ್ಲಿಯೇ ಶವ ಹೊತ್ತುಕೊಂಡು ಹೋಗಿ ಶವ ಸಂಸ್ಕಾರಿಸಿದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ