Site icon Vistara News

Karnataka Rain : ಆಗುಂಬೆಯಲ್ಲಿ ದುರಂತ; ಅಡಿಕೆ ತೋಟದಲ್ಲಿ ಕಳೆ ಕೀಳುವಾಗ ಸಿಡಿಲು ಬಡಿದು ವ್ಯಕ್ತಿ ಸಾವು

karnataka Rain

ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆಯಲ್ಲಿ ಸಿಡಿಲು ಬಡಿದು ವ್ಯಕ್ತಿಯೊಬ್ಬರು (Karnataka Rain) ಮೃತಪಟ್ಟಿದ್ದಾರೆ. ನಾಗೇಂದ್ರ (40) ಸಿಡಿಲು ಬಡಿದು ಮೃತಪಟ್ಟವರು.

ಆಗುಂಬೆ ಸಮೀಪದ ಬೀದರಗೋಡು ಗ್ರಾಮದ ನಿವಾಸಿಯಾದ ನಾಗೇಂದ್ರ ಅವರು ಬಾಳೆಹಳ್ಳಿ ಗ್ರಾಮದ ಗುಜುಗೊಳ್ಳಿ ಕೇಶವ ಕಿಣಿ ಎಂಬುವರ ಅಡಿಕೆ ತೋಟದಲ್ಲಿ ಕಳೆ ತೆಗೆಯುತ್ತಿದ್ದರು. ಈ ಸಂದರ್ಭದಲ್ಲಿ ಭಾರಿ ಮಳೆಯೊಂದಿಗೆ ಸಿಡಿಲು ಬಡಿದಿದೆ. ಪರಿಣಾಮ ನಾಗೇಂದ್ರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗುಂಬೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.

ಮಳೆ ಶುರುವಾಗುತ್ತಿದ್ದಂತೆ ಗೋಕಾಕ ಜನರಿಗೆ ಗುಡ್ಡದ ಭೂತದ ಕಾಟ!

ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಗೋಕಾಕ ಕೊಣ್ಣೂರ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಗುಡ್ಡದ ಭೂತದ ಕಾಟ ಶುರುವಾಗಿದೆ. ಅದು ಕೂಡ ಮಳೆ ಪ್ರಾರಂಭವಾಗುತ್ತಿದ್ದಂತೆ ಗೋಕಾಕ ಜನರಿಗೆ ಗುಡ್ಡದ ಭೂತದ ಕಾಟ ಹೆಚ್ಚಾಗುತ್ತದೆ. ಇಷ್ಟಕ್ಕೂ ಏನಿದು ಗುಡ್ಡದ ಭೂತದ ಕಾಟ ಅಂದರೆ ಗೋಕಾಕ ಬೆಟ್ಟದಿಂದ ದೊಡ್ಡ ದೊಡ್ಡ ಬಂಡೆಕಲ್ಲುಗಳು ಉರುಳಿ ಬೀಳುತ್ತಿವೆ.

ಗೋಕಾಕ ಹಾಗೂ ಕೊಣ್ಣೂರು ಸಂಪರ್ಕ ಕಲ್ಪಿಸುವ ರಸ್ತೆಯ ಮಧ್ಯೆ ಬಂಡೆಗಳು ಉರುಳಿ ಬೀಳುತ್ತಿವೆ. ಬೆಟ್ಟದಿಂದ ಉರುಳುತ್ತಿರುವ ಬಂಡೆಗಳಿಂದ ಸವಾರರು, ಜನರು ಭಯಭೀತರಾಗಿದ್ದಾರೆ. ಮಳೆಯಿಂದಾಗಿ ಬಂಡೆಗಳ ಕೆಳಗಿನ ಮಣ್ಣು ಕುಸಿಯುತ್ತಿದೆ. ಇದರಿಂದಾಗಿ ಬಂಡೆ ಕಲ್ಲುಗಳು ರಸ್ತೆಗೆ ಬಂದು ಬೀಳುತ್ತಿವೆ. ರಸ್ತೆಯಲ್ಲಿ ಸಂಚರಿಸುವವರು ಪ್ರಾಣ ಭಯದಲ್ಲೇ ಓಡಾಡುವಂತಾಗಿದೆ.

ಇದನ್ನೂ ಓದಿ: Assault Case : ಚಿಪ್ಸ್ ಕೊಡಿಸುವ ನೆಪದಲ್ಲಿ ಮಗುವಿನ ಕತ್ತು ಕೊಯ್ದ ಕಿರಾತಕ

ವಿಜಯಪುರದಲ್ಲಿ ನಿನ್ನೆ ಗುರುವಾರ ತಡರಾತ್ರಿ ಸುರಿದ ಭಾರಿ ಮಳೆಗೆ ನದಿ, ಹಳ್ಳಗಳು ತುಂಬಿ ಹರಿಯುತ್ತಿದೆ. ವಿಜಯಪುರ ಜಿಲ್ಲೆಯ ಸಾರವಾಡ ಗ್ರಾಮದಲ್ಲಿ ಡೋಣಿ ನದಿ ಉಕ್ಕಿ ಹರಿದಿದೆ. ಪರಿಣಾಮ ಅಕ್ಕ ಪಕ್ಕದ ಜಮೀನುಗಳಿಗೆ ನೀರು ನುಗ್ಗಿದೆ. ವಿಜಯಪುರ ನಗರದಲ್ಲಿ ಮಳೆಯು ಅವಾಂತರವನ್ನೇ ಸೃಷ್ಟಿಸಿದೆ. ಮಳೆ ನೀರಲ್ಲಿ ಬೈಕ್‌ವೊಂದು ಕೊಚ್ಚಿ ಹೋದ ಘಟನೆ ವಿಜಯಪುರ ನಗರದ ಮನಗೂಳಿ ಅಗಸಿ ಬಳಿ ನಡೆದಿದೆ. ಉಕ್ಕಿ ಹರಿಯುತ್ತಿರುವ ಮಳೆ ನೀರಲ್ಲಿ ಬೈಕ್ ಕೊಂಡೊಯ್ಯುವ ಹರಸಾಹಸದ ವೇಳೆ ಕೊಚ್ಚಿಹೋಗಿದೆ.

ಇತ್ತ ತುಮಕೂರು ಜಿಲ್ಲೆಯಲ್ಲಿ ರಾತ್ರಿ ಧಾರಕಾರ ಸುರಿದ ಮಳೆ ರಭಸಕ್ಕೆ ಕೆರೆ, ಕಟ್ಟೆಗಳು ಕೋಡಿ ಬಿದ್ದಿದ್ದವು. ತುಮಕೂರು ಜಿಲ್ಲೆಯ ಕೊರಟಗೆರೆ ಬಳಿಯಿರುವ ಜಂಪೇನಹಳ್ಳಿ ಕೆರೆ ನೀರಿಲ್ಲದೇ ಬತ್ತಿಹೋಗಿತ್ತು. ಇದೀಗ ತುಂಬಿ ಹರಿಯುತ್ತಿದ್ದು, ರೈತರಲ್ಲಿ ಮಂದಹಾಸ ಮೂಡಿದೆ.

ಇತ್ತ ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುತ್ತಿದೆ. ಕೃಷ್ಣಾ ನದಿ ಉಗಮ ಸ್ಥಾನ ಮಹಾಬಲೇಶ್ವರದಲ್ಲಿ ಭಾರೀ ಮಳೆ ಹಿನ್ನೆಲೆ ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಆರಂಭವಾಗಿದೆ. ಈ ವರ್ಷದ ಮೊದಲ ಒಳಹರಿವು 1,768 ಕ್ಯೂಸೇಕ್ ದಾಖಲಾಗಿದ್ದು, ಕೃಷ್ಣಾ ನದಿ ಪಾತ್ರದ ಜನರು ಸಂತಸಗೊಂಡಿದ್ದಾರೆ. ಕಳೆದ ವರ್ಷ ಜೂನ್ ಕಳೆದರು ಒಳಹರಿವು ಇರಲಿಲ್ಲ. ಈ ವರ್ಷ ಜೂನ್ ಮೊದಲ ವಾರವೇ ಒಳಹರಿವು ಆರಂಭವಾಗಿದೆ.

ಗ್ರಾಮಕ್ಕೆ ರಭಸವಾಗಿ ನುಗ್ಗಿದ ನೀರು

ಚಿತ್ರದುರ್ಗ ಜಿಲ್ಲೆಯಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಕೂನಬೇವು ಗ್ರಾಮದ ಮನೆಗಳಿಗೆ ನೀರು ನುಗ್ಗಿದೆ. ವರುಣ ಅಬ್ಬರಕ್ಕೆ ಕೊನಬೇವು ಗ್ರಾಮ ಜಲಾವೃತಗೊಂಡಿತ್ತು. ಗ್ರಾಮದ ರಸ್ತೆಯಲ್ಲಿ ನೀರು ನದಿಯಂತೆ ಹರಿದಿತ್ತು. ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿತ್ತು. ಚಿತ್ರದುರ್ಗ ತಾಲೂಕಿನ ಬೆಳಘಟ್ಟ ಗ್ರಾಮದಲ್ಲಿ ನೀರಿನಲ್ಲಿ ಬಸ್ ಸಿಲುಕಿದ ಘಟನೆಯು ನಡೆದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version