ಚಿಕ್ಕೋಡಿ: ಶನಿವಾರ ರಾತ್ರಿಯಿಡಿ ಸುರಿದ ಭಾರಿ ಮಳೆಗೆ (Karnataka Rain) ಮನೆ ಗೋಡೆ ಕುಸಿದು ವ್ಯಕ್ತಿಯೊರ್ವ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಚಿಕ್ಕೋಡಿಯ ನಿಪ್ಪಾಣಿ ನಗರದ ಜತ್ರಾಟ್ ವೇಸ್‌ನಲ್ಲಿ ಗೋಡೆ ಕುಸಿದು ತಿರುಪತಿ ಹತ್ಕರ (45) ಎಂಬುವವರು ಮೃತಪಟ್ಟಿದ್ದಾರೆ.
ತಿರುಪತಿ ತಗಡಿನ ಶೆಡ್‌ನಲ್ಲಿ ವಾಸವಾಗಿದ್ದರು. ಊಟ ಮುಗಿಸಿ ನಿದ್ರೆ ಜಾರಿದಾಗ ತಡರಾತ್ರಿ 2:30ರ ಸುಮಾರು ಪಕ್ಕದ ಗೋಡೆ ಕುಸಿದಿದೆ. ಈ ವೇಳೆ ಗಂಭೀರ ಗಾಯಗೊಂಡ ತಿರುಪತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೆಳಗಾವಿ ಜಿಲ್ಲೆಯ ನಿಪ್ಪಾಣಿ ನಗರದಲ್ಲಿ ಈ ಘಟನೆ ನಡೆದಿದ್ದು, ಸ್ಥಳಕ್ಕೆ ತಹಸೀಲ್ದಾರ್, ಉಪ ವಿಭಾಗಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಿಪ್ಪಾಣಿ ಬಸವೇಶ್ವರ ಚೌಕ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸುತ್ತಿದ್ದಾರೆ.
ಹಾವೇರಿಯಲ್ಲೂ ಕುಸಿದು ಬಿದ್ದ ಮನೆ
ಹಾವೇರಿ ಜಿಲ್ಲೆಯಲ್ಲಿ ಮಳೆ ಆರ್ಭಟ ಮುಂದುವರಿದಿದ್ದು, ಮನೆಯೊಂದು ಕುಸಿದು ಬಿದ್ದಿದೆ. ರಾಣೇಬೆನ್ನೂರ ತಾಲೂಕಿನ ನೂಕಾಪುರ ಗ್ರಾಮದಲ್ಲಿ ರುದ್ರಪ್ಪ ಚೌವ್ಹಾಣ್ ಎನ್ನುವವರಿಗೆ ಸೇರಿದ ಮನೆ ಕುಸಿದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಇನ್ನೂ ರುದ್ರಪ್ಪ ಮನೆ ಕಳೆದುಕೊಂಡು ಕಂಗಲಾಗಿದ್ದಾರೆ.
ಚಿಕ್ಕಮಗಳೂರಲ್ಲಿ ನೆಲಕಚ್ಚುತ್ತಿವೆ ಮನೆಗಳು
ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಅಬ್ಬರಕ್ಕೆ ಮನೆಗಳು ಕುಸಿಯುತ್ತಿವೆ. ಭಾರೀ ಗಾಳಿ, ಮಳೆಗೆ ಮನೆ ಗೋಡೆ ಕುಸಿದು, ಚಾವಣೆ ನೆಲಕ್ಕೆ ಕುಸಿಯುತ್ತಿದೆ. ದಿನ್ಯನಿತ್ಯ ಬಳಸುವ ಅಗತ್ಯವಸ್ತುಗಳು ಮಣ್ಣು ಪಾಲಾಗುತ್ತಿವೆ. ಹಳುವಳ್ಳಿ ಗ್ರಾಮದ ತಾರಿಕೊಂಡ ಉಮಾ ರಮೇಶ್ ಎಂಬುವವರ ಮನೆಗೆ ಹಾನಿಯಾಗಿದೆ. ಮನೆ ಕುಸಿತದಿಂದ ಕಂಗಾಲಾಗಿರುವ ಉಮಾ ರಮೇಶ್ ಕುಟುಂಬದವರು ಸಹಾಯದ ನಿರೀಕ್ಷೆಯಲ್ಲಿದ್ದಾರೆ. ಸದ್ಯ ಮನೆ ಇಲ್ಲದೆ ಕೊಟ್ಟಿಗೆಯಲ್ಲಿ ವಾಸಿಸುತ್ತಿದ್ದಾರೆ.
ಇದನ್ನೂ ಓದಿ: Drowned in water : ಉಕ್ಕಿ ಹರಿಯುತ್ತಿದ್ದ ತುಂಗಭದ್ರ ನದಿಯಲ್ಲಿ ಕೊಚ್ಚಿ ಹೋದ ಯುವಕ
ಪ್ರವಾಹದ ಎಚ್ಚರಿಕೆ
ಪ್ರವಾಹದ ಭೀತಿ ಹಿನ್ನೆಲೆಯಲ್ಲಿ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಂದ ನದಿ ಪಾತ್ರದ ಜನರಿಗೆ ಎಚ್ಚರಿಕೆ ನೀಡಿದ್ದಾರೆ. ಕೆ.ಆರ್.ಎಸ್ ಜಲಾಶಯದಿಂದ 50,000 ಕ್ಯೂಸೆಕ್ಸ್ ನೀರನ್ನು ಕಾವೇರಿ ನದಿಗೆ ಬಿಡಲಾಗುತ್ತಿದೆ. ಹೀಗಾಗಿ ಕಾವೇರಿ ನದಿಯ ತಗ್ಗು ಪ್ರದೇಶ ಹಾಗೂ ನದಿಯ ಎರಡೂ ದಂಡೆಗಳಲ್ಲಿರುವ ಸಾರ್ವಜನಿಕರು ತಮ್ಮ ಆಸ್ತಿ ಪಾಸ್ತಿ ಜಾನುವಾರುಗಳ ರಕ್ಷಣೆಗೆ ಎಚ್ಚರಿಕೆ ವಹಿಸಿ, ಸುರಕ್ಷಿತ ಸ್ಥಾನಗಳಿಗೆ ತೆರಳಲು ಸೂಚನೆ ನೀಡಿದ್ದಾರೆ.
ಮೈದುಂಬಿ ಹರಿಯುತ್ತಿರುವ ತುಂಗಾಭದ್ರಾ
ಮಲೆನಾಡು ಭಾಗದಲ್ಲಿ ನಿರಂತರ ಮಳೆಯಿಂದಾಗಿ ದಾವಣಗೆರೆಯ ಹರಿಹರದ ಬಳಿ ತುಂಗಾಭದ್ರ ನದಿ ಮೈದುಂಬಿ ಹರಿಯುತ್ತಿದೆ. ತುಂಗಾ ಜಲಾಶಯದಿಂದ 70 ಸಾವಿರ ಕ್ಯೂಸೆಕ್ ನೀರು ಹೊರಬಿಟ್ಟ ಹಿನ್ನೆಲೆಯಲ್ಲಿ ಹರಿಹರ ಭಾಗದಲ್ಲಿ ಮೈದುಂಬಿ ಹರಿಯುತ್ತಿದೆ. ತುಂಗಾ ಆರತಿ ಮಂಟಪದ ಮೆಟ್ಟಿಲು ಸಂಪೂರ್ಣ ಜಲಾವೃತಗೊಂಡಿದೆ. ನೀರಿನ ಮಟ್ಟ 12 ರಿಂದ 13 ಮೀಟರ್ ಏರಿಕೆಯಾದರೆ ಜಿಲ್ಲೆಯ 38 ಗ್ರಾಮಗಳು ಮುಳುಗಡೆ ಆಗುವ ಸಾಧ್ಯತೆ ದೆ. ಹೀಗಾಗಿ ಜಿಲ್ಲೆಯ ಹೊನ್ನಾಳಿಯ ಬಾಲರಾಜ್ ಘಾಟ್, ಹರಿಹರದ ಗಂಗಾ ನಗರದಲ್ಲಿ ಆರೈಕೆ ಕೇಂದ್ರ ತೆರೆಯಲು ಜಿಲ್ಲಾಡಳಿತದಿಂದ ಸೂಚನೆ ನೀಡಿದೆ. ರಾಘವೇಂದ್ರ ಮಠದ ಹಿಂಬದಿಯ ಪೂಜಾ ಮಂಟಪ ಜಲಾವೃತವಾಗುವ ಸಾಧ್ಯತೆ ಇದೆ. ಇನ್ನೂ ಮಹಿಳೆಯರು ತುಂಗಭದ್ರಾ ನದಿಗೆ ಗಂಗಾ ಪೂಜಾ ಮಾಡುತ್ತಿದ್ದಾರೆ. ಈಗಾಗಲೇ ಹರಿಹರದ ಗಂಗಾ ನಗರದ ಮೂವತ್ತಕ್ಕೂ ಅಧಿಕ ಮನೆಗಳು ಮುಳುಗಡೆ ಆಗುವ ಸಾಧ್ಯತೆ ಇದ್ದು, ಗಂಗಾ ನಗರ ನಿವಾಸಿಗಳಿಗೆ ಕಾಳಜಿ ಕೇಂದ್ರವನ್ನು ತೆರೆಯಲಾಗಿದೆ.
ಜಮೀನಿಗೆ ನುಗ್ಗಿದ ನೀರು
ಕಾಲುವೆ ನೀರು ಜಮೀನಿಗೆ ನುಗ್ಗಿ ಬೆಳೆ ಜಲಾವೃತಗೊಂಡಿದೆ. ಕಾಲುವೆ ಸಮರ್ಪಕವಾಗಿ ನಿರ್ಮಾಣ ಮಾಡದ ಹಿನ್ನೆಲೆಯಲ್ಲಿ ಕಾಲುವೆಗೆ ನೀರು ಬಿಟ್ಟಿರುವ ವೇಳೆ ಜಮೀನಿಗೆ ನುಗ್ಗಿದೆ. ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ರೋಣಿಹಾಳ ಗ್ರಾಮದ ನಾಗಯ್ಯ ಹಿರೇಮಠ ಎಂಬುವರ ಜಮೀನಿಗೆ ಕಾಲುವೆ ನೀರು ನುಗ್ಗಿದೆ. 8 ಎಕರೆ ಜಮೀನಿನಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಿದ್ದ ರೈತ ಕಂಗಲಾಗಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ