ಉಡುಪಿ: ಉಡುಪಿಯ ಬೈಂದೂರಿನಲ್ಲಿ ಮಳೆಗಾಲದ (Karnataka Rain) ಗೋಳು ಮುಗಿಯುವುದಿಲ್ಲ. ಮಳೆ (Rain News) ಬಂದರೆ ಶಾಲೆಗೆ ರಜೆ ಯಾಕೆ ಎನ್ನುವವರು ಈ ಸುದ್ದಿಯನ್ನು ಓದಲೇಬೇಕು. ಇಲ್ಲಿ ಜೋರಾಗಿ ಮಳೆ ಬಂದರೆ ಮಕ್ಕಳು ಶಾಲೆಗೆ ಗೈರು ಹಾಜರಾತಿಯೇ ಗತಿ. ಯಾಕಂದರೆ ಮಳೆ ಬಂದು ಹೋದ ಮೇಲೆ ನೆರೆಯಿಂದಾಗಿ ಹಳ್ಳ ದಾಟಿಕೊಂಡು ಶಾಲೆಗಳಿಗೆ ಹೋಗಲು ಮಕ್ಕಳು ಪರದಾಡಬೇಕಾಗುತ್ತದೆ.
ಉಡುಪಿಯ ಕುಂದಾಪುರ ತಾಲೂಕಿನ ಆಜ್ರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೆಬ್ಬಾರ್ ತಡಿಯಲ್ಲಿ 25 ಮನೆಗಳಿದ್ದು, ಮಳೆ ಬಂದರೆ ಮನೆಯಲ್ಲೇ ಲಾಕ್ ಆಗಬೇಕಾಗುತ್ತದೆ. ಮುಖ್ಯಪೇಟೆ ಸಿದ್ದಾಪುರಕ್ಕೆ ತೆರಳಬೇಕಾದರೂ ಸಂಕಷ್ಟ ಎದುರಾಗುತ್ತದೆ. ನೀರಿನ ಪ್ರಮಾಣ ಇಳಿಕೆ ಅದರಷ್ಟೇ ಹಳ್ಳ ದಾಟಿ ಶಾಲೆಗೆ ಹೋಗಬೇಕಾಗುತ್ತದೆ.
ಇತ್ತ ಬೆಳಗ್ಗೆ ನೀರು ಇಳಿಕೆ ಆದರೆ ಸಂಜೆಗೆ ಏರಿಕೆ ಆಗುವ ಆತಂಕ ಇದೆ. ಹೀಗಾಗಿ ಶಾಲೆಗೆ ಕಳುಹಿಸಲು ಪೋಷಕರು ಮೀನಾಮೇಷ ಎಣಿಸುತ್ತಾರೆ. ಮಳೆ ಬಂದರೆ ರಜೆ ನೀಡಿ ಎನ್ನುತ್ತಿದ್ದಾರೆ. ನೌಕರಿಗೆ ತೆರಳುವವರಿಗೂ ಈ ಹಳ್ಳದ್ದೇ ಸಮಸ್ಯೆ ಇದೆ. ಇದುವರೆಗೂ ಕಿರು ಸೇತುವೆ ನಿರ್ಮಿಸಲು ಸಾಧ್ಯವಾಗಿಲ್ಲ.
ಮಳೆಗೆ ಸೇತುವೆ ಮುಳುಗಡೆ
ಮಹಾರಾಷ್ಟ್ರ ಮತ್ತು ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರಿ ಮಳೆಯಿಂದಾಗಿ ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯ ಮತ್ತೊಂದು ಸೇತುವೆಯೂ ಮುಳುಗಡೆಯಾಗಿದೆ. ದೂದಗಂಗಾ ನದಿಯ ಚಿಕ್ಕೋಡಿ ತಾಲೂಕಿನ ಮಲ್ಲಿಕವಾಡ-ದತ್ತವಾಡ ಸಂಪರ್ಕ ಸೇತುವೆ ಜಲಾವೃತಗೊಂಡಿದೆ. ಮೊದಲೇ ನಾಲ್ಕು ಕೆಳ ಹಂತದ ಸೇತುವೆಗಳು ಮುಳುಗಡೆಯಾಗಿದೆ.
ನಿಪ್ಪಾಣಿ ತಾಲೂಕಿನ ಕುನ್ನೂರ-ಬಾರವಾಡ ಸಂಪರ್ಕಿಸುವ ಸೇತುವೆ ಜಲಾವೃತಗೊಂಡಿದೆ. ವೇದಗಂಗಾ ನದಿಗೆ ಅಡ್ಡಲಾಗಿ ಇರುವ ಕೆಳ ಹಂತದ ಸೇತುವೆ, ದೂದಗಂಗಾ ನದಿಯ ಕಾರದಗಾ-ಬೋಜ್, ಕುನ್ನೂರ-ಭೋಜವಾಡಿ ಸಂಪರ್ಕಿಸುವ ಸೇತುವೆ ಸೇರಿ ಕೃಷ್ಣಾ ನದಿಗೆ ಅಡ್ಡಲಾಗಿರುವ ಮಾಂಜರಿ – ಭಾವನ ಸೌಂದತ್ತಿ ಸೇತುವೆಯೂ ಮುಳುಗಡೆಯಾಗಿದೆ. ಹೀಗಾಗಿ ಪರ್ಯಾಯ ಮಾರ್ಗಗಳ ಮೂಲಕ ಜನರು ಸಂಚಾರಿಸುವಂತಾಗಿದೆ. ಕೃಷ್ಣಾ ನದಿಗೆ ಸುಮಾರು 63 ಸಾವಿರ ಕ್ಯೂಸೆಕ್‌ಗೂ ಹೆಚ್ಚು ನೀರಿನ ಒಳಹರಿವು ಬೀಡಲಾಗಿದೆ. ಹೀಗಾಗಿ ನದಿಗೆ ಇಳಿಯದಂತೆ ಬೆಳಗಾವಿ ಜಿಲ್ಲಾಡಳಿತದಿಂದ ನದಿ ಪಾತ್ರದ ಜನರಿಗೆ ಮನವಿ ಮಾಡಿದೆ.
ಹಿರೇಕೊಳಲೆ ಕೆರೆ ಭರ್ತಿ! ವಿದ್ಯುತ್ ತಂತಿ ಮೇಲೆ ಬಾಗಿದ ಮರ
ಚಂದ್ರದ್ರೋಣ ಪರ್ವತದ ಸಾಲಿನಲ್ಲಿ ಭಾರಿ ಮಳೆಯಿಂದಾಗಿ ಹಿರೇ ಕೊಳಲೆ ಕೆರೆ ತುಂಬುವ ಹಂತಕ್ಕೆ ತಲುಪಿದೆ. ಚಿಕ್ಕಮಗಳೂರು ನಗರಕ್ಕೆ ನೀರು ಪೂರೈಸುವ ಬೃಹತ್ ಕೆರೆ ಇದಾಗಿದ್ದು, ಕೆರೆಗೆ ಬಾರಿ ಪ್ರಮಾಣದ ನೀರು ಹರಿದು ಬರುತ್ತಿದೆ. ಇತ್ತ ವೀಕ್ಷಣಾ ಗೋಪುರ ಸಂಪೂರ್ಣ ಶಿಥಿಲಾವಸ್ಥೆ ತಲುಪಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ವೀಕ್ಷಣ ಗೋಪುರದ ಬಳಿ ಪ್ರವಾಸಗರಿಗೆ ನಿಷೇಧ ಹೇರಲಾಗಿದೆ. ಪೊಲೀಸರು ಗೋಪುರದ ಹಾದಿಗೆ ಅಡ್ಡಲಾಗಿ ಬೇಲಿ ಹಾಕಿದ್ದಾರೆ. ಕೆರೆ ಕೋಡಿ ಬೀಳಲು ಕೇವಲ ಮೂರು ಅಡಿ ಮಾತ್ರ ಬಾಕಿ ಇದೆ.
ಚಿಕ್ಕಮಗಳೂರಿನಲ್ಲಿ ಭಾರಿ ಗಾಳಿ-ಮಳೆಗೆ ಅಡಿಕೆ ಮರಗಳು ರಾಷ್ಟ್ರೀಯ ಹೆದ್ದಾರಿ ಪಕ್ಕದ ವಿದ್ಯುತ್ ತಂತಿಯ ಮೇಲೆ ಬಾಗಿವೆ. ಪರಿಣಾಮ ವಿದ್ಯುತ್ ತಂತಿಗೆ ಹಾನಿಯಾಗಿವೆ. ಮೂಡಿಗೆರೆ ತಾಲೂಕಿನ ಫಲ್ಗುಣಿ ಗ್ರಾಮದ ಬಳಿ ಘಟನೆ ನಡೆದಿದೆ. ಮತ್ತಷ್ಟು ಅಡಿಕೆ ಮರಗಳು ವಿದ್ಯುತ್ ತಂತಿಯ ಮೇಲೆ ಬೀಳುವ ಸಾಧ್ಯತೆ ಇದೆ. ಹೀಗಾಗಿ ಸ್ಥಳೀಯರು ಮೆಸ್ಕಾಂ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ