Site icon Vistara News

Karnataka Rain : ಭಾರಿ ಮಳೆಯಲ್ಲಿ ದೇವರಮನೆಗುಡ್ಡದಲ್ಲಿ ಪ್ರವಾಸಿಗರ ಹುಚ್ಚಾಟ; ಕೇಸ್‌ ಜಡಿದ ಪೊಲೀಸರು!

karnataka Rain

ಚಿಕ್ಕಮಗಳೂರು/ಕಾರವಾರ: ಚಿಕ್ಕಮಗಳೂರಿನಲ್ಲಿ ಭಾರಿ ಮಳೆಯೊಂದಿಗೆ (Karnataka Rain) ಮೊನ್ನೆ ರಸ್ತೆ ಮಧ್ಯೆ ಡ್ಯಾನ್ಸ್, ನಿನ್ನೆ ಪ್ರವಾಸಿ ತಾಣದಲ್ಲಿ ಎಣ್ಣೆ ಪಾರ್ಟಿ ಮಾಡಿ ಪ್ರವಾಸಿಗರು ಹುಚ್ಚಾಟ ತೋರಿದ್ದರು. ಮೂಡಿಗೆರೆ ತಾಲೂಕಿನ ಪ್ರಸಿದ್ದ ಪ್ರವಾಸಿ ತಾಣ ದೇವರಮನೆಗುಡ್ಡದಲ್ಲಿ ಪೊಲೀಸರು ಯುವಕರಿಗೆ ಚಳಿ ಬಿಡಿಸಿದ್ದಾರೆ.

ಹೊಯ್ಸಳರ ಕಾಲದ ಕಾಲಭೈರವೇಶ್ವರನ ಸನ್ನಿದಿ ಆಗಿರುವ ದೇವರಮನೆ ಗುಡ್ಡದಲ್ಲಿ 2 ದಿನದ ಹಿಂದೆ ರಸ್ತೆ ಮಧ್ಯೆ ಗಾಡಿ ನಿಲ್ಲಿಸಿ ಮದ್ಯ ಸೇವಿಸಿ ಯುವಕರು ಡ್ಯಾನ್ಸ್ ಮಾಡಿದ್ದರು. ಜತೆಗೆ ದೇವರಮನೆಗುಡ್ಡದ ಎಲ್ಲೆಂದರಲ್ಲಿ ಕಾರು ನಿಲ್ಲಿಸಿಕೊಂಡು ಲೈಟ್ ಮ್ಯೂಸಿಕ್ ಹಾಕಿಕೊಂಡು ಎಣ್ಣೆ ಪಾರ್ಟಿ ಮಾಡಿದ್ದರು.

ಬಣಕಲ್ ಪಿಎಸ್ಐ ರೇಣುಕಾ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಸಾರ್ವಜನಿಕ ಪ್ರದೇಶದಲ್ಲಿ ಮದ್ಯ ಸೇವಿಸಿ, ಧೂಮಪಾನ ಮಾಡಿದ್ದಕ್ಕೆ ಕೆಪಿ ಆಕ್ಟ್‌ನಲ್ಲಿ 20 ಜನರ ಮೇಲೆ ಕೇಸ್ ದಾಖಲಾಗಿದೆ. ಕೋಟ್ಪಾ ಕಾಯ್ದೆಯಡಿ 9 ಜನರ ಮೇಲೆ ಕೇಸ್ ಹಾಕಲಾಗಿದೆ.

ಸಂಪರ್ಕ ಸೇತುವೆ ಮುಳುಗಡೆ

ಉತ್ತರಕನ್ನಡ ಜಿಲ್ಲೆಯ ಕಾರವಾರದ ಗೋಯರ್ ಗ್ರಾಮದಲ್ಲಿ ಭಾರೀ ಮಳೆಗೆ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ಮುಳುಗಡೆಯಾಗಿದ್ದು, ಗ್ರಾಮಸ್ಥರು ಪರದಾಡಿದ್ದರು. ಕಾಡಿನ ಹಾದಿಯಲ್ಲೇ ಸಾಗಬೇಕಿರುವ ಗ್ರಾಮದ ರಸ್ತೆ ಇದಾಗಿದ್ದು, ಬಾರಗದ್ದೆ, ಗೋಯರ್ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ಜಲಾವೃತಗೊಂಡಿದೆ.

ಸುಮಾರು 25ಕ್ಕೂ ಅಧಿಕ ಮನೆಗಳಿರುವ ಗೋಯರ್ ಗ್ರಾಮದಲ್ಲಿ ಭಾರೀ ಮಳೆಯಿಂದಾಗಿ ರಸ್ತೆ ಮೇಲೆ‌ ಹಳ್ಳದ ನೀರು ಹರಿಯುತ್ತಿದೆ. ನೀರು ತುಂಬಿ ನಿಂತ ರಸ್ತೆಯಲ್ಲೇ ಹರಸಾಹಸಪಟ್ಟು ಗ್ರಾಮಸ್ಥರು ಓಡಾಡುವಂತಾಗಿದೆ. ಸೂಕ್ತ ರಸ್ತೆ ವ್ಯವಸ್ಥೆ ಇಲ್ಲದೇ ಇರುವುದಕ್ಕೆ ಹಿಡಿಶಾಪ ಹಾಕಿದ್ದಾರೆ.

ಇತ್ತ ಹೊನ್ನಾವರ ತಾಲ್ಲೂಕಿನ 12 ಕಾಳಜಿ ಕೇಂದ್ರಗಳಲ್ಲಿ 437 ಮಂದಿಗೆ ಆಶ್ರಯ ನೀಡಲಾಗಿದೆ. ಭಾರೀ ಮಳೆಯಿಂದಾಗಿ ಜಲಾವೃತಗೊಂಡಿದ್ದ ಗುದ್ನಕಟ್ಟು ಗ್ರಾಮದಿಂದ 60 ಮಂದಿಯನ್ನು ಸ್ಥಳಾಂತರ ಮಾಡಲಾಗಿದೆ. ಎನ್‌ಡಿಆರ್‌ಎಫ್ ತಂಡದಿಂದ ನೆರೆ ಅಪಾಯದಲ್ಲಿದ್ದವರ ರಕ್ಷಣೆ ಮಾಡಲಾಗಿದೆ. ಮಳೆಯ ಅಬ್ಬರಕ್ಕೆ ಇದುವರೆಗೆ ನೂರಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದ್ದು, ಈವರೆಗೆ ಜಿಲ್ಲೆಯಲ್ಲಿ ಒಂದು ಸಾವು ದಾಖಲಾಗಿದೆ.

ಇದನ್ನೂ ಓದಿ: Murder case : ಮಿಡ್‌ನೈಟ್‌ನಲ್ಲಿ ಶ್ರೀರಾಂಪುರದಲ್ಲಿ ಹರಿದ ನೆತ್ತರು; ಕಾಲ್ಕಿತ್ತ ಹಂತಕರು

ಹೊನ್ನಾವರ, ಕುಮಟಾ ತಾಲೂಕಿನಲ್ಲಿ ನೆರೆ ಪರಿಸ್ಥಿತಿ

ಹಿರೇಕಟ್ಟು, ಬಡಗಣಿ ಹಳ್ಳ ಉಕ್ಕಿ ಹರಿದ ಪರಿಣಾಮ ಕುಮಟಾದ ಊರುಕೇರಿ, ಕೆಳಗಿನಕೇರಿ, ಹರಿಜನಕೇರಿ, ಕೋನಳ್ಳಿ ಭಾಗದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಹೊನ್ನಾವರ ತಾಲೂಕಿನಲ್ಲಿ ಶರಾವತಿ, ಗುಂಡಬಾಳ ನದಿ ಪ್ರದೇಶದಲ್ಲಿ ನೆರೆ ಅಬ್ಬರ ಜೋರಾಗಿದೆ. ಕಡತೋಕ, ಭಾಸ್ಕೇರಿ, ಹಾಡಗೇರಿ, ಹಡಿನಬಾಳ ಗ್ರಾಮದಲ್ಲಿ ತೋಟ, ಗದ್ದೆಗಳಿಗೆ ನೀರು ನುಗ್ಗಿದೆ. ಮಳೆ ಮುಂದುವರೆಯುವ ಹಿನ್ನೆಲೆಯಲ್ಲಿ ಎನ್‌ಡಿಆರ್‌ಎಫ್‌ ತಂಡ ಸ್ಥಳದಲ್ಲೇ ಬೀಡುಬಿಟ್ಟಿದೆ. ಕಾರವಾರದಲ್ಲಿ ಕದ್ರಾ ಜಲಾಶಯದ ನೀರು ಹರಿದು ಅಸ್ನೋಟಿ, ಹಳಗಾ ಭಾಗದ ತಗ್ಗು ಪ್ರದೇಶಕ್ಕೆ ನುಗ್ಗಿದೆ.

ಉಡುಪಿಯಲ್ಲಿ ಕಾಣೆಯಾದ ಉಸ್ತುವಾರಿ ಸಚಿವರು

ಉಡುಪಿಯಲ್ಲಿ ಭಾರೀ ಮಳೆಗೆ ಜನರು ತತ್ತರಿಸಿ ಹೋಗಿದ್ದಾರೆ. ಹಲವೆಡೆ ಜನವಸತಿ ಪ್ರದೇಶಗಳಿಗೆ ನೀರು ನುಗ್ಗಿದ್ದು, ಈಗಾಗಲೇ ಜನರನ್ನು ಸುರಕ್ಷಿತ ಕಡೆಗೆ ರವಾನೆ ಮಾಡಲಾಗಿದೆ. ಇಷ್ಟಾದರೂ ಜಿಲ್ಲಾ ಉಸ್ತುವಾರಿ ಸಚಿವರ ಸುಳಿವೇ ಇಲ್ಲ. ಲಕ್ಷ್ಮೀ ಹೆಬ್ಬಾಳ್ಕರ್ ಉಡುಪಿ ಜಿಲ್ಲೆಯನ್ನೆ ಮರೆತಿದ್ದಾರೆ ಎಂದು ಜನರು ಅಸಮಾಧಾನ ಹೊರಹಾಕಿದ್ದಾರೆ. ಕಳೆದ ಒಂದು ವಾರದಿಂದ ಬೈಂದೂರು, ಕುಂದಾಪುರ ಭಾಗದಲ್ಲಿ ವ್ಯಾಪಕ ಮಳೆಯಿಂದಾಗಿ ಹಳ್ಳ, ಕೊಳ್ಳ ದಾಟಿ ಮಕ್ಕಳು ಶಾಲೆಗೆ ತೆರಳಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ. ಆದರೂ ಸಚಿವರು ಮಾತ್ರ ಮೌನಕ್ಕೆ ಜಾರಿದ್ದಾರೆ.

ಹೆಬ್ಬಾಳ ಸೇತುವೆ ಮುಳುಗಡೆಗೆ ಕ್ಷಣಗಣನೆ ‌

ಚಿಕ್ಕಮಗಳೂರಿನ ಪಶ್ಚಿಮ ಘಟ್ಟ ಸಾಲಿನಲ್ಲಿ ಭಾರಿ ಮಳೆಯಿಂದಾಗಿ ಕಳಸ ತಾಲೂಕಿನ ಹೊರನಾಡು ಬಳಿಯ ಹೆಬ್ಬಾಳೆ ಸೇತುವೆ ಮುಳುಗಡೆಗೆ ಕ್ಷಣಗಣನೆ ಶುರುವಾಗಿದೆ. ಸೇತುವೆಯ ಮಟ್ಟಕ್ಕೆ ಭದ್ರಾ ನದಿ ನೀರಿನ ಪ್ರಮಾಣ ಏರಿಕೆ ಆಗಿದೆ. ಕುದುರೆಮುಖ ಘಟ್ಟ ಸಾಲಿನಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ಭದ್ರೆ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಸೇತುವೆ ಮುಳುಗಡೆಯಾದರೆ ಹೊರನಾಡು ಹಾಗೂ ಹಲವು ಗ್ರಾಮಗಳ ಸಂಪರ್ಕ ಕಟ್ ಆಗಲಿದೆ. ಯಾವುದೇ ಸಮಯದಲ್ಲಾದರೂ ಹೆಬ್ಬಾಳ ಸೇತುವೆ ಮುಳುಗಡೆಯಾಗುವ ಸಾಧ್ಯತೆ ಇದೆ. ಹೀಗಾಗಿ ಸ್ಥಳದಲ್ಲಿ ಪೊಲೀಸರು ಬೀಡುಬಿಟ್ಟಿದ್ದಾರೆ.

ಕೃಷ್ಣಾ ನದಿಗೆ ಇಳಿಯದಂತೆ ಸೂಚನೆ

ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಮಹಾ ಮಳೆಯಿಂದ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಹಿಪ್ಪರಗಿ ಜಲಾಶಯಕ್ಕೆ 64 ಸಾವಿರ ಕ್ಯೂಸೆಕ್ ಒಳ ಹರಿವು ಹೆಚ್ಚಾಗಿದೆ. ನದಿ ಪಾತ್ರದ ಗ್ರಾಮಗಳ ಜನರು ಜಾಗೃತ ರಾಗಿರುವಂತೆ ಜಿಲ್ಲಾಡಳಿತ ಮನವಿ ಮಾಡಿದೆ. ಜಮಖಂಡಿ, ರಬಕವಿ-ಬನಹಟ್ಟಿ, ಬೀಳಗಿ ತಾಲೂಕಿನ ಕೃಷ್ಣಾ ನದಿ ತೀರದ ಗ್ರಾಮಸ್ಥರಿಗೆ ಸೂಚನೆ ನೀಡಲಾಗಿದೆ. ತುಂಬಿ ಹರಿಯುತ್ತಿರುವ ನದಿಗೆ ಜನ – ಜಾನುವಾರು ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version