ಚಿಕ್ಕಮಗಳೂರು/ದಾವಣಗೆರೆ: ಜಿಲ್ಲೆಯ ಹಲವೆಡೆ ಭಾರಿ ಮಳೆಯಾಗುತ್ತಿದ್ದು, ಜನಜೀವನ (Karnataka Rain) ಅಸ್ತವ್ಯಸ್ತವಾಗಿದೆ. ಮೂಡಿಗೆರೆ, ಚಾರ್ಮಾಡಿ ಕೊಟ್ಟಿಗೆಹಾರ, ಚಿಕ್ಕಮಗಳೂರು ನಗರ, ಕೊಪ್ಪ, ಎನ್ಆರ್ ಪುರ ಭಾಗಗಳಲ್ಲಿ ಬೆಳಗ್ಗೆಯಿಂದಲೂ ನಿರಂತರವಾಗಿ ಮಳೆ ಸುರಿಯುತ್ತಿದೆ. ಭಾರಿ- ಗಾಳಿಯಿಂದಾಗಿ ಮೂಡಿಗೆರೆ, ಕೊಪ್ಪ ತಾಲೂಕಿನ ಹಲವೆಡೆ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದೆ. ತುಂಗಾ, ಭದ್ರಾ, ಹೇಮಾವತಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಮಲೆನಾಡಿನ ಹಲವೆಡೆ ಹಳ್ಳ ಕೊಳ್ಳಗಳು ಉಕ್ಕಿ ಹರಿಯುತ್ತಿದೆ.
ದಾವಣಗೆರೆಯಲ್ಲಿ ಮಳೆಗೆ ಮನೆಗಳ ಮುಂದೆ ನಿಂತ ಕೊಳಚೆ ನೀರು
ದಾವಣಗೆರೆ ಜಿಲ್ಲೆಯಲ್ಲಿ ರಾತ್ರಿ ಇಡೀ ಸುರಿದ ಜಡಿ ಮಳೆಗೆ ಅವಾಂತರವೇ ಸೃಷ್ಟಿಯಾಗಿದೆ. ಸತತವಾಗಿ ಸುರಿಯುತ್ತಿರುವ ಮಳೆಯಿಂದ ಮನೆಗಳ ಮುಂದೆ ಕೊಳಚೆ ನೀರು ನಿಂತಿದೆ. ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೆ ಇರುವುದೇ ಇದಕ್ಕೆಲ್ಲ ಕಾರಣ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಇತ್ತ ಕೊಳಚೆ ನೀರಿನಿಂದ ಸಾಂಕ್ರಾಮಿಕ ರೋಗದ ಭೀತಿಯು ಹೆಚ್ಚಾಗಿದೆ. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಉಕ್ಕಡಗಾತ್ರಿಯ ಪ್ಲಾಟ್‌ನಲ್ಲಿ ಘಟನೆ ನಡೆದಿದೆ.
ಸತತ ಮಳೆಯಿಂದ ಬೃಹತ್ ಮರದ ಕೊಂಬೆಗಳು ನೆಲಕ್ಕುರುಳಿದೆ. ದಾವಣಗೆರೆಯ ತರಳುಬಾಳು ಬಡಾವಣೆಯಲ್ಲಿ ಘಟನೆ ನಡೆದಿದೆ. ಮರದ ಕೊಂಬೆ ಮುರಿದು, ವಿದ್ಯುತ್ ಕಂಬದ ಮೇಲೆ ಬಿದ್ದಿದ್ದರಿಂದ 3 ವಿದ್ಯುತ್ ಕಂಬ ಜಖಂಗೊಂಡಿತ್ತು. ಜತೆಗೆ ಕಾರಿನ ಮೇಲೂ ಮರದ ಕೊಂಬೆಗಳು ಬಿದ್ದು ಹಾನಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಹಲವು ಬಾರಿ ಅಧಿಕಾರಿಗಳಿಗೆ ಹಳೆ ಮರಗಳನ್ನು ತೆರವುಗೊಳಿಸುವಂತೆ ಮನವಿ ಮಾಡಿದ್ದರೂ, ಸಾಬೂಬು ಹೇಳಿ ವಿಳಂಬ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದರು.
ಇದನ್ನೂ ಓದಿ: Accident News : ದ್ವಾರಬಾಗಿಲಿನ ಕಲ್ಲು ಬಿದ್ದು ಮಹಿಳೆ ಸಾವು; ನೀರಿನಲ್ಲಿ ಕೊಚ್ಚಿ ಹೋದ ಯುವಕ
ಚಿಕ್ಕಮಗಳೂರಿನಲ್ಲಿ ನಿಲ್ಲದ ಪ್ರವಾಸಿಗರ ಹುಚ್ಚಾಟ
ಚಾರ್ಮಾಡಿ ಘಾಟ್, ದೇವರಮನೆಗುಡ್ಡ, ರಾಣಿಝರಿ ಬಳಿ ಪ್ರವಾಸಿಗರ ಹುಚ್ಚಾಟ ಮುಂದುವರಿದಿದೆ. ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ರಾಣಿಝರಿ ಬಳಿ ಮಂಗಳೂರು ಬೈಕ್ ಸವಾರರು ಕಿರಿಕ್ ಮಾಡಿದ್ದಾರೆ. 5 ಕಿ.ಮೀ. ರಸ್ತೆಯಲ್ಲಿ ನೂರಕ್ಕೂ ಹೆಚ್ಚು ಬಾರಿ ಬೈಕಿನ ಎಕ್ಸಲೇಟರ್ ರೈಜ್ ಮಾಡಿಕೊಂಡು ಕರ್ಕಶ ಶದ್ಧದೊಂದಿಗೆ ರಸ್ತೆ ಮಧ್ಯೆ ಹುಚ್ಚಾಟ ಮೆರೆಯುತ್ತಿದ್ದಾರೆ. ಮದ್ಯ ಸೇವಿಸಿ ಒಬ್ಬರಾದ ಮೇಲೊಬ್ಬರು ಮೋಜಿನ ಬೈಕ್ ರೈಡಿಂಗ್ ಮಾಡುತ್ತಿದ್ದಾರೆ. ರೀಲ್ಸ್ ಹುಚ್ಚಿಗೆ ರಾಣಿಝರಿ ರಸ್ತೆಯು ಸಂಪೂರ್ಣ ಕೆಸರುಗದ್ದೆಯಂತಾಗಿದೆ.
ಇನ್ನೂ ಪೊಲೀಸರ ಎಚ್ಚರಿಕೆ ನಡುವೆಯೂ ಫಾಲ್ಸ್ ಬಳಿ ಸ್ನಾನ ಮಾಡುತ್ತಿದ್ದ 6 ಪ್ರವಾಸಿಗರ ಮೇಲೆ ಕೇಸ್ ದಾಖಲಾಗಿದೆ. ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಬಾಳೂರೂ ಮೈದಾಡಿ ಫಾಲ್ಸ್ ಬಳಿ ಕೂಗಾಡುತ್ತಾ ಹುಚ್ಚಾಟ ಮಾಡುತ್ತಿದ್ದರು. ಪ್ರವಾಸಿಗರನ್ನು ಠಾಣೆಗೆ ಕರೆದೊಯ್ದು ದೂರು ದಾಖಲಿಸಿದ್ದಾರೆ.
ಕೊಡಗಿನಲ್ಲಿ ಕುಸಿದು ಬಿದ್ದ ವಾಸದ ಮನೆ
ಕೊಡಗಿನಲ್ಲಿ ಮುಂದುವರೆದ ಮಳೆ ಆರ್ಭಟಕ್ಕೆ ವಾಸದ ಮನೆಯು ಧರೆಗುರುಳಿದೆ. ಮರಗೋಡು ಸಮೀಪದ ಹೂಗುಚ್ಚ ಪೈಸಾರಿಯಲ್ಲಿ ಅಣ್ಣು ಎಂಬುವವರಿಗೆ ಸೇರಿದ ವಾಸದ ಮನೆಗೆ ಹಾನಿಯಾಗಿದೆ. ನಿನ್ನೆ ರಾತ್ರಿ ಸುರಿದ ಗಾಳಿ ಮಳೆಗೆ ಮನೆಯ ಮುಂಭಾಗ ಕುಸಿದಿದೆ. ಕೊಡಗು ಜಿಲ್ಲೆ ಮಡಿಕೇರಿ ಮರಗೋಡು ಸಮೀಪದ ತಾಲ್ಲೂಕಿನ ಹೂಗುಚ್ಚ ಪೈಸಾರಿ ಘಟನೆ ನಡೆದಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ