Site icon Vistara News

Karnataka Rain : ವೀಕೆಂಡ್‌ನಲ್ಲಿ ಸಿಲಿಕಾನ್‌ ಸಿಟಿಯಲ್ಲಿ ಮಳೆ ಮೋಡಿ; ಮತ್ತೆ ಗುಡ್ಡ ಕುಸಿತ ಶುರು

Karnataka Rain

ಚಿಕ್ಕಮಗಳೂರು/ಕಾರವಾರ: ಭಾನುವಾರವೂ ಕರಾವಳಿ, ಮಲೆನಾಡು ಸೇರಿದಂತೆ ಒಳನಾಡಿನ ಕೆಲವೆಡೆ ಮಳೆಯು (Heavy Rain) ಅಬ್ಬರಿಸಿತ್ತು. ರಾಜಧಾನಿ ಬೆಂಗಳೂರಿನಲ್ಲಿ ಮುಂಜಾನೆಯಿಂದಲೂ ಮೋಡ ಕವಿದ ವಾತಾವರಣ (Karnataka Rain) ಇತ್ತು.. ಸಂಜೆ ಆಗುತ್ತಿದ್ದಂತೆ ಮೆಜೆಸ್ಟಿಕ್‌, ಕಾಟನ್‌ಪೇಟೆ, ಕೆಆರ್‌ ಮಾರ್ಕೆಟ್‌ ,ಟೌನ್ ಹಾಲ್, ಶಿವಾನಂದ ಸರ್ಕಲ್, ಮೈಸೂರು ಸರ್ಕಲ್ ಸುತ್ತಮುತ್ತ ಮಳೆಯಾಗಿದೆ. ಜಿಟಿ ಜಿಟಿಯಾಗಿ ಶುರುವಾದ ಮಳೆಯು ನಂತರ ಕೆಲ ಕಾಲ ಅಬ್ಬರಿಸಿತ್ತು. ಇತ್ತ ಧಾರವಾಡ ನಗರದಲ್ಲೂ ನಿರಂತರ ಮಳೆಯಾಗಿದೆ. ಬೆಳಗ್ಗೆಯಿಂದಲ್ಲೂ ಬಿಟ್ಟು ಬಿಡದೆ ಸುರಿಯುತ್ತಿದೆ. ಕೆಲವೆಡೆ ಜಿಟಿ ಜಿಟಿ ಮಳೆಯಿಂದಾಗಿ ಸವಾರರು ಪರದಾಡಿದರು. ಧಾರವಾಡ ಗ್ರಾಮೀಣ ಕೆಲ ಭಾಗಗಳಲ್ಲಿ ಹೊರತುಪಡಿಸಿ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದೆ.

ನಿರಂತರ ಮಳೆಗೆ ಗುಡ್ಡ ಕುಸಿತ

ಚಿಕ್ಕಮಗಳೂರಿನಲ್ಲಿ ಬಿಟ್ಟುಬಿಡದೆ ಮಳೆಯು ಸುರಿಯುತ್ತಿದ್ದು, ರಸ್ತೆ ಬದಿ ಗುಡ್ಡ ಕುಸಿತ ಹೆಚ್ಚಾಗುತ್ತಿದೆ. ಶೃಂಗೇರಿ ತಾಲೂಕಿನ ಕೂತು ಗೋಡು ಗ್ರಾಮದ ಬಳಿ ಘಟನೆ ನಡೆದಿದೆ. ಗುಡ್ಡ ಕುಸಿತದಿಂದಾಗಿ ಹಲವು ಗಂಟೆಗಳ ಕಾಲ ಸಂಚಾರ ಬಂದ್ ಆಗಿತ್ತು. ಅಧಿಕಾರಿಗಳು ಜೆಸಿಬಿ ಮೂಲಕ ಮಣ್ಣು ತೆರವು ಕಾರ್ಯದಲ್ಲಿ ತೊಡಗಿದ್ದರು. ಕಳೆದ ಏಳೆಂಟು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಪದೆಪದೇ ಗುಡ್ಡದ ಮಣ್ಣು ಕುಸಿಯುತ್ತಿದೆ. ಹೀಗಾಗಿ ತಾಲೂಕು ಆಡಳಿತವು ಗುಡ್ಡಗಾಡು ಗ್ರಾಮಗಳ ಜನರಿಗೆ ಎಚ್ಚರಿಕೆ ನೀಡಿದೆ.

ರಸ್ತೆಗೆ ಅಡ್ಡಲಾಗಿ ಬಿದ್ದ ಮರ

ಅಂಕೋಲಾ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿಗೆ ಮರವೊಂದು ಅಡ್ಡಲಾಗಿ ಬಿದ್ದು, ವಾಹನಗಳ ಸಂಚಾರಕ್ಕೆ ಅಡ್ಡಿಯನ್ನುಂಟು ಮಾಡಿತ್ತು. ಉತ್ತರಕನ್ನಡದ ಯಲ್ಲಾಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63ರ ಅರಬೈಲ್ ಘಟ್ಟದಲ್ಲಿ ಮರ ಬಿದ್ದು ಸಂಚಾರ ಅಸ್ತವ್ಯಸ್ತವಾಗಿತ್ತು. ಇತ್ತ ಹೆದ್ದಾರಿ ಸಿಬ್ಬಂದಿಯಿಂದ ಮರ ತೆರವು ಕಾರ್ಯಾಚರಣೆವರೆಗೆ ವಾಹನಗಳು ಹೆದ್ದಾರಿಯ ಮತ್ತೊಂದು ಬದಿಯಿಂದ ಸಂಚರಿಸುತ್ತಿದ್ದವು.

ಮುಂದುವರಿದ ಪ್ರವಾಸಿಗರ ಹುಚ್ಚಾಟ

ಬೆಳಗಾವಿಯ ಗೋಕಾಕ ಜಲಪಾತದಲ್ಲಿ ಪ್ರವಾಸಿಗರ ಹುಚ್ಚಾಟ ಮುಂದುವರಿದಿದೆ. ನೀರು ರಭಸವಾಗಿ ಧುಮ್ಮಿಕ್ಕುವ ಸ್ಥಳಗಳಲ್ಲಿ ಪ್ರವಾಸಿಗರು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಂದಾಗುತ್ತಿದ್ದಾರೆ. ಜತೆಗೆ ಕೆಲವರು ಬಂಡೆಗಲ್ಲುಗಳ‌ ಮೇಲೆ ಕುಳಿತು ಊಟ ಮಾಡುತ್ತಿರುವುದು ಕಂಡು ಬಂದಿದೆ. ಜಲಪಾತಕ್ಕೆ ಭದ್ರತೆ ‌ಒದಗಿಸದೆ ಪೊಲೀಸರು ನಿರ್ಲಕ್ಷ್ಯವಹಿಸುತ್ತಿದ್ದಾರೆ. ಚೂರು ಆಯ ತಪ್ಪಿದರೂ ಸಹ ಅಪಾಯ ಗ್ಯಾರಂಟಿ ಎಂದು ಸ್ಥಳೀಯರು ಕಿಡಿಕಾರಿದ್ದಾರೆ.

ಮಳೆಯಲ್ಲೇ ಟ್ರಾಫಿಕ್‌ಗೆ ಸಿಲುಕಿದ ಪ್ರವಾಸಿಗರು

ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ದೇವರ ಮನೆ ಪ್ರವಾಸಿತಾಣಕ್ಕೆ ಪ್ರವಾಸಿಗರ ದಂಡು ಹರಿದುಬರುತ್ತಿದ್ದು, ಮಳೆಯಲ್ಲೇ ಟ್ರಾಫಿಕ್‌ನಲ್ಲಿ ಸಿಲುಕಿದರು. ಸುಮಾರು ಎರಡು ಗಂಟೆ ಕಾಲ ನಿಂತಲ್ಲೇ ನಿಲ್ಲುಂತಾಯಿತು. ವೀಕೆಂಡ್ ಹಿನ್ನೆಲೆಯಲ್ಲಿ ಸಾವಿರಾರು ಟೂರಿಸ್ಟ್‌ಗಳು ಆಗಮಿಸಿದ್ದರು.

ಇದನ್ನೂ ಓದಿ: Rain News: ಕರಾವಳಿಯಲ್ಲಿ ಮುಂದುವರಿದ ವರುಣನ ಅಬ್ಬರ; ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡ ಕುಸಿತ

ಮಳೆಗೆ ಜಲಾಶಯಗಳು ಭರ್ತಿ!

ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಗೆ ರಾಜ್ಯದ ಹಲವೆಡೆ ಜಲಾಶಯಗಳು ಭರ್ತಿಯಾಗುತ್ತಿವೆ. ಮೈಸೂರಿನ ಎಚ್.ಡಿ.ಕೋಟೆ ತಾಲೂಕಿನ ಬೀಚನಹಳ್ಳಿ ಗ್ರಾಮದ ಕಬಿನಿ ಜಲಾಶಯ ಭರ್ತಿಗೆ ಎರಡು ಅಡಿ ಬಾಕಿ‌ ಇದೆ. ಕೇರಳದ ವೈನಾಡು ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಬಿನಿ ಜಲಾಶಯದ ಒಳಹರಿವು ಗಣನೀಯವಾಗಿ ಏರಿಕೆ ಆಗುತ್ತಿದೆ. ರಾಜ್ಯದಲ್ಲೇ ಮೊದಲು ಭರ್ತಿಯಾಗುವ ಅಣೆಕಟ್ಟಾಗಿದೆ.

ಇತ್ತ ಮಲೆನಾಡು ಭಾಗದಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಲ್ಯಾಣ- ಕರ್ನಾಟಕದ ಜೀವನಾಡಿ ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಳಗೊಂಡಿದೆ. ತುಂಗಭದ್ರಾ ಜಲಾಶಯದ ಒಳ ಹರಿವಿನಲ್ಲಿ ಭಾರೀ ಪ್ರಮಾಣ ಹೆಚ್ಚಳವಾಗುತ್ತಿದ್ದು, 24 ಗಂಟೆಗಳಲ್ಲಿ ಬರೋಬ್ಬರಿ 5 ಟಿಎಂಸಿ ನೀರು ಜಲಾಶಯಕ್ಕೆ ಹರಿದು ಬಂದಿದೆ. ನಿನ್ನೆ ಶನಿವಾರ 13.90 ಟಿಎಂಸಿ ಇದ್ದ ನೀರಿನ ಸಂಗ್ರಹ ಇಂದು ಭಾನುವಾರ 18. 24 ಗೆ ಏರಿಕೆ ಆಗಿದೆ.

ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಒಳ ಹರಿವು ಇರುವುದರಿಂದ ರೈತರಲ್ಲಿ ಸಂತಸ ಹೆಚ್ಚಿಸಿದೆ. ತುಂಗಭದ್ರಾ ಜಲಾಶಯ ಕರ್ನಾಟಕ, ಆಂಧ್ರ ತೆಲಂಗಾಣ ರಾಜ್ಯಗಳ ರೈತರ ಜೀವನಾಡಿ ಆಗಿದೆ. ಇದೇ ರೀತಿ ಒಳ ಹರಿವು ಹೆಚ್ಚಾದರೆ 10 ರಿಂದ 15 ದಿನದಲ್ಲಿ ಜಲಾಶಯ ಭರ್ತಿ ಆಗಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version