ಬೆಳಗಾವಿ/ಚಿಕ್ಕಮಗಳೂರು: ಮಳೆ (Karnataka Rain) ನೀರು ಮನೆಗೆ ನುಗ್ಗಿದ್ದರಿಂದ ಕಾಲು ಜಾರಿ ಬಿದ್ದು ವೃದ್ಧೆಯೊಬ್ಬರು ಮೃತಪಟ್ಟಿದ್ದಾರೆ. ಮಹಬೂಬಿ ಅದಂಸಾಹೇಬ್ ಮಕಾಂದಾರ್ (79) ಮೃತ ದುರ್ದೈವಿ. ವೃದ್ಧೆಯ ಶವ ಸಾಗಿಸಲು ಕುಟುಂಬಸ್ಥರು ಪರದಾಡಿದ ಘಟನೆ ಬೆಳಗಾವಿಯ ಅಮನ್ ನಗರದಲ್ಲಿ ನಡೆದಿದೆ. ನಿರಂತರ ಮಳೆಯಿಂದ ಕಾಲೋನಿಗೆ ಡ್ರೈನೇಜ್ ನೀರು ನುಗ್ಗಿ ಅವಾಂತರವೇ ಸೃಷ್ಟಿಯಾಗಿತ್ತು. ಮೊಳಕಾಲುದ್ದ ನೀರಲ್ಲಿ ಶವ ಹಿಡಿದು ಕಾಲೋನಿ ಜನರು ಪರದಾಡಿದ್ದಲ್ಲದೇ ಮಳೆಯಲ್ಲೇ ಅಂತ್ಯ ಸಂಸ್ಕಾರ ನೆರವೇರಿಸಿದ್ದರು.
ಉಡುಪಿಯಲ್ಲಿ ಮರ ಬಿದ್ದು ಮನೆಗಳು ಧ್ವಂಸ
ಉಡುಪಿಯ ಕುಂದಾಪುರ ತಾಲೂಕಿನ ಬಳ್ಕೂರಿನಲ್ಲಿ ಭಾರಿ ಗಾಳಿ ಮಳೆಗೆ ಮರ ಬಿದ್ದು ಎರಡು ಮನೆಗಳು ಸಂಪೂರ್ಣ ಹಾನಿಯಾಗಿದೆ. ಬಳ್ಕೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಒಂದನೇ ವಾರ್ಡ್‌ನಲ್ಲಿ ಘಟನೆ ನಡೆದಿದೆ. ಸೀತಾ ಪೂಜಾರಿ ಮತ್ತು ಲಚ್ಚ ಪೂಜಾರಿ ಅವರ ಮನೆಗಳು ಧ್ವಂಸಗೊಂಡಿವೆ. ಒಂದು ಮನೆಯ ಮೇಲೆ ತೆಂಗಿನ ಮರ, ಇನ್ನೊಂದು ಮನೆಯ ಮೇಲೆ ಎರಡು ಅಡಿಕೆ ಮರಗಳು ಉರುಳಿ ಬಿದ್ದಿವಿ. ಮನೆಯ ಪಕ್ಕದಲ್ಲಿದ್ದ ಹಲಸಿನ ಮರ ಮತ್ತು ವಿದ್ಯುತ್ ಕಂಬಕ್ಕೂ ಹಾನಿಯಾಗಿದೆ. ಸ್ಥಳಕ್ಕೆ ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಗ್ರಾಮ ಕರಣಿಕರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕೊಡಗಿನಲ್ಲಿ ನೋಡ ನೋಡುತ್ತಿದ್ದಂತೆ ಕುಸಿದ ಗುಡ್ಡ
ಗುಡ್ಡದ ಮಣ್ಣು ಕುಸಿದಿದ್ದು, ಕೆಎಸ್‌ಆರ್‌ಟಿಸಿ ಬಸ್‌ನಲ್ಲಿದ್ದವರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಕೊಡಗಿನ ಸೋಮವಾರಪೇಟೆ ತಾಲ್ಲೂಕಿನ ಶಾಂತಳ್ಳಿ ಸಮೀಪ ಜೇಡಿಗುಂಡಿ ಬಳಿ ಘಟನೆ ನಡೆದಿದೆ. ಚಲಿಸುತ್ತಿದ್ದ ಬಸ್ ಮುಂದೆಯೇ ಗುಡ್ಡದ ಮಣ್ಣು ಕುಸಿದಿದೆ. ಕೂಡಲೇ ಚಾಲಕ ಬಸ್ ನಿಲ್ಲಿಸಿದ್ದಾರೆ. ಗುಡ್ಡದ ಮಣ್ಣು ಕುಸಿದು ಸೋಮವಾರಪೇಟೆ ಶಾಂತಳ್ಳಿ ರಸ್ತೆ ಸಂಚಾರ ಬಂದ್ ಆಗಿತ್ತು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ವಾಹನಗಳು ಸಾಲು ಗಟ್ಟಿ ನಿಲ್ಲಬೇಕಾಯಿತು.
ಇತ್ತ ಸೋಮವಾರಪೇಟೆ ವ್ಯಾಪ್ತಿಯಲ್ಲಿ ಭಾರಿ ಗಾಳಿ ಮಳೆಗೆ ವಾಸದ ಮನೆ ಮೇಲೆ ಬೃಹತ್ ಗಾತ್ರದ ಮರ ಉರುಳಿ ಬಿದ್ದಿದೆ. ಮನೆಮಂದಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸೋಮವಾರಪೇಟೆಯ ಹಾನಗಲ್ಲು ವ್ಯಾಪ್ತಿಯ ಕಲ್ಕಂದೂರುನಲ್ಲಿ ಘಟನೆ ನಡೆದಿದೆ. ಗ್ರಾಮದ ಪ್ರವೀಣ್ ಎಂಬುವರಿಗೆ ಸೇರಿದ ವಾಸದ ಮನೆ ಹಾನಿಯಾಗಿದೆ.
ಚಿಕ್ಕಮಗಳೂರಿನಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ವಿದ್ಯುತ್ ತಂತಿ
ಚಿಕ್ಕಮಗಳೂರಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಅವಾಂತರವೇ ಸೃಷ್ಟಿಸಿದೆ. ಗಾಳಿ ಮಳೆ ಅಬ್ಬರಕ್ಕೆ ಚಲಿಸುತ್ತಿದ್ದ ಕಾರಿನ ಮೇಲೆ ವಿದ್ಯುತ್ ತಂತಿ ಬಿದ್ದಿದೆ. ವಿದ್ಯುತ್ ಇಲ್ಲದ ಪರಿಣಾಮ ಭಾರಿ ಅನಾಹುತ ತಪ್ಪಿದೆ. ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿ ರಸ್ತೆಯಲ್ಲಿ ಘಟನೆ ನಡೆದಿದೆ. ಗಿರಿ ರಸ್ತೆಯ ಐದಾರು ಕಡೆ ಮರಗಳು ಬಿದ್ದು ವಿದ್ಯುತ್ ಕಂಬಗಳು ಧರೆಗುರುಳಿದೆ. ಚಿಕ್ಕಮಗಳೂರು ತಾಲೂಕಿನ ಹಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು.
ಚಿಕ್ಕಮಗಳೂರು ಬಸ್ ನಿಲ್ದಾಣದಲ್ಲಿ ಭತ್ತದ ನಾಟಿ!
ಕೆಸರುಗದ್ದೆಯಾಂತದ ಚಿಕ್ಕಮಗಳೂರು ಬಸ್ ನಿಲ್ದಾಣದಲ್ಲಿ ಜೋಡೆತ್ತುಗಳ ಸಮೇತ ಉಳುವೆ ಮಾಡಲಾಯಿತು. ಉಳುಮೆ ಮಾಡಿ ಬಸ್ ನಿಲ್ದಾಣದಲ್ಲಿ ಭತ್ತದ ನಾಟಿ ಮಾಡಿ ವಿಭಿನ್ನವಾಗಿ ಪ್ರತಿಭಟಿಸಿದರು. ಚಿಕ್ಕಮಗಳೂರು ನಗರದ ಗ್ರಾಮಾಂತರ ಬಸ್ ನಿಲ್ದಾಣದ ದುಸ್ಥಿತಿಗೆ ಹಲವು ಸಂಘಟನೆಗಳು ಕಿಡಿಕಾರಿದರು. ಮಳೆಯಿಂದಾಗಿ ನಡೆದಾಡಲು ಆಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಸಮಾಧಾನ ಹೊರಹಾಕಿದರು. ಇನ್ನೂ ಭಾರೀ ಗಾಳಿಗೆ ಬೃಹತ್ ಮರವೊಂದು ಬುಡಸಮೇತ ರಸ್ತೆಗುರುಳಿದ ಘಟನೆ ಚಿಕ್ಕಮಗಳೂರು ತಾಲೂಕಿನ ವಸ್ತಾರೆ ಬಳಿ ನಡೆದಿದೆ. ವಸ್ತಾರೆ ಟು ಆಲ್ದೂರು ರೋಡ್ ಬ್ಲಾಕ್ ಆಗಿತ್ತು. ಬಾಳೆಹೊನ್ನೂರು, ಶೃಂಗೇರಿ, ಕೊಪ್ಪ, ಕಳಸ, ಎನ್.ಆರ್.ಪುರದ ಮಾರ್ಗದಲ್ಲಿ ಒಂದು ಗಂಟೆಗೂ ಹೆಚ್ಚು ಹೊತ್ತು ಟ್ರಾಫಿಕ್ ಜಾಮ್ ಉಂಟಾಗಿತ್ತು.
ಹೆಬ್ಬಾಳ ಸೇತುವೆ ಮತ್ತೆ ಮುಳುಗಡೆ
ಚಿಕ್ಕಮಗಳೂರಿನ ಕಳಸ-ಹೊರನಾಡು ಸಂಪರ್ಕ ಕಲ್ಪಿಸುವ ಹೆಬ್ಬಾಳ ಸೇತುವೆ ಮತ್ತೆ ಮುಳುಗಡೆಯಾಗಿದೆ. ಕುದುರೆಮುಖ ಘಟ್ಟ ಪ್ರದೇಶದಲ್ಲಿ ಕಳೆದ ರಾತ್ರಿಯಿಂದ ಸುರಿದ ಧಾರಾಕಾರ ಮಳೆಗೆ ಕಳಸ-ಹೊರನಾಡು ಸಂಪರ್ಕದ ಹೆಬ್ಬಾಳೆ ಸೇತುವೆ ಮುಳುಗಡೆಯಾಗಿದೆ. ಕಳೆದ 15 ದಿನಗಳಲ್ಲಿ 10ಕ್ಕೂ ಹೆಚ್ಚು ಬಾರಿ ಸೇತುವೆ ಮುಳುಗಡೆಯಾಗಿದೆ. ಹತ್ತಾರು ಹಳ್ಳಿಯ ಸಂಪರ್ಕ ಕಡಿತದೊಂದಿಗೆ ಹೊರನಾಡು ಅನ್ನಪೂರ್ಣೇಶ್ವರಿ ದೇಗುಲದ ಮಾರ್ಗವು ಬಂದ್ ಆಗಿದೆ.
ಇತ್ತ ಕುಡಿದ ಮತ್ತಿನಲ್ಲಿ ಹೆಬ್ಬಾಳ ಸೇತುವೆ ಮೇಲೆ ಜೀಪ್ ಚಾಲಕ ಹುಚ್ಚಾಟ ಮೆರೆದಿದ್ದಾನೆ. ಸೇತುವೆ ಮೇಲೆ ನೀರು ಉಕ್ಕಿ ಹರಿಯುತ್ತಿದ್ದು, ಜೀಪ್ ಚಲಾಯಿಸಿದ್ದಾನೆ. ಅಡ್ಡಲಾಗಿ ಬ್ಯಾರಿಕೇಡ್ ಇದ್ದರೂ ಚಾಲಕ ಹುಚ್ಚಾಟ ತೋರಿದ್ದಾನೆ. ನದಿ ನೀರಿನ ಸೆಳೆತಕ್ಕೆ ಸ್ವಲ್ಪದರಲ್ಲೇ ಜೀಪು ಚಾಲಕ ಪಾರಾಗಿದ್ದಾನೆ.
ಇದನ್ನೂ ಓದಿ: Actor Darshan: ನಟ ದರ್ಶನ್‌ಗೆ ಜೈಲೂಟ ಫಿಕ್ಸ್; ಕೋರ್ಟ್ ಮನೆಯೂಟದ ಅರ್ಜಿ ವಜಾಗೊಳಿಸಿದ್ದೇಕೆ?
ತೆಂಗಿನ ಮರ ಬಿದ್ದು ಗೋ ಶಾಲೆ ಧ್ವಂಸ
ಇನ್ನೂ ಇತ್ತ ಚಂದ್ರದ್ರೋಣ ಪರ್ವತದ ಸಾಲಿನಲ್ಲಿ ಭಾರಿ ಮಳೆಯಾಗುತ್ತಿದ್ದು, ತಾಯಿ ಹೊಳೆ ಅಬ್ಬರಕ್ಕೆ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಕುಮಾರ ಗಿರಿ ಸೇತುವೆ ಹೊಳೆಯ ನೀರಿಗೆ ಮುಳುಗಡೆಯಾಗಿದೆ. ಹತ್ತಾರು ಹಳ್ಳಿಗಳ ಸಂಪರ್ಕ ಕಡಿತಗೊಂಡಿದೆ. ಗಾಳಿ ಮಳೆಗೆ ಗೋಶಾಲೆಯ ಮೇಲೆ ತೆಂಗಿನ ಮರ ಮುರಿದು ಬಿದ್ದಿದೆ. ತಂಗಿನ ಮರ ಬಿದ್ದ ರಭಸಕ್ಕೆ ಗೋ ಶಾಲೆ ಧ್ವಂಸಗೊಂಡಿದೆ. ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ಹೇರೂರು ಗ್ರಾಂ.ಪಂ ವ್ಯಾಪ್ತಿಯ ಕೆಮ್ಮಣ್ಣು ಗ್ರಾಮದಲ್ಲಿ ಘಟನೆ ನಡೆದಿದೆ. ಹಸುಗಳು ಮೇಯಲು ಹೋಗಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ. ಸುಮಾರು 50ಕ್ಕೂ ಹೆಚ್ಚು ಹಸುಗಳಿದ್ದು, ಗೋ ಶಾಲೆಯ ಚಾವಣಿ ಸಂಪೂರ್ಣ ಜಖಂಗೊಂಡಿದೆ.
ಕಳಸ-ಕುದುರೆ ಮುಖ-ಕಾರ್ಕಳ ಮಾರ್ಗದ ರಾಜ್ಯ ಹೆದ್ದಾರಿಯಲ್ಲಿ ಭೂ ಕುಸಿದಿದೆ. ಬೃಹತ್ ಸೇತುವೆ ಪಕ್ಕದಲ್ಲೇ ಕುಸಿದಿದ್ದು, ಭಾರೀ ವಾಹನಗಳು ಓಡಾಡಿದರೆ ರಸ್ತೆ ಸಂಪೂರ್ಣ ಕುಸಿಯುವ ಸಾಧ್ಯತೆ ಇದೆ. ರಸ್ತೆ ಮತ್ತಷ್ಟು ಕುಸಿದರೆ ಬೃಹತ್ ಸೇತುವೆಗೂ ಹಾನಿಯಾಗಲಿದೆ. ಎರಡು ದಿನದ ಹಿಂದೆ ಸ್ವಲ್ಪ ಕುಸಿದಿದ್ದ ಭೂಮಿ ಇಂದು ಮತ್ತಷ್ಟು ಕುಸಿಯಲಿದೆ. ಸದ್ಯ ಪೊಲೀಸರು ರಸ್ತೆಗೆ ರೆಡ್ ಟೇಪ್ ಕಟ್ಟಿ, ಮರಳು ಚೀಲ ಅಡ್ಡ ಇಟ್ಟಿದ್ದಾರೆ.
ಹಾಸನದಲ್ಲಿ ನೂರಾರು ಎಕರೆ ಜಮೀನು ಜಲಾವೃತ
ಹಾಸನದ ಸಕಲೇಶಪುರ ತಾಲೂಕಿನಲ್ಲಿ ಮಳೆಯಾರ್ಭಟಕ್ಕೆ ಹೇಮಾವತಿ ನದಿ ಉಕ್ಕಿ ಹರಿಯುತ್ತಿದೆ. ಹೇಮಾವತಿ ನದಿ ನೀರು ಉಕ್ಕಿ ಹರಿದ ಪರಿಣಾಮ ನೂರಾರು ಎಕ್ಕರೆ ಜಮೀನು ಜಲಾವೃತಗೊಂಡಿದೆ. ಸಕಲೇಶಪುರ ತೇಜಸ್ವಿ ಚಿತ್ರಮಂದಿರ ಸಮೀಪದ ಭತ್ತದ ಗದ್ದೆಗಳು,ತೋಟ ಜಲಾವೃತಗೊಂಡಿದೆ. ನಾಟಿ ಮಾಡಿದ್ದ ಭತ್ತದ ಗದ್ದೆ ,ಭತ್ತದ ಸಸಿ ನೀರುಪಾಲಾಗಿದೆ.
ಕ್ಷಣ-ಕ್ಷಣಕ್ಕೂ ಹೆಚ್ಚುತ್ತಿರುವ ಕೃಷ್ಣಾ ನದಿ ಹರಿವು
ಬಾಗಲಕೋಟೆ ಜಿಲ್ಲೆಯ ಕೃಷ್ಣಾ ನದಿಗೆ 2 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಮಹಾರಾಷ್ಟ್ರ ಮಳೆಯಿಂದ ಕೃಷ್ಣಾ ನದಿ ಪಾತ್ರದಲ್ಲಿ ಪ್ರವಾಹ ಭೀತಿ ಎದುರಾಗಿದೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನಲ್ಲಿ ಪ್ರವಾಹ ಆತಂಕ ಹೆಚ್ಚಿದೆ. ಮುತ್ತೂರ,ಮೈಗೂರ,ಕಂಕಣವಾಡಿ ಗ್ರಾಮಗಳಲ್ಲಿ ಜಲಾವೃತ ಭೀತಿ ಇದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ