ರಾಯಚೂರು: ಮಳೆ ಅವಾಂತರಕ್ಕೆ (Rain Effect) ಶಾಲೆ ಚಾವಣಿ ಕುಸಿದು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಪಾತಾಪುರ ಗ್ರಾಮದಲ್ಲಿ (Karnataka Rain)ಘಟನೆ ನಡೆದಿದೆ. ತರಗತಿ ನಡೆಯುತ್ತಿರುವಾಗಲೇ ಏಕಾಏಕಿ ಚಾವಣಿ ಕಳಚಿ ಮಕ್ಕಳ ಬಿದ್ದಿದ್ದು, ತಲೆ, ಕೈಗಳಿಗೆ ಗಾಯವಾಗಿದೆ.
ಪಾತಾಪುರ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಚಾವಣಿ ಕುಸಿದು, ವಿದ್ಯಾರ್ಥಿ ಚಂದನಬಸವರಾಜ್ ಎಂಬಾತ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಳೆದ ಎರಡು ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಈ ಅವಾಂತರ ಸೃಷ್ಟಿಯಾಗಿದೆ.
ಮಕ್ಕಳು ಜೀವ ಭಯದಲ್ಲಿ ಪಾಠ ಕಲಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಿಇಓ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಠಡಿ ಸೋರುತ್ತಿರುವುದರಿಂದ ತಾತ್ಕಾಲಿಕವಾಗಿ ಬೇರೆ ತರಗತಿ ನಡೆಸಲು ಸೂಚಿಸಲಾಗಿದೆ. ತಾತ್ಕಾಲಿಕವಾಗಿ ಗ್ರಾಮದ ಕರಿಲಿಂಗೇಶ್ವರ ದೇವಸ್ಥಾನದಲ್ಲಿ ತರಗತಿ ನಡೆಸಲು ಬಿಇಓ ಸೂಚನೆ ನೀಡಿದ್ದಾರೆ.
ರಾಯಚೂರಿನಲ್ಲಿ ಈಜುಕೊಳವಾದ ಶಾಲೆ ಆವರಣ
ಅಲ್ಪ ಮಳೆಗೆ ಸರಕಾರಿ ಶಾಲೆ ಆವರಣವು ಈಜುಕೊಳವಾಗಿದೆ. ರಾಯಚೂರಿನ ದೇವದುರ್ಗ ತಾಲೂಕಿನ ಖಾನಾಪುರ ಗ್ರಾಮದಲ್ಲಿ ಸರಕಾರಿ ಶಾಲೆಯಲ್ಲಿ ಮಳೆಯು ಅವಾಂತರವನ್ನೇ ಸೃಷ್ಟಿಸಿದೆ. ಶಾಲೆ ಕಟ್ಟಡವು ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದೆ. ಜೀವ ಭಯದಲ್ಲೇ ಮಕ್ಕಳು ಮತ್ತು ಶಿಕ್ಷಕರು ಪಾಠ ಪ್ರವಚನ ಮಾಡಬೇಕಾದ ಪರಿಸ್ಥಿತಿ ನಿರ್ಮಾನವಾಗಿದೆ. ಜಿಟಿ ಜಿಟಿ ಮಳೆಯಿಂದ ಕೊಠಡಿಗಳು ಸೋರುತ್ತಿದೆ. ಜೋರಾಗಿ ಮಳೆ ಬಂದರೆ ನೀರು ನುಗ್ಗುವ ಭೀತಿ ಇದೆ. ಇತ್ತ ಸೋರುತ್ತಿರುವ ಕೊಠಡಿಯಲ್ಲೆ ಮಧ್ಯಾಹ್ನ ಬಿಸಿ ಊಟದ ಆಹಾರ ಧಾನ್ಯಗಳ ಸಂಗ್ರಹ ಮಾಡಲಾಗಿದೆ. ಪಿಡಿಒ, ಬಿಇಓ ಅವರ ಗಮನಕ್ಕೆ ತಂದರು ಪ್ರಯೋಜನೆಯಾಗಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಇದನ್ನೂ ಓದಿ: Actor Darshan : ನಟ ದರ್ಶನ್ ವಿರುದ್ಧ ಸಿಡಿದೆದ್ದ ಮಂಡ್ಯ ರೈತರು; ಆರೋಪಿಗಳಿಗೆ ಗಲ್ಲು ಶಿಕ್ಷೆಗೆ ಆಗ್ರಹ
ಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದ ಬೈಕ್ ಸವಾರ
ಗ್ರಾಮಸ್ಥರ ಸಮಯ ಪ್ರಜ್ಞೆಯಿಂದ ಬೈಕ್ ಸವಾರನ ಜೀವ ಉಳಿದಿದೆ. ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಚಂದ್ರಶೇಖರಪುರ ಗ್ರಾಮದಲ್ಲಿ ಘಟನೆ ನಡೆದಿದೆ. ನಿರಂತರ ಮಳೆಯಿಂದಾಗಿ ಹಳ್ಳ, ಕೊಳ್ಳಗಳಲ್ಲಿ ನೀರು ತುಂಬಿ ಹರಿಯುತ್ತಿದೆ. ರಭಸವಾಗಿ ಹರಿಯುತ್ತಿದ್ದ ನೀರಿನಲ್ಲೇ ಹಳ್ಳ ದಾಟಲು ಬೈಕ್ ಸವಾರ ಮುಂದಾಗಿದ್ದ. ಈ ವೇಳೆ ನೀರಿನ ರಭಸಕ್ಕೆ ಕೊಚ್ಚಿ ಹೋಗುತ್ತಿದ್ದ, ಇದನ್ನೂ ಗಮನಿಸಿದ ಸ್ಥಳೀಯರು ಕೂಡಲೇ ಸವಾರನನ್ನು ರಕ್ಷಿಸಿದ್ದಾರೆ.
ಜಲಸಮಾಧಿಯಾದ ಬೃಹತ್ ಬಾವಿ
ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಜಮೀನಿನಲ್ಲಿದ್ದ ಬೃಹತ್ ಬಾವಿಯೊಂದು ಜಲಸಮಾಧಿಯಾಗಿದೆ. ಬಾವಿ ಸುತ್ತಲೂ ಕಲ್ಲಿನ ಗೋಡೆ ನಿರ್ಮಿಸಿದರೂ ಬಾವಿ ಕುಸಿದಿದೆ. ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಗ್ರಾಮದಲ್ಲಿ ಘಟನೆ ನಡೆದಿದೆ.
14 ಎಕರೆ ಜಮೀನಿಗಾಗಿ 60 ಲಕ್ಷ ರೂ. ಖರ್ಚು ಮಾಡಿ ಜಮೀನಿನಲ್ಲಿ ರೈತ ಸಿದ್ದಪ್ಪ ಸರಬಡಗಿ ಬಾವಿಯನ್ನು ಕಟ್ಟಿಸಿದ್ದರು. ಇದೀಗ ಸಂಪೂರ್ಣವಾಗಿ ಬಾವಿ ಕುಸಿದು ಬಿದ್ದಿರುವ ಹಿನ್ನೆಲೆಯಲ್ಲಿ ಚಿಂತೆಗೀಡಾಗಿದ್ದಾರೆ. 110 ಆಳದ ಬಾವಿಗೆ ಸುತ್ತಲೂ 45 ಅಡಿ ಕಲ್ಲಿನ ಗೋಡೆ ಕಟ್ಟಿಸಲಾಗಿತ್ತು. ಇದೀಗ ಬಾವಿಯೊಳಗೆ 7.5ಎಚ್‌ಪಿ 2 ಮೋಟಾರು ನೀರು ಪಾಲಾಗಿದೆ. ಬಾವಿ ಕುಸಿದಿರುವ ಹಿನ್ನೆಲೆ ಕೃಷಿಗೆ ನೀರು ಪೂರೈಸುವುದು ಹೇಗೆ ಎಂದು ಗೋಳಾಡುತ್ತಿದ್ದಾರೆ. ಕೂಡಲೇ ಸರ್ಕಾರ ಪರಿಹಾರ ಕೊಡಲಿಎಂದು ಆಗ್ರಹಿಸಿದ್ದಾರೆ.
ಒಂದೇ ಮಳೆಗೆ ಭರ್ತಿಯಾದ ಗಾಜನೂರಿನ ತುಂಗಾ ಡ್ಯಾಂ ಭರ್ತಿ
ಒಂದೇ ಮಳೆಗೆ ಶಿವಮೊಗ್ಗ ತಾಲೂಕಿನ ಗಾಜನೂರಿನ ತುಂಗಾ ಡ್ಯಾಂ ಭರ್ತಿಯಾಗಿದೆ. ತುಂಗಾ ಜಲಾಶಯದಲ್ಲಿ ಗರಿಷ್ಠ ನೀರಿನ ಸಂಗ್ರಹ ಮಟ್ಟ 588.24 ಮೀಟರ್ ಇದ್ದು, ಈಗಾಗಲೇ ನೀರಿನ ಮಟ್ಟ 588.11 ಮೀ ಬಂದಿದೆ. ಶಿವಮೊಗ್ಗ ನಗರಕ್ಕೆ ಕುಡಿಯುವ ನೀರಿಗೆ ತುಂಗಾ ಜಲಾಶಯವೇ ಆಧಾರವಾಗಿತ್ತು. ಗಾಜನೂರಿನ ತುಂಗಾ ಜಲಾಶಯದ 3.24 ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿದೆ. ಶಿವಮೊಗ್ಗದ ತೀರ್ಥಹಳ್ಳಿ ಹಾಗೂ ಚಿಕ್ಕಮಗಳೂರಿನ ಶೃಂಗೇರಿ ಭಾಗದಲ್ಲಿ ಧಾರಾಕಾರ ಸುರಿದ ಮಳೆಯಿಂದಾಗಿ ತುಂಗಾ ನದಿಯಲ್ಲಿ ಹರಿವಿನಲ್ಲಿ ನೀರಿನ ಪ್ರಮಾಣ ಹೆಚ್ಚಾಗಿ ಭರ್ತಿಯಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ