ಕೊಡಗು/ಮಹಾರಾಷ್ಟ್ರ: ಕರ್ನಾಟಕ ಮಾತ್ರವಲ್ಲದೇ ಮಹಾರಾಷ್ಟ್ರದಲ್ಲೂ ರಣ ಮಳೆ (Karnataka Rain) ಮುಂದುವರಿದಿದೆ. ಮಹಾರಾಷ್ಟ್ರದ ಭಿವಂಡಿ ಬಳಿಯ ಕಲ್ಯಾಣ್ ರೈಲು ನಿಲ್ದಾಣದ ಬಳಿ ರಣಮಳೆಗೆ ಸಿಲುಕಿದ ಶಾಲಾ ಬಸ್‌ವೊಂದು ನೀರಲ್ಲಿ ತೇಲಿ ಹೋಗಿತ್ತು. ಅದೃಷ್ಟವಶಾತ್ ಬಸ್ಸಿನಲ್ಲಿ ಯಾರು ಇಲ್ಲದೇ ಇರುವುದರಿಂದ ಅನಾಹುತವು ತಪ್ಪಿತ್ತು.
ಇನ್ನೂ ರಸ್ತೆಯಲ್ಲಿ ಮೊಳಕಾಲುದ್ದ ನೀರು ನಿಂತ ಪರಿಣಾಮ ವಾಹನ ಸವಾರರು ಹರಸಾಹಸ ಪಟ್ಟರು. ಕುಂದಿಲಿಕಾ ನದಿ ನೀರ ಆರ್ಭಟದಿಂದ ರಾಯಘಡ ರಸ್ತೆ ಜಲಾವೃತವಾಗುವ ಭೀತಿ ಎದುರಾಗಿದೆ. ಕಳೆದ 24 ಗಂಟೆಯಿಂದ ಮಹಾರಾಷ್ಟ್ರದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಮುಂಬೈ ಜನ ಜೀವನ ಅಸ್ತವ್ಯಸ್ತವಾಗಿದೆ.
ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ
ಕೊಡಗಿನಲ್ಲಿ ಪುನರ್ವಸು ಮಳೆಯ ಆರ್ಭಟ ಜೋರಾಗಿದೆ. ಕೊಡಗಿನ ಸೋಮವಾರಪೇಟೆ ಹಾಗೂ ಮಡಿಕೇರಿ ತಾಲ್ಲೂಕಿನಾದ್ಯಂತ ಭಾರಿ ಗಾಳಿ ಮಳೆಯಾಗುತ್ತಿದೆ. ಸೋಮವಾರಪೇಟೆ ತಾಲೂಕಿನ ಹಲವೆಡೆ ಮನೆಗಳ ಗೋಡೆ ಕುಸಿದಿದೆ. ಅತ್ತೂರು ಗ್ರಾಮದ ಅಚ್ಚಯ್ಯ ಹಾಗೂ ಜನಾರ್ಧನ, ಶನಿವಾರಸಂತೆಯ ಗೌಡಳ್ಳಿ ನಿವಾಸಿ ರಮೇಶ್, ಮಡಿಕೇರಿ ತಾಲೂಕಿನ ಮೇಕೇರಿ ನಿವಾಸಿ ಆಯಿಶಾ ಎಂಬುವವರ ಮನೆಯ ಗೋಡೆ ಕುಸಿದಿದೆ. ವಿಷಯ ತಿಳಿಯುತ್ತಿದ್ದಂತೆ ಮನೆ ಹಾನಿಯಾದ ಸ್ಥಳಗಳಿಗೆ ತಹಸೀಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: Karnataka Rain : ಭಾರಿ ಗಾಳಿ ಮಳೆ; ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ವಿಲವಿಲ ಒದ್ದಾಡಿ ಸತ್ತ ಗಬ್ಬದ ಹಸು
ಜಲಾವೃತಗೊಂಡ ರಸ್ತೆಯಲ್ಲಿ ರೋಗಿ ಸ್ಥಳಾಂತರಕ್ಕೆ ಸಂಕಷ್ಟ
ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನಾದ್ಯಂತ ಭಾರಿ ಮಳೆಯಾಗುತ್ತಿದೆ. ಕಾರವಾರದ ಚೆಂಡಿಯಾ ಐಸ್ ಫ್ಯಾಕ್ಟರಿ ಸಮೀಪ ಭಾರೀ ಪ್ರಮಾಣದಲ್ಲಿ ಮಳೆ ಸುರಿದ ಪರಿಣಾಮ ರಸ್ತೆ, ಮನೆಗಳು ಜಲಾವೃತಗೊಂಡಿತ್ತು. ಅಸ್ತಮಾ ಖಾಯಿಲೆಯಿಂದ ಬಳಲುತ್ತಿರುವ ವೃದ್ಧೆ ಸ್ವಾತಿ ರತ್ನಾಕರ ನಾಯ್ಕ(67) ಅವರನ್ನು ಆಸ್ಪತ್ರೆಗೆ ಸ್ಥಳಾಂತರ ಮಾಡಲು ತೊಂದರೆಯುನ್ನುಂಟಾಯಿತು. ರಸ್ತೆ ಜಲಾವೃತವಾದ ಪರಿಣಾಮ ವಾಹನದ ಮೂಲಕ ರೋಗಿ ಸ್ಥಳಾಂತರಕ್ಕೆ ಕಷ್ಟವಾಯಿತು.
ನಿನ್ನೆವರೆಗೂ ಕಡಿಮೆ ಇದ್ದ ನೀರಿನ ಪ್ರಮಾಣ ರಾತ್ರಿ ಬೆಳಗಾಗುವುದರೊಳಗೆ ತಗ್ಗು ಪ್ರದೇಶದಲ್ಲಿ ನೀರು ನಿಂತು ನೆರೆ ಪರಿಸ್ಥಿತಿ ನಿರ್ಮಾಣವಾಗಿತ್ತು. ನೌಕಾನೆಲೆ ಕಂಪೌಂಡ್ ಅವ್ಯವಸ್ಥೆಯೇ ಇದಕ್ಕೆಲ್ಲ ಕಾರಣ ಎಂದು ಸ್ಥಳೀಯರು ಹಿಡಿಶಾಪ ಹಾಕಿದ್ದರು. ಮಳೆಯ ನೀರು ಸಮುದ್ರಕ್ಕೆ ಹರಿದುಹೋಗಲಾರದೇ ಮನೆಗಳು ಜಲಾವೃತಗೊಂಡಿದ್ದವು. ಸ್ಥಳಕ್ಕೆ ಗ್ರಾಮ ಪಂಚಾಯತಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ನಾಳೆಯೂ ಅಬ್ಬರಿಸಲಿದೆ ಮಳೆ
ಮುಂದಿನ 24 ಗಂಟೆಯಲ್ಲಿ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ನಿರಂತರ ಗಾಳಿಯ ವೇಗವು 40-50 ಕಿಮೀ ತಲುಪುವ ಸಾಧ್ಯತೆಯಿದೆ. ಇನ್ನೂ ದಕ್ಷಿಣ ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ವ್ಯಾಪಕ ಮಳೆಯಾಗಲಿದ್ದು, ಗಾಳಿಯ ವೇಗವು ಜೋರಾಗಿ ಇರಲಿದೆ. ಉತ್ತರ ಒಳನಾಡಿನ ಬೆಳಗಾವಿ, ಕೊಡಗು ಜಿಲ್ಲೆಗಳ ಒಂದು ಅಥವಾ ಎರಡು ಸ್ಥಳಗಳಲ್ಲಿ ಭಾರಿ ಮಳೆಯಾಗಲಿದೆ. ಜತೆಗೆ ಗದಗ, ಕೊಪ್ಪಳ, ಬಾಗಲಕೋಟೆ, ಧಾರವಾಡ, ಹಾಸನ, ದಾವಣಗೆರೆ, ಮೈಸೂರು ಮತ್ತು ಬಳ್ಳಾರಿ ಜಿಲ್ಲೆಗಳ ಒಂದು ಅಥವಾ ಎರಡು ಸ್ಥಳಗಳಲ್ಲಿ ಜೋರು ಮಳೆಯಾಗುವ ಸಾಧ್ಯತೆಯಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ