ಕೊಡಗು/ಮಂಗಳೂರು/ಕಾರವಾರ: ಕರಾವಳಿ ಹಾಗೂ ಮಲೆನಾಡು ಸೇರಿದಂತೆ ಹಲವೆಡೆ ಭಾರಿ ಮಳೆಯಾಗುತ್ತಿದ್ದು, ರೆಡ್ ಅಲರ್ಟ್ ಘೋಷಣೆ (Karnataka Rain) ಮಾಡಲಾಗಿದೆ. ಮುನ್ನೆಚ್ಚರಿಕಾ ದೃಷ್ಟಿಯಿಂದ ಸೋಮವಾರ ಹಲವು ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ (Heavy rain Effect) ಮಾಡಲಾಗಿದೆ. ಮುಖ್ಯವಾಗಿ ಕೊಡಗಿನಲ್ಲಿ ವರುಣಾರ್ಭಟ ತೀವ್ರಗೊಂಡಿದ್ದು, ಭಾರಿ ಗಾಳಿ ಬೀಸುತ್ತಿದೆ. ಕೊಡಗಿಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಜು.15ರಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ (Holiday for Schools) ಮಾಡಲಾಗಿದೆ.
ಜತೆಗೆ ಹಾರಂಗಿ ಜಲಾನಯನ ವ್ಯಾಪ್ತಿಯಲ್ಲಿ ಭಾರಿ ಮಳೆಯಾಗುತ್ತಿದ್ದು, ಗಣನೀಯ ಪ್ರಮಾಣದಲ್ಲಿ ಒಳಹರಿವು ಏರಿಕೆ ಆಗುತ್ತಿದೆ. ಹೀಗಾಗಿ ನದಿಗೆ ಹತ್ತು ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದ್ದು, ನದಿ ಪಾತ್ರದ ಜನರು ಎಚ್ಚರ ವಹಿಸುವಂತೆ ಸೂಚನೆ ನೀಡಲಾಗಿದೆ. ಹಾರಂಗಿ ಪುನರ್ವಸತಿ ವಿಭಾಗದ ಕಾರ್ಯಪಾಲಕ ಅಭಿಯಂತರ ಪುಟ್ಟಸ್ವಾಮಿ ಮಾಹಿತಿ ನೀಡಿದ್ದಾರೆ.
ಇತ್ತ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಭಾರೀ ಮಳೆ ಮುನ್ಸೂಚನೆ ಹಿನ್ನೆಲೆಯಲ್ಲಿ ಎಲ್ಲಾ ಶಾಲೆ-ಪಿಯು ಕಾಲೇಜುಗಳಿಗೆ ರಜೆ ಘೋಷಿಸಿ ಡಿಸಿ ಮುಲ್ಲೈ ಮುಗಿಲನ್ ಆದೇಶ ಹೊರಡಿಸಿದ್ದಾರೆ. ಜತೆಗೆ ಉತ್ತರಕನ್ನಡ ಜಿಲ್ಲೆಯಲ್ಲೂ ಮಳೆಯ ಅಬ್ಬರ ಇದ್ದು, ಎಡಬಿಡದೇ ಸುರಿಯುತ್ತಿದೆ. ನಿನ್ನೆ ಭಾನುವಾರದಿಂದಲ್ಲೂ ಜಿಲ್ಲೆಯ ಹಲವು ತಾಲೂಕಿನಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಕಾರವಾರ ಸೇರಿದಂತೆ ಹಲವೆಡೆ ನೆರೆ ಪರಿಸ್ಥಿತಿ ಉಂಟಾಗಿದೆ. ಹೀಗಾಗಿ ಜಿಲ್ಲೆಯ 10 ತಾಲೂಕುಗಳ ಶಾಲಾ ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ. ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ, ಶಿರಸಿ, ಸಿದ್ದಾಪುರ, ಯಲ್ಲಾಪುರ, ಜೋಯಿಡಾ, ದಾಂಡೇಲಿ ತಾಲೂಕಿನ ಶಾಲಾ -ಕಾಲೇಜಿಗೆ ರಜೆ ನೀಡಲಾಗಿದೆ.
ಇದನ್ನೂ ಓದಿ: Assault Case: ಆಪದ್ಬಾಂಧವನಲ್ಲ ವಿಕೃತ! ಮಗಳ ಅಶ್ಲೀಲ ವಿಡಿಯೋ ಮಾಡಿದ ಆಸೀಫ್‌ನ ಇನ್ನೊಂದು ವಿಕೃತಿ ಬಯಲು
ಕರಾವಳಿ-ಮಲೆನಾಡಿಗೆ ರೆಡ್ ಅಲರ್ಟ್
ಗುಡುಗು ಸಹಿತ ಭಾರಿ ಮಳೆಯೊಂದಿಗೆ ಗಾಳಿ ವೇಗವು 40-50 ಕಿ.ಮೀ ವ್ಯಾಪ್ತಿಯಲ್ಲಿ ಬೀಸಲಿದೆ. ಹೀಗಾಗಿ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹಾಗೂ ಮಲೆನಾಡಿನ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಇನ್ನೂ ಬೆಳಗಾವಿಯಲ್ಲೂ ಮಳೆಯು ಅಬ್ಬರಿಸಲಿದ್ದು, ಆರೆಂಜ್ ಅಲರ್ಟ್ ನೀಡಲಾಗಿದೆ. ಜತೆಗೆ ಬೀದರ್, ಗದಗ, ಕೊಪ್ಪಳ ಸೇರಿ ರಾಯಚೂರು, ಬಳ್ಳಾರಿ, ಹಾಸನ, ಕೊಡಗು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಬೆಂಗಳೂರಲ್ಲಿ ಗಾಳಿ ಜತೆಗೆ ಜಿಟಿಜಿಟಿ ಮಳೆ
ರಾಜಧಾನಿ ಬೆಂಗಳೂರಿನಲ್ಲಿ ಮುಂಜಾನೆಯಿಂದಲ್ಲೂ ಮೋಡ ಕವಿದ ವಾತಾವರಣ ಇದೆ. ಬೆಳಗ್ಗೆಯಿಂದಲೇ ಹಗುರದಿಂದ ಜಿಟಿಜಿಟಿ ಮಳೆಯಾಗುತ್ತಿದೆ. ಗಾಳಿಯ ವೇಗವು ನಿರಂತರವಾಗಿ ಇರಲಿದ್ದು, 30-40 ಕಿ.ಮೀ ತಲುಪುವ ಸಾಧ್ಯತೆಯಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 29 ಮತ್ತು 21 ಡಿಗ್ರಿ ಸೆಲಿಯಸ್ ಇರಲಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ