ಕಾರವಾರ/ಉಡುಪಿ: ಕರ್ನಾಟಕ ಕರಾವಳಿ ಭಾಗದಲ್ಲಿ ಮಳೆಯು (Karnataka Rain) ಅಬ್ಬರಿಸುತ್ತಿದೆ. ಮಳೆಯಿಂದಾಗಿ ಕಾಡಿನಿಂದ ಮನೆಗಳತ್ತ ಹಾವುಗಳು ಬರುತ್ತಿವೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಸೋನಾರವಾಡ ಎಂಬಾಲ್ಲಿ ಮನೆಯ ಮೇಲೆ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷವಾಗಿತ್ತು. ಸುಮಾರು 12 ಅಡಿ ಉದ್ದದ ಹೆಬ್ಬಾವು ಕಂಡು ಸ್ಥಳೀಯರು ಆತಂಕಕ್ಕೊಳಗಾಗಿದ್ದರು.
ಅರಣ್ಯ ಪ್ರದೇಶದ ಸಮೀಪದಲ್ಲಿ ಇದ್ದು, ಮಳೆ ನೀರಿನಲ್ಲಿ ಹರಿದು ಬಂದು ಮನೆಯ ಮೇಲೆ ಹೆಬ್ಬಾವು ಸೇರಿಕೊಂಡಿದೆ. ಬಳಿಕ ಸ್ಥಳಕ್ಕಾಗಮಿಸಿದ ಉರಗ ಪ್ರೇಮಿ ಗೋಪಾಲ್ ಸುಮಾರು ಒಂದು ಗಂಟೆ ಕಾಲ ಕಾರ್ಯಾಚರಣೆ ನಡೆಸಿ ಹಾವು ಹಿಡಿದು ರಕ್ಷಣೆ ಮಾಡಿದ್ದಾರೆ.
ಭಾರಿ ಮಳೆ-ಗಾಳಿಗೆ ಕುಸಿದು ಬಿದ್ದ ಮನೆ
ಇತ್ತ ಭಾರೀ ಗಾಳಿ ಮಳೆಗೆ ಮನೆಯೊಂದು ಭಾಗಶಃ ಕುಸಿದು ಬಿದ್ದಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ದೊಡ್ನಳ್ಳಿ ಗ್ರಾ.ಪಂ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಕಳೆದೊಂದು ವಾರದಿಂದ ಶಿರಸಿ ಭಾಗದಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಈ ಅವಘಡ ಸಂಭವಿಸಿದೆ. ಸಂತೋಷ ಜೋಗಿ ಎಂಬುವವರ ಮನೆಯ ಮಣ್ಣಿನ ಗೋಡೆ ನೆನೆದು ಭಾಗಶಃ ಕುಸಿದು ಬಿದ್ದಿದೆ. ಪರಿಹಾರಕ್ಕಾಗಿ ಸರ್ಕಾರಕ್ಕೆ ಅಂಗಲಾಚಿದ್ದಾರೆ. ಸ್ಥಳಕ್ಕೆ ಪಿಡಿಓ ಪ್ರೀತಿ ಶೆಟ್ಟಿ, ಶಾನುಭೋಗ ಸುಕನ್ಯಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕರಾವಳಿಯಲ್ಲಿ ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಕಾರವಾರ, ಅಂಕೋಲಾ, ಕುಮಟಾ, ಭಟ್ಕಳ ತಾಲೂಕುಗಳಲ್ಲಿ ವರುಣಾರ್ಭಟ ಜೋರಾಗಿದೆ. ಹಲವು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಮಳೆ ಹೆಚ್ಚಾದರೆ ಕಾರವಾರದ ಕದ್ರಾ ಜಲಾಶಯದಿಂದ ನೀರು ಹೊರ ಬರಲಿದೆ. ಕಾಳಿ ನದಿಗೆ ಅಡ್ಡಲಾಗಿ ಕಟ್ಟಿರುವ ಕದ್ರಾ ಜಲಾಶಯದಲ್ಲಿ ಸುರಕ್ಷಿತ ಮಟ್ಟ ಕಾಯ್ದುಕೊಳ್ಳಲು ಒಳಹರಿವು ಆಧರಿಸಿ ನೀರು ಬಿಡುಗಡೆಗೆ ನಿರ್ಧರಿಸಲಾಗಿದೆ.
ಇದನ್ನೂ ಓದಿ: Elephant Attack : ಕಾಫಿ ತೋಟದ ಕೆಲಸಗಾರನನ್ನು ಸೊಂಡಿಲಿನಿಂದ ಎತ್ತಿ ಬಿಸಾಡಿದ ಒಂಟಿ ಸಲಗ
ಬೆಳಗಾವಿಯ ಸಪ್ತನದಿಗಳಿಗೆ ಜೀವ ಕಳೆ
ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಳೆಯ ಅಬ್ಬರದಿಂದಾಗಿ ಬೆಳಗಾವಿಯ ಸಪ್ತನದಿಗಳಿಗೆ ಜೀವ ಕಳೆ ಬಂದಿದೆ. ಘಟಪ್ರಭಾ ನದಿಗೆ ಒಳಹರಿವು ಹೆಚ್ಚಳದಿಂದಾಗಿ ಐತಿಹಾಸಿಕ ಗೋಕಾಕ್ ಫಾಲ್ಸ್‌ನಲ್ಲಿ ಜಲವೈಭತ ಸೃಷ್ಟಿಯಾಗಿದೆ. ಭಾರತದ ನಯಾಗಾರ ಫಾಲ್ಸ್ ಎಂದೇ ಖ್ಯಾತವಾಗಿರುವ ಗೋಕಾಕ್ ಜಲಪಾತ, 180 ಅಡಿ ಮೇಲಿಂದ ಧುಮ್ಮಿಕ್ಕುವ ನೀರು, ಜಲಪಾತದ ರಮಣೀಯ ದೃಶ್ಯಕ್ಕೆ ಪ್ರವಾಸಿಗರು ಫಿದಾ ಆಗಿದ್ದಾರೆ. ಇನ್ನೂ ಸೆಲ್ಫಿ, ಜಲಪಾತದ ಫೋಟೊ ತೆಗೆಯಲು ಜಲಪಾತದ ತುದಿಗೆ ಹೋಗಿ ಪ್ರವಾಸಿಗರು ಹುಚ್ಚಾಟದ ಕಾರಣಕ್ಕೆ ನಿಗಾ ಇಡಲು ಪ್ರವಾಸೋದ್ಯಮ ಇಲಾಖೆಯ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.
ತುಂಬಿ ಹರಿದ ವಾರಾಹಿ ಮತ್ತು ಕುಬ್ಬಾ ನದಿ
ಪಶ್ಚಿಮಘಟ್ಟದ ತಪ್ಪಲಲ್ಲಿ ಸುರಿದ ಭಾರೀ ಮಳೆ ಎಫೆಕ್ಟ್‌ನಿಂದಾಗಿ ಉಡುಪಿಯ ವಾರಾಹಿ ಮತ್ತು ಕುಬ್ಬಾ ನದಿ ತುಂಬಿ ಹರಿದಿದೆ. ನದಿ ತಟ ಕಂಡ್ಲೂರಿನಲ್ಲಿ ಲಂಗರು ಹಾಕಿದ್ದ ಆರು ನಾಡದೋಣಿಗಳು ನೀರುಪಾಲಾಗಿವೆ. ಹೊಳೆಯ ರಭಸಕ್ಕೆ ಎಲ್ಲಾ ನಾಡದೋಣಿಗಳು ಕೊಚ್ಚಿ ಹೋಗಿವೆ. ಮೀನುಗಾರರು ಕಳೆದ ಎರಡು ದಿನಗಳಿಂದ ಹುಡುಕಾಡುತ್ತಿದ್ದಾರೆ.
ಉಡುಪಿಯ ಈ ಶಾಲಾ-ಕಾಲೇಜುಗಳಿಗೆ ರಜೆ
ಉಡುಪಿ ಜಿಲ್ಲೆಯಲ್ಲಿ ಮೂರನೇ ದಿನಕ್ಕೆ ಮುಂದುವರಿದ ಭಾರಿ ಮಳೆಯಿಂದಾಗಿ ಮುಂಜಾಗ್ರತಾ ಕ್ರಮವಾಗಿ ಮೂರು ತಾಲೂಕುಗಳ ಶಾಲಾ- ಕಾಲೇಜು ರಜೆ ನೀಡಲಾಗಿದೆ. ಬೈಂದೂರು ಕುಂದಾಪುರ ಮತ್ತು ಬ್ರಹ್ಮಾವರ ತಾಲೂಕು ಶಾಲಾ-ಕಾಲೇಜು ಶುಕ್ರವಾರ ರಜೆ ನೀಡಲಾಗಿತ್ತು.
ಬೈಂದೂರು ತಾಲೂಕು, ಮರವಂತೆ ಬೀಚಿನಲ್ಲಿ ಭಾರಿ ಗಾತ್ರದ ಅಲೆಗಳು ಅಪ್ಪಳಿಸುತ್ತಿದೆ. ಹೀಗಾಗಿ ಮಳೆಗಾಲ ಮುಗಿಯುವವರೆಗೂ ಮುನ್ನೆಚ್ಚರಿಕೆ ಕ್ರಮವಾಗಿ ಬೀಚ್ ಬಂದ್ ಮಾಡಲಾಗಿದೆ. ಸೌಪರ್ಣಿಕ ನದಿ ಅರಬ್ಬಿ ಸಮುದ್ರ ಮಧ್ಯೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸುಮಾರು ಒಂದುವರೆ ಕಿಲೋಮೀಟರ್ ಉದ್ದವಿದ್ದು, ಯಾವುದೇ ತಡೆ ಬೇಲಿ ಇಲ್ಲ. ಈ ಹಿನ್ನೆಲೆಯಲ್ಲಿ ಹೆದ್ದಾರಿಯಲ್ಲಿ ತೆರಳುವ ಬಹುತೇಕರು ಕಡಲಿಗೆ ಇಳಿಯುವ ಸಾಧ್ಯತೆ ಇದೆ. ಮುಂಜಾಗ್ರತೆ ಕ್ರಮವಾಗಿ ಜಿಲ್ಲಾಡಳಿತ ಬೀಚ್ ಕಾವಲು ವ್ಯವಸ್ಥೆ ಮಾಡಿದೆ.
ಇದನ್ನೂ ಓದಿ: Physical Abuse : ಇವಳೇನು ಶಿಕ್ಷಕಿಯೋ ಕಾಮುಕಿಯೋ; ಬಾಲಕಿಯ ಖಾಸಗಿ ಅಂಗಾಂಗ ಮುಟ್ಟಿ ವಿಕೃತಿ
ಇಳಿಮುಖವಾದ ನೆರೆ
ಉಡುಪಿಯ ಬೈಂದೂರು ತಾಲೂಕು ನಾವುಂದದಲ್ಲಿ ನೆರೆ ಸಂಪೂರ್ಣ ಇಳಿಮುಖವಾಗಿದೆ. ನಿರಂತರವಾಗಿ ಸುರಿದ ಮಳೆಯಿಂದಾಗಿ ಸೌಪರ್ಣಿಕಾ ನದಿ ಉಕ್ಕಿ ಹರಿದಿತ್ತು. ಇದರಿಂದಾಗಿ 150 ಎಕರೆ ಮುಳುಗಡೆಯಾಗಿ ಕೃಷಿ ಭೂಮಿಯಲ್ಲಿ ಬೆಳೆದ ಭತ್ತ ನಾಶವಾಗಿತ್ತು. ಸದ್ಯ ಮಳೆ ಕಡಿಮೆಯಾದ ಹಿನ್ನೆಲೆಯಲ್ಲಿ ನೆರೆ ಸಂಪೂರ್ಣ ಇಳಿಮುಖವಾಗಿದೆ. ಒಮ್ಮೆ ಭತ್ತದ ನಾಟಿ ಮುಗಿಸಿದ್ದ ರೈತರಿಗೆ ಮತ್ತೆ ಸಂಕಷ್ಟ ಎದುರಾಗಿದೆ. ಮಳೆ ನಿಂತಿರುವುದರಿಂದ ಬಡಾಕೆರೆ ಕೃಷಿಕರು ಮತ್ತೆ ಬತ್ತದ ನಾಟಿ ಮಾಡುತ್ತಿದ್ದಾರೆ.
ಗುಡ್ಡ ಕುಸಿತ; ಮಣ್ಣು ತೆರವು ಕಾರ್ಯಾಚರಣೆ ಆರಂಭ
ಉತ್ತರಕನ್ನಡ ಜಿಲ್ಲೆಯ ಕಾರವಾರದ ಹೊನ್ನಾವರ-ಬೆಂಗಳೂರು ಹೆದ್ದಾರಿಯಲ್ಲಿ ಮತ್ತೆ ಗುಡ್ಡ ಕುಸಿದಿದೆ. ಹೊನ್ನಾವರದ ವರ್ನಕೇರಿ ಬಳಿ ನಿನ್ನೆ ಗುರುವಾರ ಮರ ಸಹಿತ ಗುಡ್ಡ ಕುಸಿದಿತ್ತು. ಇದರಿಂದಾಗಿ ಹೊನ್ನಾವರ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಹೊನ್ನಾವರದಿಂದ ಗೇರುಸೊಪ್ಪ, ಸಾಗರ, ಶಿವಮೊಗ್ಗ, ಬೆಂಗಳೂರು ಮಾರ್ಗದ ಸಂಚಾರಕ್ಕೆ ಅಡ್ಡಿಯಾಗಿದ್ದರಿಂದ ಏಕಮುಖ ಸಂಚಾರಕ್ಕೆ ಜಿಲ್ಲಾಡಳಿತ ವ್ಯವಸ್ಥೆ ಕಲ್ಪಿಸಿತ್ತು.
ಇಂದು ಶುಕ್ರವಾರ ಕಲ್ಲುಬಂಡೆ ಸಹಿತ ಕುಸಿತ ಗುಡ್ಡ ರಸ್ತೆಗೆ ಬಿದ್ದಿದೆ. ಹೀಗಾಗಿ ಹಿಟಾಚಿ ಮೂಲಕ ಗುಡ್ಡದ ಮಣ್ಣು ತೆರವು ಕಾರ್ಯಾಚರಣೆ ಪ್ರಾರಂಭವಾಗಿದೆ. ಮಣ್ಣು ತೆಗೆದರೂ ಮತ್ತೆ ಗುಡ್ಡ ಕುಸಿಯುತ್ತಿದ್ದು, ಹೊನ್ನಾವರ -ಬೆಂಗಳೂರು ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡಿದೆ.
ಅವೈಜ್ಞಾನಿಕ ಕಾಮಗಾರಿಯಿಂದ ಮನೆಗಳು ಜಲಾವೃತ
ಉತ್ತರಕನ್ನಡ ಜಿಲ್ಲೆಯ ಕಾರವಾರದ ಅರಗಾದಲ್ಲಿ ಹಲವು ಮನೆಗಳು ಜಲಾವೃತಗೊಂಡಿದೆ. ನೌಕಾನೆಲೆ ಕಾಂಪೌಂಡ್, ಅವೈಜ್ಞಾನಿಕ ಹೆದ್ದಾರಿ ಕಾಮಗಾರಿಯಿಂದ ನೀರು ಹರಿದುಹೋಗದೇ ಜಲಾವೃತಗೊಂಡಿದೆ. ಸಮುದ್ರಕ್ಕೆ ನೀರು ಸರಾಗವಾಗಿ ಹರಿದುಹೋಗದ ಪರಿಣಾಮ ಅರಗಾ ಗ್ರಾಮದ ನಿವಾಸಿಗಳು ಆತಂಕಗೊಂಡಿದ್ದಾರೆ. ಮಹಿಳೆಯರು, ಮಕ್ಕಳನ್ನು ಇಟ್ಟುಕೊಂಡು ಆತಂಕದಲ್ಲೇ ಕಾಲಕಳೆಯುವ ಪರಿಸ್ಥಿತಿ ಎದುರಾಗಿದೆ. ಮಳೆ ಹೆಚ್ಚಾದಲ್ಲಿ ಮನೆಗಳಿಗೆ ನೀರು ನುಗ್ಗುವ ಆತಂಕ ಇದೆ. ಪ್ರತಿವರ್ಷ ಮಳೆಗಾಲದಲ್ಲಿ ನೆರೆ ಪರಿಸ್ಥಿತಿಯನ್ನು ಅರಗಾ ಗ್ರಾಮಸ್ಥರು ಎದುರಿಸುತ್ತಿದ್ದಾರೆ. ನೀರು ಹರಿದುಹೋಗಲು ಸೂಕ್ತ ವ್ಯವಸ್ಥೆ ಇಲ್ಲದೇ ಅವ್ಯವಸ್ಥೆ ನಿರ್ಮಾಣವಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ