ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಲ್ಲಿ ಭಯಂಕರ ಮಳೆಯಾಗುತ್ತಿದ್ದು, ಹಳ್ಳ-ಕೊಳ್ಳಗಳು (Karnataka Rain) ಉಕ್ಕಿ ಉರಿಯುತ್ತಿದೆ. ಹೀಗೆ ಉಕ್ಕಿ ಉರಿಯುತ್ತಿದ್ದ ನೀರಿನಲ್ಲಿ ಹಳ್ಳ ದಾಟಲು ಹೋದ ಎಮ್ಮೆಯೊಂದು ನೀರುಪಾಲಾಗಿದೆ. ಕಳಸ ತಾಲೂಕಿನ ಮಾವಿನ ಹೊಲ ಬಳಿ ಘಟನೆ ನಡೆದಿದೆ. ಜನರ ಕಣ್ಣೆದುರೇ ರಭಸವಾದ ಹಳ್ಳದಲ್ಲಿ ಜಾನುವಾರು ಕೊಚ್ಚಿ ಹೋಗಿದೆ. ಈವರೆಗೂ ಕಳಸ ತಾಲೂಕಿನಲ್ಲೇ ಮೂರು ಹಸುಗಳು ಬಲಿಯಾಗಿವೆ.
ಬಳ್ಳಾರಿಯಲ್ಲಿ ಬಿರುಗಾಳಿಗೆ ಕಳಚಿದ ವಿಂಡ್ ಫ್ಯಾನ್
ಗಣಿ ಜಿಲ್ಲೆ ಬಳ್ಳಾರಿಯಲ್ಲಿ ಎರಡು ದಿನಗಳಿಂದ ಬೀಸುತ್ತಿರುವ ಬಿರುಗಾಳಿಗೆ ತಡರಾತ್ರಿ ವಿಂಡ್ ಫ್ಯಾನ್ ನೆಲಕ್ಕೆ ಉರುಳಿದೆ. ನಿನ್ನೆ ಶುಕ್ರವಾರ ತಡರಾತ್ರಿ ಸಂಡೂರಿನ ಹೀರಾಳ್ ಬಳಿ ಇರುವ ಬೃಹತ್ ವಿಂಡ್ ಫ್ಯಾನ್ ಧರೆಗೆ ಉರುಳಿದೆ. ತಡ ರಾತ್ರಿಯಾಗಿರುವುದರಿಂದ ಯಾವುದೇ ರೀತಿಯ ಪ್ರಾಣಾಪಾಯ ಸಂಭವಿಸಿಲ್ಲ. ಜಿಂದಾಲ್ ಕಂಪನಿಗೆ ಸೇರಿದ ವಿಂಡ್ ಫ್ಯಾನ್ ಬಿದ್ದ ಪರಿಣಾಮ ಕೆಲಸ ತೆರಳುವವರಿಗೆ ತೊಂದರೆ ಆಯ್ತು. ವಿದ್ಯುತ್ ಉತ್ಪಾದನೆಗಾಗಿ ಜಿಂದಾಲ್ ಕಂಪನಿಯವರು ರೈತರ ಹೊಲದಲ್ಲಿ ವಿಂಡ್ ಫ್ಯಾನ್ ಅಳವಡಿಸಿದ್ದರು. ಚೋರನೂರು ಹೋಬಳಿಯಲ್ಲಿ ಬೃಹತ್ ಪ್ರಮಾಣದ ವಿಂಡ್ ಫ್ಯಾನ್‌ಗಳನ್ನು ಅಳವಡಿಸಲಾಗಿದೆ.
ಬೆಳೆಗಳನ್ನು ನುಂಗಿ ಹಾಕಿದ ಬಳ್ಳಾರಿ ನಾಲೆ
ಬಳ್ಳಾರಿ ನಾಲೆಯ ರುದ್ರ ನರ್ತನವನ್ನು ಡ್ರೋಣ್ ಕಣ್ಣು ಬಿಚ್ಚಿಟ್ಟಿದೆ. ಹೊಲ ಗದ್ದೆಗಳು ಹಾಗೂ ಅದರಲ್ಲಿದ್ದ ಬೆಳೆಗಳು ನಾಶವಾಗಿವೆ. ವಡಗಾಂವಿ, ಶಹಪೂರ, ಅನಗೋಳ, ಯಳ್ಳೂರು ಗ್ರಾಮದ ರೈತರ ಬೆಳೆ ಸರ್ವನಾಶವಾಗಿವೆ. ಸಾವಿರಾರು ಹೆಕ್ಟರ್ ಪ್ರದೇಶದಲ್ಲಿ ಬೆಳೆದ ಬೆಳೆ ನೀರು ಪಾಲಾಗಿದೆ. ಪಕ್ಕದಲ್ಲಿಯೇ ಇರುವ ಮನೆಗಳಿಗೂ ನೀರು ನುಗ್ಗುವ ಆತಂಕ ಎದುರಾಗಿದೆ. ಯಾವಾಗ ಮನೆಗೆ ನೀರು ನುಗ್ಗುತ್ತೊ ಎಂಬ ಆತಂಕದಲ್ಲಿಯೇ ಜನರು ದಿನದೂಡುತ್ತಿದ್ದಾರೆ. ಬಳ್ಳಾರಿ ನಾಲೆಯ ನೀರು ಎಲ್ಲ ಕಡೆ ನುಗ್ಗಿ ಆತಂಕ ಸೃಷ್ಟಿಸಿದೆ.
ದಡಕ್ಕೆ ಅಪ್ಪಳಿಸುತ್ತಿರುವ ಬೃಹತ್ ಗಾತ್ರದ ಅಲೆಗಳು
ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದಾಗಿ ಮಳೆಯ ಜತೆಗೆ ಸಮುದ್ರದ ಅಲೆಗಳು ಅಬ್ಬರಿಸುತ್ತಿದೆ. ಕಡಲತೀರದಲ್ಲಿ ದಡಕ್ಕೆ ಬೃಹತ್ ಗಾತ್ರದ ಅಲೆಗಳು ಅಪ್ಪಳಿಸುತ್ತಿದೆ. ಉಡುಪಿ ತಾಲೂಕಿನ ಮಲ್ಪೆ ಸಮೀಪದ ಗುಜ್ಜರಬೆಟ್ಟುವಿನಲ್ಲಿ ರಕ್ಕಸ ಗಾತ್ರದ ಅಲೆಗೆ ತಡೆಗೋಡೆ, ತೆಂಗಿನ ಮರ ಸಮುದ್ರ ಪಾಲಾಗಿದೆ. ಈಗಾಗಲೇ ಮೀನುಗಾರಿಕೆಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆಯನ್ನೂ ನೀಡಲಾಗಿದೆ.
ಇದನ್ನೂ ಓದಿ: Murder Case : ಪತ್ನಿಗೆ ಗುಂಡು ಹಾರಿಸಿ ಕೊಂದು ಪೊಲೀಸರಿಗೆ ಶರಣಾದ ಪತಿ!
ಚೋರ್ಲಾ ಮಾರ್ಗದಲ್ಲಿ ಬಿರುಕು ಬಿಟ್ಟ ಸೇತುವೆ
ಗೋವಾ ಮಾರ್ಗವಾಗಿ ತೆರಳುವ ವಾಹನ ಸವಾರರಿಗೆ ಬೆಳಗಾವಿ ಪೊಲೀಸರು ಬದಲಾವಣೆ ಸೂಚಿಸಿದ್ದಾರೆ. ಚೋರ್ಲಾ ಮಾರ್ಗದಲ್ಲಿ ಸೇತುವೆ ಬಿರುಕುಗೊಂಡಿರುವ ಹಿನ್ನೆಲೆಯಲ್ಲಿ ಚೋರ್ಲಾ ಮಾರ್ಗದ ಬದಲಾಗಿ ಖಾನಾಪುರ ಮಾರ್ಗವಾಗಿ ಪ್ರಯಾಣಿಸಲು ಸೂಚನೆ ನೀಡಲಾಗಿದೆ. ಜಾಂಬೋಟಿ ಚೋರ್ಲಾ ಮಾರ್ಗದಲ್ಲಿ ಸತತ ಮಳೆ ಹಿನ್ನೆಲೆಯಿಂದಾಗಿ ಪೀರಣವಾಡಿ ಕ್ರಾಸ್‌ನಿಂದ ಖಾನಾಪುರ ಮಾರ್ಗವಾಗಿ ಚಲಿಸಲು ಸೂಚನೆ ನೀಡಲಾಗಿದೆ.
ಚಿಕ್ಕೋಡಿ: ಮಹಾರಾಷ್ಟ್ರ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮುಂದುವರೆದ ಮಳೆ ಅಬ್ಬರದಿಂದಾಗಿ ನಿಪ್ಪಾಣಿ ತಾಲೂಕಿನ ಹಲವು ಗ್ರಾಮಗಳಿಗೆ ನೆರೆಯ ಆತಂಕ ಶುರುವಾಗಿದೆ. ಅಪಾಯದ ಮಟ್ಟ ಮೀರಿ ದೂದಗಂಗಾ ನದಿ ಹರಿಯುತ್ತಿದ್ದು, ಕಾರದಗಾ ಗ್ರಾಮದ ಬಂಗಾಲಿಬಾಬಾ ದರ್ಗಾ ಜಲಾವೃತಗೊಂಡಿದೆ. ನದಿ ನೀರು ಕ್ರಮೇಣ ಏರಿಕೆ ಆಗುತ್ತಿದ್ದು, ಗ್ರಾಮಕ್ಕೆ ನುಗ್ಗುವ ಆತಂಕವಿದೆ.
ಇತ್ತ ಬೆಳಗಾವಿ ನಗರದ ಹಲವು ಬಡಾವಣೆ ಜನರು ಆತಂಕದಲ್ಲೇ ದಿನದೂಡುವಂತಾಗಿದೆ. ಈಗಾಗಲೇ ಹೊಲ ಗದ್ದೆಗಳಿಗೆ ನೀರು ನುಗ್ಗಿ ಅವಾಂತರವೇ ಸೃಷ್ಟಿಸಿಯಾಗಿದೆ. ಬೆಳಗಾವಿ ನಗರಕ್ಕೆ ಹೊಂದಿಕೊಂಡಿರುವ ವಡಗಾಂವಿ ಅನಗೋಳ , ಶಹಪೂರ ಯಳ್ಳೂರು ಗ್ರಾಮಗಳಿಗೂ ಆತಂಕ ಹೆಚ್ಚಿದೆ. 2,500ಕ್ಕೂ ಹೆಚ್ಚು ಎಕರೆ ಪ್ರದೇಶ ನೀರಲ್ಲಿ ಮುಳುಗಿದೆ. ಸದ್ಯ ಭತ್ತ, ಕಬ್ಬು, ಜೋಳ ಬೆಳೆಗಳು ನೀರಲ್ಲಿ ತೇಲುತ್ತಿದೆ. ಪ್ರತಿ ವರ್ಷವೂ ಬಳ್ಳಾರಿ ನಾಲೆಯಿಂದ ಸಾವಿರಾರು ಎಕರೆ ಪ್ರದೇಶಕ್ಕೆ ನೀರು ನುಗ್ಗಿ ಅವಾಂತರವೇ ಸೃಷ್ಟಿಯಾಗುತ್ತಿದೆ.
ಸೇತುವೆ ಮುಳುಗಡೆ- ಗ್ರಾಮಗಳ ಸಂಪರ್ಕ ಕಡಿತ
ಹಾವೇರಿಯ ಕುಮದ್ವತಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಿದ್ದು, ಮೂರು ಗ್ರಾಮಗಳ ಸಂಪರ್ಕ ಸೇತುವೆ ಕಡಿತದಿಂದಾಗಿ ವಾಹನಗಳ ಸಂಚಾರ ಸ್ಥಗಿತಗೊಂಡಿದೆ. ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲೂಕಿನ ಎಲಿವಾಳ ಮತ್ತು ರಟ್ಟಿಹಳ್ಳಿಯ ಸೇತುವೆ ನೀರಿನಲ್ಲಿ ಮುಳುಗಿ ಸಂಪರ್ಕ ಕಡಿತಗೊಂಡಿದೆ. ಯಡಗೋಡ ಮತ್ತು ಬಡಸಂಗಾಪುರ ಸಂಪರ್ಕ ಸೇತುವೆ ಬಂದ್ ಆಗಿದೆ. ಸೇತುವೆ ಮೇಲೆ ಗ್ರಾಮಸ್ಥರು ಓಡಾಡದಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ