ಚಿಕ್ಕಮಗಳೂರು: ಮಲೆನಾಡಿನಲ್ಲಿ ಭಾರಿ (Karnataka Rain) ಮಳೆಯಾಗುತ್ತಿದೆ. ಚಿಕ್ಕಮಗಳೂರಿನ ಕಳಸ ತಾಲೂಕಿನಾದ್ಯಂತ ನಿನ್ನೆಯಿಂದಲೂ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಭದ್ರ ನದಿಯ ನೀರಿನ ಮಟ್ಟ ಏರಿಕೆ ಕಂಡಿದೆ. ಕುದುರೆಮುಖ, ಕಳಸ ಸೇರಿದಂತೆ ಸುತ್ತಮುತ್ತ ಮಳೆಯಾಗಿದೆ. ಇನ್ನೂ ಚಿಕ್ಕಮಗಳೂರಿನಲ್ಲಿ ಮಳೆ ಜತೆಗೆ ಅವಾಂತರವು (Rain Effect) ಮುಂದುವರಿದಿದೆ.
ಭಾರಿ ಮಳೆಗೆ ಮನೆಯ ಚಾವಣಿ ಹಾಗೂ ಗೋಡೆ ಕುಸಿದು ಬಿದ್ದಿದೆ. ಸ್ವಲ್ಪದರಲ್ಲೇ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಬಕ್ಕಿ ಗ್ರಾಮದಲ್ಲಿ ಘಟನೆ ನಡೆದಿದೆ. ಬೆಳಗಿನ ಜಾವ ಮನೆ ಗೋಡೆ ಏಕಾಏಕಿ ಕುಸಿದು ಬಿದ್ದಿದೆ. ಗ್ರಾಮದ ಸರಿತಾ ಎಂಬವರಿಗೆ ಸೇರಿದ ಮನೆ ಸಂಪೂರ್ಣ ಹಾನಿಯಾಗಿದೆ. ಮನೆಯಲ್ಲಿದ್ದ ಆಹಾರ ಪದಾರ್ಥಗಳು, ಟಿವಿ, ಪೀಠೋಪಕರಣಗಳು ಸಂಪೂರ್ಣ ಜಖಂಗೊಂಡಿದೆ. ಮನೆ ಕಳೆದುಕೊಂಡು ಸರಿತಾ ಕಣ್ಣೀರು ಹಾಕುತ್ತಿದ್ದು, ಸಹಾಯಕ್ಕಾಗಿ ಅಂಗಲಾಚಿದ್ದಾರೆ.
ಉಡುಪಿಯಲ್ಲಿ ಮಳೆಗೆ ಮರ ಬಿದ್ದು ಧರೆಗುರುಳಿದ ವಿದ್ಯುತ್ ಕಂಬಗಳು
ಉಡುಪಿಯ ಕುಂದಾಪುರ ಸಮೀಪ ಹೆಮ್ಮಾಡಿಯಲ್ಲಿ ಬೃಹತ್ ಮರ ಬಿದ್ದು ವಿದ್ಯುತ್ ಕಂಬಗಳು ಜಖಂಗೊಂಡಿವೆ. ಸಂತೋಷನಗರದ ರಸ್ತೆಯಲ್ಲಿದ್ದ ಬೃಹತ್ ಮರವು ಭಾರಿ ಗಾಳಿ ಮಳೆಗೆ ನೆಲಕ್ಕುರುಳಿದೆ. ರಸ್ತೆಯ ಮೇಲೆ ಮರ ಉರುಳಿದ ಪರಿಣಾಮ ಪಕ್ಕದಲ್ಲಿದ್ದ ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ.
ಮರ ಬೀಳುವುದಕ್ಕೂ ಕೆಲವೇ ನಿಮಿಷಗಳ ಮೊದಲು ಶಾಲಾ ಬಸ್ ಅದೇ ಮಾರ್ಗದಲ್ಲಿ ತೆರಳಿತ್ತು. ಅದೃಷ್ಟವಶಾತ್ ಶಾಲಾ ವಾಹನ ಪಾಸ್ ಆದ ಬಳಿಕ ಮರ ಬಿದ್ದಿದೆ. ಇದರಿಂದ ದೊಡ್ಡ ಅನಾಹುತ ತಪ್ಪಿದೆ. ಸದ್ಯ ಮೆಸ್ಕಾಂ ಲೈನ್ ಮ್ಯಾನ್‌ಗಳಿಂದ ವಿದ್ಯುತ್ ಕಂಬ ದುರಸ್ತಿ ಕಾರ್ಯ ಜಾರಿಯಲ್ಲಿದೆ. ಸ್ಥಳಕ್ಕೆ ಆಗಮಿಸಿದ ಪಂಚಾಯತ್ ಪ್ರತಿನಿಧಿಗಳಿಂದ ಮರ ತೆರವು ಕಾರ್ಯಾಚರಣೆ ನಡೆಯುತ್ತಿದೆ.
ಇದನ್ನೂ ಓದಿ: Wild Animal Attack : ಬೇಲೂರಿನಲ್ಲಿ ಒಂಟಿ ಸಲಗ ಡೆಡ್ಲಿ ಅಟ್ಯಾಕ್; ಮನೆ ಅಂಗಳದಲ್ಲಿ ಓಡಾಡಿದ ಚಿರತೆ
ಮಳೆ ಹೆಚ್ಚಾದರೆ ಈ ಗ್ರಾಮದವರ ಸ್ಥಿತಿ ಅಧೋಗತಿ
ಮಳೆ ಹೆಚ್ಚಾದಾಗ ಈ ಗ್ರಾಮದ ಜನರು ಮನೆಯಿಂದ ಹೊರಗೆ ಹೊರಡುವುದೇ ಕಷ್ಟದ ಕೆಲಸವಾಗಿದೆ. ಶಾಲೆಗೆ ಬಿಡಿ ದೈನಂದಿನ ಕೆಲಸ ಕಾರ್ಯಗಳಿಗೆ ತೆರಳಲು ಜೀವ ಕೈಯಲ್ಲಿ ಹಿಡಿದುಕೊಳ್ಳಬೇಕು. ಅಡಿಕೆ ಮರ, ಅಲ್ಲಿ ಇಲ್ಲಿ ಸಿಕ್ಕ ಮರಮಟ್ಟು ಉಪಯೋಗಿಸಿ ಮಾಡಿದ ಸಂಕದಲ್ಲಿ ಓಡಾಡಬೇಕು.
ಉಡುಪಿಯ ಬೈಂದೂರು ಕ್ಷೇತ್ರದಾದ್ಯಂತ ಇಂತಹ 400ಕ್ಕೂ ಅಧಿಕ ಕಿರು ಸೇತುವೆಗಳು ಇವೆ. ಬೇಸಿಗೆಯಲ್ಲಿ ನೀರು ಇಲ್ಲದ ಹಿನ್ನೆಲೆಯಲ್ಲಿ ತೊರೆಯಲ್ಲಿ ನಡೆದು ಸಾಗಬಹುದು. ಆದರೆ ಮಳೆಗಾಲದಲ್ಲಿ ಮಾತ್ರ ತೊರೆ ತುಂಬಿ, ದಾಟುವುದೆ ಕಷ್ಟ ಎನ್ನುವ ಸ್ಥಿತಿ ನಿರ್ಮಾಣವಾಗುತ್ತದೆ. ದಿನನಿತ್ಯವೂ ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಸರ್ಕಸ್ ಮಾಡಿಕೊಂಡೆ ಹೋಗುವಂತಾಗಿದೆ.
ಪ್ರತಿ ವರ್ಷವೂ ಗ್ರಾಮಸ್ಥರು ತಾವೇ ಸ್ವತಃ ಕಿರು ಸೇತುವೆಗಳನ್ನು ನಿರ್ಮಿಸಿಕೊಳ್ಳುತ್ತಿದ್ದಾರೆ. ರೆಡ್ ಅಲರ್ಟ್ ಸಂದರ್ಭದಲ್ಲಿ ಮಳೆ ಹೆಚ್ಚಾದರೆ ಇಲ್ಲಿ ಕಿರು ಸೇತುವೆ ದಾಟಿ ಶಾಲೆಗೆ ತೆರಳುವುದೇ ಕಷ್ಟವಾಗಿದೆ. ಇತ್ತ ಅನುದಾನದ ಕೊರತೆಯಿಂದ ಕ್ರೌಡ್ ಫಂಡಿಂಗ್ ಮೂಲಕ ಬೈಂದೂರು ಶಾಸಕ ಗುರುರಾಜ ಗಂಟಿಹಳೆ ಶಾಶ್ವತ ಕಿರು ಸೇತುವೆ ಕಟ್ಟಲು ಪಣತೊಟ್ಟಿದ್ದಾರೆ.
ಚಿಕ್ಕಮಗಳೂರಲ್ಲಿ ಫೀಲ್ಡಿಗಿಳಿದ ಪೊಲೀಸರು
ಚಿಕ್ಕಮಗಳೂರಿನಲ್ಲಿ ಬೆಳ್ಳಂ ಬೆಳಗ್ಗೆ ಪ್ರವಾಸಿಗರಿಗೆ ಪೊಲೀಸರಿಂದ ಬಿಗ್ ಶಾಕ್ ನೀಡಿದ್ದರು. ಪ್ರವಾಸಿಗರ ಮೋಜು ಮಸ್ತಿಗೆ ಬ್ರೇಕ್ ಹಾಕಲು ಎಸ್‌ಪಿ ವಿಕ್ರಂ ಅಮಟೆ ಫೀಲ್ಡಿಗಿಳಿದಿದ್ದರು. ಚಿಕ್ಕಮಗಳೂರಿನ ಕೈಮರ ಚೆಕ್ ಪೋಸ್ಟ್‌ನಲ್ಲಿ ಮದ್ಯ ತೆಗೆದುಕೊಂಡು ಹೋಗುತ್ತಿದ್ದ 20ಕ್ಕೂ ಹೆಚ್ಚು ವಾಹನಗಳನ್ನು ಸೀಜ್ ಮಾಡಿದರು. ಜತೆಗೆ ವಾಹನದಲ್ಲಿದ್ದ ಪ್ರವಾಸಿಗರ ಮೇಲೂ ಪ್ರಕರಣ ದಾಖಲಿಸಿಕೊಂಡರು. ವೀಕೆಂಡ್‌ನಲ್ಲಿ ಒಂದೇ ದಿನ ನಲವತ್ತಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಕಾರ್ ಮುಂಭಾಗದಲ್ಲಿ ಹ್ಯಾಟ್ ಇಟ್ಟು ಪ್ರವಾಸಕ್ಕೆ ಬಂದಿದ್ದ ಅಬಕಾರಿ ಇನ್ಸ್‌ಪೆಕ್ಟರ್‌ಗೂ ಕ್ಲಾಸ್ ತೆಗೆದುಕೊಂಡರು. ಇನ್ನೂ ಪ್ರವಾಸಿತಾಣಕ್ಕೆ ಪ್ಲಾಸ್ಟಿಕ್ ವಾಟರ್ ಬಾಟಲ್, ಗುಟ್ಕಾ, ಸಿಗರೇಟ್ ತಂದಿದ್ದನ್ನು ಪೊಲೀಸರು ಸೀಜ್ ಮಾಡಿದರು. ಮುಳ್ಳಯ್ಯನಗಿರಿ, ದತ್ತಪೀಠಗೆ ಹೋಗುವ ಮಾರ್ಗದಲ್ಲಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ