Site icon Vistara News

Karnataka Rain: ಶನಿವಾರ ಸಂಜೆ ಅಬ್ಬರಿಸಿದ ಗಾಳಿ ಮಳೆಗೆ ತೊಯ್ದು ತೊಪ್ಪೆಯಾದ ಮಂದಿ; ರಸ್ತೆಗೆ ಬಿದ್ದ ಮರಗಳು

Karnataka rain

ವಿಜಯಪುರ/ಹುಬ್ಬಳ್ಳಿ: ಶನಿವಾರ ಹಲವೆಡೆ ದಿಢೀರ್‌ ಸುರಿದ ಮಳೆಗೆ (Rain News) ಜನರು ತತ್ತರಿಸಿ ಹೋಗಿದ್ದರು. ಉತ್ತರ ಒಳನಾಡಿನ ವಿಜಯಪುರ, ರಾಯಚೂರು, ಹುಬ್ಬಳ್ಳಿ, ಧಾರವಾಡ ಹಾಗೂ ಮಲೆನಾಡಿನ ಚಿಕ್ಕಮಗಳೂರಿನಲ್ಲೂ ವರುಣಾರ್ಭಟ (Karnataka Rain) ಜೋರಾಗಿತ್ತು. ಮೇ 15ರವರೆಗೆ ಬಿರುಗಾಳಿಯೊಂದಿಗೆ ಗುಡುಗು, ಮಿಂಚು ಸಹಿತ ಭಾರಿ ಮಳೆಯಾಗುವ (Heavy Rain) ಎಚ್ಚರಿಕೆಯನ್ನು ಹವಾಮಾನ ಇಲಾಖೆ (Karnataka Weather Forecast) ನೀಡಿದೆ.

ವಿಜಯಪುರ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಸುರಿದ ಮಳೆಯು ಬಿಸಿಲಿನಿಂದ ಕಂಗೆಟ್ಟಿದ್ದ ಜನತೆಗೆ ತಂಪು ತಂದಿತ್ತು. ಬಿರು ಬಿಸಿಲಿಗೆ ಕಂಗೆಟ್ಟು ಹೋಗಿದ್ದ ಜನರು, ಶನಿವಾರ ಸುರಿದ ಅರ್ಧ ಗಂಟೆಗೂ ಆಧಿಕ ಕಾಲ ಮಳೆಗೆ ಸಂತಸಗೊಂಡರು. ಇನ್ನೂ ರೈತರು ಮುಂಗಾರು ಹಂಗಾಮಿಗೆ ಉತ್ತಮ ಮಳೆಯ ನಿರೀಕ್ಷೆಯಲ್ಲಿದ್ದಾರೆ. ಈವರೆಗೂ ಮಳೆಯಿಂದ ಯಾವುದೇ ಹಾನಿಯಾದ ವರದಿಯಾಗಿಲ್ಲ.

ಹುಬ್ಬಳ್ಳಿ, ಬೆಳಗಾವಿಯಲ್ಲಿ ಗುಡುಗು -ಸಿಡಿಲಿನ ಮಳೆ ಅಬ್ಬರ

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಧಾರಾಕಾರ ಮಳೆಯಾಗಿದೆ. ಕೆಲವೆಡೆ ಗುಡುಗು, ಸಿಡಿಲು ಸಹಿತ ಆಲಿಕಲ್ಲು ಮಳೆಯಾಗಿದೆ. ಎಡೆಬಿಡದೆ ಆರ್ಭಟಿಸುತ್ತಿರುವ ಮಳೆಗೆ ಜನ ಜೀವನ ಅಸ್ತವ್ಯಸ್ತವಾಗಿತ್ತು. ರಸ್ತೆಗಳಲ್ಲಿ ನೀರು ತುಂಬಿ ಹರಿದು ಸಂಚಾರಕ್ಕೆ ಅಡ್ಡಿಯಾಗಿತ್ತು. ಇತ್ತ ಬೆಳಗಾವಿಯಲ್ಲಿ ಗುಡುಗು ಸಿಡಿಲು ಮಿಶ್ರಿತ ಧಾರಾಕಾರ ಮಳೆಯಾಗುತ್ತಿದೆ. ಬಿಸಿಲಿನ ಬೇಗೆಗೆ ಬೇಸೆತ್ತು ಹೋಗಿದ್ದ ಕುಂದಾನಗರಿ ಜನರಿಗೆ ವರುಣ ತಂಪೆರೆದಿದ್ದಾನೆ. ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಭಾರಿ ಮಳೆಯಾಗುತ್ತಿದೆ.

ಇದನ್ನೂ ಓದಿ: Heavy Rain: ಬೆಂಗಳೂರಿನಲ್ಲಿ ಮಳೆಯ ಅಬ್ಬರ; ಹಲವೆಡೆ ರಸ್ತೆಯಲ್ಲೇ ಹರಿದ ನೀರು, ಸಂಚಾರ ಅಸ್ತವ್ಯಸ್ತ

ಜೋರು‌ ಮಳೆಯಲ್ಲೇ ಶನಿವಾರದ ಸಂತೆ ಸಂಭ್ರಮ

ರಾಯಚೂರು ಜಿಲ್ಲೆ ದೇವದುರ್ಗ ಪಟ್ಟಣದಲ್ಲಿ ವರುಣಾರ್ಭಟದ ನಡುವೆಯೇ ಶನಿವಾರದ ಸಂತೆ ಜೋರಾಗಿತ್ತು. ಧಾರಾಕಾರ ಮಳೆ‌‌ಯಲ್ಲೇ ವ್ಯಾಪಾರಸ್ಥರು ಸಂತೆ ಮಾಡಿದರು. ಮಳೆಗೆ ಡೋಂಟ್ ಕೇರ್ ಎಂದ ಸಾವಿರಾರು ಜನರು ಖರೀದಿಯಲ್ಲಿ ಬ್ಯುಸಿಯಾಗಿದ್ದರು.

ಧಾರವಾಡದಲ್ಲಿ ಮಳೆ ಗಾಳಿಗೆ ಜಖಂ ಆದ ಬಸ್‌ಗಳು

ಧಾರವಾಡದಲ್ಲಿ ಗಾಳಿ ಸಹಿತ ಧಾರಾಕಾರವಾಗಿ ಮಳೆಗೆ ನಗರದ ಬಹುತೇಕ ಕಡೆ ಮರಗಳು ನೆಲಕ್ಕುರುಳಿದ್ದವು. ಮಳೆ ಗಾಳಿಗೆ ಬಸ್‌ಗಳು ಜಖಂ ಆಗಿದ್ದವು. ನಿರ್ಮಾಣ ಹಂತದಲ್ಲಿದ್ದ ಈಜುಕೊಳದ ಕಟ್ಟಿಗೆ ಸೆಂಟ್ರಿಂಗ್ ಬಿದ್ದು ಖಾಸಗಿ ಬಸ್ ಜಖಂಗೊಂಡಿತ್ತು. ನಗರದ ಡಿಸಿ ಕಂಪೌಂಡ್‌ಗೆ ಹೊಂದಿಕೊಂಡಿರುವ ನಿರ್ಮಾಣ ಹಂತದ ಕಟ್ಟಡದಲ್ಲಿ ಘಟನೆ ನಡೆದಿತ್ತು.

ಚಿಕ್ಕಮಗಳೂರಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆ

ಕಾಫಿನಾಡು ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗುತ್ತಿದೆ. ಗುಡುಗು-ಸಿಡಿಲಿನೊಂದಿಗೆ ಎಡಬಿಡದೆ ಮಳೆ ಸುರಿಯುತ್ತಿದೆ. ರಸ್ತೆಯಲ್ಲಿ ನೀರು ನದಿಯಂತೆ ಹರಿಯುತ್ತಿದೆ. ಚಿಕ್ಕಮಗಳೂರು ನಗರ, ಜಯಪುರ, ಮೂಡಿಗೆರೆ, ಎನ್.ಆರ್.ಪುರ, ಕೊಪ್ಪ ಭಾಗದಲ್ಲಿ ಮಳೆ ಜತೆ ಭಾರಿ ಗಾಳಿ ಬೀಸುತ್ತಿದೆ. ಇನ್ನೂ ಕಳೆದೊಂದು ಗಂಟೆಯಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ವಿದ್ಯುತ್ ತಂತಿ ಮೇಲೆ ಮರ ಬಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಹೀಗಾಗಿ ಭಾರೀ ಗಾಳಿ-ಮಳೆಯಿಂದ ವಿದ್ಯುತ್ ಸಂಪರ್ಕವಿಲ್ಲದೆ ಕುಗ್ರಾಮಗಳು ಕತ್ತಲಲ್ಲಿವೆ. ಮಳೆ ಕಂಡು ರೈತರು, ಅಡಿಕೆ-ಕಾಫಿ-ಮೆಣಸು ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ.

ಮಂಗಳೂರಿನ ಕುಕ್ಕೆ ಸುಬ್ರಹ್ಮಣ್ಯದಲ್ಲೂ ಗಾಳಿ,ಗುಡುಗು ಸಹಿತ ಮಳೆಯಾಗುತ್ತಿದೆ. ಸುಮಾರು ಅರ್ಧಗಂಟೆಗಳ ಕಾಲ ಮಳೆಯು ಸುರಿದಿದೆ. ಬಿಸಿಲ ಬೇಗೆಯಿಂದ ತತ್ತರಿಸಿದ ಸುಬ್ರಹ್ಮಣ್ಯದಲ್ಲಿ ಹಠಾತ್‌ ಮಳೆಯು ಕ್ಷೇತ್ರಕ್ಕೆ ಆಗಮಿಸಿದ ಭಕ್ತರಲ್ಲಿ ಸಂತಸ ಮೂಡಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version