ಬೆಳಗಾವಿ/ಶಿವಮೊಗ್ಗ/ಉಡುಪಿ: ಧಾರಾಕಾರವಾಗಿ ಸುರಿಯುತ್ತಿರುವ ಮಳೆಯು (Karnataka rain) ಅವಾಂತರವನ್ನೇ (Rain Effect) ಸೃಷ್ಟಿಸಿದೆ. ತೀವ್ರ ಮಳೆಯಿಂದಾಗಿ ಚಾಲಕರ ನಿಯಂತ್ರಣ ತಪ್ಪಿ ಲಾರಿಗಳ ಮಧ್ಯೆ ಮುಖಾಮುಖಿ (Road Accident) ಡಿಕ್ಕಿಯಾಗಿದೆ. ಬೆಳಗಾವಿ ತಾಲೂಕಿನ ಹಲಗಾ ಗ್ರಾಮದ ಬಳಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಲಾರಿ ಚಾಲಕರಿಬ್ಬರಿಗೂ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಡಿಕ್ಕಿಯ ರಭಸಕ್ಕೆ ಲಾರಿಗಳು ಸಂಪೂರ್ಣವಾಗಿ ನುಜ್ಜು ಗುಜ್ಜಾಗಿವೆ. ಹಿರೇಬಾಗೇವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮಳೆಗೆ ಕಾರಿನ ಮೇಲೆ ಬಿದ್ದ ಬೃಹತ್ ಮರ
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಭಾಗದಲ್ಲಿ ಭಾರೀ ಗಾಳಿಯೊಂದಿಗೆ ಮಳೆಯಾಗತ್ತಿದೆ. ಪರಿಣಾಮ ಚಲಿಸುತ್ತಿದ್ದ ಓಮಿನಿ ಕಾರಿನ ಮೇಲೆ ಬೃಹತ್ ಮರ ಬಿದ್ದಿದೆ. ಆಗುಂಬೆ ಘಾಟಿಯ ನಾಲ್ಕನೇ ತಿರುವಿನಲ್ಲಿ ಘಟನೆ ನಡೆದಿದೆ. ಅದೃಷ್ಟವಶಾತ್ ಓಮಿನಿಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಓಮಿನಿ ಚಾಲಕನಿಗೆ ಸಣ್ಣಪುಟ್ಟ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಾರಿನ ಮೇಲೆ ಮರ ಬಿದ್ದ ಹಿನ್ನೆಲೆಯಲ್ಲಿ ಆಗುಂಬೆ ಘಾಟಿಯಲ್ಲಿ ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.
ಉಡುಪಿಯಲ್ಲಿ ಮುಳುಗಡೆಯಾದ ಗ್ರಾಮಗಳು
ಪ್ರತಿ ವರ್ಷದಂತೆ ಈ ವರ್ಷವೂ ಉಡುಪಿಯ ಬೈಂದೂರು ತಾಲೂಕಿನಲ್ಲಿ ನೆರೆಹಾವಳಿ ಸೃಷ್ಟಿಯಾಗಿದೆ. ತಾಲೂಕಿನ ನಾವುಂದ, ಬಡಾಕೇರಿ, ಮರವಂತೆ, ಸಾಲ್ಬುಡ, ಅರೆಹೊಳೆ ಕೋಣ್ಕಿ ಹಾಗೂ ಕುದ್ರು ಚಿಕ್ಕಳ್ಳಿ ಪಡುಕೋಣೆ ಭಾಗದಲ್ಲಿ ನೆರೆಹಾವಳಿಗೆ ತುತ್ತಾಗಿವೆ.
ಸ್ಥಳೀಯ ಯುವಕರು ನೆರೆಹಾವಳಿ ಪೀಡಿತ ಪ್ರದೇಶಗಳಿಗೆ ತೆರಳಿ ಅಗತ್ಯ ನೆರವು ನೀಡುತ್ತಿದ್ದಾರೆ. ಮೂರು ದೋಣಿಗಳನ್ನು ಬಳಸಿ ರಕ್ಷಣಾ ಕಾರ್ಯದ ಜತೆಗೆ ಅಗತ್ಯ ವಸ್ತು ಪೂರೈಸುತ್ತಿದ್ದಾರೆ. ಹೆಚ್ಚುವರಿಯಾಗಿ ಬೈಂದೂರು ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ನೆರೆಪೀಡಿತ ಪ್ರದೇಶಕ್ಕೆ ಕುಂದಾಪುರ ಸಹಾಯಕ ಕಮೀಶನರ್ ರಶ್ಮಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: Karnataka Rain : ಧಾರಾಕಾರ ಮಳೆಗೆ ಗುಡ್ಡ ಕುಸಿತ; ಹೊನ್ನಾವರ-ಬೆಂಗಳೂರು ಹೆದ್ದಾರಿ ಬಂದ್
ಮನೆಗಳು ಜಲಾವೃತ
ಉತ್ತರ ಕನ್ನಡ ಜಿಲ್ಲೆಯಲ್ಲಿ ಅಬ್ಬರದ ಮಳೆಯಿಂದಾಗಿ ಅಂಕೋಲಾ ತಾಲೂಕಿನ ಬಿಳೆಹೊಂಯ್ಗಿ, ಮಂಜಗುಣಿ ಸೇರಿದಂತೆ 5ಕ್ಕೂ ಹೆಚ್ಚು ಗ್ರಾಮಗಳಿಗೆ ನೀರು ನುಗ್ಗಿದೆ. ಹೊನ್ನೆಬೈಲ್ ಗ್ರಾಮದಲ್ಲಿ 20 ಮನೆಗಳು ಜಲಾವೃತಗೊಂಡಿದೆ. ಅಂಕೋಲಾ ತಾಲೂಕಿನ 5 ಗ್ರಾಮಗಳಲ್ಲಿ ರಸ್ತೆ ನೀರಿನಿಂದ ಮುಳುಗಿದೆ. ಹೀಗಾಗಿ ಬಿಳೆಹೊಂಯ್ಗಿ, ಹೊನ್ನೆಬೈಲು, ಶಿಂಗನಮಕ್ಕಿ, ಮಂಜಗುಣಿ ಶಾಲೆಗಳಲ್ಲಿ ಕಾಳಜಿ ಕೇಂದ್ರವನ್ನು ಜಿಲ್ಲಾಡಳಿತ ತೆರೆದಿದೆ. ನೆರೆ ಪರಿಸ್ಥಿತಿ ಹಿನ್ನೆಲೆಯಲ್ಲಿ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
50ಕ್ಕೂ ಅಧಿಕ ನಿವಾಸಿಗಳು ಕಾಳಜಿ ಕೇಂದ್ರಕ್ಕೆ ರವಾನೆಯಾಗಿದ್ದಾರೆ. ಎಡಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ನದಿ, ಹಳ್ಳ-ಕೊಳ್ಳಗಳು ಉಕ್ಕಿ ಹರಿಯುತ್ತಿದೆ. ವರುಣನ ಅಬ್ಬರಕ್ಕೆ ತಗ್ಗು ಪ್ರದೇಶದ ನಿವಾಸಿಗಳಲ್ಲಿ ಆತಂಕ ಹೆಚ್ಚಿದೆ. ಇತ್ತ ಭಟ್ಕಳದಲ್ಲೂ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನೀರು ನಿಂತು ಹೆದ್ದಾರಿಯಲ್ಲಿ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಮಳೆ ಹಿನ್ನಲೆ ಭಟ್ಕಳ ರಂಗಿನಕಟ್ಟೆ ಪ್ರದೇಶ ಹೊಳೆಯಂತಾಗಿದೆ. ಭಟ್ಕಳ ತಹಸೀಲ್ದಾರ ನಾಗರಾಜ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪುರಸಭಾ ಸಿಬ್ಬಂದಿ ಚರಂಡಿಯಲ್ಲಿ ತುಂಬಿರುವ ಮಣ್ಣು, ಕಲ್ಲನ್ನು ತೆರವುಗೊಳಿಸುತ್ತಿದ್ದಾರೆ. ಪಟ್ಟಣದ ಜಾಮೀಯಾಬಾದ್ ನಲ್ಲಿಯೂ ಮನೆಗಳಿಗೆ ನೀರು ನುಗ್ಗಿದೆ. ಕೋಗ್ತಿ ರೋಡ್, ಡೊಂಗರಪಳ್ಳಿ, ಆಝಾದ್‌ನಗರ, ಕಾರಗದ್ದೆ ರಸ್ತೆ ಜಲಾವೃತಗೊಂಡಿದೆ.
ಉಡುಪಿಯಲ್ಲಿ ಉಕ್ಕಿಹರಿದ ಮಡಿಸಾಲು ಹೊಳೆ
ಬ್ರಹ್ಮಾವರ ತಾಲೂಕಿನ ಆಲೂರು ಬಳಿ ಮಡಿಸಾಲು ಹೊಳೆಯು ಉಕ್ಕಿಹರಿದಿದೆ. ಆರೂರು- ಬೆಳ್ಮಾರು ಗ್ರಾಮದ ಮಧ್ಯ ಹರಿಯಲಿದ್ದು, ಎರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನೆರೆಹಾವಳಿ ಸೃಷ್ಟಿಯಾಗಿದೆ. ಕೃಷಿಕರಿಗೆ ಜೀವನದಿಯಾಗಿದ್ದ ಮಡಿಸಾಲು ಹೊಳೆ ಉಕ್ಕಿ ಹರಿಯುತ್ತಿದೆ. ಇದರಿಂದಾಗಿ ಹೊಳೆಯ ಪಕ್ಕದ ಎಕರೆಗಟ್ಟಲೆ ಕೃಷಿ ಭೂಮಿ ಜಲಾವೃತಗೊಂಡಿದೆ. ಕೆಲವು ದಿನಗಳ ಹಿಂದೆಯಷ್ಟೆ ಭತ್ತದ ನಾಟಿ ಮಾಡಿ ಮಾಡಿದ್ದ ಪ್ರದೇಶದಲ್ಲಿ ಈಗ ನೆರೆಹಾವಳಿ ಸೃಷ್ಟಿಯಾಗಿದೆ. ನೆರೆಯಿಂದಾಗಿ ಆರೂರು ಬೆಳ್ಮಾರು ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ. ಮತ್ತೆ ಮಳೆ ಮುಂದುವರಿದರೆ ಕಿರು ಸೇತುವೆ ಮುಳುಗಡೆಯಾಗುವ ಭೀತಿ ಇದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ